Thursday, May 10, 2007

ಗಂಡ-ಹೆಂಡತಿ

ಈ ಬಗ್ಗೆ ನಾನು ಎಂದೂ ಗಂಭೀರವಾಗಿ ಚಿಂತಿಸಿರಲಿಲ್ಲ. ಈಗಲೂ ಅಷ್ಟು ಗಹನವಾಗಿ ಚಿಂತಿಸುತ್ತಿಲ್ಲವೇನೋ? ಆದರೆ ಈ ಬ್ಲಾಗ್‌ ಬರೆಯಲು ಕಾರಣ, ಮೊನ್ನೆ ಮಂಜುವಿನ ಜೊತೆಗೆ ನಡೆದ ಸಂವಾದ ಹಾಗೂ ಸಂಜೆ ರಜೆಗೆಂದು ಊರಿಗೆ ತೆರಳಿರುವ ಮಡದಿ ಫೋನಾಯಿಸಿ, "ಐ ಮಿಸ್‌ ಯು" ಎಂದದ್ದು.

ಹಾಗಂತ ನಮ್ಮ ದಾಂಪತ್ಯವೇನೂ ಇತ್ತೀಚಿನದಲ್ಲ. ೨೩ ವರುಷಗಳ ಹಿಂದೆಯೇ ಒಬ್ಬರಿನ್ನೊಬ್ಬರ ಜೊತೆ ಇಡೀ ಜೀವನ ಸವೆಸೋಣ ಎಂದು ತೀರ್ಮಾನಿಸಿದ್ದೆವು. ಆಗ ಈ ಬಗ್ಗೆ ಏನೋ ಹೊಸ ಖುಷಿ ಇತ್ತು. ಕಛೇರಿ ರಾಜಕೀಯ, ಸೈಟ್‌ ಬೆಲೆ ಅತಿ ಹೆಚ್ಚಾಗಿ ಹೋದ ಚಿಂತೆ, ಮಕ್ಕಳು ಶಾಲೆಯಿಂದ ಬಂದ ಅನಂತರ ಸರಿಯಾಗ ಊಟ ಮಾಡದ ಬಗ್ಗೆ ಆತಂಕ, ಪ್ರತಿದಿನವೂ ನೀರು ಸರಬರಾಜು ಆಗುತ್ತದೆ ಎಂದು ನಿತ್ಯ ಪತ್ರಿಕೆಯಲ್ಲಿ ಓದಿದ ಮೇಲೂ ನಲ್ಲಿಯ ಮುಂದೆ ತಪಸ್ಸು ಮಾಡಬೇಕಾದ ಅನಿವಾರ್ಯತೆ, ಇನ್‌ಕಂಟ್ಯಾಕ್ಸ್ ಹೆಚ್ಚಾದ ಗತಿಯಲ್ಲಿಯೇ ಇಂಕ್ರಿಮೆಂಟೂ ಏಕೆ ಹೆಚ್ಚಾಗುವುದಿಲ್ಲವೋ? ಇಂಕ್ರಿಮೆಂಟು ಹೆಚ್ಚಾದ ಗತಿಗಿಂತ ತರಕಾರಿಯ ಬೆಲೆ ಹೆಚ್ಚುವುದು ಯಾವಾಗಲೂ ತೀವ್ರವೇಕೋ? ಎಂಬ ಉತ್ತರವೇ ಇರದ ಪ್ರಶ್ನೆಗಳು,ಇತ್ಯಾದಿಗಳ ನಡುವೆ ನಾನು-ನೀನು ಎನ್ನುವ ಸಂಬಂಧವನ್ನು ಕುರಿತು ಮಾತನಾಡುವುದೇ ಮರೆತು ಹೋಗಿತ್ತೆನ್ನಿಸಿತು, ಮೊನ್ನೆ ನನ್ನವಳ ಕರೆ ಬರುವವರೆಗೆ.

ಇಪ್ಪತ್ತನಾಲ್ಕು ವರುಷಗಳ ಹಿಂದೆ ಸಾವಿರ ಮೈಲು ದೂರದಲ್ಲಿದ್ದಾಗ ಇದ್ದಷ್ಟು ಆತ್ಮೀಯತೆ ಈಗ ಕಡಿಮೆ ಆಗಿದೆಯೇನೋ? Familiarity breeds contempt ಅಂತಾರಲ್ಲ. ಸಹವಾಸದಿಂದ ಸಂಬಂಧಗಳು ಕೊಳೆಯುತ್ತವೆಯೋ? ಸಣ್ಣ ಪುಟ್ಟ ಸಂಗತಿಗಳ ಬಗ್ಗೆ ಉಂಟಾಗುತ್ತಿದ್ದ ವಿರಸ, ಸರಸವನ್ನು ಮರೆಸುತ್ತಿತ್ತೇನೋ?

ಇಪ್ಪತ್ತು ವರುಷದ ಸಹವಾಸದ ಬಗ್ಗೆಯೇ ಇಷ್ಟು ತೀವ್ರವಾಗಿ ಆಲೋಚಿಸುವವನಿಗೆ ಎಪ್ಪತ್ತು ವರುಷದ ಸಹವಾಸ ಮಾಡಿದವರ ಬಗ್ಗೆ ಆಲೋಚಿಸುವುದು ತಿಳಿದೀತೇ? ನಮ್ಮ ದಾಂಪತ್ಯದ ಬಗ್ಗೆಯೇ ಯೋಚಿಸುತ್ತಿದ್ದವನಿಗೆ ಅಪ್ಪನ ಮರಣ, ಎದ್ದು ಎದೆಗೊದೆದದ್ದು ನಿಜ. ಎಪ್ಪತ್ತು ವರುಷಗಳ ಕಾಲ ತನ್ನ ಜೊತೆಗಿದ್ದ ಒಂದು ಜೀವ ಮರೆಯಾಗಿ, ಮಣ್ಣಾಗಿ ಹೋಗಿದ್ದನ್ನು ತಾಯಿ ತಡೆದುಕೊಳ್ಳಬಹುದೇ? ಇಷ್ಟು ದೀರ್ಘ ಕಾಲ ಜೊತೆಗಿದ್ದ ಆಕೆಯ ಮನಸ್ಸಿನಲ್ಲಿ ಎಂತಹ ಭಾವನೆಗಳು ಇರಬಹುದು ಎನ್ನುವ ಪ್ರಶ್ನೆಗಳು ಅಪ್ಪನ ಚಿತೆಗೆ ಬೆಂಕಿಯಿಡುವಾಗಲೂ ಕಾಡುತ್ತಿತ್ತು.

ಉತ್ತರಕ್ಕೆ ಬಹಳ ದಿನ ಕಾಯಬೇಕಾಗಲಿಲ್ಲ. ನಿತ್ಯವೂ ಊಟ ಮಾಡುವಾಗ, ಅಥವಾ ಮಗ ಆಟವಾಡುವಾಗಲೂ ಅದರಲ್ಲಿ ತಂದೆಯ ಛಾಪನ್ನು ಅಮ್ಮ ಕಾಣುತ್ತಿದ್ದಳು. ನಿಜ. ಮೊಮ್ಮಗನಲ್ಲಿ ತಾತನ ಕಾಲು ಭಾಗ ವಂಶವಾಹಿಗಳು ಇರುತ್ತವೆ ಎನ್ನುವುದು ವಿಜ್ಞಾನ ಕಲಿತ ನನಗೆ ತಿಳಿಯದ್ದಲ್ಲ. ಆದರೆ ಅಪ್ಪ ಇರುವವರೆವಿಗೂ ಅಮ್ಮನಿಗೆ ಕಾಣದ ಈ ಸಾಮ್ಯ ಈಗ ಆ ಒಂಟಿತನದ ಕಾರಣವಾಗಿ ಎದ್ದು ತೋರುತ್ತಿತ್ತು. ನಾವೆಲ್ಲ ಬೆಳೆಯುತ್ತಿದ್ದಂತೆ ಅಪ್ಪ-ಅಮ್ಮನ ನಡುವೆ ತೀವ್ರವಾಗಿ ಕಾಣುತ್ತಿದ್ದ ವಿರಸ ಎಲ್ಲಿ ಹೋಯಿತೋ ತಿಳಿಯಲಿಲ್ಲ. ಇಡ್ಲಿಯ ಹಿಟ್ಟಿನ ಹದದಲ್ಲಿ, ದೇವರ ಪೂಜೆಗೆ ಹತ್ತಿಸಿದ ಗಂಧದ ಕಡ್ಡಿಯ ಪರಿಮಳದಲ್ಲಿ, ಕೊನೆಗೆ ಉಪ್ಪು ಕಟ್ಟಿ ಸೋರುತ್ತಿದ್ದ ನಲ್ಲಿಯಲ್ಲೂ ಅಪ್ಪನ ನೆನಪು ಅಮ್ಮನಿಗೆ ಕಾಡುತ್ತಿತ್ತು. ಅಸಹನೆಯಿಂದ ಮಕ್ಕಳ ಎದುರಿಗೇ ಅಪ್ಪನನ್ನು ಗದರಿಸುತ್ತಿದ್ದ ಅಮ್ಮ ಎಲ್ಲಿ, ಈಗ ಕಾಣಲು ಎದುರಿಗಿಲ್ಲದ ಜೀವದ ಬಗ್ಗೆ ಹಳಹಳಿಸುವವಳೆಲ್ಲಿ? ಇದೆಂತಹ ವಿಚಿತ್ರ ಎನ್ನಿಸಿತು.

ಕೆಲವು ವರುಷಗಳ ಹಿಂದೆ ಅಮೆರಿಕೆಯ ಮನಶ್ಶಾಸ್ತ್ರಜ್ಞರೊಬ್ಬರು ಸುದೀರ್ಘ ದಾಂಪತ್ಯ ನಡೆಸಿದ (ಅಮೆರಿಕೆಯ ಮುಕ್ತ ಸಮಾಜದಲ್ಲಿ ಇದು ಬಲು ಅಪರೂಪದ ವಿಷಯವಷ್ಟೆ!) ದಂಪತಿಗಳನ್ನು ಅಧ್ಯಯನ ಮಾಡಿ, ಇಂತಹ ಗಂಡ-ಹೆಂಡತಿ ಇಬ್ಬರ ಮನೋಭಾವ ಹಾಗೂ ಮುಖಭಾವಗಳಲ್ಲಿ ಕಾಲ ಕಳೆದಂತೆಲ್ಲ ಸಾಮ್ಯ ತೋರಿಬರುತ್ತದೆ ಎಂದು ಗುರುತಿಸಿದ್ದರು. ಮನೋಭಾವದಲ್ಲಿ ಇರಬಹುದು. ಯಾರೊಬ್ಬರ ಜೊತೆಗಿನ ಹೊಂದಾಣಿಕೆಗಾಗಿ ತಮ್ಮ ಅನಿಸಿಕೆಗಳನ್ನು ಬದಲಿಸಿಕೊಂಡೋ, ಹತ್ತಿಕ್ಕಿಕೊಂಡೋ ನಡೆದಾಗ ಇಬ್ಬರ ಮನೋಭಾವವೂ ಒಂದೇ ಆದಂತೆ ಕಾಣಬಹುದು ಎಂದು ಸಮಾಧಾನ ಹೇಳಿಕೊಂಡಿದ್ದೆ. ಮುಖಭಾವ ಒಂದೇ ಆಗಿರುತ್ತದೆ ಎನ್ನುವುದು ತುಸು ಅತಿರೇಕದ ತೀರ್ಮಾನ ಎನ್ನಿಸಿತ್ತು. ನಮ್ಮ ಜೋಡಿಯನ್ನೇ ನೋಡಿದವರು ನನ್ನ ತೀರ್ಮಾನವನ್ನು ಖಂಡಿತ ಒಪ್ಪುತ್ತಾರೆ! ನನ್ನವಳು ಇಪ್ಪತ್ತು ವರುಷಗಳ ಹಿಂದೆ ಹೇಗಿದ್ದಳೋ ಹಾಗೆಯೇ ಕಾಣಿಸುತ್ತಾಳೆ. ಆದರೆ ಕನ್ನಡಿ ನನ್ನ ನರೆತ ಕೂದಲನ್ನು ಬಿಚ್ಚುಮನಸ್ಸಿನಿಂದ ಪ್ರತಿಬಿಂಬಿಸುತ್ತದೆ.

ಮೊನ್ನೆ ಮಡದಿ ಊರಿನಲ್ಲಿರುವಾಗ ಇದ್ದಕ್ಕಿದ್ದ ಹಾಗೆ ಬಂದೆರಗಿದ ಮೈಗ್ರೇನ್‌ ಇಷ್ಟೆಲ್ಲ ಆಲೋಚನೆಗೆ ಕಾರಣ. ಅವಳಿದ್ದಿದ್ದರೆ, ನನ್ನ ಮೌನವನ್ನು ಅಥವಾ ನಾನು ಕುಳಿತ ಭಂಗಿಯನ್ನು ಗಮನಿಸಿಯೇ ತಲೆನೋವೇ ಎಂದು ಕೇಳಿಬಿಡುತ್ತಿದ್ದಳು. ಕೆಲವೊಮ್ಮೆ ಹೀಗಾಗಿ ಇಲ್ಲ ಎಂದು ಮರೆಮಾಚುತ್ತಿದ್ದೆ. ಆದರೂ ನಾನು ಹೇಳುವುದು ಸುಳ್ಳು ಎನ್ನುತ್ತಿದ್ದಳು. ನನ್ನ ತಲನೋವು ಅವಳಿಗೆ ಹೇಗೆ ತಟ್ಟುತ್ತದೆಯೋ ತಿಳಿಯುವುದಿಲ್ಲ! ಹೀಗೇ ಏನಾದರೂ ಬರೆಯುವಾಗ 'ಅಯ್ಯೋ, ಒಂದು ಗುಟುಕು ಚಹಾ ಇದ್ದಿದ್ದರೆ,' ಎನಿಸುವಷ್ಟರಲ್ಲಿ ಚಹಾ ಟೇಬಲಿಗೆ ಬರುತ್ತಿತ್ತು. ನನಗೆ ಚಹಾ ಬೇಕೆನಿಸುವ ಸಮಯದಲ್ಲಿಯೇ ಅದು ದೊರೆಯುತ್ತಿತ್ತು. ರಜೆಯಲ್ಲಿ ಊರಿಗೆ ಹೋದಾಗ, ಇದ್ದಕ್ಕಿದ್ದ ಹಾಗೆ 'ಚಹಾ ಬೇಕೆ?' ಎನ್ನುವ ಪ್ರಶ್ನೆ ಬರುತ್ತಿತ್ತು. ಹಾಗೆ ಬೇಕೆನ್ನಿಸಿದ ಸಮಯದಲ್ಲಿಯೇ ಈ ಪ್ರಶ್ನೆ ಬರುತ್ತಿದ್ದದ್ದು ಸಖತ್‌ ಅಚ್ಚರಿಯ ವಿಷಯ. ಹೇಗೆ ತಿಳಿಯಿತು ಎಂದರೆ ಒಂದು ಮುಗುಳ್ನಗೆಯೇ ಉತ್ತರವಾಗಿರುತ್ತಿತ್ತು.

ಆದರೆ ಈ ಬಗೆಯ ಚಿಂತೆಗಳು ನನಗೇಕೆ ಬರುವುದಿಲ್ಲವೋ, ಗೊತ್ತಿಲ್ಲ. ಜವಳಿ ಅಂಗಡಿಯ ಮುಂದೆ ಹೋದಾಗಲೂ ಸೀರೆ ಬೇಕೆ ಎಂದು ಕೇಳುವುದಿಲ್ಲ. ಅಕ್ಷಯ ತ್ರಿತೀಯದಂದು ಊರಿಗೆ ಊರೇ ಚಿನಿವಾರರ ಅಂಗಡಿಗೆ ದಾಳಿ ಹಾಕಿದ್ದರೂ ಮಡದಿಯನ್ನು ಕರೆದೊಯ್ಯಬೇಕೆನ್ನಿಸಿರಲಿಲ್ಲ! ಹಾಗಿದ್ದರೂ, "ಐ ಮಿಸ್‌ ಯು" ಎಂದಳಲ್ಲ! ಏನು ಉತ್ತರ ಕೊಡಲಿ?

(ಇದನ್ನು ಬರೆದ ಮೇಲೆ, ನನ್ನ ಮೆಚ್ಚಿನ ಬ್ಲಾಗ್‌ (ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ನಲ್ಲಿ ಪ್ರೊಫೆಸರ್‌ ಆಗಿರುವ ಡಾ. ಅಭಿರಾಮನ್‌ರವರ ಬ್ಲಾಗ್‌) ನಾನೊಪಾಲಿಟನ್‌ ನಲ್ಲಿ ಈ ಒಂದು ಸಂವಾದವನ್ನು ಕಂಡೆ: ನ್ಯೂ ಯಾರ್ಕ್‌ ಟೈಂಸ್‌ನ ಸಾರಾ ಡೇವಿಡ್‌ಸನ್‌ ಅಮೆರಿಕೆಯ ನ್ಯಾಶನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಏಜಿಂಗ್‌ನ ಪ್ರೊಫೆಸರ್‌ ರಾಬರ್ಟ್‌ ಬಟ್ಲರ್‌ರವರ ಜೊತೆ ನಡೆಸಿದ ಸಂವಾದ ಇದು.

ಸಾರಾ: What about the institution of marriage? If you’re going to live to 100 and get married at 22 or 25. ... (ಮದುವೆಯ ಬಗ್ಗೆ ಏನು ಹೇಳುವಿರಿ? ನೀವು ನೂರು ವರುಷ ಬದುಕುವವರಾಗಿದ್ದು, ೨೨-೨೫ ವಯಸ್ಸಿನಲ್ಲಿ ಮದುವೆಯಾದರೆ...)

ಬಟ್ಲರ್‌: BUTLER: Oh, you are evil. (ಓಹ್‌.. ನೀನು ಬಲು ಕಿಲಾಡಿ..)

ಸಾರಾ: Are you still going to vow “till death do us part”? (ಆಗಲೂ ಸಾಯುವವರೆವಿಗೂ ಜೊತೆಗಿರೋಣ ಎಂದು ಶಪಥ ಮಾಡುವಿರಾ?)

ಬಟ್ಲರ್‌ BUTLER: There’s a demographer, Peter Uhlenberg, who said that divorce is a substitute for death, because in the old days there was enough death, unfortunately, particularly of women in childbirth, that the men would remarry. Someone even calculated that marriage now lasts about as long as it did then, it was ended by death rather than by divorce. (ಪೀಟರ್‌ ಉಲೆನ್‌ಬರ್ಗ್ ಎನ್ನುವ ಸಮುದಾಯ ವಿಜ್ಞಾನಿ ವಿಚ್ಛೇದನ ಸಾವಿಗೆ ಪರ್ಯಾಯ ಎಂದು ಹೇಳಿದ್ದಾನೆ. ಏಕೆಂದರೆ ಹಿಂದೆ ಸಾವು ಸಾಕಷ್ಟು ಇರುತ್ತಿತ್ತು. ದುರದೃಷ್ಟವಶಾತ್‌, ಮಗುವಿನ ಹುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಸಾವಿಗೀಡಾಗಿ,ಗಂಡಂದಿರು ಮರುಮದುವೆಯಾಗಬಹುದಿತ್ತು. ಈಗಲೂ ಮದುವೆಯ ಬಂಧ ಅಂದಿನಷ್ಟೇ ದೀರ್ಘವಾಗಿದೆ ಎಂದು ಯಾರೋ ಲೆಕ್ಕ ಹಾಕಿದ್ದಾರೆ. ಆಗ ಅದು ವಿಚ್ಛೇದನದ ಬದಲಿಗೆ ಸಾವಿನಿಂದ ಕೊನೆಗೊಳ್ಳುತ್ತಿತ್ತು.)


ಈ ಲೆಕ್ಕಾಚಾರದಲ್ಲಿ ನಮ್ಮಲ್ಲಿ ಈಗ ವಿವಾಹ ಎಂಬ ವ್ಯವಸ್ಥೆ ಇನ್ನಷ್ಟು ದೀರ್ಘವಾಗಿದೆ ಎನ್ನೋಣವೇ?

Friday, April 6, 2007

ತೇಜಸ್ವಿಯವರಿಗೆ ನಮನಗಳು

ಪೂರ್ಣಚಂದ್ರ ಅಸ್ತಂಗತ. ಇದು ಟೀವಿ ಚಾನಲ್‌ ಒಂದರಲ್ಲಿ ಪೂಚಂತೇರವರ ನಿಧನದ ಬಗ್ಗೆ ಬಂದ ತಲೆಬರೆಹ. ಇದಕ್ಕಿಂತಲೂ ಉತ್ತಮ ತಲೆಬರೆಹ ಬೇಕಿಲ್ಲ. ಮೈಸೂರಿನ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಮಾತನಾಡಿದ ಹಿರಿಯ ಅಂಕಣಕಾರ ಹೆಚ್‌ಎಸ್‌ಕೆ ಹೇಳಿದ್ದು, ಪೂಚಂತೇ "ಕುವೆಂಪು ರವರ ಮಗನಾಗಿ ಗುರುತಿಸಲ್ಷಡುವುದಕ್ಕಿಂತಲೂ, ಕುವೆಂಪು ರವರು ತೇಜಸ್ವಿಯವರ ತಂದೆ ಎಂದು ಗುರುತಿಸಲ್ಪಟ್ಟಿರುವುದೇ ಹೆಚ್ಚು," ಎಂದು ನುಡಿದದ್ದು ಅಪ್ಪಟ ಸತ್ಯ. ಹೀಗೆ ಸುಪ್ರಸಿದ್ಧ ತಂದೆಯ ನೆರಳಿನಲ್ಲಿ ಬೆಳೆದೂ, ಹಲವು ಹೊಸ ಪ್ರತಿಭೆಗಳಿಗೆ ಆಸರೆಯಾಗುವ ದೊಡ್ಡ ಆಲದ ಮರವಾಗಿ ತೇಜಸ್ವಿ ಬೆಳೆದರು.

ತೇಜಸ್ವಿಯವರ ಸಾಹಿತ್ಯದ ಬಗ್ಗೆ ಹೇಳುವ ಸಾಮರ್ಥ್ಯ ನನಗಿಲ್ಲ. ಇಷ್ಟು ಮಾತ್ರ ಸತ್ಯ. ಅವರ ಸಾಹಿತ್ಯ ಕೇವಲ ಬುದ್ಧಿಜೀವಿಗಳಿಗಾಗಿಯಷ್ಟೆ ಇರಲಿಲ್ಲ. ಎಲ್ಲರಿಗೂ ದಕ್ಕುವಂತಹ ಅಪ್ಪಟ ಕನ್ನಡ ಜಾಯಮಾನದ ಸಾಹಿತ್ಯ ಎನ್ನಬಹುದು. ಬೇಂದ್ರೆ, ದೇವನೂರು, ತರಾಸುರವರಂತೆ ತೇಜಸ್ವಿಯವರ ಸಾಹಿತ್ಯವನ್ನು ಇಂಗ್ಲೀಶಿಗೆ ಅನುವಾದಿಸುವುದು ಬಹಳ ಕಷ್ಟಕರವಾದ ಕೆಲಸ. ಕನ್ನಡದ ಹಿರಿಯರೆನ್ನಿಸಿಕೊಂಡ ಇನ್ನೂ ಎಷ್ಟೋ ಕವಿ, ಲೇಖಕರ ಸಾಹಿತ್ಯವನ್ನು ಸುಲಭವಾಗಿ ಇಂಗ್ಲೀಶಿಗೆ ಅನುವಾದಿಸಬಹುದು. ಏಕೆಂದರೆ ಇವುಗಳಲ್ಲಿನ ಚಿಂತನೆಗಳಲ್ಲಿ ಇಂಗ್ಲೀಶಿನ ಜಾಯಮಾನ ಎದ್ದು ತೋರುತ್ತದೆ. ಆದರೆ ತೇಜಸ್ವಿಯವರ ಸಾಹಿತ್ಯದಲ್ಲಿ ತಾಯ್ನೆಲದ, ತಾಯ್ನುಡಿಯ ವಾಸನೆ ಎಷ್ಟು ಗಾಢವಾಗಿತ್ತೆಂದರೆ ಅದರಲ್ಲಿನ ಪದ, ಪದಗಳ ಹಿಂದಿನ ಭಾವಾರ್ಥಗಳಿಗೆ ಸರಿಸಮನಾದ ಇಂಗ್ಲೀಶಿನ ಪದಗಳನ್ನು ಹುಡುಕುವುದು ಬಹಳ ಕಷ್ಟವೆನ್ನಿಸುತ್ತಿತ್ತು.

ಬರವಣಿಗೆಯಲ್ಲಿ ಹೊಸ ಸ್ಫೂರ್ತಿ ನೀಡಿದ ಆ ಚೇತನಕ್ಕೆ ನನ್ನ ನಮನ.

ತೇಜಸ್ವಿಯವರ ಕಾದಂಬರಿಗಳಲ್ಲಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದು ಚಿದಂಬರ ರಹಸ್ಯ. ಪ್ರತಿಯೊಂದು ಅಧ್ಯಾಯವೂ ಪ್ರತ್ಯೇಕ ಕಥೆಯಾಗಿ ನಿಲ್ಲುವಂತೆ ವಿಶಿಷ್ಟ ತಂತ್ರವನ್ನು ಬಳಸಿದ ಕಾದಂಬರಿ ಇದು. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಸ್ವಾರ್ಥ ಇತ್ತಾದರೂ, ಉಳಿದ ಪಾತ್ರಗಳ ಪ್ರಭಾವದಿಂದಾಚೆಗೆ ಯಾವ ಪಾತ್ರವೂ ನಡೆದುಕೊಳ್ಳಲಾಗಲಿಲ್ಲ. ನಮಗೆ ಸಂಬಂಧವೇ ಇಲ್ಲದ ದೂರದ ಘಟನೆಯೊಂದು ನಮ್ಮ ಬದುಕನ್ನು ಎಲ್ಲೋ ಆಳವಾಗಿ ತಾಕುತ್ತದೆ. ಕೇವೋಸ್‌ ಸಿದ್ಧಾಂತದಂತೆ, ಯಾವುದೋ ನಿಕೃಷ್ಟ ಘಟನೆ ಬೃಹತ್ತಾಗಿ ಬೆಳೆದು ತೀವ್ರ ಪರಿಣಾಮ ಬೀರಬಹುದು. ಇಂತಹ ಘಟನೆಗಳಿಗೆ ಯಾವ ನಿಯಮ, ನೀತಿಗಳು ಲಗಾಮು ಹಾಕಲಾಗದು. ಚಿದಂಬರ ರಹಸ್ಯದ ಪ್ರತಿಯೊಂದು ಘಟನೆಗಳೂ ಹೀಗೆಯೇ ಅಲ್ಪ ಘಟನೆಗಳು. ಆದರೆ ಅವುಗಳ ಪರಿಣಾಮ ಮಾತ್ರ ತೀವ್ರ.

ಇಂದಿಗೂ ರಸ್ತೆಯಲ್ಲಿ ಎಲ್ಲಿಯಾದರೂ ಟಾರು ಬಳೆಯುವ ಯಂತ್ರ ಕಾಣಿಸಿದರೆ, ಚಿದಂಬರ ರಹಸ್ಯ ನೆನಪಾಗುತ್ತದೆ. ಹಾಗೆಯೇ, ಪೂಚಂತೇಯವರ ಹೆಸರು ಕೇಳಿದಾಗಲೆಲ್ಲ, ಕರ್ವಾಲೊ ರ ಚಿತ್ರ ಕಣ್ಮುಂದೆ ಸುಳಿಯುತ್ತದೆ. ಪೂಚಂತೇಯವರ ಚಿತ್ರವನ್ನು ನೋಡಿದಾಗಲೂ ಅದು ಅವರು ಅನ್ನಿಸುವುದಿಲ್ಲ. ಕರ್ವಾಲೋರವರ ಚಿತ್ರವಷ್ಟೆ ಸತ್ಯ ಎನ್ನಿಸುತ್ತದೆ.

Wednesday, April 4, 2007

Witness Box 3 ಸಾಕ್ಷಿಕಟ್ಟೆ ೩

"ಈವತ್ತಿಗೆ ನಿಮಗೆ ಮುಕ್ತಿ ಸಾರ್‌," ಎಂದರು ಪಟ್ಟಾಭಿರಾಮನ್‌. ಈತ ಮೈಸೂರಿನ ಒಂದು ಪೋಲೀಸ್‌ ಠಾಣೆಯ ಪೀಸಿ. ಕೋರ್ಟು ವ್ಯವಹಾರಗಳ ನಿರ್ವಹಣೆ ಇವರ ಕರ್ತವ್ಯ. ಪ್ರತಿ ಬಾರಿ ಕೋರ್ಟಿಗೆ ಹೋದಾಗಲೂ ಈತನಿಗೆ ಹಾಜರಿ ಒಪ್ಪಿಸಬೇಕಿತ್ತು. ಹಾಜರಿ ಒಪ್ಪಿಸಿದಾಗಲೆಲ್ಲ, ಅಳುಕಿನಿಂದಲೇ ದಯವಿಟ್ಟು ಒಳಗೆ ಕುಳಿತುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಿದ್ದ. ಪೋಲೀಸರಿಗೂ ಅಳುಕು ಎನ್ನುವುದು ಇರುತ್ತದೆ ಎನ್ನುವುದು ಪಟ್ಟಾಭಿರಾಮನ್‌ರನ್ನು ನೋಡಿ ತಿಳಿಯಿತು.

ಮುಕ್ತಿ ಸಿಕ್ಕಿದ್ದು ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವುದರಿಂದ ಎಂದು ಹೇಳಬೇಕಿಲ್ಲ, ಅಲ್ಲವೇ? ಎಂಟು ಬಾರಿ, ಎರಡೂವರೆ ವರುಷಗಳವರೆಗೆ ನ್ಯಾಯಾಲಯಕ್ಕೆ ತಿರುಗಿದ ಅನಂತರ ನನ್ನ ಸಾಕ್ಷಿ ಎನ್ನುವುದು ಮುಗಿಯಿತು. ಆ ಖಟ್ಲೆಯಲ್ಲಿ ಇದುವರೆವಿಗೂ ಮುಗಿದಿರುವುದು ಎರಡೇ ಸಾಕ್ಷಿಯ ವಿಚಾರಣೆ. ಇನ್ನೂ ಹತ್ತಾರು ಸಾಕ್ಷಿಗಳಿದ್ದಾರೆ. ಇವರೆಲ್ಲರ ಸಾಕ್ಷಿಯೂ ಮುಗಿದು, ಅಪಘಾತ ನಡೆಸಿದ ಚಾಲಕನಿಗೆ ದಂಡ ಸಿಗುವಷ್ಟರಲ್ಲಿ, ಆ ಚಾಲಕನಿಗೆ ಶಿಕ್ಷೆ ದೊರೆತೇ ಹೋಗಿರುತ್ತದೆ.

ನಾಗರೀಕ ಕರ್ತವ್ಯ ಎನ್ನುವ ಮನೋಭಾವದಿಂದ ಈ ರೀತಿಯಲ್ಲಿ ಸಾಕ್ಷಿ ಹೇಳುವವರಿಂದಾಗಿ ಪ್ರತಿದಿನವೂ ಎಷ್ಟು ಸಮಯ ಹಾಳಾಗುತ್ತಿರಬಹುದು ಎನ್ನುವುದಕ್ಕೆ ಒಂದು ಪುಟ್ಟ ಲೆಕ್ಕ ಹಾಕಿದೆ. ಹೇಗೂ, ನ್ಯಾಯಾಲಯದಲ್ಲಿ ನನ್ನನ್ನು ಸಾಕ್ಷಿ ಕಟ್ಟೆಗೆ ಕರೆಯುವವರೆವಿಗೂ ಅಲ್ಲಿನ ಬೆಂಚಿನ ಬಿಸಿ ಏರಿಸಬೇಕಿತ್ತಲ್ಲ! ಸಮಯ ಕಳೆಯಲು ಓ. ಹೆನ್ರಿಯ ಒಂದು ಪುಸ್ತಕವನ್ನು ಕೊಂಡೊಯ್ದಿದ್ದೆನಾದರೂ, ನ್ಯಾಯಾಲಯದೊಳಗೆ ಸಾಹಿತ್ಯ ಓದುವುದು ಅಪರಾಧವಿರಬಹುದೇ ಎನ್ನುವ ಆತಂಕ ಕಾಡಿ ಪುಸ್ತಕವನ್ನು ತೆರೆಯಲೇ ಇಲ್ಲ! ಬೆಳಗ್ಗೆ ಹತ್ತು ಗಂಟೆಗೆ ನ್ಯಾಯಾಲಯದೊಳ ಹೊಕ್ಕವನಿಗೆ ಮುಕ್ತಿ ಸಿಕ್ಕಾಗ ಸಂಜೆ ನಾಲ್ಕು ಗಂಟೆ. ನನ್ನ ಪಾಟೀಸವಾಲಿಗೆ ಸಂದ ಸಮಯ ಹತ್ತು ನಿಮಿಷಗಳು. ೩೬೦ ನಿಮಿಷಗಳಲ್ಲಿ ಪಾಟೀಸವಾಲಿನ ೧೦ ನಿಮಿಷ ಕಳೆದರೆ ಉಳಿದ ೩೫೦ ನಿಮಿಷಗಳು ನಾನು, ಅಪರಾಧಿ, ಹಾಗು ಅಪರಾಧಿಯ ವಕೀಲರಿಗೆ ಮಾಡುವುದು ಏನೂ ಇರಲಿಲ್ಲ.

ಹೀಗಾಗಿ ಒಂದು ಲೆಕ್ಕಾಚಾರ ಮಾಡಿದೆ. ಒಂದು ಅಂದಾಜಿನ ಪ್ರಕಾರ ಇಂದು ದೇಶಾದ್ಯಂತ ೧ ಕೋಟಿಗೂ ಹೆಚ್ಚು ಖಟ್ಲೆಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ. ಇವು ಪ್ರತಿಯೊಂದರಲ್ಲೂ ಒಬ್ಬ ಅಪರಾಧಿ, ಒಬ್ಬ ವಕೀಲ, ಒಬ್ಬ ಸಾಕ್ಷಿ ಇದ್ದಾರೆ ಎಂದಿಟ್ಟುಕೊಳ್ಳೋಣ. ದಿನವೊಂದಕ್ಕೆ ಒಂದೇ ಖಟ್ಲೆಯಲ್ಲಿ ಸಾಕ್ಷಿ ಮತ್ತು ಅಪರಾಧಿ ಹಾಜರಾಗುವುದರಿಂದ ಇವರಿಬ್ಬರ ದಿನವೂ ವ್ಯಯವಾಯಿತು. ಈ ಒಂದುಕೋಟಿ ಕೇಸುಗಳು ತಿಂಗಳಲ್ಲಿ ಒಮ್ಮೆ ಮಾತ್ರ ವಿಚಾರಣೆಗೆ ಬರುತ್ತವೆ ಎನ್ನೋಣ. ಹಾಗಿದ್ದರೆ ಪ್ರತಿ ತಿಂಗಳೂ ಎರಡು ಕೋಟಿ ಜನರು ತಮ್ಮ ಒಂದು ದಿನವನ್ನು ನ್ಯಾಯಾಲಯದಲ್ಲಿಯೇ ಕಳೆಯುತ್ತಾರೆ ಎಂದಾಯಿತು. ಕೆಲವು ಖಟ್ಲೆಗಳಲ್ಲಿ ಹತ್ತಾರು ಸಾಕ್ಷಿಗಳಿರುತ್ತಾರೆ. ಎಲ್ಲರ ವಿಚಾರಣೆಯೂ ಒಂದೇ ದಿನ ಆಗದಿದ್ದರೂ, ಎಲ್ಲರೂ ನ್ಯಾಯಾಲಯಕ್ಕೆ ಹಾಜರಿರಲೇ ಬೇಕು. ಹಾಗಿದ್ದರೆ ಎಷ್ಟು ಕಾಲ ವ್ಯಯವಾಗುತ್ತಿದೆ ಎನ್ನುವುದನ್ನು ಗಮನಿಸಿ. ಇದಕ್ಕೆ ಪರಿಹಾರ ಇಲ್ಲವೇ?

ಇಂದಿನ ಐಟಿ ಯುಗದಲ್ಲಿಯೂ ಮೊದಲು ಹಾಜರಿ ಕರೆದು ಅನಂತರ ವಿಚಾರಣೆಗೆ ತೊಡಗುವುದು ಅವಶ್ಯವೇ? ಹಾಜರಿಯನ್ನು ಮೊದಲೇ ಖಾತರಿ ಪಡಿಸಿಕೊಳ್ಳಲು ಆಗುವುದಿಲ್ಲವೇ? ಇವೆಲ್ಲ ಪ್ರಶ್ನೆಗಳು ಕಾಡಿತು.


ಈ ಲೆಕ್ಕಾಚಾರಗಳ ನಡುವೆ ನ್ಯಾಯಾಲಯದಲ್ಲಿ ನಡೆದ ಸ್ವಾರಸ್ಯಕರವಾದ ಘಟನೆಯೊಂದಕ್ಕೂ ನಾನು ಸಾಕ್ಷಿ ಆದೆ. ಒಂದು ಕಳ್ಳತನದ ಖಟ್ಲೆ. ಫಿರ್ಯಾದುದಾರರು ೭೦ ವರುಷದ ಮುದುಕ. ನಿವೃತ್ತ ಮೇಷ್ಟರು. ಮನೆಯಲ್ಲಿದ್ದ ೪೦ ಗ್ರಾಂ ಆಭರಣವನ್ನು ತಮ್ಮ ಪರಿಚಿತನಾದ ಆಟೋ ಚಾಲಕನೊಬ್ಬ ಸಮಯ ಸಾಧಿಸಿ ಕದ್ದಿದ್ದ ಎಂದು ದೂರು ನೀಡಿದ್ದರು. ಅಪರಾಧಿಯೂ ಅಲ್ಲಿದ್ದ. ಆತ ಅಡವಿಟ್ಟಿದ್ದ ಒಡವೆಗಳೂ ಸಿಕ್ಕಿದ್ದುವು. ಈಗ ನಡೆದಿದ್ದುದು ವಿಚಾರಣೆ. ಮೇಷ್ಟರನ್ನು ವಿಚಾರಣೆಗೆ ಕರೆಸಿ ವಿವರಗಳನ್ನು ಸರಕಾರಿ ಲಾಯರು ಕೇಳಿದರು. ಅನಂತರ ಪಾಟೀ ಸವಾಲು. ಆ ದಿನ ನಡೆದ ಎಲ್ಲ ಪಾಟೀ ಸವಾಲುಗಳಲ್ಲಿಯೂ ಒಂದೆರಡು ಪ್ರಶ್ನೆಗಳು ಸಾಮಾನ್ಯವಾಗಿರುತ್ತಿದ್ದುವು. "ನೀವು ಅಪರಾಧಿಯ ಮೇಲೆ ಯಾವುದೋ ವೈಷಮ್ಯದಿಂದ ದೂರು ನೀಡಿದ್ದೀರಿ." "ಪೋಲೀಸರು ನಿಮಗೆ ಪರಿಚಯ. ಅದರಿಂದಾಗಿ ಅವರೇ ಹೇಳಿ ಈ ಖಟ್ಲೆ ಹೂಡಿದ್ದಾರೆ." "ದೂರು ನೀವು ಕೊಟ್ಟಿಲ್ಲ. ಪೋಲೀಸರೇ ಬರೆದು ನಿಮ್ಮಿಂದ ಸಹಿ ಮಾತ್ರ ಪಡೆದುಕೊಂಡಿದ್ದಾರೆ." "ಪೋಲೀಸರು ಪತ್ತೆ ಮಾಡಿದ ಕೇಸುಗಳ ಸಂಖ್ಯೆ ಹೆಚ್ಚಾಗಲಿ ಎಂದು ಯಾರನ್ನೋ ಹಿಡಿದು ದೂರು ಕೊಟ್ಟಿದ್ದಾರೆ." ಹೀಗೆ.

ಮೇಷ್ಟರಿಗೂ ಇಂತಹುದೇ ಪಾಟೀಸವಾಲು ಎದುರಾಯಿತು. ಪಾಟೀ ಸವಾಲು ನಡೆಸಿದ ಎದುರು ಪಕ್ಷದ ವಕೀಲರು, ಮೇಷ್ಟರನ್ನು "ನೀವು ಹಿಂದಿನ ದಿನ ರಾತ್ರಿ ಆಟೋ ಚಾಲಕ ವಾಡಿಕೆಗಿಂತಲೂ ಹೆಚ್ಚು ಹಣ ಕೇಳಿದ್ದಕ್ಕೆ, ಜಗಳವಾಡಿ ಆ ಸಿಟ್ಟಿನಿಂದ ಸುಳ್ಳು ಕೇಸು ಹಾಕಿದ್ದೀರಾ?" ಎಂದು ಆರೋಪಿಸಿದ. ಮೇಷ್ಟರು ಸಿಟ್ಟಿನಿಂದ ನಾನು ಆಟೋ ಹತ್ತಲೇ ಇಲ್ಲ ಆ ದಿನ ಅಂತ ಹೇಳಿದ ಮೇಲೂ ಈ ಪ್ರಶ್ನೆ ಕೇಳುತ್ತಿದ್ದೀರಲ್ಲ? ಇದೇನು ಸರಿಯಾ?" ಎಂದು ದಬಾಯಿಸಿದಾಗ, ನ್ಯಾಯಾಧೀಶರು ಸಾಕ್ಷಿ ಕೇವಲ ಇಲ್ಲ, ಹೌದು ಎನ್ನುವ ಉತ್ತರವನ್ನಷ್ಟೆ ಹೇಳಬೇಕು ಎಂದರು.

ಇದಾದಮೇಲೆ ಮೇಷ್ಟರ ಅಮ್ಮ (೮೭ ವರುಷದ ಮುದುಕಿ)ನ ಪಾಟೀಸವಾಲು. "ಆರೋಪಿ ಅಲಮಾರಿ ತೆಗೆದಾಗ ನಿಮಗೆ ಸದ್ದು ಕೇಳಿಸಲಿಲ್ಲವೇ?" "ಇಲ್ಲ." "ನಿಮಗೆ ನಾನು ಹೇಳುತ್ತಿರುವುದು ಕೇಳಿಸುತ್ತಿದೆಯೇ?" "ಏನಪ್ಪ ಕೇಳಿದೆ?" ಒಟ್ಟಿನಲ್ಲಿ ಆಕೆಯ ಕಿವಿ ಮಂದ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿತ್ತು. ಆದರೂ, ಎದುರು ಪಕ್ಷದ ವಕೀಲರು ಕೆಲವು ಪ್ರಶ್ನೆಗಳನ್ನು ಕೇಳಿದಾಗ ಆಕೆ ಹೌದು ಎನ್ನುವಂತೆ ತಲೆಯಾಡಿಸುತ್ತಿದ್ದರು. ಇದು ತಮ್ಮ ಸಾಕ್ಷಿಗೆ ವಿರುದ್ಧವಾಗಿದೆ ಎಂದು ತಿಳಿದಾಗ ಮೇಷ್ಟರು ಎದ್ದು ನ್ಯಾಯಾಧೀಶರನ್ನು ಉದ್ದೇಶಿಸಿ ಆಕೆಗೆ ಪ್ರಶ್ನೆ ಸರಿಯಾಗಿ ತಿಳಿಯಲಿಲ್ಲ ಎನ್ನಿಸುತ್ತದೆ ಎಂದಾಗ ಆತನನ್ನು ಹಾಗೆ ಮಧ್ಯೆ ಪ್ರವೇಶಿಸಿ ಮಾತನಾಡುವುದು ಅವಮರ್ಯಾದೆ ಮಾಡಿದಂತೆ ಎಂದು ಕುಳ್ಳಿರಿಸಲಾಯಿತು. ಅಜ್ಜಿಗೆ ಕಿವಿ ಕೇಳುತ್ತಿಲ್ಲ ಎಂದು ತಿಳಿದರೂ, ಪಾಟೀ ಸವಾಲು ಮುಂದುವರೆದು, ಆಕೆ ಎಲ್ಲಕ್ಕೂ ತಲೆ ಆಡಿಸುವುದು ನಡೆಯಿತು. ಇಡೀ ನ್ಯಾಯಾಲಯದಲ್ಲಿ ಮುಸು, ಮುಸು ನಗೆ ಹಬ್ಬಿತ್ತು. ಆದರೆ ಯಾರೂ ಆಕೆಗೆ ಕೇಳುಸುವಂತೆ ಪ್ರಶ್ನೆ ಕೇಳಲಿ ಎಂದು ಹೇಳಲಿಲ್ಲ. ನ್ಯಾಯಾಧೀಶರೂ ಸಹ. ಸಾಕ್ಷಿಗೆ ನಡುವೆ ನ್ಯಾಯಾಧೀಶರು ಹಾಗೆ ಸಹಾಯ ಮಾಡುವುದು ಕಾನೂನಿಗೆ ವಿರುದ್ಧವೇನೋ? ಒಟ್ಟಾರೆ, ತಾನು ಏನು ಸಾಕ್ಷಿ ಹೇಳಿದೆ ಎನ್ನುವುದು ತಿಳಿಯದೆಯೇ ಆ ಅಜ್ಜಿ ಸಾಕ್ಷಿ ಹೇಳಿಯಾಗಿತ್ತು.

Friday, March 30, 2007

ಹತ್ತು ವಿಷಯಗಳು

ಮೊನ್ನೆ ಬ್ಲಾಗ್‌ ಪ್ರಪಂಚದಲ್ಲಿ ವಾಕಿಂಗ್‌ ಹೋಗಿದ್ದೆ. ಹೀಗೇ ವಿಜ್ಞಾನದ ಮೇಲೆ ಯಾವ ಯಾವ ಬ್ಲಾಗ್‌ಗಳು ಸಿಗಬಹುದು ಎಂದು ಹುಡುಕಾಟ ನಡೆದಿತ್ತು. ಆಗ ಕಣ್ಣಿಗೆ ಬಿತ್ತು ಒಂದು ಸ್ವಾರಸ್ಯಕರವಾದ ಬ್ಲಾಗ್‌. ಭೂಮಿ ಬಿಸಿಯೇರುವುದನ್ನು (Global Warming) ತಡೆಯಲು ನಾವು ಏನು ಮಾಡಬಹುದು ಎಂದು ಒಂದು ಲೇಖನ. ಈ ಬಗ್ಗೆ ವೈಯಕ್ತಿಕವಾಗಿ ನಾವು ಮಾಡಬಹುದಾದ ಐವತ್ತು ಸುಲಭ, ನಿತ್ಯಕರ್ಮಗಳನ್ನು ಅಲ್ಲಿ ಬರೆಯಲಾಗಿತ್ತು. ನಿಜ. ಅಲ್ಲಿರುವ ಎಲ್ಲ ಅಂಶಗಳೂ ಅಮೆರಿಕನ್ನರು ಪಾಲಿಸಬೇಕಾದ, ಪಾಲಿಸಬಹುದಾದ ವಿಷಯಗಳು. ಆದರೆ ನಾವೂ ನಮ್ಮ ನಿತ್ಯ ಜೀವನದಲ್ಲಿ ಇಂತಹ ಕೆಲವು ವಿಷಯಗಳನ್ನು ಸ್ವಯಂ ಶಿಸ್ತಿನಿಂದ ಅಳವಡಿಸಿಕೊಂಡರೆ ಸಾರ್ವಜನಿಕ ಬದುಕು ಹಸನಾಗಬಹುದಲ್ಲ ಎನ್ನಿಸಿತು. ಗ್ಲೋಬಲ್‌ ವಾರ್ಮಿಂಗ್‌ನ ಬಿಸಿ, ಸರಕಾರಕ್ಕೆ ತಾಕಿದಷ್ಟು ಜನಸಾಮಾನ್ಯರನ್ನು ತಾಕುತ್ತಿಲ್ಲ ಎನ್ನೋಣ. ಏಕೆಂದರೆ ಇದರ ಬಗ್ಗೆ ತಿಳುವಳಿಕೆ ಹಾಗೂ ಅದರ ನೇರ ಪರಿಣಾಮಗಳು ತಕ್ಷಣಕ್ಕೆ ಗೋಚರವಾಗುವಂತಹುದಲ್ಲ. ಆದರೆ ಬೆಳಗಿನ ಕಸ ಬಿಸಾಡುವ ಕರ್ಮದ ಬಗ್ಗೆ ಕೆಲವು ಶಿಸ್ತು ಬಳಸಬಹುದು ಎನ್ನಿಸುತ್ತದೆ. ಐವತ್ತು ವಿಷಯಗಳು ನನ್ನ ಮನಸ್ಸಿಗೆ ಬರುತ್ತಿಲ್ಲ. ಕೆಲವನ್ನು ಇಲ್ಲಿ ಸೂಚಿಸುತ್ತಿದ್ದೇನೆ. ನಿಮಗೂ ಏನಾದರೂ ಹೊಳೆದರೆ ಕಮೆಂಟ್‌ ತಿಳಿಸಿ. ಐವತ್ತೋ, ನೂರೋ, ತಡವಿಲ್ಲದೆ ಅಳವಡಿಸಿಕೊಳ್ಳಬಹುದಾದ ವಿಷಯಗಳನ್ನು ಪಟ್ಟಿ ಮಾಡಬಹುದು.

೧. ಅನ್ನ, ಮುಸುರೆ ಇತ್ಯಾದಿ ಕಸದ ಜೊತೆಗೆ ಪೇಪರು, ಪ್ಲಾಸ್ಟಿಕ್‌ ಬೆರೆಸುವುದಿಲ್ಲ.
೨. ಪ್ಲಾಸ್ಟಿಕ್‌ ವಸ್ತುಗಳನ್ನು ಬೇರೆಯೇ ಕಸದ ಬುಟ್ಟಿಯಲ್ಲಿ ಹಾಕುತ್ತೇನೆ.
೩. ಪೇಪರ್‌ ಕಸವನ್ನು ಪ್ರತ್ಯೇಕವಾಗಿಟ್ಟು, ಆಗಾಗ್ಗೆ ಸುಡುತ್ತೇನೆ.
೪. ದಿನಪತ್ರಿಕೆಗಳನ್ನು ರದ್ದಿಯವರಿಗೆ ನೀಡುವುದು.
೫. ಅಂಗಡಿಗೆ ಹೋಗುವ ಮುನ್ನ, ಒಂದು ಬಟ್ಟೆಯ ಚೀಲವನ್ನು ಕೊಂಡೊಯ್ಯುತ್ತೇನೆ.
೬. ಅಂಗಡಿಯವ ಪ್ಲಾಸ್ಟಿಕ್‌ ಚೀಲ ನೀಡಲು ಬಂದರೆ ನಿರಾಕರಿಸುತ್ತೇನೆ.
೭. ಮನೆಯಲ್ಲಿ ಗಿಡ ಬೆಳೆಸಿದ್ದರೆ, ಮುಸುರೆ, ತರಕಾರಿಯ ಸಿಪ್ಪೆ ಇತ್ಯಾದಿ ಜೈವಿಕ ಶಿಥಿಲೀಕರಣಗೊಳ್ಳಬಲ್ಲ ಕಸವನ್ನು ಗೊಬ್ಬರವನ್ನಾಗಿ ಬಳಸುತ್ತೇನೆ.

ಮೈಸೂರಿನ ಗೋಕುಲಂ ರಸ್ತೆಯಲ್ಲಿ ಶಿವ ಮೆಡಿಕಲ್ಸ್‌ ಎನ್ನುವ ಅಂಗಡಿಯಲ್ಲಿ ನಾನು ಓದಿದ ನೋಟೀಸು. "ಪ್ಲಾಸ್ಟಿಕ್‌ ಚೀಲ ಪರಿಸರಕ್ಕೆ ಹಾನಿಕರ. ದಯವಿಟ್ಟು ಪ್ಲಾಸ್ಟಿಕ್‌ ಚೀಲವನ್ನು ಕೇಳಬೇಡಿ." ಅಲ್ಲಿ ನೀವು ಔಷಧಿ ಕೊಂಡರೆ, ಪೇಪರ್‌ ಕವರಿನಲ್ಲಿ ಹಾಕಿ ಕೊಡುತ್ತಾರೆ.

ಇದೇ ಕಾಳಜಿ, ಶಿಸ್ತು ನಾವೆಲ್ಲರೂ ಅಳವಡಿಸಿಕೊಂಡರೆ, ಗಾಳಿ ಬಂದಾಗ ಬೀದಿ ಮೂಲೆಯ ಕಸದ ತೊಟ್ಟಿಯಿಂದ ಹಾರಿ ಬರುವ ಪ್ಲಾಸ್ಟಿಕ್‌ ಚೀಲ ವಸ್ತುಗಳು ಮನೆಯ ಮುಂದೆ ಚಿತ್ತಾರ ಬಿಡಿಸುವುದು ತಪ್ಪುತ್ತದೆ. ಅವನ್ನು ನುಂಗಿ ದನ, ಕರುಗಳ ಹೊಟ್ಟೆ ಬಿಗಿಯುವುದೂ ನಿಲ್ಲುತ್ತದೆ.

ಇದು ನನಗೆ ತಿಳಿದ ಪಟ್ಟಿ. ಇನ್ನೂ ಸೇರಿಸಬಹುದು. ವಿದ್ಯುತ್‌ ಉಳಿತಾಯ. ಹಣದ ಉಳಿತಾಯ. ಸಲಹೆಗಳಿಗೆ ಕೊರತೆ ಇರದು. ಆದರೆ ನಾವು ಅಳವಡಿಸಿಕೊಳ್ಳಬಹುದಾದ ಪ್ರಾಕ್ಟಿಕಲ್‌ ಉಪಾಯಗಳನ್ನು ದಯವಿಟ್ಟು ತಿಳಿಸಿ.

Tuesday, March 27, 2007

ಬ್ಲಾಗ್‌, ಬ್ಲಾಗ್‌, ಬ್ಲಾಗ್‌

ಅಂತೂ ಒಂದು ದಿನ ಈ ಪ್ರಶ್ನೆಯನ್ನು ಎದುರಿಸಲೇ ಬೇಕಿತ್ತು? ನಾನೇಕೆ ಬ್ಲಾಗಿಸುತ್ತಿದ್ದೇನೆ (ಬ್ಲಾಗಿಸುವುದು ಪದದ ಬಳಕೆಗಾಗಿ ಶ್ರೀ ಪವನಜರಿಗೆ ಕೃತಜ್ಞತೆಗಳು) ಎನ್ನುವ ವಿಷಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದಿದ್ದೆ. ಬ್ಲಾಗು ಆರಂಭಿಸಲು ಸ್ಫೂರ್ತಿ ಗೆಳೆಯ ಮಂಜುನಾಥ ರು ಆರಂಭಿಸಿದ ಬ್ಲಾಗ್‌ ಎಂದರೆ ತಪ್ಪೇನಲ್ಲ. ಆದರೆ ಅದಕ್ಕೂ ಮೊದಲು ಇದನ್ನು ಆರಂಭಿಸಬೇಕು, ವಿಕಿಪೀಡಿಯಾದಲ್ಲಿ ಬರೆಯಬೇಕೆಂಬ ಹಂಬಲವೂ ಇತ್ತು. ಸಮಸ್ಯೆ ಎಂದರೆ ಕನ್ನಡವನ್ನು ವೆಬ್‌ ಪುಟಗಳಲ್ಲಿ ಬಳಸುವ ತಾಂತ್ರಿಕ ಸಮಸ್ಯೆಗಳನ್ನು ಮೀರುವೆನೇ ಎನ್ನುವ ಆತಂಕದಿಂದ ಪ್ರಯತ್ನವನ್ನೇ ಮಾಡಿರಲಿಲ್ಲ. ಅಂದ ಹಾಗೇ, the fear of failure is the reason for many failures ಅಲ್ಲವೇ?

ಕೊನೆಗೂ, ಒಂದು ದಿನ ಆರಂಭ ಮಾಡಿಯೇ ಬಿಟ್ಟೆ. ಇದಕ್ಕೂ ಹಿಂದೆ ಡಾಟ್‌ ಕಾಮ್‌ಗಳ ಭರಾಟೆ ಹೆಚ್ಚಿದ್ದಾಗ ನಾನೂ ಒಂದು ಡಾಟ್‌ ಕಾಮ್‌ ಆರಂಭ ಮಾಡಬಾರದೇಕೆ ಎಂದು ಹಂಬಲಿಸಿದ್ದೆ. ದುರಾದೃಷ್ಟವಶಾತ್‌, (ಅಥವಾ ಕನ್ನಡಿಗರ ಅದೃಷ್ಟ) ನನ್ನ ಗಣಕಯಂತ್ರದ ಸಾಮರ್ಥ್ಯ ಅದಕ್ಕೆ ತಕ್ಕಂತಿರಲಿಲ್ಲ. ಜೊತೆಗೆ, ಬ್ರಾಡ್‌ ಬ್ಯಾಂಡ್‌ ಈಗ ನೀಡುವ ಸೌಕರ್ಯ ಆಗ ಇರಲೂ ಇಲ್ಲ. ಹೀಗಾಗಿ, ನಮ್ಮಕರ್ನಾಟಕ ಡಾಟ್‌ ಕಾಮ್‌ ನಂತಹ ಇತರೇ ವೆಬ್‌ ತಾಣಗಳ ಬೆನ್ನೇರಿ ಸವಾರಿ ಮಾಡಬೇಕಾಗಿತ್ತು.

ಕಾಲ ಬದಲಾಗಿದೆ. ವೆಬ್‌ ಆಧರಿತ ಸೇವೆಗಳು ಸಮೃದ್ಧಿಯಾಗಿವೆ. ಮೊದಲು, ಮೈಸೂರಿನಲ್ಲಿ ಒಂದು ಸೈಟು ಕೊಳ್ಳಲು ಖರ್ಚಾಗುತ್ತಿದ್ದಷ್ಟು ವೆಚ್ಚ ಒಂದು ವೆಬ್‌ ತಾಣ ಸೃಷ್ಟಿಸಲು ಆಗುತ್ತಿತ್ತು. ಈಗ ಗಣಕಯಂತ್ರಗಳ ನೆರವಿನಿಂದ ಬಂದ ಐಟಿ ಕ್ರಾಂತಿಯಿಂದಾಗಿ ಮೈಸೂರಿನಲ್ಲಿ ವೆಬ್‌ ತಾಣಗಳು ಕಾಸು ಖರ್ಚಿಲ್ಲದೆ ದೊರಕುತ್ತಿವೆ. ನೆಲದ ಬೆಲೆ ಮುಗಿಲಿಗೇರಿದೆ. ಹೀಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಒಂದು ಸೈಟು ಕೊಡುವವರೆವಿಗೂ, ನನ್ನದೇ ಒಂದು ಸೈಟು ಇದೆ ಎನ್ನುವುದಕ್ಕಾದರೂ, ಬ್ಲಾಗ್‌ ಆರಂಭಿಸಬೇಕೆಂದು ತೀರ್ಮಾನಿಸಿದೆ.

ಹಂಬಲವೇನೋ ನಿಜವಾಗಿದೆ. ಮೊನ್ನೆ ಮಂಜುನಾಥರವರು ಇ-ಮೈಲಿನಲ್ಲಿ ಶರವೇಗದಲ್ಲಿ ಬ್ಲಾಗ್‌ ಮಾಡುತ್ತಿದ್ದೀರಿ ಎಂದು ಹೇಳಿದ್ದರು. ಪ್ರತಿಬಾರಿ ಬ್ಲಾಗ್‌ ರಚಿಸಿದಾಗಲೂ ಅವರಿಗೆ ಒಂದು ಇ-ಮೈಲ್‌ ಹೋಗುವುದರಿಂದ ಹೀಗೆ ದೂರಿರಬೇಕು ಎಂದು ಕೊಂಡಿದ್ದೀನಿ. ಬ್ಲಾಗ್‌ ಆರಂಭಿಸಿದಾಗ ಈ ಪ್ರಪಂಚದಲ್ಲಿ ಒಂದು ಸುತ್ತು ಹೋಗಿ ಬಂದೆ. (ಎಷ್ಟೆಂದರೂ ಅಲೆಮಾರಿಯಲ್ಲವೆ?) ಎಷ್ಟು ವೈವಿಧ್ಯಮಯ ಪ್ರಪಂಚ ಎನ್ನಿಸಿತು. ನಾನು ಇದುವರೆವಿಗೂ ಕೈ ಹಚ್ಚದ ಒಂದು ಪ್ರಯತ್ನ ಮಾಡಲು ಇದು ಒಳ್ಳೆಯ ಅವಕಾಶ ಎಂದೂ ಅನಿಸಿತು. ಹತ್ತಿಪ್ಪತ್ತು ವರುಷಗಳಿಂದ ಕೇವಲ ವಿಜ್ಞಾನದ ಬೆಳವಣಿಗೆಗಳ ಬಗ್ಗೆಯಷ್ಟೆ ಬರೆಯುತ್ತಿರುವುದರಿಂದ ನಾನು ಅತ್ತ ಬರೆಹಗಾರನೂ ಅಲ್ಲ, ಇತ್ತ ವಿಜ್ಞಾನಿಯೂ ಅಲ್ಲದ ತ್ರಿಶಂಕುವಾಗಿದ್ದೇನೆ. ನನ್ನ ಕನ್ನಡದಲ್ಲಿ ಇಂಗ್ಲೀಷಿನ ಪ್ರಭಾವ ಅಚ್ಚೊತ್ತಿದೆ ಎಂದು ಗೆಳೆಯ ಸೋಮಿ (ಬಿ. ಎಸ್‌. ಸೋಮಶೇಖರ್‌) ಹೇಳುತ್ತಿದ್ದುದೂ ಉಂಟು. ಜೊತೆಗೆ, ಕನ್ನಡದ ಕೆಲವು ಸೂಕ್ಷ್ಮ ವ್ಯಾಕರಣಗಳನ್ನು ನಾನು ನಿರ್ಲಕ್ಷಿಸುತ್ತಿದ್ದೇನೆ ಎಂದೂ ಸೋಮಿ ದೂರಿದ್ದರು. ವಾಸ್ತವವೇ, ವಿಜ್ಞಾನವನ್ನು ಸರಳ ಭಾಷೆಯಲ್ಲಿ ಹೇಳುವಾಗ ಅದು ಆಡು ಭಾಷೆಯಾಗಿದ್ದೂ ಉಂಟು. ಈ ಲೇಖನದಲ್ಲಿಯೂ ವ್ಯಾಕರಣ ದೋಷಗಳಿರಬಹುದು. ಓದುಗರು ತಾಳಿಕೊಂಡು, ತಿಳಿಸಿದರೆ ತಿದ್ದಿಕೊಳ್ಳಲು ಅನುಕೂಲ.

ವಿಜ್ಞಾನವನ್ನು ಮರೆತು ಬೇರೇನು ಬರೆಯಬಹುದು? ಸಾಹಿತ್ಯ ಬರೆಯೋಣವೆಂದರೆ ಭಾಷೆಯ ಲಾಲಿತ್ಯವನ್ನು ಸರಿಯಾಗಿ ತಿಳಿದವನಲ್ಲ. ಜೊತೆಗೆ, ಕವಿಯಾಗಲು ಬಲು ಸಂವೇದನಶೀಲ ಮನಸ್ಸು ಬೇಕು ಎನ್ನುವುದು ನನ್ನ ನಂಬಿಕೆ. ನನ್ನದು ಹೇಳಿಕೇಳಿ,ಯಾವ ವಸ್ತು, ವಿಷಯ ದೊರೆತರೂ ಅದನ್ನು ಕತ್ತರಿಸಿ ಒಳ ರಚನೆ ನೋಡುವ ವೈಜ್ಞಾನಿಕ ಬುದ್ಧಿ. ಇನ್ನು ಉಪಮೆಗಳು, ಅಲಂಕಾರಗಳು, ವಿಮರ್ಶೆಗಳು ನನಗೆ ಒಗ್ಗುವುದಿಲ್ಲ ಎನ್ನುವ ಹಿಂಜರಿಕೆಯೂ ಇದೆ. ಕಥೆ, ಕವನಗಳನ್ನು ಬರೆಯಬೇಕಾದರೆ, ಬದುಕಿನ ಬಲು ಸೂಕ್ಷ್ಮ ನಡವಳಿಕೆಗಳನ್ನೂ ಗಮನಿಸುವ, ಬಳಸಿಕೊಳ್ಳುವ (ಇವನ್ನು ಪ್ರತಿಮೆಗಳು ಎನ್ನುತ್ತಾರಂತೆ!) ಸೆನ್ಸಿಟಿವ್‌ ಮನಸ್ಸು ಇರಬೇಕು. ಅದು ನನಗಿದೆ ಎನ್ನುವ ಬಗ್ಗೆ ಸಂದೇಹವಿರುವುದರಿಂದ ನಾನು ಕಥೆ ಬರೆಯಲಿಲ್ಲ. ಕವನವನ್ನಂತೂ ಬರೆಯುವ ಗೋಜಿಗೆ ಹೋಗುವುದೇ ಇಲ್ಲ. ಹಿಂದೊಮ್ಮೆ ಗೆಳತಿ ಶೈಲಜಾ ನಿನಗೆ ಕವನ ಓದಲೇ ಬರುವುದಿಲ್ಲ ಇನ್ನು ಕವಿತೆ ಏಕೆ ಬರೆಯಬೇಕೆಂದಿದ್ದೀಯ ಎಂದಿದ್ದಳು. ನಿಜವೇ.

ಒಟ್ಟಾರೆ, ನಿತ್ಯ ಮನಸ್ಸಿಗೆ ತೋಚಿದ್ದನ್ನು ಬರೆದರಾಯಿತು ಎಂದು ಕೊಂಡೆ. ಕೆಲವರು ಬ್ಲಾಗ್‌ ಅನ್ನು ತಮ್ಮ ಸೈಬರ್‌ ದಿನಚರಿ ಎಂದು ವರ್ಣಿಸಿದ್ದಾರೆ. ಆ ದಿನದ ಆಗುಹೋಗುಗಳ ಮೇಲೆ ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ಸಾರ್ವಜನಿಕವಾಗಿ ದಾಖಲಿಸುವುದನ್ನೇ ಬ್ಲಾಗ್‌ ಎಂದು ಹೇಳುವವರೂ ಇದ್ದಾರೆ. ಅಡುಗೆಯ ಬಗ್ಗೆ ಬ್ಲಾಗ್‌ ಇದೆ. ವಿಜ್ಞಾನದ ಬಗ್ಗೆಯೂ ಬ್ಲಾಗ್‌ ಇದೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳಲ್ಲಿನ ಅವೈಜ್ಞಾನಿಕತೆಯನ್ನು ಬಯಲಿಗೆಳೆಯುವ ಬ್ಲಾಗ್‌ಗಳೂ ಇವೆ. ತಾನು ಆ ದಿನ ಏನು ಮಾಡಿದೆ ಎಂದು ಅಮೆರಿಕೆಯ ಬೀದಿಬಸವನೊಬ್ಬ (ಹೋಮ್‌ಲೆಸ್‌) ಹತ್ತಾರು ವರುಷಗಳಿಂದ ಬ್ಲಾಗಿಸಿದ ದಾಖಲೆಯೂ ಇದೆ. ನಾನು ಇದನ್ನು ದಿನಚರಿ ಎಂದು ಆರಂಭಿಸಲೇ ಎಂದು ಕೊಂಡೆ. ಆದರೆ ದಿನಚರಿ ಬರೆದು ಅಭ್ಯಾಸವೇ ಇಲ್ಲ.ಪ್ರತಿ ವರುಷವೂ ರೂಢಿಯಂತೆ ಡಿಸೆಂಬರ್‌ ಕೊನೆಯಲ್ಲಿ ದಿನಚರಿ ಪುಸ್ತಕ ಕೊಳ್ಳುವುದಷ್ಟೆ ಸತ್ಯ. ಅದರಲ್ಲಿ ಒಂದೆರಡು ದಿನ ಯಾರದ್ದಾದರೂ ವಿಳಾಸ ದಾಖಲಾಗುತ್ತದೆ. ಅನಂತರ, ಅದು ಹಾಗೇ ಕೊಳೆಯುತ್ತದೆ. ಮಿತ್ರರು ಪ್ರೀತಿಯೊಂದ ಕೊಡುವ ದಿನಚರಿಗಳ ಕಥೆಯೂ ಹೀಗೆಯೇ. ಕಛೇರಿಯಲ್ಲಿಯೂ ದಿನಚರಿ ಬರೆಯುವುದಿಲ್ಲ. ದಿನಚರಿಗಳನ್ನು ಸರ್ಕಾರಿ ವೆಚ್ಚದಲ್ಲಿ ಕೊಂಡು ನೀಡುವುದನ್ನು ಕೇಂದ್ರ ಸರಕಾರ ನಿರ್ಬಂಧಿಸಿರುವುದು ನನ್ನಂತಹ ದಿನಚರಿ-ದ್ವೇಷಿಗಳಿಗೆ ಅನುಕೂಲಿಯಾಗಿದೆ. ಕೋಟ್ಯಂತರ ರೂಪಾಯಿಗಳ ದಗಲ್‌ಬಾಜಿ ಮಾಡಿದವರೆಲ್ಲರ ಬಳಿಯೂ ಡೈರಿಗಳು ಸಿಕ್ಕಿದ್ದಾಗಿ ಪೋಲೀಸರು ಹೇಳಿಕೆ ನೀಡುವುದನ್ನು ನೋಡಿದರೆ ಅಚ್ಚರಿ ಎನ್ನಿಸುತ್ತದೆಯಷ್ಟೆ.

ಹೀಗೆ ದಿನಚರಿಗೆ ಪರ್ಯಾಯವಾಗಿ ಬ್ಲಾಗ್‌ ಆರಂಭಿಸಿದವ, ನಿನ್ನೆಯಷ್ಟೆ ಮಂಜುನಾಥರ ಬಳಿ ಇದು ಇನ್ನು ಎಷ್ಟು ದಿನ ಉಳಿಯುವ ಉತ್ಸಾಹವೋ ಎಂದು ಕಳವಳಿಸಿದ್ದೆ. ನನ್ನ ಕಳವಳವನ್ನೇ ಬೆಂಬಲಿಸುವ ಸುದ್ದಿ ಈವತ್ತು ಟೈಂಸ್‌ ಆಫ್‌ ಇಂಡಿಯಾ ಪ್ರಕಟಿಸಿದೆ. ವಿಶ್ವಾದ್ಯಂತ ಈಗ ಸುಮಾರು ೨೦ ಕೋಟಿ ಬ್ಲಾಗ್‌ಗಳು ಶವವಾಗಿವೆಯಂತೆ. ಯಾರೋ, ಎಂದೋ ಆರಂಭಿಸಿದವರುಗಳು ಈ ಬ್ಲಾಗ್‌ಗಳಲ್ಲಿ ಬರೆಯವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಬ್ಲಾಗ್‌ ಎನ್ನುವ ಗುಳ್ಳೆ ಒಡೆಯಲಿದೆ ಎಂದು ಟೋನಿ ಅಲೆನ್‌ ಮಿಲ್ಸ್‌ ಲೇಖನ ಬರೆದಿದ್ದಾರೆ. ಹೊಸ ಬ್ಲಾಗ್‌ಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆಯಂತೆ. ಇಂತಹ ಬ್ಲಾಗ್‌ ಶವಗಳು (Ghost Blogs) ಕೊಳೆಯುವುದಿಲ್ಲ. ಗೂಗಲ್‌ನಲ್ಲೋ, ಬ್ಲಾಗರ್‌ನಲ್ಲೋ ಹುಡುಕಿದರೆ ಅವುಗಳು ಈಗಲೂ ಕಾಣಿಸಿಕೊಳ್ಳಬಹುದು. ಆದರೆ, ಅವುಗಳಲ್ಲಿ ಜೀವವಿಲ್ಲ. ಹೊಸ ಚಿಂತನೆಗಳಿಲ್ಲ.

ಇದನ್ನು ಓದಿದಾಗ ಈ ಬ್ಲಾಗ್‌ನ ಗತಿಯೂ ಒಂದು ದಿನ ಹೀಗೇ ಆಗಬಹುದೇ ಎನ್ನುವ ಆತಂಕ ಕಾಡಿದೆ. ಮೇಲೇರಿದ್ದು ಕೆಳಗಿಳಿಯಬೇಕಾದದ್ದು ನಿಸರ್ಗ ನಿಯಮ. ಬ್ಲಾಗ್‌ ಕ್ರಾಂತಿಯೂ ಹಾಗೆಯೇ ಇರಬೇಕು. ಈ ಹಿಂದೆ ಡಾಟ್‌ಕಾಮ್‌ಗಳ ಸುಗ್ಗಿ ಬಂದು, ಅನಂತರ ಬರವುಂಟಾಗಿದ್ದು ತಿಳಿದಿದೆಯಲ್ಲವೇ? ಎರಡು ವರುಷಗಳ ಹಿಂದೆ ಪ್ರತಿದಿನವೂ ೧೦೦,೦೦೦ ಹೊಸ ಬ್ಲಾಗುಗಳು ಜನ್ಮತಾಳುತ್ತಿದ್ದುವಂತೆ. ಈಗ ಇದು ಕಡಿಮೆಯಾಗಿದೆ. ಹಾಗೆಂದು ಹೊಸ ಬ್ಲಾಗ್‌ ಬರುವುದೇ ಇಲ್ಲವೆಂತಲ್ಲ. ನನ್ನಂತಹ ನಿಧಾನದ್ರೋಹಿಗಳು ಎಲ್ಲಿಯಾದರೂ ಒಂದು ಹೊಸ ಬ್ಲಾಗ್‌ ಆರಂಭಿಸುತ್ತಾರೆ. ಆದರೆ ಈ ಉತ್ಸಾಹ ಕ್ರಮೇಣ ಕುಗ್ಗುತ್ತ ಹೋಗು‌ತ್ತದೆ ಎನ್ನುವುದು ಅಲೆನ್‌ ಮಿಲ್ಸ್‌ ಅಭಿಪ್ರಾಯ.

ಬ್ಲಾಗ್‌ಗಳ ಈ ಗತಿಗೆ ಕೆಲವರು ಹೇಳುವ ಮಾತು : ಇವುಗಳಲ್ಲಿ ಇರುವುದೆಲ್ಲವೂ ಅನಗತ್ಯ ಮಾಹಿತಿ. ಈ ಬ್ಲಾಗ್‌ಗೂ ಅದೇ ನಾಮ ಪಟ್ಟಿ ದೊರಕೀತೇ?

ಬ್ಲಾಗ್‌ಗಳನ್ನು ನಾವು ಬರೆಯುವುದೇಕೆ? ಈ ಬ್ಲಾಗ್‌ ಬರೆದ ಅನಂತರ ಈ ವಿಷಯದ ಬಗ್ಗೆ ಶ್ರೀ ಪವನಜರು ಸುಧಾ ಪತ್ರಿಕೆಗಾಗಿ ನಡೆಸಿದ ಸಂದರ್ಶನದಲ್ಲಿ ಎಂ. ಎಸ್‌. ಶ್ರೀರಾಮ್‌ ರವರ ವಿವರಣೆ ನೋಡಿದೆ. ಲೋಕಾನುಭವ ಎಲ್ಲರಿಗೂ ಒಂದೇ ಎನ್ನಿಸಿತು.

Monday, March 26, 2007

ರಾಮನವಮಿ

ನಾಳೆ ರಾಮನವಮಿ. ಬೇಲ-ಬೆಲ್ಲದ ರುಚಿ, ರುಚಿ ಪಾನಕ. ಕೋಸಂಬರಿ ಔತಣ. ನಾಲ್ಕು ವರುಷಗಳ ಹಿಂದೆ ಇದೇ ಸಂದರ್ಭದಲ್ಲಿ ನಮ್ಮಕರ್ನಾಟಕ ಡಾಟ್‌ ಕಾಂ ಗಾಗಿ ಬರೆದ ಲೇಖನಗಳು ನೆನಪಿಗೆ ಬರುತ್ತವೆ. ರಾಮನವಮಿಯ ಪಾನಕವೇ ವಸ್ತುವಾಗಿ, ನಮ್ಮ ಸಂಸ್ಕೃತಿಗೂ, ಪರಿಸರಕ್ಕೂ ಇರುವ ಗಾಢ ತಳುಕಿನ ಬಗ್ಗೆ ಚಿಂತನೆಗೆ ದೂಡಿತ್ತು. ನಿಮ್ಮೊಡನೆ ಅದನ್ನು ಹಂಚಿಕೊಳ್ಳುವ ಬಯಕೆ.

Saturday, March 24, 2007

Witness Box 2 ಸಾಕ್ಷಿಕಟ್ಟೆ ೨

ನ್ಯಾಯಾಲಯದಲ್ಲಿ ಮೊದಲ ದಿನದ ಅನುಭವ ತುಸು ವಿಚಿತ್ರ ಅನ್ನಿಸಿತ್ತೇನೋ, ನಿಜ. ಆದರೆ ಅದಕ್ಕಾಗಿ ನಮ್ಮ ಕರ್ತವ್ಯವನ್ನು ಬಿಡಬೇಕಿಲ್ಲ ಎಂದು ಡಾ. ಹೆಗ್ಡೆ ಒತ್ತಿ ಹೇಳಿದ್ದರಿಂದ ಮುಂದಿನ ಬುಲಾವಿನಂದು ಮತ್ತೆ ನ್ಯಾಯಾಲಯ ತಲುಪಿದೆವು. ಈ ಬಾರಿ ನೇರವಾಗಿ ಸರ್ಕಾರಿ ವಕೀಲರನ್ನು ನೋಡಲು ಹೋದೆವು. ನಾವು ಇಂತಹ ಕೇಸಿನ ಸಾಕ್ಷಿ ಎಂದು ಹೇಳಿದಾಗ. "ಓಹೋ. ನೀವು CW1, ನೀವು CW2" ಅಲ್ಲವೋ ಎಂದರು. (CW = Chief Witness). ಹೀಗೆಯೇ ಪ್ರತಿಯೊಬ್ಬ ಸಾಕ್ಷಿಗೂ ಒಂದು ಸಂಖ್ಯೆ. ಪ್ರತಿಯೊಬ್ಬ ಅಪರಾಧಿಗೂ ಒಂದು ಸಂಖ್ಯೆ ಇರುತ್ತದೆ. ನ್ಯಾಯಾಧೀಶರು ಅವರನ್ನು ಉಲ್ಲೇಖಿಸುವುದು ಸಂಖ್ಯೆಯಿಂದಲೇ ಅಂತೆ. ಪ್ರತಿಯೊಂದು ದಾಖಲೆಯಲ್ಲಿ ಉದ್ಧರಿಸುವಾಗಲೂ ನಿರ್ಭಾವುಕತೆಯಿಂದ ಬರೆಯಬೇಕು ಎನ್ನುವ ಉದ್ದೇಶಕ್ಕಾಗಿ ವೈಯಕ್ತಿಕ ಸುಳಿವು ಕೊಡದ ಬರೆಹವನ್ನು ಬಳಸಲಾಗುತ್ತದೆ. ಇದೇ ರೀತಿಯಲ್ಲಿಯೇ ನ್ಯಾಯಾಲಯದಲ್ಲಿಯೂ ವ್ಯಕ್ತಿಗಳ ಸಾಮಾಜಿಕ ನೆಲೆ, ನಿಲುವು ಏನೇ ಇದ್ದರೂ, ಆ ವ್ಯಾಜ್ಯದ ಮಟ್ಟಿಗೆ ಅವರು ಒಂದು ಸಂಖ್ಯೆ, ಒಂದು ಸಾಧನ ಆಗಿ ಬಿಡುವ ಕಾರಣಕ್ಕೆ ಹೀಗೆ ಇರಬಹುದೇ? ಜೈಲಿನಲ್ಲಿ, ನ್ಯಾಯಾಲಯದಲ್ಲಿ ಹಾಗೂ ಆಸ್ಪತ್ರೆಯಲ್ಲಿ ನಾವು ಒಂದು ಸಂಖ್ಯೆಯಾಗಿ ಬಿಡುತ್ತೇವೆ. ಇದೇ ಕಾರಣಕ್ಕೇ ಇರಬೇಕು, ಈ ಎಲ್ಲ ಪರಿಸರದಲ್ಲಿಯೂ ಒಂದೇ ಬಗೆಯ ಮನೋಭಾವ, ಖುಷಿಯಿಲ್ಲದ, ಗೂಡಿನೊಳಗೆ ಕಟ್ಟಿಟ್ಟಂತಹ ಅಥವಾ ಅಪರಾಧಿ ಮನೋಭಾವ ತನ್ನಂತಾನೇ ಸೃಷ್ಟಿಯಾಗಿ ಬಿಡುತ್ತದೆ. ನನ್ನ ಮಗ ಹುಟ್ಟುವಾಗ ಹೆರಿಗೆ ಆಸ್ಪತ್ರೆಯಲ್ಲಿಯೂ ನನಗೆ ಇದೇ ಭಾವ ಕಾಡಿತ್ತು. ಇದು ನನಗೊಬ್ಬನಿಗೇ ಆಗುವ ಅನುಭವವೋ, ಅಥವಾ ನಿತ್ಯವೂ ಅಲ್ಲಿಗೆ ಬರುವ ಸಾವಿರಾರು ಮಂದಿಗೂ ಹೀಗೇ ಅನಿಸುತ್ತದೆಯೋ ಕುತೂಹಲವಾಗಿದೆ.

ಲಾಯರು ನಮ್ಮನ್ನು ನೋಡಿದರು. ನಮ್ಮ ಉದ್ಯೋಗಗಳ ಬಗ್ಗೆ ತಿಳಿದುಕೊಂಡರು. ಅಯ್ಯೋ, ಇದಕ್ಕಾಗಿ ನೀವು ರಜೆ ಹಾಕಿ ಏಕೆ ಬಂದಿರಿ ಎಂದು ಪರಿತಾಪ ಪಟ್ಟರು. ಅನಂತರ ಅಂದಿನ ಕೇಸುಗಳ ಪಟ್ಟಿ ನೋಡಿ, 'ಈ ದಿನವೂ ನಿಮ್ಮ ವ್ಯಾಜ್ಯ ಪರೀಕ್ಷೆಗೆ ಬರುವ ಸಾಧ್ಯತೆಗಳು ಕಡಿಮೆ. ಕೆಲವು ಹಿರಿಯ ಪೋಲೀಸು ಅಧಿಕಾರಿಗಳ ಸಾಕ್ಷಿ ಕೇಳುವುದಿದೆ. ಅವರಿಗೆ ಪ್ರಾಮುಖ್ಯತೆಯಾದ್ದರಿಂದ ನಿಮ್ಮ ಕೇಸು ಈ ದಿನವೂ ಮುಂದೂಡಬಹುದು. ಒಂದು ಕೆಲಸ ಮಾಡಿ. ಜರೂರು ಸರ್ಕಾರಿ ಕಾರ್ಯಗಳಿದ್ದುದರಿಂದ ನಾವು ಸಾಕ್ಷಿ ಹೇಳಲು ಬರಲಾಗುತ್ತಿಲ್ಲ ಎಂದು ಒಂದು ಮನವಿ ಪತ್ರ ಬರೆದುಕೊಡಿ. ಕೇಸು ಅಡ್ಜರ್ನ್‌ ಮಾಡಿಸೋಣ. ಮುಂದಿನ ಸಮನ್‌ ಬಂದಾಗ ಬನ್ನಿ,' ಎಂದು ಸಲಹೆ ನೀಡಿದರು. ಮನವಿ ಬರೆದುಕೊಟ್ಟು, ಕೋರ್ಟಿನ ಅಂಗಳದಲ್ಲಿದ್ದ ಕೊಳಕು ಕ್ಯಾಂಟೀನಿನಲ್ಲಿ ಕಾಫಿ ಕುಡಿದು ಮನೆಗೆ ಮರಳಿದೆವು.

ಹಿಂದ ಒಂದು ಸಂದರ್ಭದಲ್ಲಿ ಹೈದರಾಬಾದಿನ ಸುಪ್ರಸಿದ್ಧ ಪ್ರಯೋಗಶಾಲೆ, 'ಸೆಂಟರ್‌ ಫಾರ್‌ ಸೆಲ್ಲುಲಾರ್‌ ಅಂಡ್‌ ಮಾಲೆಕ್ಯುಲಾರ್‌ ಬಯಾಲಜಿ,'ಯ ನಿರ್ದೇಶಕರಾದ ಡಾ. ಲಾಲ್ಜಿ ಸಿಂಗ್‌ ಒಂದು ಭಾಷಣದಲ್ಲಿ ತಮ್ಮ ಮೊತ್ತ ಮೊದಲ ನ್ಯಾಯಾಲಯದ ಭೇಟಿಯ ಪ್ರಸ್ತಾವ ಮಾಡಿದ್ದು ನೆನಪಾಯಿತು. ಲಾಲ್ಜಿ ಸಿಂಗ್‌ ಇಂದು ಅಪರಾಧಿಗಳ ಪತ್ತೆಯಲ್ಲಿ ನಿತ್ಯವೂ ಬಳಸುವ ಡಿಎನ್‌ಎ ಬೆರಳಚ್ಚು (DNA Fingerprinting) ಪರೀಕ್ಷೆಯನ್ನು ಭಾರತದಲ್ಲಿ ವಿನೂತನವಾಗಿ ಅಳವಡಿಸಿದ ವಿಜ್ಞಾನಿ. ಪ್ರಪ್ರಥಮ ಬಾರಿಗೆ ಮಗುವೊಂದರ ಜನ್ಮದಾತ ಯಾರು ಎನ್ನುವ ಬಗ್ಗೆ ಇಬ್ಬರು ಪೋಷಕರ ನಡುವಿನ ವ್ಯಾಜ್ಯವನ್ನು ಬಗೆ ಹರಿಸಲು ಬಳಸಲಾಗಿತ್ತು. ಆ ಸಂದರ್ಭದಲ್ಲಿ ಡಿಎನ್‌ಎ ಬೆರಳಚ್ಚಿನ ಪರೀಕ್ಷೆಗೆ ಡಾ. ಸಿಂಗ್‌ರವರಿಗೆ ತಿಳಿಸಲಾಗಿತ್ತು. ಈ ಪರೀಕ್ಷೆಯ ವಿವರಗಳು ಮತ್ತು ಫಲಿತಾಂಶಗಳನ್ನು ಅವರು ಸಾಕ್ಷಿಯಾಗಿ ನುಡಿಯಬೇಕಿತ್ತು. ಸಮನ್‌ ಬಂದಾಗ ಅದನ್ನು ನಿರಾಕರಿಸುವುದು ಅಪರಾಧ ಎಂದು ಅವರಿಗೆ ತಿಳಿ ಹೇಳಲಾಗಿತ್ತು. ಕೋರ್ಟಿಗೆ ಹೋದಾಗ ನಮ್ಮಂತೆಯೇ ಹಲವು ಗಂಟೆಗಳ ಕಾಲ ಕಾಯಬೇಕಾಗಿತ್ತಂತೆ. ಅದಾದ ಅನಂತರ ಸಾಕ್ಷಿ ಹೇಳಿ ಎಂದು ಅವರನ್ನು ಕರೆದರಂತೆ. ಹೊಸ ತಂತ್ರವನ್ನು ಬಳಸಿದ್ದರಿಂದ, ಅದರ ಬಗ್ಗೆ ವಿವರ ನೀಡಬೇಕಿತ್ತು. ಅದಕ್ಕಾಗಿ ವಿಜ್ಞಾನ ಸಭೆಗಳಲ್ಲಿ ಮಾಡುವ ಹಾಗೆ ಒಂದು ಸ್ಲೈಡ್‌ ಚಿತ್ರ ಪ್ರದರ್ಶಿಸಬೇಕು. ಪ್ರೊಜೆಕ್ಟರ್‌ ಇಡಬೇಕು ಎಂದು ವಿನಂತಿಸಿಕೊಂಡರಂತೆ. ಅನುಮತಿ ದೊರೆಯಿತಂತೆ. ಆದರೆ ಪ್ರೊಜೆಕ್ಟರ್‌ ಇಡಲು ಜಾಗೆ ಇಲ್ಲ. ಅದಕ್ಕೆ ವಿದ್ಯುತ್‌ ಸಂಪರ್ಕ ನೀಡುವ ಅವಕಾಶ ಸಾಕ್ಷಿ ಕಟ್ಟೆಯಲ್ಲಿ ಇರಲಿಲ್ಲವಂತೆ. ಸಾಕ್ಷಿಕಟ್ಟೆ ಒಂದು ಮರದ ಕಟ್ಟೆಯಷ್ಟೆ. ಅಲ್ಲಿ ಪ್ರೊಜೆಕ್ಟರ್‌ ಇರಲಿ, ನಿಮ್ಮ ಕೈ ಇಟ್ಟುಕೊಳ್ಳಲೂ ಕೆಲವೊಮ್ಮೆ ಜಾಗೆ ಇರುವುದಿಲ್ಲ, ಅಷ್ಟು ಕಿರಿದಾದ ಕಟಕಟೆ ಇರುತ್ತದೆ.

ಕೊನೆಗೆ ಹೇಗೋ ದೂರದ ಯಾವುದೋ ವಿದ್ಯುತ್‌ ಪ್ಲಗ್‌ನಿಂದ ವಿದ್ಯುತ್‌ ಪಡೆದುಕೊಂಡರಂತೆ. ಅನಂತರ ಚಿತ್ರವನ್ನು ಎಲ್ಲಿ ಪ್ರೊಜೆಕ್ಟ್‌ ಮಾಡಬೇಕು ಎನ್ನುವ ಸಂದಿಗ್ಧವುಂಟಾಯಿತಂತೆ. ಹೇಳಿ, ಕೇಳಿ, ಬೆಳಕು ನುಗ್ಗದಿರುವ ಸರ್ಕಾರಿ ಕಟ್ಟಡ. ಸುಣ್ಣ, ಬಣ್ಣ ಕಾಣದ ಗೋಡೆಗಳು. ಅಲ್ಲಿ ಎಲ್ಲಿ ಚಿತ್ರ ಸ್ಪಷ್ಟವಾಗಿ ಮೂಡೀತು. ಕೊನೆಗೆ ಒಂದು ಸ್ಥಳ ಕಾಣಿಸಿತಂತೆ. ಡಾ. ಸಿಂಗ್‌ ತಮ್ಮ ಚಿತ್ರವನ್ನು ಅಲ್ಲಿ ಪ್ರೊಜೆಕ್ಟ್‌ ಮಾಡಲು ಸಿದ್ಧರಾಗಿ, ಹೇಳಿದರಂತೆ. "ಮಹಾಸ್ವಾಮಿ, ತಾವು ಸ್ವಲ್ಪ ಅತ್ತ ಜರುಗಿದರೆ, ಚಿತ್ರವನ್ನು ತಮ್ಮ ಬೆನ್ನ ಹಿಂದಿನ ಗೋಡೆಯ ಮೇಲೆ ಪ್ರದರ್ಶಿಸಬಹುದು," ಎಂದು. ಅವರ ಮಾತು ಕೇಳಿ ಇಡೀ ನ್ಯಾಯಾಲಯ ಸ್ತಬ್ಧವಾಯಿತಂತೆ. ಅನಂತರ ಸರ್ಕಾರಿ ವಕೀಲರು ತಿಳಿ ಹೇಳಿದರಂತೆ. "ನ್ಯಾಯಾಧೀಶರು ಖುರ್ಚಿ ಬಿಟ್ಟು ಎದ್ದರೆಂದರೆ ನ್ಯಾಯಾಲಯ ಬರಖಾಸ್ತು ಆದಂತೆ," ಎಂದು. ಅದು ಹೇಗೋ ಕಸರತ್ತು ಮಾಡಿಕೊಂಡು ಚಿತ್ರವನ್ನು ಪ್ರದರ್ಶಿಸಿದೆ ಎಂದು ಲಾಲ್ಜಿ ಸಿಂಗ್‌ ನೆನಪಿಸಿಕೊಂಡಿದ್ದರು. ಈಗ ನ್ಯಾಯಾಲಯಗಳಲ್ಲಿ ವೀಡಿಯೋ ಕಾನ್ಫರೆನ್ಸ್‌ ಮುಖಾಂತರ ಸಾಕ್ಷಿ ವಿಚಾರಣೆ ನಡೆಯುತ್ತದೆ. ಉದಾಹರಣೆಗೆ, ಮೈಸೂರಿನ ನ್ಯಾಯಾಲಯವೇ "ಇಂಡಿಪೆಂಡೆಂಸ್‌ ಡೇ" ಚಿತ್ರದ ಬಗ್ಗೆ ಕೃತಿಚೌರ್ಯ ಎಂದು ಇಲ್ಲಿನ ಒಬ್ಬ ಲೇಖಕರು ಕೊಟ್ಟ ಫಿರ್ಯಾದಿನ ವಿಚಾರಣೆಯನ್ನು ವೀಡಿಯೋ ಕಾನ್ಫರೆನ್ಸ್‌ ಮುಖಾಂತರ ಮಾಡಿತ್ತು. ಅದು ಸುದ್ದಿಯಾಗಿತ್ತು.

ಬಹುಶಃ ಅಪರೂಪದ ವಿಷಯವೆಂದೇ ಅದು ಸುದ್ದಿಯಾಗಿತ್ತು ಎನ್ನಿಸುತ್ತದೆ. ನಿತ್ಯ ನ್ಯಾಯಾಲಯಕ್ಕೆ ತಾಕಲಾಡುವ, ಅಡ್ಜರ್ನ್‌‌ಮೆಂಟುಗಳನ್ನು ಎದುರಿಸುವ ಪರಿಸ್ಥಿತಿ ಇನ್ನೂ ಬದಲಾಗಿಲ್ಲ ಎನ್ನುವುದು ನನ್ನ ಅನುಭವ.

Friday, March 23, 2007

Witness Box ಸಾಕ್ಷಿಕಟ್ಟೆ

ಭಾರತದ ಎಲ್ಲ ನ್ಯಾಯಾಲಯಗಳ, ನ್ಯಾಯಾಧೀಶರುಗಳ ಕ್ಷಮೆ ಕೋರಿ!!

ಮುಕ್ತಾ ಧಾರಾವಾಹಿ ನೋಡಿದವರಿಗೆಲ್ಲ, ನ್ಯಾಯಾಲಯದಲ್ಲಿನ ನಡವಳಿಕೆಗಳು ಬಲು ರೋಚಕ ಎನ್ನಿಸಿರಬಹುದು. ಮೊತ್ತ ಮೊದಲು ನ್ಯಾಯಾಲಯದಿಂದ ವಾರಂಟ್‌ ಬಂದಾಗ ನನಗೂ ಹಾಗೇ ಅನ್ನಿಸಿತ್ತು. ಟೀವಿ ಹಾಗೂ ವಾಸ್ತವಗಳ ನಡುವೆ ಬಹಳ ಅಂತರ (ಟೀವಿ ಸುದ್ದಿಯನ್ನೂ ಸೇರಿಸಿ ಹೇಳುತ್ತಿದ್ದೇನೆ) ಇರುತ್ತದೆ ಎನ್ನುವ ಅರಿವಿದ್ದರೂ, ನನಗೆ ತುಸು ಕಳವಳ ಹಾಗೂ ಭಯ ಎನ್ನಿಸಿತ್ತು. ಮುಕ್ತಾದಲ್ಲಿ ಟಿಎನ್‌ಎಸ್‌ ಮಾಡಿದ ಹಾಗೆ ನನ್ನನ್ನೂ ಅಡ್ಡಸವಾಲಿನಲ್ಲಿ ಎದುರು ಪಕ್ಷದ ಲಾಯರು ತುಂಡರಿಸಿಬಿಡುವರೇನೋ ಎನ್ನುವ ಅನಿಸಿಕೆ ಇತ್ತು. ಕೆಲವೊಮ್ಮೆ ಚ್ಯೂಯಿಂಗ್‌ ಗಮ್‌ ಎನ್ನಿಸಿದ್ದರೂ, ಮುಕ್ತಾದ ಎಪಿಸೋಡುಗಳು, ಅದರಲ್ಲೂ ಸಾಕ್ಷಿಯ ವಿಚಾರಣೆ, ಅಡ್ಡಸವಾಲುಗಳು ೨೦ ನಿಮಿಷಗಳಲ್ಲೇ ಮುಗಿದು ಬಿಡುತ್ತಿದ್ದುವಷ್ಟೆ. ಇದನ್ನೆಲ್ಲ ನೋಡಿದ್ದವನಿಗೆ ಮೊದಲ ವಾರಂಟ್‌ ಬಂದಾಗ, ನ್ಯಾಯಾಲಯದಿಂದ ಒಂದು ಗಂಟೆಯೊಳಗೆ ಹಿಂದುರುಗಬಹುದು ಎನ್ನಿಸದ್ದರಲ್ಲಿ ತಪ್ಪೇನಿಲ್ಲ. ಅದರಲ್ಲೂ, ಮೊದಲ ಬಾರಿಗೆ ನ್ಯಾಯಾಲಯದ ಕಟ್ಟೆ ಹತ್ತುವವನಿದ್ದೆ.

ನ್ಯಾಯಾಲಯದ ಕಟ್ಟೆ ಹತ್ತಲು ಏನು ಅಪರಾಧ ಮಾಡಿದ್ದೆ ಎಂದಿರಾ? ನಾನು ನ್ಯಾಯಾಲಯಕ್ಕೆ ಹೋಗಿದ್ದು ಸಾಕ್ಷಿ ಹೇಳಲು. ನಾಲ್ಕು ವರುಷಗಳ ಹಿಂದೆ ಒಂದು ಮೋಟರುಬೈಕು ಅಪಘಾತ ನಡೆದಾಗ ಮೊದಲ ಫಿರ್ಯಾದು ನೀಡಿದ್ದೆ. ಇನ್ನೆರಡು ತಿಂಗಳುಗಳಲ್ಲಿ ವೈದ್ಯನಾಗಿ ನೂರಾರು ಜನರ ಜೀವ ಉಳಿಸುವವನಾಗುತ್ತಿದ್ದ ಅಂತಿಮ ವೈದ್ಯಕೀಯ ವಿದ್ಯಾರ್ಥಿ, ಕುಡುಕ ಚಾಲಕನೊಬ್ಬನ ಬೇಜವಾಬುದಾರಿ ಚಾಲನೆಯಿಂದ ಸ್ವತಃ ಶವವಾಗಿದ್ದ. ಅದರ ಬಗ್ಗೆ ಮೊದಲ ದೂರು ನಾನು ದಾಖಲಿಸಿದ್ದೆ. ಆ ಅಪಘಾತದ ಭೀಕರ ಸ್ವಪ್ನ ಮನಸ್ಸಿನಿಂದ ಮಾಸಿಯೇ ಹೋಗಿತ್ತು. ಆಗ ಬಂದಿತು ನ್ಯಾಯಾಲಯದ ಬುಲಾವು. ಇನ್ನೆರಡು ದಿನದಲ್ಲಿ ವಿಚಾರಣೆ ಇದೆ, ಬರತಕ್ಕದ್ದು. ಇದು ನಡೆದು ಒಂದೂವರೆ ವರುಷವಾಗಿದೆ. ಇನ್ನೂ ನನ್ನ ವಿಚಾರಣೆ ಮುಗಿದೇ ಇಲ್ಲ.

ಮೊದಲ ದಿನ ನ್ಯಾಯಾಲಯಕ್ಕೆ ಹೋಗಿದ್ದಾಗ ನನ್ನ ಜೊತೆಗೆ ನನಗೆ ನಾಗರೀಕ ಪ್ರಜ್ಞೆ ಮತ್ತು ಜವಾಬುದಾರಿಗಳ ಬಗ್ಗೆ ಯಾವಾಗಲೂ ತಿಳಿ ಹೇಳುವ ಗುರುಗಳಾದ ಡಾ. ಹೆಗ್ಡೆ ಯವರಿದ್ದರು. ಅವರೂ ಒಂದು ಸಾಕ್ಷಿ. ಇಬ್ಬರಿಗೂ ಇದು ಮೊದಲ ಅನುಭವ. ನ್ಯಾಯಾಲಯಕ್ಕೆ ಹೋದ ತಕ್ಷಣ ಮಾಡಿದ ಮೊದಲ ಕೆಲಸ, ನಮಗೆ ವಾರಂಟು ತಲುಪಿಸಿದ್ದ ಪೋಲೀಸು ಠಾಣೆಯ ಅಧಿಕಾರಿಯನ್ನು ಹುಡುಕುವುದು. ಎಲ್ಲೋ, ಯಾರ ಜೊತೆಗೋ ಚೌಕಾಶಿ ಮಾಡುತ್ತಿದ್ದ ಆತ ಸಿಕ್ಕಾಗ, "ಓ, ನೀವೇನೋ ಸಾಕ್ಷಿ" ಎಂದ. ಮುಕ್ತಾದಲ್ಲಿನ ಹಾಗೆ ಸರಕಾರಿ ವಕೀಲರು ಎಲ್ಲಿಯೂ ಕಾಣಲಿಲ್ಲ. ಇದುವರೆವಿಗೂ ನಾನು ಆತನನ್ನು ಭೇಟಿಯೇ ಆಗಿಲ್ಲ ಎನ್ನಬಹುದು.

ಅನಂತರ ನಡೆದದ್ದೇ ಸ್ವಾರಸ್ಯಕರ. ನೀವು ಇಲ್ಲಿ ನಿಲ್ಲಿ ಎನ್ನುವ ಆದೇಶದ ಮೇಲೆ ನ್ಯಾಯಾಲಯದ ಮುಂಬಾಗಿಲ ಬಳಿ ನಿಂತೆವು. ಸ್ವಲ್ಪ ಸಮಯ ಕಳೆದ ನಂತರ ನಾವು ಎಲ್ಲೋ ಜರುಗಿ ಹೋಗಿದ್ದೆವು. ಕಾರಣ, ನಮ್ಮಂತೆಯೇ ಸಾಕ್ಷಿ ಹೇಳುವವರ, ಅಪರಾಧಿಗಳ ಗುಂಪು ನಮ್ಮನ್ನು ದೂರಕ್ಕೆ ತಳ್ಳಿ ಬಿಟ್ಟಿತ್ತು. ನ್ಯಾಯಾಲಯಕ್ಕೆ ಬಂದು ಒಂದೂವರೆ ಗಂಟೆ ಆಗಿರಬಹುದು, ಬಾಗಿಲ ಬಳಿ ಇದ್ದ ಪ್ರತೀಹಾರಿ ಪ್ರತಿ ಬಾರಿ ಹೆಸರು ಕರೆದಾಗಲೂ ನನ್ನ ಹೆಸರೇ ಕರೆದಂತೆ ಕೇಳಿಸುತ್ತಿತ್ತು.

ನ್ಯಾಯಾಲಯದ ಪ್ರಾಂಗಣದಲ್ಲಿ ಇದ್ದವರೆಲ್ಲರ ಮುಖದಲ್ಲಿಯೂ ಸೂತಕದ ಕಳೆ. ಆತಂಕದ ಭಾವ. ಬಹುಶಃ ಕನ್ನಡಿಯಲ್ಲಿ ನೋಡಿಕೊಂಡಿದ್ದರೆ ನನ್ನ ಮುಖವೂ ಒಬ್ಬ ಅಪರಾಧಿಯಂತೆ ತೋರುತ್ತಿತ್ತೋ ಏನೋ? ಯಾರು ಅಪರಾಧಿ, ಯಾರು ಸಾಕ್ಷಿ ಹೇಳುವವರು ಎನ್ನುವುದೇ ತಿಳಿಯುತ್ತಿರಲಿಲ್ಲ. ಪೋಲೀಸರ ಕಸ್ಟಡಿಯಲ್ಲಿ ಇದ್ದ ಕೆಲವು ಕೋಳ ತೊಟ್ಟ ವ್ಯಕ್ತಿಗಳಷ್ಟೆ ತುಸು ಖುಷಿಯಾಗಿದ್ದಂತೆ ಅನಿಸಿತು. ನ್ಯಾಯಾಲಯದ ಒಳಗಿದ್ದ ವಕೀಲರುಗಳೂ, ಸಾಕ್ಷಿಗಳೂ, ಅಪರಾಧಿಗಳೂ ಒಂದೇ ರೀತಿ ತೋರುತ್ತಿದ್ದರು. ವಕೀಲರಿಗೆ ಅವರ ದಿರಿಸು ವಿಶಿಷ್ಟವಾಗಿತ್ತು ಅಷ್ಟೆ.

ಅಂತೂ ನನ್ನ ಹೆಸರು ಕರೆದಾಗ ಒಳಗೆ ಹೋದೆ. "ಅಲ್ಲಿ ಅಪರಾಧಿ ನಿಲ್ಲುವುದು, ಸಾಕ್ಷಿ ಇಲ್ಲಿ ಬನ್ನಿ" ಎಂದರು. ಅದು ನನಗೆ ಹೊಸತು. ಹೋದೆ. ಇನ್ನೇನು ಸಾಕ್ಷಿ ಹೇಳಿ ಮನೆಗೆ ಹೋಗಬಹುದು ಎಂದುಕೊಂಡಿದ್ದು ತಪ್ಪಾಯಿತು. ಮೊದಲ ಕರೆ ಹಾಜರಿ ಹಾಕಲು. ಪೋಲೀಸು ಪೇದೆ, ಸ್ವಲ್ಪ ಹೊರಗೆ ಇರಿ ಮತ್ತೆ ಕರೆಸುತ್ತಾರೆ ಎಂದ. ಮತ್ತೆ ಕಾರಿಡಾರಿನಲ್ಲಿನ ಗುಂಪಿನಲ್ಲಿ ಬೆವರು ವಾಸನೆ ಕುಡಿಯುತ್ತ ನಿಂತೆವು. ನಮ್ಮ ಸ್ಥಿತಿ ನೋಡಿ ಪಾಪ ಅನ್ನಿಸಿತೋ ಏನೋ. ಪೇದೆ ಮತ್ತೆ ಬಂದು 'ಒಳಗೆ ಬೆಂಚಿನ ಮೇಲೆ ಕುಳಿತುಕೊಳ್ಳಿ' ಎಂದ. ಒಳಗೆ ಹೋದೆವು. ಕುಳಿತ ಕೂಡಲೇ ಅಲ್ಲಿದ್ದ ವಕೀಲರೊಬ್ಬರು ಗದರಿದರು. "’ಕಾಲು ಕೆಳಗೆ ಬಿಡ್ರೀ!’ ಕಾಲ ಮೇಲೆ ಕಾಲು ಹಾಕಿ ಕೂರುವುದು ನ್ಯಾಯಲಯಕ್ಕೆ ಅಪಮಾನ ಮಾಡಿದಂತೆ," ಎಂದು ತಿಳುವಳಿಕೆ ನೀಡಿದರು. ನ್ಯಾಯಾಲಯದಲ್ಲಿ ನಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಿದರೆಂದು ಪೇಪರಿನಲ್ಲಿ ಒಮ್ಮೆ ಓದಿದ್ದು ನೆನಪಾಯಿತು. ಅದನ್ನು ಮರೆಯಲು ಸುತ್ತ ಕಣ್ಣಾಡಿಸಿದೆ. ಎಷ್ಟು ವ್ಯಾಜ್ಯಗಳಿಗೆ ಸಾಕ್ಷಿಯಾಗಿದ್ದುವೋ, ನ್ಯಾಯಾಲಯದ ಖುರ್ಚಿಗಳು ಎಲ್ಲವೂ ಓರೆಯಾಗಿದ್ದುವು. ನ್ಯಾಯಾಧೀಶರ ಆಸನದ ಬೆನ್ನಿನಲ್ಲಿ ಒಂದು ಮೂಲೆ ಕಿತ್ತು ಹೋಗಿತ್ತು. ಅಪರಾಧಿಗಳ ನಿಲ್ಲುವ ಕಟಕಟೆಯ ಮೇಲೆ ಎಷ್ಟೋ ವರುಷಗಳ ದೂಳು ನೆಲೆಯಾಗಿತ್ತು, ಭಾರತೀಯ ನ್ಯಾಯಾಲಯಗಳಲ್ಲಿ ಕೊನೆಗಾಣದೆ ಇರುವ ವ್ಯಾಜ್ಯಗಳ ಪ್ರತಿರೂಪದಂತೆ. ನಾನು ಕುಳಿತಿದ್ದ ಖುರ್ಚಿಯ ಒಂದು ಕಾಲು ಸವೆದು, ಓಲಾಡುತ್ತಿತ್ತು. ಎಲ್ಲಿ ನ್ಯಾಯಾಲಯಕ್ಕೆ ಅವಮರ್ಯಾದೆಯಾಗುತ್ತದೋ ಎಂದು ಸಾಹಸದಿಂದ ಖುರ್ಚಿಯ ಮೇಲೆ ಕೂರುವ ಕಸರತ್ತು ಮಾಡಿದೆ. ಊಟದ ವೇಳೆ ಆಗುತ್ತಿದ್ದಂತೆ ಹೊಟ್ಟೆ ಚುರುಕ್‌ ಎನ್ನತೊಡಗಿತು. ಆದರೆ ಹೊರಗೆ ನಡೆಯಬಹುದೋ ಇಲ್ಲವೋ ತಿಳಿಯಲಿಲ್ಲ.

ಅಷ್ಟರಲ್ಲಿ ಪೇದೆ ಬಂದು ಕೇಸಿನ ಫೈಲು ಕೈಗಿತ್ತ. ಇದರಲ್ಲಿ ನೀವು ಏನು ಹೇಳಬೇಕು ಎಂದು ಬರೆದಿದೆ. ಚೆನ್ನಾಗಿ ಓದಿಕೊಳ್ಳಿ ಎಂದ. ನಾನೇ ಬರೆದುಕೊಟ್ಟ ಫಿರ್ಯಾದು ಮರೆತೇ ಹೋಗಿತ್ತು. ಓದಿಕೊಂಡೆ. ಫಿರ್ಯಾದಿನಲ್ಲಿ ನಮೂದಿಸಿದ್ದ ಮೃತ ಹುಡುಗನನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ನನಗೆ ಅತ್ಯಂತ ಆಪ್ತ ಪರಿಚಿತ ಆತ. ಆದರೆ ಈಗ ಅವನ ಶವವಷ್ಟೆ ಎದುರು ಕಾಣುತ್ತಿತ್ತು. ಶವಪರೀಕ್ಷೆಯ ವಿವರಗಳಷ್ಟೆ ಎದುರು ಕಾಣುತ್ತಿದ್ದುವು. ಆತ ಓಡಿಸುತ್ತಿದ್ದ ಬೈಕಿನ ಸಂಖ್ಯೆಯನ್ನು ಉರು ಹೊಡೆದೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ಎಂದೂ, ಯಾವ ಪರೀಕ್ಷೆಗೂ ಉರು ಹೊಡೆದವನಲ್ಲ. ಇಂದು ಉರು ಹೊಡೆದೆ. ತಪ್ಪು ಹೇಳಬಾರದಲ್ಲವೆ? ಸಾಕ್ಷಿಯಲ್ಲವೇ? ತಪ್ಪು ಸಾಕ್ಷಿ ಹೇಳಬಾರದು. ಅದಕ್ಕೂ ಮಿಗಿಲಾಗಿ ಅಪರಾಧಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಾದುದು ನಾಗರೀಕ ಕರ್ತವ್ಯ. ಅದಕ್ಕೆ ಚ್ಯುತಿ ಬರಬಾರದು. ಹೀಗೆಲ್ಲ ಯೋಚಿಸಿ, ಉರು ಹೊಡೆದೆ. ಊಟದ ಸಮಯಕ್ಕೆ ಸರಿಯಾಗಿ ಬಂದ ಪೇದೆ,”ಈಗ ನಿಮ್ಮ ವಿಚಾರಣೆ ಆಗುವುದಿಲ್ಲ. ಬಹುಶಃ ಮೂರೂವರೆಗೆ ಆಗಬಹುದು. ಆಗ ಬನ್ನಿ" ಎಂದ.

ಮತ್ತೆ ಮಧ್ಯಾಹ್ನ ಉರಿಬಿಸಿಲಲ್ಲಿ ಬಂದೆವು. ಯಥಾ ಪ್ರಕಾರ ದೂಳು ಮುಸುಕಿದ ಬೆಂಚಿನ ಮೇಲೆ ಸಪ್ಪೆ ಮೋರೆ ಹಾಕಿಕೊಂಡು ಕುಳಿತದ್ದಾಯಿತು. ಕೈಯಲ್ಲಿ ಪತ್ರಿಕೆ ಇದ್ದರೂ, ಓದಬಹುದೋ, ಇಲ್ಲವೋ ಅನುಮಾನ. ಸುತ್ತ ನಡೆಯುತ್ತಿದ್ದ ವಿದ್ಯಮಾನಗಳೆಲ್ಲವನ್ನೂ ನೋಡುತ್ತ ಇದ್ದೆವು. ಮುಕ್ತ ದಂತೆ ಯಾವುದಾದರೂ ಸಾಕ್ಷಿಪರೀಕ್ಷೆ ನಡೆಯಬಹುದೇ ಎಂದು ಕಾತರ ಪಟ್ಟೆ. ಅಂದು ಇದ್ದ ಎಲ್ಲ ಕೇಸುಗಳೂ ಅಡ್ಜರ್ನ ಆಗುತ್ತಿದ್ದವು. ಒಂದೋ ಅಪರಾಧಿ ಗೈರು ಹಾಜರಿ. ಇಲ್ಲವೇ ಸಾಕ್ಷಿ. ಇಬ್ಬರೂ ಇದ್ದಾಗ ಯಾರೋ ಒಬ್ಬ ವಕೀಲ. ಎಲ್ಲರೂ ಇದ್ದಾಗ ಇನ್ಯಾವುದೋ ಕೇಸಿನ ತುರ್ತು. ಐದೂಕಾಲು ಆಗುತ್ತಿದ್ದಂತೆ ನನ್ನ ಹೆಸರು ಕರೆದರು. ಪ್ರಧಾನ ಸಾಕ್ಷಿ ನಾನೇ ತಾನೇ! ಹೆಮ್ಮೆಯಿಂದ ಸಾಕ್ಷಿ ಕಟ್ಟೆಯ ಬಳಿ ಹೋದೆ. ಸಾಕ್ಷಿ ಕಟ್ಟೆಯನ್ನು ಇನ್ನೇನು ಹತ್ತುವವನಿದ್ದೆ. ಅಷ್ಟರಲ್ಲಿ ನ್ಯಾಯಾಧೀಶರು ಇದು ಹೊಸ ಕೇಸೇ ಎಂದರು. ಹೌದು ಎಂದಾಗ. ಉಳಿದ ಸಾಕ್ಷಿಗಳು ಎಲ್ಲರೂ ಬಂದಿದಾರಾ ಎಂದರು. ಇಲ್ಲ ಎಂದ ಕೂಡಲೇ ಹಾಗಿದ್ದರೆ ಮುಂದಿನ ತಿಂಗಳು ಕರೆಸಿ, ಎಂದು ಅಪ್ಪಣೆಯಾಯಿತು. ನನ್ನ ಮೊದಲ ಸಾಕ್ಷಿ ಅಲ್ಲಿಗೆ ಮುಗಿದಿತ್ತು. ಒಂದೇ ಒಂದು ಮಾತೂ ಹೇಳದೆ ಸಾಕ್ಷಿ ಕಟ್ಟೆ ಹತ್ತದೆ ಹಿಂದುರುಗಿದ್ದೆ.

Tuesday, March 20, 2007

Retirement (ನಿವೃತ್ತಿ)

ಮೊನ್ನೆ ನಮ್ಮ ಘನ ಭಾರತ ಸರಕಾರ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಐದು ವರುಷ ಹೆಚ್ಚಿಸಿತು. Now, government employees in the higher education, especially in the top posts, retire at 65 instead of 60. They can continue to be reemployed till 70 years of age. ಇದು ವರವೇ, ಶಾಪವೇ ಎನ್ನುವ ಬಗ್ಗೆ ಚರ್ಚೆ ಆರಂಭವಾಗಲಿದೆ. ಈ ತೀರ್ಮಾನದಿಂದ ಲಾಭ ಪಡೆಯುವವರು ಖಂಡಿತವಾಗಿಯೂ ಇದು ಒಂದು ಒಳ್ಳೆಯ ತೀರ್ಮಾನ ಎನ್ನುತ್ತಾರೆ. ಇಂತಹ ಉದ್ಯೋಗಗಳಿಗಾಗಿ ಹತ್ತಾರು ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿ ನಿರಾಶೆಗೊಂಡಿರುವವರು, ಇದು ತಮಗೆ ಶಾಪ ಎಂದು ತೀರ್ಮಾನಿಸುವುದು ಖಂಡಿತ. ಏಕೆಂದರೆ, ಇಂದಿನ ಜಾಗತೀಕರಣದ ಪರಿಸರದಲ್ಲಿಯೂ ಸರ್ಕಾರಿ ಉದ್ಯೋಗವನ್ನೇ ಉದ್ಯೋಗ ಎಂದು ನಂಬಿಕೊಂಡವರು ಕೋಟಿಗಟ್ಟಲೆ ಇದ್ದಾರೆ.

ನಿವೃತ್ತಿ ಎನ್ನುವ ಮಾತು ಕೇಳಿದಾಗ ನಮ್ಮ ಸಂಸ್ಥೆಯಲ್ಲಿ ಪ್ರತಿ ತಿಂಗಳೂ ನಡೆಯುವ ನಿವೃತ್ತರಿಗೆ ಬೀಳ್ಕೊಡುಗೆ ಎನ್ನುವ ಆಚರಣೆಯ ನೆನಪಾಯಿತು. ನಮ್ಮದು ನೂರಾರು ಉದ್ಯೋಗಿಗಳಿರುವ ಸರ್ಕಾರಿ ಸಂಸ್ಥೆ. ಸಂಸ್ಥೆ ಹಳೆಯದಾದಷ್ಟೂ ನಿವೃತ್ತರಾಗುವವರ ಸಂಖ್ಯೆಯೂ ಹೆಚ್ಚು. ಪ್ರತಿ ತಿಂಗಳೂ ಕನಿಷ್ಠ ಐದು ಮಂದಿಯಾದರೂ ನಿವೃತ್ತರಾಗುತ್ತಾರೆ. ತಿಂಗಳ ಕೊನೆಯ ದಿನದಂದು ಇಂತಹವರಿಗೆ ಬೀಳ್ಕೊಡುಗೆ ನೀಡಲಾಗುತ್ತದೆ. ಈ ಸಮಾರಂಭದ ಖರ್ಚಿಗಾಗಿ ಒಂದು ನಿಧಿಯನ್ನೂ ಸ್ಥಾಪಿಸಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ತಿಂಗಳ ವೇತನದಿಂದ ಒಂದೈದು ರೂಪಾಯಿಗಳನ್ನು ಈ ನಿಧಿಗೆ ನೀಡುತ್ತಾರೆ.

ಸಮಾರಂಭ ಪ್ರತಿ ತಿಂಗಳ ಕಡೆಯ ದಿನ (working day) ಸಂಜೆ ನಿವೃತ್ತರಾಗಲಿರುವವರು ಹಾಗೂ ಅವರ ಪತಿ ಯಾ ಪತ್ನಿಯವರನ್ನು ವೇದಿಕೆಯಲ್ಲಿ ಕುಳ್ಳಿರಿಸಿ, ಸಂಸ್ಥೆಯ ಮುಖ್ಯಸ್ಥರಿಂದ ಸನ್ಮಾನ ಮಾಡಲಾಗುತ್ತದೆ. ಒಂದು ಹೂ ಗುಚ್ಛ, ಪುಟ್ಟದೊಂದು ಸ್ಮರಣಿಕೆ ಹಾಗೂ ಫಲ, ತಾಂಬೂಲ ನೀಡಿ ಸತ್ಕರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ನಿವೃತ್ತರ ವಿಭಾಗದ ಮುಖ್ಯಸ್ಥರು ನಿವೃತ್ತರ ಸೇವೆಯ ಬಗ್ಗೆ ಒಂದೆರಡು ಮಾತುಗಳನ್ನೂ ಹೇಳುವುದುಂಟು. ನಿವೃತ್ತರೂ ತಮ್ಮ ಒಂದೆರಡು ಮಾತುಗಳನ್ನು ಹೇಳುವುದುಂಟು. ವಿಶೇಷವೇನೆಂದರೆ ಇದುವರೆಗಿನ ನನ್ನ ಸೇವಾ ಅವಧಿಯಲ್ಲಿ ನಿವೃತ್ತಿಯಾದ ಯಾರೂ ಸಂಸ್ಥೆಯ ಬಗ್ಗೆ ಕೆಟ್ಟ ನುಡಿಗಳನ್ನು ನುಡಿದಿಲ್ಲ. ಸಿಬ್ಬಂದಿ ಹಾಗೂ ಅವರ ಮುಖ್ಯಸ್ಥರು ಹಾಗೂ ಇತರೆ ಸಹೋದ್ಯೋಗಿಗಳ ಜೊತೆಗೆ ಒಳ್ಳೆಯ ಸಂಬಂಧ ಇಲ್ಲದಿದ್ದ ಸಮಯದಲ್ಲಿಯೂ ಸಂಸ್ಥೆಯ ಬಗ್ಗೆ ಕೆಟ್ಟ ನುಡಿ ಬಂದದ್ದು ನಾನು ಕೇಳಿಲ್ಲ. ಸಾರ್ವಜನಿಕ ಸಭೆಯ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಎಲ್ಲರೂ ಹೀಗೆ ಒಳ್ಳೆಯದನ್ನೇ ನುಡಿದಿರುತ್ತಾರೆ ಎನ್ನುವುದನ್ನು ಒಪ್ಪಲು ಸ್ವಲ್ಪ ಕಷ್ಟವಾಗುತ್ತದೆ. ಏಕೆಂದರೆ ಈ ಸಮಾರಂಭದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವವರಲ್ಲಿ ವಿವಿಧ ವರ್ಗದ ನೌಕರರಿರುತ್ತಾರೆ. ಎಲ್ಲರಿಗೂ ಸಾರ್ವಜನಿಕ ಸಭೆಯ ಮರ್ಯಾದೆಗಳು ತಿಳಿದಿರುತ್ತದೆ ಎನ್ನುವುದು ಹೇಗೆ? ಹಾಗಿದ್ದರೆ ಸಂಸ್ಥೆಯ ವ್ಯಕ್ತಿತ್ವ, ಅದರೊಳಗಿನ ವ್ಯಕ್ತಿಗಳ ಅಂತರ ಸಂಬಂಧಗಳಿಂದ ಮುಕ್ತವಾದದ್ದೇ? ಸಂಸ್ಥೆಯ ವ್ಯಕ್ತಿತ್ವಕ್ಕೆ, ಪ್ರತಿಷ್ಠೆಗೆ ಸಿಬ್ಬಂದಿಗಳ ನಡುವಣ ಸಂಬಂಧ ಕಾರಣವಾಗಲಿಕ್ಕಿಲ್ಲವೇ? ಇಂದಿನ ಮ್ಯಾನೇಜ್‌ಮೆಂಟ್‌ ನಿಯಮಗಳು ಹೇಳುವಂತೆ ಟೀಮ್‌ ಸ್ಪಿರಿಟ್‌ ಎನ್ನುವುದು ವ್ಯಕ್ತಿಗಳ ನಡುವಣ ಸಂಬಂಧವನ್ನು ಮೀರಿದ ಒಂದು ಸಂಬಂಧವೇ? ಇದು ನನ್ನನ್ನು ಕಾಡಿದ ಪ್ರಶ್ನೆ.

ಪ್ರತಿ ತಿಂಗಳೂ ಈ ಸಮಾರಂಭದಲ್ಲಿ ಭಾಗವಹಿಸುವ ನನಗೆ ಸಮಾರಂಭದಲ್ಲಿ ಮದುವೆಯ ಕಳೆ ನನಗೆ ಎಂದೂ ತೋರಿಲ್ಲ ಎನ್ನುವುದು ವಾಸ್ತವ. ಸಾವಿನ ಮನೆಯಲ್ಲಿ ಮರಣಿಸಿದ ವ್ಯಕ್ತಿಯ ನಡೆ, ನುಡಿಗಳ ಬಗ್ಗೆ ಹೇಗೆ ಗೌರವದಿಂದ ನಡೆದುಕೊಳ್ಳುತ್ತೇವೆಯೋ ಹಾಗೆಯೇ ಇಲ್ಲಿಯೂ ನಾವು ವರ್ತಿಸುತ್ತಿರಬಹುದು ಎನ್ನುವ ಅನುಮಾನ ನನಗಿದೆ. ನಿವೃತ್ತರಾದವರ ಬದುಕು (ಪ್ರೊಫೆಶನಲ್‌ ಬದುಕು) ಇಲ್ಲಿಗೆ ಕೊನೆಯಾಯಿತು ಎನ್ನುವ ರೀತಿಯಲ್ಲಿ ಇದು ಇರುತ್ತದೆ.

ನಮ್ಮ ಸಂಸ್ಥೆಗೇ ವಿಶಿಷ್ಟವಾದ ಆಚರಣೆಯೊಂದು ಸಮಾರಂಭದ ಕೊನೆಗೆ ನಡೆಯುತ್ತದೆ. ಅಂದು ನಿವೃತ್ತರಾದವರು ಮತ್ತು ಅವರ ಕುಟುಂಬದವರನ್ನು ಸಂಸ್ಥೆಯ ವಾಹನದಲ್ಲಿ ಮನೆಗೆ ಕಳಿಸಿಕೊಡಲಾಗುತ್ತದೆ. ಇದು ಒಂದು ಶಿಷ್ಟಾಚಾರ. ಹೀಗಾಗಿ ಇದರಲ್ಲಿ ನನಗೆ ಅಷ್ಟೇನೂ ವಿಶೇಷ ತೋರಿರಲಿಲ್ಲ. ಗುರುಮಲ್ಲಯ್ಯ (ನಿಜ ನಾಮವಲ್ಲ) ಎನ್ನುವವರು ನಿವೃತ್ತಿಯಾಗುವವರೆಗೆ. ಈತ ನಮ್ಮ ಸಂಸ್ಥೆಯ ತೋಟಗಾರಿಕೆ ವಿಭಾಗದಲ್ಲಿದ್ದವ. ಗುರುಮಲ್ಲಯ್ಯ ಎನ್ನುವುದೇ ಈತನ ಹೆಸರು ಎನ್ನುವುದು ನನಗೆ ತಿಳಿದದ್ದೂ ಆತನ ನಿವೃತ್ತಿ ದಿನದಂದೇ ಎನ್ನುವುದು ಒಂದು ಐರನಿ. ಈ ಸಮಾರಂಭದಂತೆಯೇ ಸಂಸ್ಥೆಯಲ್ಲಿ ಜರುಗುವ ಹಲವಾರು ಸಮಾರಂಭಗಳ ಸಂದರ್ಭದಲ್ಲಿ ಸಭಾಲಂಕಾರಕ್ಕಾಗಿ ಈತ ಹೂಗಿಡಗಳನ್ನು ತಂದು ಒಪ್ಪವಿಡುತ್ತಿದ್ದುದನ್ನು ನೋಡಿದ್ದೆ. ಕೆಲವೊಮ್ಮೆ ಇಂತಹ ಗಿಡವೇ ಬೇಕು ಎಂದು ಆದೇಶ ನೀಡಿದ್ದೂ ಉಂಟು. ಆದರೆ ಆತನ ಹೆಸರು ತಿಳಿದುಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ನಿವೃತ್ತಿಯ ದಿನದಂದು ಆತ ಹೆಚ್ಚು ಮಾತನಾಡಲಿಲ್ಲ. ಹೇಳಿದ್ದೇ ಎರಡು ವಾಕ್ಯ. "ನಾನು ಈ ಸಂಸ್ಥೆಗೆ ಆಭಾರಿ. ಇಂದು ನನ್ನನ್ನು ಮನೆಗೆ ಕಳಿಸಲು ವಾಹನದ ವ್ಯವಸ್ಥೆಯನ್ನೂ ಮಾಡಿರುವವರಿಗೆ ಧನ್ಯವಾದಗಳು.”

ಸರ್ಕಾರಿ ವಾಹನವನ್ನು ಯಾವ್ಯಾವುದೋ ಕೆಲಸಗಳಿಗೆ ಬಳಸಿಕೊಳ್ಳುವವರಿಗೆ ಈ ವಾಕ್ಯದ ಅರ್ಥವಾಗಿರಲಿಕ್ಕಿಲ್ಲ. ಸುಮಾರು ೩೭ ವರುಷ ಸಂಸ್ಥೆಯ ಆವರಣ ಹಸಿರಾಗಿರಲು ಶ್ರಮಿಸಿದ ವ್ಯಕ್ತಿ ಸಂಸ್ಥೆಗೆ ಸಂಬಂಧಿಸಿದ ವಾಹನದಲ್ಲಿ ಸಂಚರಿಸಿದ್ದು ಅದೇ ಪ್ರಥಮ. ಗುರುಮಲ್ಲಯ್ಯನ ಮಾತು ನೇರವಾಗಿ ಎದೆ ತಟ್ಟಿತು. ಸಾವಿನ ಅನಂತರವಷ್ಟೆ ನಾವು ಶವವಾಹನ ಏರುತ್ಥೇವೆ ಅಲ್ಲವೆ? ಪ್ರಥಮ ಹಾಗೂ ಕೊನೆಯ ಬಾರಿಗೆ! (ಎಲ್ಲ ನಿವೃತ್ತರ ಬದುಕೂ ನಿವೃತ್ತಿಯ ಜೊತೆಗೇ ಕೊನೆಗಾಣುವುದಿಲ್ಲ ಎನ್ನುವ ಅರಿವು ಇದೆ. ಆದರೆ ಇಂತಹವರ ಸಂಖ್ಯೆ ಎಷ್ಟು?)

ಇಂದಿನ ಪಿಂಕ್‌ ಸ್ಲಿಪ್‌ ಪ್ರಪಂಚದಲ್ಲಿ ಒಂದೇ ಸಂಸ್ಥೆಯಲ್ಲಿ ಇಷ್ಟು ದೀರ್ಘಾವಧಿಯ ಸೇವೆ ಮಾಡುವುದು inefficiency ಎಂದು ಅನ್ನಿಸಬಹುದು. ಆದರೆ ಅನ್ನ ಕೊಟ್ಟ ಸಂಸ್ಥೆ ಎನ್ನುವ ಅವಿರ್ಭಾವ ಇಷ್ಟು ದೀರ್ಘ ಸೇವೆಯ ಅನಂತರವಷ್ಟೆ ಸಾಧ್ಯ. ಅದರಲ್ಲೂ ಗುರುಮಲ್ಲಯ್ಯನಂತಹವರಿಗೆ. ಬಡ್ತಿ, ಅಧಿಕಾರದ ಬೆನ್ನು ಹತ್ತಿದವರಿಗೆ ಬಹುಶಃ ಹೀಗನ್ನಿಸಲಿಕ್ಕಿಲ್ಲ!

ಕೆಲವರಿಗಂತೂ ನಿವೃತ್ತಿಯ ದಿನವೇ ಅವರ ಬದುಕಿನ ಕೊನೆಯ ದಿನ ಎಂದು ಅನ್ನಿಸುವುದೂ ಸಹಜ. ವೃತ್ತಿಜೀವನ ನಮ್ಮನ್ನು ಅಷ್ಟು ತಾಕುತ್ತದೆ. ನನಗೆ ತಿಳಿದವರೊಬ್ಬರು ತಮ್ಮ ಹಲವಾರು ದೈಹಿಕ ವಿಕಲಾಂಗತೆಯ ನಡುವೆಯೂ ತೃಪ್ತಿಯಿಂದ ಕಛೇರಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ನಿವೃತ್ತಿಯಾದ ಒಂದೇ ತಿಂಗಳು, ಕಾಲ ಅವರನ್ನು ಕರೆದೊಯ್ದಿತು.

ಪ್ರಜಾವಾಣಿ v/s ವಿಜಯಕರ್ನಾಟಕ

ವಿನಯ ಆರ್‌ ತಮ್ಮ ಬ್ಲಾಗ್‌ ಒಂದರಲ್ಲಿ ಪ್ರಜಾವಾಣಿಗಿಂತಲೂ ವಿಜಯಕರ್ನಾಟಕ ಏಕೆ ಜನಪ್ರಿಯ ಎಂದು ಪ್ರಶ್ನಿಸಿದ್ದಾರೆ? ಅದಕ್ಕೆ ಅವರ ಬ್ಲಾಗ್‌ನಲ್ಲಿ ನಾನು ಪ್ರತಿಕ್ರಯಿಸಿದ್ದು:

ಬಹುಶಃ ಇದೇ ಪ್ರಶ್ನೆ ಪ್ರಜಾವಾಣಿಯ ಮಾರಾಟ ನಿರ್ವಾಹಕರಿಗೂ ಹಗಲೂ, ರಾತ್ರಿ ಕಾಡುತ್ತಿರಬಹುದು. ಉತ್ತರ ಸರಳವಾಗಿಲ್ಲ. ಏಕೆಂದರೆ, ಪತ್ರಿಕೆ, ಪ್ರಕಾಶನ, ಪತ್ರಿಕೋದ್ಯಮ, ಮುದ್ರಣ ತಂತ್ರಜ್ಞಾನ ಎಲ್ಲದರಲ್ಲೂ ಅಭೂತಪೂರ್ವ ಪರಿವರ್ತನೆಗಳು ಬಂದಿವೆ. ಉದಾಹರಣೆಗೆ, ವಿಜಯ ಕರ್ನಾಟಕ ಎಲ್ಲೆಡೆ ನೆಲೆಯಾಗಲು ಕಾರಣ ಅದರ ಪ್ರಾದೇಶಿಕ ಸಂಚಿಕೆಗಳು. ಮೈಸೂರಿನ ಜನತೆಗೆ ಮೈಸೂರಿನ ಸುದ್ದಿ. ಮಂಗಳೂರಿನವರಿಗೆ ಮಂಗಳೂರಿನ ಸುದ್ದಿ.

ಪತ್ರಿಕೋದ್ಯಮದಲ್ಲಿ ವಿಜಯ ಕರ್ನಾಟಕ ತಂದ ಮತ್ತೊಂದು ಬದಲಾವಣೆಯೂ ಇದೆ. ಅದುವರೆವಿಗೂ ಪ್ರತಿಯೊಂದು ಪತ್ರಿಕೆಗೂ ಅದರದ್ದೇ ಆದ ಕ್ಷೇತ್ರವಿತ್ತು. ಉದಾಹರಣೆಗೆ, ಉದಯವಾಣಿ ಕರಾವಳಿಯ ಜನಪ್ರಿಯ ಪತ್ರಿಕೆ ಆಗಿತ್ತು. ಬೆಂಗಳೂರು, ಮುಂಬಯಿಯ ಕರಾವಳಿ ಕನ್ನಡಿಗರು ಆ ಊರುಗಳಲ್ಲೂ ಅವುಗಳ ಗ್ರಾಹಕರಾಗಿರುತ್ತಿದ್ದರು. ಪ್ರಜಾವಾಣಿಗೆ ಉತ್ತರ ಕರ್ನಾಟಕದಲ್ಲಿ ಮಾರುಕಟ್ಟೆ ಇರಲಿಲ್ಲ. ಅಲ್ಲೇನಿದ್ದರೂ ಸಂಯುಕ್ತ ಕರ್ನಾಟಕದ ರಾಜ್ಯವಿತ್ತು. ಈಗ ಕಾಲ ಬದಲಾಗಿದೆ. ಜಾಗತೀಕರಣದ ಹಾಗೆ ಕರ್ನಾಟಕೀಕರಣವೂ ಆಗುತ್ತಿದೆ. ಈ ಪತ್ರಿಕೆಗಳ ಭಾಷೆಯಲ್ಲಿಯೂ ಬದಲಾವಣೆ ಆಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಿದ ಕಾರಣ ವಿಜಯ ಕರ್ನಾಟಕ ಹೆಚ್ಚು ಸುದ್ದಿ ಮಾಡಿದೆ ಎಂದು ಹೇಳಬಹುದು. ಎಷ್ಟಿದ್ದರೂ, ಪಕ್ಕದ ಮನೆಯ ಸುದ್ದಿ ಕೇಳುವುದರಲ್ಲಿ ಇರುವಷ್ಟು ಆಸಕ್ತಿ ಯಾವುದೋ ದೂರದ ಊರಿನ ಸುದ್ದಿಯಲ್ಲಿ ಇರುವುದಿಲ್ಲ. ಹೀಗೆ ಸುದ್ದಿಯ ಕ್ಷುದ್ರೀಕರಣ (ಅತಿ ಕ್ಷುದ್ರವಾದ ವಿಷಯವನ್ನೂ ದೊಡ್ಡ ಸುದ್ದಿಯನ್ನಾಗಿ ಪ್ರಚಾರ ಮಾಡುವ ಪ್ರವೃತ್ತಿ) ದಿಂದ ವಿಜಯಕರ್ನಾಟಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಂಡಿದೆ ಎನ್ನಬಹುದು.

ಟೈಮ್ಸ್‌ ಆಫ್‌ ಇಂಡಿಯಾದವರ ನಿರ್ವಹಣೆಗೆ ಒಳಪಟ್ಟ ದಿ ವಿಜಯ ಟೈಂಸ್‌ನ ಮುಖಪುಟದಲ್ಲಿನ ಬದಲಾವಣೆಗಳನ್ನು ಗಮನಿಸಿದರೆ ನಿಮಗೆ ನನ್ನ ಮಾತು ಅರ್ಥವಾದೀತು. ಒಟ್ಟಾರೆ ಈ ದಿನಗಳಲ್ಲಿ ಪತ್ರಿಕೋದ್ಯಮದ ಧ್ಯೇಯ ಓದುಗನಿಗೆ ಬೇಕಾದ್ದನ್ನು ನೀಡು ಎಂದಿದೆಯೇ ಹೊರತು “ತಿಳಿಸು (inform), ಅರಿವು ನೀಡು (educate) ಮತ್ತು ಸುಧಾರಿಸು (reform)” ಎನ್ನುವುದಲ್ಲ!!

Friday, March 16, 2007

ಸೂರ್ಯಗ್ರಹಣ

Here is a poll on what you would like to do on the Solar Eclipse day. Just click on the link ಸೂರ್ಯಗ್ರಹಣ , vote and forget.

ಸೂರ್ಯಗ್ರಹಣದ ದಿನ ಏನು ಮಾಡಬೇಕೆಂದಿದ್ದೀರಿ? ಇಲ್ಲಿ ನಿಮ್ಮ ಕೆಲವು ಆಯ್ಕೆಗಳಿವೆ. ನಿಮ್ಮದು ಯಾವುದು. ಕೆಳಗಿನ ಸೂರ್ಯಗ್ರಹಣ ಲಿಂಕ್‌ ಕ್ಲಿಕ್‌ ಮಾಡಿ.

ಮೊದಲಾಗಿದ್ದರೆ ನಾನು ಒಂದು ರಟ್ಟಿನ ಡಬ್ಬಿಯಲ್ಲಿ ತೂತು ಕೊರೆದು ಸೂರ್ಯಗ್ರಹಣದ ಚಲನಚಿತ್ರ (ಇದು ನಮ್ಮ ಬಾಲಿವುಡ್‌ನ ಥರ ರಬ್ಬರ್‌, ಬಲು ನಿಧಾನ!!) ನೋಡುತ್ತಿದ್ದೆ. ಈಗ ಮೊಣಕಾಲೂರಿ ಕುಳಿತುಕೊಳ್ಳುವಷ್ಟು ಯೌವನ ಇಲ್ಲ. ಹುಮ್ಮಸ್ಸೂ ಇಲ್ಲ. ನ್ಯಾಶನಲ್‌ ಜಿಯೋಗ್ರಾಫಿಕ್‌ನಲ್ಲಿ ತೋರಿಸುವ ಕ್ಷಿಪ್ರ ಚಿತ್ರಗಳನ್ನು ನೋಡಿ ಖುಷಿ ಪಡುವಂತಾಗಿದೆ. (ಶಯ್ಯಾ ದೊರೆ - Couch potato - ಆಗಿಬಿಟ್ಟಿದ್ದೇನಲ್ಲ:). ಬಹಳ ಹಿಂದೆ ಅಪ್ಪ, ಅಮ್ಮನ ಮಾತು ಕೇಳದೆ ನೇರವಾಗಿ ಬೆರಳುಗಳ ಸಂದಿಯೆಡೆಯಿಂದ ಸೂರ್ಯಗ್ರಹಣವನ್ನು ನೋಡಿದ್ದೆ. ಈಗ ಯಾವ ಕಣ್ಣಿನ ವೈದ್ಯರ ಬಳಿ ಹೋದರೂ, ನೀವು ಹಿಂದೆ ಸೂರ್ಯಗ್ರಹಣ ನೋಡಿದ್ದಿರಾ ಎಂದು ಪ್ರಶ್ನಿಸುತ್ತಾರೆ? ಅಂತಹ ತೊಂದರೆ ಏನೂ ಆಗಿಲ್ಲ. ಆದರೆ ಕಣ್ಣಿನ ಒಳಗೆ ಒಂದು ಚುಕ್ಕೆ - ಕಪ್ಪು ಚುಕ್ಕೆ - ಇದೆಯಂತೆ. ಮಾಡಬೇಡ ಎಂದಿದ್ದನ್ನು ಮಾಡಿದ್ದಕ್ಕೆ ಇರಬಹುದೇ?

Wednesday, March 14, 2007

ಸೈಬರ್ ಸಮಸ್ಯೆ

ಇದೀಗ ತಾನೆ ಮಿತ್ರ ಮಂಜುನಾಥ (ksmanjunatha.blogspot.com)ಮೆಸೇಜ್ ಮಾಡಿದ್ದರು. ಹೊಸ ಬ್ಲಾಗ್ ಯಾವಾಗ ಬರೆಯುತ್ತೀರಿ? ಕೊಡವಿದರೆ ಎಲ್ಲಿ ಬಿದ್ದು ಹೋಗುತ್ತದೆಯೋ ಎನ್ನುವ ಹಾಗೆ ತಲೆಯಲ್ಲಿ ಯಾವಾಗಲೂ ಚಿಂತೆಗಳ ಸೆಮಿನಾರ್ ನಡೆಯುತ್ತಿರುತ್ತದೆ. ಈವತ್ತು ಆರಂಭವಾದ ಸೆಮಿನಾರ್‌ ಸೈಬರ್‌ ಸಂವಹನದ ಬಗ್ಗೆ. ಬೆಳಗ್ಗೆ ನಿತ್ಯಕರ್ಮವಾಗಿ ದಿನಪತ್ರಿಕೆ ಓದುವಾಗ, ಮುಂಬಯಿಯ ಐಐಟಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌ ಸೌಲಭ್ಯವನ್ನು ನಿಯಂತ್ರಿಸಿದ ಬಗ್ಗೆ ಓದಿದ್ದೆ. ನಮ್ಮ ದೇಶದ ’ಅತಿ ಬುದ್ಧಿವಂತ’ (ಪನ್‌ ಬಳಸಿದ್ದೇನೆ) ವಿದ್ಯಾರ್ಥಿಗಳು ಹಗಲೂ ರಾತ್ರಿ ಇಂಟರ್‌ನೆಟ್‌ನಲ್ಲೇ ಈಜಾಡುತ್ತ (ಸರ್ಫ್‌ ಮಾಡುತ್ತ) ಮಾನವ ಸಂಬಂಧಗಳ ಬಗ್ಗೆ ಮರೆತೇ ಬಿಟ್ಟಿದ್ದಾರೆ ಎನ್ನುವುದು ಅವರ ಶಿಕ್ಷಕರ ದೂರು. ಹೀಗಾಗಿ ಈಗ ಕಂಪ್ಯೂಟರ್‌ ಬಳಕೆಗೆ ಕೆಲವು ಕಾಲ ಕರ್ಫ್ಯೂ ವಿಧಿಸಲಾಗಿದೆಯಂತೆ.

ಹೌದೇ. ಯಂತ್ರ ಬಂದ ಕೂಡಲೆ ಮಾನವ ಸಂಬಂಧಗಳು ಕಳಚಿಕೊಳ್ಳುತ್ತವೆಯೇ? ಒಂದು ವಿಧದಲ್ಲಿ ಐಐಟಿಯ ಶಿಕ್ಷಕರ ವಾದದಲ್ಲಿ ಹುರುಳಿದೆ ಎನ್ನಬೇಕು. ಎಷ್ಟಿದ್ದರೂ ಅವರು ರಾಷ್ಟ್ರದ ಅತಿ ಮೇಧಾವಿ ವಿದ್ಯಾರ್ಥಿಗಳನ್ನು ತಿದ್ದುವವರು. ಇಂಟರ್‌ನೆಟ್‌ ಚಟವಾಗಿ ಬೆಳೆದಿದೆ ಎಂದು ನಾನು ಈ ಬ್ಲಾಗ್‌ನಲ್ಲಿ ಬರೆಯುವುದು ವಿಪರ್ಯಾಸವಷ್ಟೆ ಅಲ್ಲ, ವಿಡಂಬನೆಯ ವಿಷಯವೂ ಹೌದು. ಆದರೆ ಇದರಿಂದ ಸಂಬಂಧಗಳು ಮುರಿದಿವೆಯೇ? ಬೆಳೆದಿವೆಯೇ? ಬಹುಶಃ ಇದಮಿತ್ಥಂ ಎಂದು ಹೇಳುವ ಸಂಶೋಧನೆ ಇನ್ನು ಆಗಬೇಕಷ್ಟೆ.

ನನ್ನ ವಿಷಯವನ್ನೇ ತೆಗೆದುಕೊಳ್ಳಿ. ಕಂಪ್ಯೂಟರ್‌ ಬಳಸಲು ಆರಂಭಿಸಿ ಕೆಲವು ವರುಷಗಳಷ್ಟೆ ಆಗಿವೆ. ಈ ವಯಸ್ಸಿನಲ್ಲಿ (ನನ್ನ ತಲೆಗೂದಲು ನರೆಯುತ್ತಿದೆ ಎಂದು ಮಡದಿಯ ದೂರು ಕೇಳಿ ಈ ಮಾತು ಹೇಳುತ್ತಿದ್ದೇನೆ. ಇಲ್ಲದಿದ್ದರೆ ನಾನೂ ಹಸಿ ಯುವಕನೇ! :)) ಕಂಪ್ಯೂಟರ್‌ ಬಳಕೆ, ಅದರ ಸಾಮರ್ಥ್ಯ ಹಾಗೂ ಅನುಕೂಲತೆಗಳ ಸದುಪಯೋಗ ಪಡೆಯುವುದೆನ್ನುವುದು ಸುಲಭದ ಮಾತಲ್ಲ. ನಮ್ಮ ಮನೆಗೆ ಕಂಪ್ಯೂಟರ್‌ ಬಂದಾಗ ಇಂಟರ್‌ನೆಟ್‌ ಕೈಗೆಟುಕುವಷ್ಟು ಅಗ್ಗವಾಗಿರಲಿಲ್ಲ. ಆದರೂ, ಐಐಟಿಯ ಶಿಕ್ಷಕರು ಈಗ ಹೇಳುತ್ತಿರುವ ದೂರನ್ನು ಮಡದಿಯೂ ಹೇಳುತ್ತಿದ್ದಳು.’ಕಂಪ್ಯೂಟರು ಮುಂದೆ ಕುಳಿತರೆ ನಿಮಗೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಮನೆಯಲ್ಲಿ ಬೇರೆ ಮನುಷ್ಯರೂ ಇದ್ದಾರೆ ಎನ್ನುವುದೂ ಮರೆತಂತೆ ಕಾಣುತ್ತದೆ’ ಎನ್ನುತ್ತಿದ್ದಳು. ಟೀವಿ ಹೋಯಿತು, ಕಂಪ್ಯೂಟರ್‌ ಬಂತು, ಡುಂ.ಡುಂ.ಡುಂ. ಎನ್ನುತ್ತಿದ್ದೆ.

ಗಂಡಸರ ಬುದ್ಧಿ ಸುಲಭವಾಗಿ ತಿದ್ದಲಾಗುವುದಿಲ್ಲವಂತೆ. ಇದೂ ನನ್ನವಳ ಹೇಳಿಕೆ. ಬಹುಶಃ ನಿಜವಿರಬಹುದು. ನಾನು ಇನ್ನೂ ಕಂಪ್ಯೂಟರ್‌, ಇಂಟರ್‌ನೆಟ್‌ ಸಹವಾಸ ಬಿಟ್ಟಿಲ್ಲ. ಮಂಜುನಾಥ್‌ರವರ ಬಗ್ಗೆ ಹೇಳಿದೆನಲ್ಲವೇ? ಈ ಸನ್ಮಿತ್ರರನ್ನು ನಾನು ಭೇಟಿಯಾಗಿಯೇ ಇಲ್ಲ. ಆದರೆ ಹಳೆಯ ಮಿತ್ರರಂತೆ ಚಾಟ್‌ನಲ್ಲಿ ಜೋಕ್‌ ಮಾಡುತ್ತೇವೆ. ಬೆದರಿಸುತ್ತೇವೆ. ನಾವು ಎದಿರು ಬದಿರಾದಾಗ ಇದೇ ಸಲುಗೆಯಿಂದ ಸಂವಾದ ನಡೆಸುವೆವೇ? ಗೊತ್ತಿಲ್ಲ. ನನ್ನ ಮತ್ತು ಮಂಜುನಾಥ್‌ರವರ ನಡುವಿನ ಸಂಬಂಧದ ಕೊಂಡಿಗಳಲ್ಲಿ, ತವರೂರು ಒಂದು ಮತ್ತೊಂದು ಈ ಕಂಪ್ಯೂಟರ್‌ (ಅರ್ಥಾತ್‌ ಇಂಟರ್‌ನೆಟ್‌). ಬಹುಶಃ, ಆರ್ಕುಟ್‌ ಇಲ್ಲದಿದ್ದಲ್ಲಿ ನನ್ನದೆ ತವರೂರಿನ ಮತ್ತೊಂದು ಪೀಳಿಗೆಯ ಸಂವೇದನಶೀಲ ವ್ಯಕ್ತಿ ಮಂಜುನಾಥ್‌ ಜೊತೆ ಭೇಟಿಯಾಗುತ್ತಿರಲಿಲ್ಲ.

ಇಂಟರ್‌ನೆಟ್‌ ನ ಸಂಬಂಧಗಳೇ ಹೀಗೆ. ನೇರ ಸಂಬಂಧಗಳ ಹಾಗೆ ಇವುಗಳಲ್ಲಿನ ವೈರುಧ್ಯ ಅಥವಾ ನಾಟಕೀಯತೆ ಎದ್ದು ಕಾಣುವುದಿಲ್ಲ. ಬಹುಶಃ ಅದೇ ಕಾರಣಕ್ಕೇ ನಾವು ಇಂಟರ್‌ನೆಟ್‌ ಸಂಬಂಧಗಳಿಗೆ ಹೆಚ್ಚು ಮಹತ್ವ ಕೊಡುತ್ತೇವೇನೋ ಎನ್ನಿಸಿಬಿಟ್ಟಿದೆ. ಉದಾಹರಣೆಗೆ, ನನ್ನ ಮಗಳ ಜೊತೆಗೆ ನಾನು ನಡೆಸುವ ಚಾಟ್‌. ಚಾಟ್‌ನಲ್ಲಿ ಹಾಸ್ಯ, ಕೋಪ, ಇವೆಲ್ಲ ಇರುತ್ತದೆ. ಮುಕ್ತವಾಗಿ ವಿವಿಧ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಇದೇ ಸಲುಗೆ ಬಹುಶಃ ನಾವು ಎದುರಾದಾಗ ಇರುವುದಿಲ್ಲವೇನೋ? ಕೆಲವು ವಿಷಯಗಳನ್ನು ಮಗಳು ಎನ್ನುವ ಕಾರಣಕ್ಕಾಗಿಯೇ ಮುಚ್ಚಿಡಬೇಕಾಗುತ್ತದೆ. ಆಕೆಯೂ ತಂದೆ ಎನ್ನುವ ಗೌರವದಿಂದ ಬಹುಶಃ ನೇರವಾಗಿ ಹೇಳುವುದಿಲ್ಲ. ವ್ಯಕ್ತಿ ಎದುರಿಗಿದ್ದಾರಲ್ಲಾ? ಚಾಟ್‌ನಲ್ಲಿಯಾದರೆ ಅದೊಂದು ಯಂತ್ರ. ಏನು ಹೇಳಿದರೂ ನಡೆಯುತ್ತದೆ. ಅದು ಮುಖ ಸಿಂಡರಿಸುವುದಿಲ್ಲ. ಸ್ವರ ಬದಲಿಸುವುದಿಲ್ಲ. ಸಂಭಾಷಣೆಯ ಜೊತೆಗೆ ತಳುಕಿಸುವ ಸ್ಮೈಲಿಗಳೂ ಆಷಾಢಭೂತಿಗಳೇ. ಕಪಟ ಚಿಹ್ನೆಗಳೇ ಎನ್ನಿಸುತ್ತದೆ.

ಐಐಟಿಯ ಪ್ರಭೃತಿಗಳು ಕಂಪ್ಯೂಟರ್‌ ಮುಂದೆ ಕುಳಿತು ಇಡೀ ಜಗತ್ತನ್ನು, ಅದರಲ್ಲಿನ ಸಂಸ್ಕೃತಿ, ಮಾನವತೆ, ಕಲೆ, ಸಾಹಿತ್ಯ ಎಲ್ಲವನ್ನೂ ಮರೆತಿದ್ದಾರೆ ಎನ್ನುತ್ತಾರೆ ಅವರ ಶಿಕ್ಷಕರು. ಆದರೆ ಇದುವೇ ಒಂದು ಸಂಸ್ಕೃತಿ ಅಲ್ಲವೇ? ಇಲ್ಲಿ ಮಂಜುನಾಥರ ಕವನ ಓದಲು ಸಿಗುತ್ತದೆ. ಎಲ್ಲೋ, ಯಾರೋ ಬರೆದ ಸಂಗೀತ ಕೇಳಲು ದೊರೆಯುತ್ತದೆ. ಎಲ್ಲ ಚಾಟ್‌ಗಳೂ ಸಲುಗೆಯವೇ? ಪುಟ್ಟ ಮಗುವಾಗಿದ್ದಾಗ ನೋಡಿದ್ದ ಪಲ್ಲವಿ ಧುತ್ತೆಂದು ಆರ್ಕುಟ್‌ನಲ್ಲಿ ಅಂಕಲ್‌ ಎನ್ನುತ್ತಾಳೆ. ನೆನಪಿನ ಮೂಲೆಯಲ್ಲಿ ಎಲ್ಲೋ ಕೊಳೆತುಹೋಗಿದ್ದ ಯಾವುದೋ ಒಂದು ಸಂಬಂಧ ಇದ್ದಕ್ಕಿದ್ದ ಹಾಗೆ ಅಮೆರಿಕೆಯ ನ್ಯೂಯಾರ್ಕ್‌‌ನ ಒಂದು ವೆಬ್‌ ತಾಣದಲ್ಲಿ ಎದುರಾಗುತ್ತದೆ. ವಿಶ್ವ ಎಷ್ಟುಕಿರಿದು ಎನ್ನಿಸುತ್ತದೆ.

ಈಗ ನೀವೇ ಹೇಳಿ. ಈ ಸೈಬರ್‌ ಸಮಸ್ಯೆಗೆ ಬೇರೆ ದಾರಿ ಇದೆಯೇ?

Monday, March 12, 2007

ನಾಯಿಪಾಡು

ಹೊಸದಾಗಿ ಬ್ಲಾಗ್‌ ಆರಂಭಿಸುವಾಗ ವಿಷಯ ಏನಿರಬೇಕು ಎಂಬ ಚಿಂತೆ ಮೂಡಲೇ ಇಲ್ಲ. ನಾಯಿ ಪಾಡು ಎದುರಲ್ಲೇ ಇತ್ತು. ಮೊನ್ನೆ ಬೆಂಗಳೂರಿನಲ್ಲಿ ನಾಯಿ ಕಚ್ಚಿ ಮಗುವೊಂದು ಸತ್ತಿದ್ದು ಸುದ್ದಿಯಾಯಿತಲ್ಲ. ಅಂದಿನಿಂದ ಪ್ರತಿ ನಿತ್ಯವೂ ಪತ್ರಿಕೆಯಲ್ಲಿ ಒಂದು ಕಲಂ ನಾಯಿ ಹತ್ಯೆಯ ಬಗ್ಗೆಯೇ ಇದೆ. ಬೀಡಾಡಿ ನಾಯಿಗಳ ಹೋಮ ಮಾಡಿ ಎನ್ನುವವರು ಒಂದೆಡೆ. ಇನ್ನೊಂದೆಡೆ, ಪಾಪ ನಾಯಿಗಳು. ಅವುಗಳಿಗೆ ವಾಕ್‌ ಸ್ವಾತಂತ್ರ್ಯ ಇದ್ದಿದ್ದರೆ ಅವುಗಳೂ ಮೆರವಣಿಗೆ ಹೋಗುತ್ತಿದ್ದುವೇನೋ ಎನ್ನುವವರು. ಒಟ್ಟಾರೆ ನಾಯಿಗಳ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ಮ ಮನೆಯಲ್ಲಿಯೂ ನಡೆಯುವ ನಾಯಿ ಚರ್ಚೆ ನೆನಪಿಗೆ ಬಂತು.
ಮನೆಯಲ್ಲಿ ಎಂಟರ ಮಗ ಮತ್ತುಹದಿನೆಂಟರ ಮಗಳು ಇಬ್ಬರದೂ ಹಲವು ವರುಷಗಳಿಂದ ಒಂದೇ ವರಾತ. ಮನೆಯಲ್ಲಿ ಒಂದು ನಾಯಿ ಸಾಕೋಣ. ನಾಯಿ ಸಾಕೋಣ ನಮಗೇನೂ ಹೊಸದಲ್ಲ. ಅವರ ಅಜ್ಜಿಯ ಮನೆಯಲ್ಲಿ ನಾನು ಹುಟ್ಟುವುದಕ್ಕೂ ಮೊದಲಿನಿಂದಲೇ ನಾಯಿ ಸಾಕುವ ಪರಿಪಾಠ ಇದೆ. ನಮಗೆ ಹೊತ್ತು, ಹೊತ್ತಿಗೆ ಕಾಫಿ, ತಿಂಡಿ ಸಿಗುತ್ತಿತ್ತೋ ಇಲ್ಲವೋ, ನಾಯಿಗೆ ಅದು ತಪ್ಪುವುದಿಲ್ಲ. ಇಂದಿಗೂ ಅಲ್ಲಿ ಜಿಪ್ಸಿ ಇದೆ.
ಜಿಪ್ಸಿಗೆ ಮೊದಲು ಜಿಮ್ಮಿ ಇತ್ತು. ಅದಕ್ಕೂ ಮೊದಲು ನಿಶಾ. ಅದಕ್ಕೂ ಮೊದಲು ರಾಣಿ. ರಾಣಿಗೂ ಹಿಂದೆ ಟಾಮಿ. ಇವೆಲ್ಲ ನನಗೆ ನೆನಪಿರುವಂತಹವು. ನೆನಪಿಲ್ಲದಂತಹವು ಇನ್ನೂ ಎಷ್ಟೋ! ನಾವಿರುವ ಊರಿನಲ್ಲಿ ಖಂಡಿತ ನಾಯಿ ಕೃಷಿ (ಬ್ರೀಡರ್ಸ್‌)ಕರು ಇಲ್ಲ. ಇದ್ದಿದ್ದರೆ ಬೀದಿಯ ನಾಯಿಗಳು ನಮ್ಮ ಮನೆಯವುಗಳಾಗುತ್ತಿರಲಿಲ್ಲ.
ಅಪ್ಪಟ ಸಂಪ್ರದಾಯದವರ ಮನೆಗೆ ನಾಯಿ ಬಂದ ಬಗ್ಗೆಯೂ ಅಪ್ಪ ಕತೆ ಹೇಳುತ್ತಿದ್ದರು. ಅವರ ಬಾಸ್‌ ಮನೆಗೆ ಒಂದು ನಾಯಿ ಬಂತಂತೆ. ಆದರೆ ಬಾಸ್‌ನ ಹೆಂಡತಿಗೆ ನಾಯಿಯ ಬಗ್ಗೆ ಬಲು ಭಯ. ಹೀಗಾಗಿ ನಾಯಿಯನ್ನ ಊರಿನಿಂದ ದೂರ ಎಲ್ಲೋ ಹೊರಗೆ ಬಿಟ್ಟು ಬಂದು ಬಿಡಿ ಎಂದರಂತೆ. ನಾಯಿಗೆ ಊರಿನಿಂದ ಬಹಿಷ್ಕಾರ ಹಾಕುವ ಕೆಲಸ ಡ್ರೈವರ್‌ ಆಗಿದ್ದ ಅಪ್ಪನ ಪಾಲಿಗೆ ಬಂತು. ಜೀಪಿನಲ್ಲಿ ಕೊಂಡೊಯ್ದು ಬಲು ದೂರದಲ್ಲಿ ಬಿಟ್ಟು ಬಂದರಂತೆ. ನಾಲಕ್ಕೇ ದಿನ, ನಾಯಿ ಮತ್ತೆ ಹಾಜರ್‌. ಹೀಗೆ ಎರಡು ಮೂರು ಬಾರಿ ಆದ ಮೇಲೆ, ಕರುಣೆ ಬಂದು ಅಪ್ಪ ಅದನ್ನು ಮನೆಗೇ ತಂದಿಟ್ಟುಕೊಂಡರಂತೆ.
ಒಂದು ರೂಮಿನ ಮನೆಯಲ್ಲಿ ಎಂಟು ಮಂದಿ ಇದ್ದ ಕಾಲ ಅದು. ಟಾಮಿ ಒಂಬತ್ತನೆಯದಾಗಿ ಮನೆ ಸೇರಿತ್ತು. ರಾತ್ರಿ ಅಪ್ಪ ಬೀದಿಯ ಮೂಲೆಯಲ್ಲಿ ಬಂದರೆ ಸಾಕು, ಊರಿಗೇ ಸೈರನ್‌ನ ಹೊಡೆಯುತ್ತಿತ್ತು ಟಾಮಿ. ಯಾರನ್ನೂ ಅದು ಕಚ್ಚಿದ ನೆನಪಿಲ್ಲ. ನನಗೆ ಅದರ ನೆನಪು ಇರುವುದು ಇಷ್ಟೆ. ತೆಪ್ಪಗೆ ಮಲಗಿರುತ್ತಿದ್ದ ಅದನ್ನೇ ತಲೆದಿಂಬಾಗಿಟ್ಟುಕೊಂಡು ಎಷ್ಟೋ ಬಾರಿ ಒರಗಿರುತ್ತಿದ್ದೆ. ಎಷ್ಟೇ ನೆನಪಿಸಿಕೊಂಡರೂ ಅದರ ಚಿತ್ರ ನೆನಪಾಗುತ್ತಿಲ್ಲ. ನೆನಪಾಗುತ್ತಿರುವುದು ಕೇವಲ ನನ್ನ ಮಡದಿ ಹೊಲಿದು ಇಟ್ಟಿರುವ ಬೆಳ್ಳಗಿನ ಪಾಲಿಫೈಬರ್‌ನ ಸಾಫ್ಟೀ ನಾಯಿ ಬೊಂಬೆಯಷ್ಟೆ. ಆದರೆ ಒಂದು ದಿನ ಮನೆಯ ಎದುರಿನಲ್ಲೇ ರಭಸದಿಂದ ಬಂದ ಲಾರಿ (ತಿಂಗಳಿಗೊಮ್ಮೆ ಟ್ರಕ್ಕುಗಳು ಕಾಣಿಸಿಕೊಳ್ಳುತ್ತಿದ್ದ ಕಾಲ ಅದು. ಇಂದಿನಂತೆ ಸಾಲು, ಸಾಲಾಗಿ ಮರಳು ಲಾರಿಗಳು ಬರುತ್ತಿರಲಿಲ್ಲ) ಚಕ್ರಕ್ಕೆ ಸಿಲುಕಿ ಕರ್ಕಶವಾಗಿ ಕೂಗಿ ಕೊನೆಯುಸಿರೆಳೆದದ್ದು ನೆನಪಿನಲ್ಲಿದೆ.
ನಾಯಿಯ ಕೂಗು ಕೇಳಿ ಓಡಿ ಬಂದ ಅಮ್ಮ, ನನ್ನನ್ನು ಮನೆಯಿಂದ ಹೊರಗೆ ಬಿಟ್ಟಿರಲಿಲ್ಲ. ಬೀದಿಯವರೆಲ್ಲ ಸೇರಿ ಟ್ರಕ್‌ ಚಾಲಕನಿಗೆ ಧರ್ಮದೇಟು ಕೊಟ್ಟಿದ್ದರಂತೆ. ರಾತ್ರಿ ಅಪ್ಪ ಮರಳುವವರೆಗೂ ಅಮ್ಮ, ಅಕ್ಕಂದಿರು, ಅಕ್ಕಪಕ್ಕದವರು, ಟಾಮಿಯನ್ನ ಜೋಪಾನವಾಗಿ ಬಟ್ಟೆ ಹೊದಿಸಿ ಕಾದಿಟ್ಟಿದ್ದರು. ಅಪ್ಪ ಬಂದ ನಂತರ ಅರ್ಧ ರಾತ್ರಿಯಲ್ಲಿಯೇ ದೂರದ ಕೆರೆಯ ಬಳಿ ಟಾಮಿಯ ಸಂಸ್ಕಾರ ಆಯಿತು. ಮರುದಿನ ಟಾಮಿಯ 'ಗೋರಿ'ಯ ಬಳಿ ಹೋಗಿ ಹಣ್ಣು, ಹೂವು ಇಟ್ಟಿದ್ದಾಯಿತು. ಅಪ್ಪ ಕೂಡ ಬಂದಿದ್ದರು. ನಾಲ್ಕು ಬನ್‌ಗಳ ಜೊತೆಗೆ. ನಿತ್ಯ ರಾತ್ರಿ ಬಂದಾಗ ಜೇಬಿನಲ್ಲಿ ಬನ್‌ ಒಂದು ತರುವ ಅಭ್ಯಾಸ. ಟಾಮಿ ಹಾರಿ ಹೋಗಿ ಜೇಬಿನಿಂದ ಅದನ್ನು ಎಗರಿಸುತ್ತಿತ್ತು. ಟಾಮಿಯ ಮೆಚ್ಚಿನ ತಿಂಡಿ ಎಂದು ಅಪ್ಪ ಗೋರಿಗೆ ಬನ್‌ ಒಪ್ಪಿಸಿದ್ದರು. ನಾನು ಮೂರು, ನಾಲ್ಕು ದಿನ ಟಾಮಿ ಬೇಕು ಎಂದು ಅಳುತ್ತಿದ್ದೆನಂತೆ. ಈಗ ಅಮ್ಮ ನೆನಪಿಸಿಕೊಳ್ಳುತ್ತಿರುತ್ತಾರೆ.
ಕಾಲ ಬದಲಾಗಿದೆ. ಮನೆಯಲ್ಲಿ ಜಿಪ್ಸಿ ಇದೆ. ಊರವರನ್ನೆಲ್ಲ ಬೆದರಿಸುತ್ತದೆ. ಹತ್ತಾರು ತಿಂಗಳು ಕಳೆದು ಹೋದರೂ ನೆನಪಿನಿಂದ ಬಾಲ ಅಲ್ಲಾಡಿಸುತ್ತದೆ. ಆದರೆ ನಾನು ಬನ್ ತೆಗೆದುಕೊಡುವುದಿಲ್ಲ. ಮೈ ಸವರುವುದಿಲ್ಲ.
ನಾಯಿ ೧