Sunday, August 27, 2017

ಅಪ್ಪ ಅಪ್ಪನೇ!

ಮೊನ್ನೆ ದೂರದ ಊರಿನಲ್ಲಿ ಓದುತ್ತಿರುವ ಮಗ ಚತುರ್ಥಿ ರಜೆಗೆ ಮನೆಗೆ ಬಂದಾಗ ಜೊತೆಗೆ ಅವನ ಬಳಿ ಇದ್ದ ಒಂದು ಫೋನು ಹಾಗೂ ಸ್ಪೀಕರು ಕೊಂಡು ತಂದಿದ್ದ. “ಅಪ್ಪಾ. ಇದು ಛಾರ್ಜು ಆಗುತ್ತಿಲ್ಲ. ಫೋನು ಸಿಮ್ಮನ್ನು ಗುರುತಿಸುತ್ತಿಲ್ಲ” ಎಂದು ದೂರಿತ್ತ. ಎರಡನ್ನೂ ಸಮೀಪದಲ್ಲಿದ್ದ ಅಂಗಡಿಗೆ ಕೊಂಡೊಯ್ದು ರಿಪೇರಿ ಮಾಡಿಕೊಡಿ ಎಂದರೆ “ಇವೆಲ್ಲ ರಿಪೇರಿ ಆಗುವ ಸಾಧನಗಳಲ್ಲ ಸರ್. ಹೊಸತು ತೆಗೆದುಕೊಳ್ಳಿ. ಬಯ್ ಬ್ಯಾಕ್, ಮಾಡ್ತೇವೆ. ಒಂದು ಐದು ನೂರು ರೂಪಾಯಿ ಡಿಸ್ಕೌಂಟ್ ಸಿಗುತ್ತೆ.” ಎಂದು ಉತ್ತರ ಬಂತು. ಮನಸ್ಸಿನಲ್ಲೇ ಕೊಳ್ಳುಬಾಕತನದ ಬಗ್ಗೆ ಬೈದು ಕೊಳ್ಳುತ್ತಾ ಮನೆಗೆ ಬಂದೆವು.
ಮನೆಯ ಪಾರ್ಲಿಮೆಂಟಿನಲ್ಲಿ ಇದರ ಚರ್ಚೆಯೂ ಆಯಿತು.  “ಬೇರೆ ತೆಗೆದುಕೊಡುತ್ತೇನೆ. ಇದನ್ನು ಇಲ್ಲೇ ಇಟ್ಟು ಹೋಗು.” ಎಂಬ ಪ್ರಸ್ತಾಪ ಮುಂದಿಟ್ಟೆ. ಮಡದಿಯದ್ದು ಒಂದೇ ವಿರೋಧ. “ಪ್ರತಿ ಬಾರಿ ಏನಾದರೂ ಹಾಳು ಮಾಡಿಕೊಂಡು ಬರುತ್ತಾನೆ. ಅದನ್ನು ರಿಪೇರಿ ಮಾಡಿ ಕೊಡವುದೋ, ಹಾಳಾಗದಂತೆ ಜಾಗ್ರತೆಯಿಂದ ಉಪಯೋಗಿಸು ಅಂತ ನೀವು ಯಾವತ್ತು ಹೇಳುವುದದಿಲ್ಲ. ಮಕ್ಕಳು ಕೇಳಿದ್ದನ್ನೆಲ್ಲ ಹೀಗೆ ಕೊಡಿಸುತ್ತಾ ಇದ್ದರೆ ಅವರು ಬದುಕನ್ನು ಕಲಿಯುವುದಾದರೂ ಹೇಗೆ?”

ನಿಜ. ಮಕ್ಕಳ ಮೇಲಿನ ಪ್ರೀತಿಯೋ, ನಮ್ಮ ಪ್ರತಿಷ್ಠೆಯೋ ಒಟ್ಟಾರೆ ಮಕ್ಕಳ ಬೇಡಿಕೆಗೆ ಇಲ್ಲ ಎನ್ನುವುದು ಕಷ್ಟವೇ. ನಾನಂತೂ ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ತನ್ನ ಖಾತೆಯಲ್ಲಿಯೇ ಸಾಕಷ್ಟು ಹಣವಿದ್ದರೂ, ಅದನ್ನು ಖರ್ಚು ಮಾಡದೆ ನಮ್ಮ ಬಳಿ ಬಂದು ಒಪ್ಪಿಸಿದ್ದಾನಲ್ಲ ಮಗ. ಇದು ಹಣಕಾಸು ವ್ಯವಹಾರದಲ್ಲಿ ಅವನಿಗೆ ಜವಾಬುದಾರಿ ಇದೆ ಎನ್ನುವುದರ ಕುರುಹು ಎನ್ನುವ ವಾದದ ಜೊತೆಗೇ ಅವನು ಈಗ ಕೇಳುತ್ತಿರುವ ವಸ್ತುಗಳ ಒಟ್ಟು ಮೊತ್ತ ನನ್ನ ಮಾಸಿಕ ಆದಾಯದ ಒಂದೋ, ಎರಡೋ ಪರ್ಸೆಂಟಿನಷ್ಟು ಅಷ್ಟೆ!  ನಾವು ನಿತ್ಯ ಗಂಟೆಗಟ್ಟಲೆ ಮಾತನಾಡುವ ಫೋನು ಬಿಲ್ಲು ಅದಕ್ಕಿಂತ ಹೆಚ್ಚಾಗುತ್ತದೆ ಎಂದು ಮಡದಿಯ ಬಾಯಿ ಮುಚ್ಚಿಸಲು ನೋಡುತ್ತೇನೆ.

ಹಾಗೆ ಮಾಡಿದಾಗಲೆಲ್ಲ ಈ ಅಪ್ಪಂದಿರ ಕಥೆಯೇ ಹೀಗೋ ಎನ್ನಿಸುತ್ತದೆ. ನನ್ನ ಗೆಳೆಯರೊಬ್ಬರು ತಮ್ಮ ಮಗನಿಗೆ ಕಾರು ಕೊಡಿಸಲು ಮಡದಿಯ ಬಳಿ ಒಂದು ಕಾದಂಬರಿಗೆ ಸಾಕಾಗುವಷ್ಟು ಕಥೆ,ಪುರಾಣ ಒಪ್ಪಿಸಿದ್ದರು. ಅಪ್ಪಂದಿರು ಹೀಗೇಕೆ? ಈ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತದೆ. ನನ್ನ ಅಪ್ಪನೂ ಇದಕ್ಕೆ ಹೊರತಾಗಿರಲಿಲ್ಲ. ಹಾಗಂತ ನನ್ನ ಅಪ್ಪ ಧಂಡಿಯಾಗಿ ದುಡಿದು ತರುತ್ತಿದ್ದ ವೈಟ್ ಕಾಲರ್ ಅಧಿಕಾರಿಯಾಗಿರಲಿಲ್ಲ. ನಿತ್ಯ ಕೆಲಸ ಮಾಡಿದರಷ್ಟೆ ಕೈಗೆ ಕಾಸು. ಅದೂ ಎಂಟು ಮಂದಿಯ ಸಂಸಾರ ಸಾಗಿಸಲು ಪ್ರತಿ ದಿನಕ್ಕೆ ಹತ್ತು ರೂಪಾಯಿಯ ಆದಾಯ ಇರುತ್ತಿತ್ತು. ನಿಜ. ಅರವತ್ತು ಎಪ್ಪತ್ತರ ದಶಕದ ಅಂದಿನ ಕಾಲದಲ್ಲಿ ಆಹಾರ ಪದಾರ್ಥಗಳ ಬೆಲೆಯೂ ಹಾಗೆಯೇ ಇತ್ತು. ಎಂಟಾಣೆಗೆ ಕೇಜಿ ಅಕ್ಕಿ. ಐದು ಪೈಸೆಗೆ ಐದು ಬಿಲ್ಲೆ ಕಾಫಿ ಬಿಲ್ಲೆ. ಐದು ಪೈಸೆಗೆ ಲಿಪ್ಟನ್ ಚಹಾದ ಪುಟ್ಟ ಪೊಟ್ಟಣ. ಅತಿ ದುಂದಿನ ವೆಚ್ಚ ಎಂದರೆ ಬಾಡಿಗೆ, ಸೀಮೆಣ್ಣೆ, ಸಕ್ಕರೆ ಹಾಗೂ ಬೇಕರಿ ಪದಾರ್ಥಗಳು. 

ನನಗೆ ನೆನಪಿರುವ ಹಾಗೆ ಆ ಕಾಲದಲ್ಲಿಯೂ ಅಪ್ಪ ತನ್ನ ವರಮಾನದ ಶೇಕಡ ಹತ್ತರಷ್ಟು ಅಂದರೆ ದಿನಕ್ಕೆ ಒಂದು ರೂಪಾಯಿಯಷ್ಟು ಬಾಡಿಗೆಯನ್ನು ನೀಡುತ್ತಿದ್ದರು. ಸೀಮೆಣ್ಣೆ ಬೆಲೆ 75 ಪೈಸೆ ಇರುತ್ತಿತ್ತು. ಸಕ್ಕರೆಯ ಬೆಲೆ ಒಂದು ಕಿಲೋಗೆ ಒಂದು ರೂಪಾಯಿಯೇನೋ ಇರುತ್ತಿತ್ತು. ಅದೂ ಅಂಗಡಿಗಳಲ್ಲಿ ಸಿಕ್ಕುತ್ತಿರಲಿಲ್ಲ. ಮಾಸಿಕ ರೇಶನ್ ಕೊಂಡು ತಂದರಷ್ಟೆ ಸಕ್ಕರೆ ಅಮ್ಮನೂ ತನ್ನ ಜಾಣತನವನ್ನೆಲ್ಲ ಬಳಸಿ ಇದ್ದಷ್ಟರಲ್ಲಿ ವ್ಯವಹಾರ ಹೊಂದಿಸಿಕೊಂಡು ಹೋಗುತ್ತಿದ್ದಳು. ಪಕ್ಕದ ಮನೆಗೆ ಕೆಲಸಕ್ಕೆ ಬರುತ್ತಿದ್ದವಳ ರೇಶನ್ ಕಾರ್ಡಿನಲ್ಲಿ ಸಿಗುತ್ತಿದ್ದ ಸಕ್ಕರೆಯನ್ನು ತಾನು ಖರೀದಿಸಿ ಅವಳಿಗೆ ಬೆಲ್ಲ ಕೊಡುತ್ತಿದ್ದಳು. ಆಗ ಎಲ್ಲರ ಮನೆಯಲ್ಲೂ ಕಾಫಿ ಸಾಮಾನ್ಯವಾಗಿರಲಿಲ್ಲ. ಚಹಾ ಕೂಡ. ಹಾಲು ಕೂಡ ಸುಲಭವಾಗಿ ಸಿಗುವ ವಸ್ತುವಾಗಿರಲಿಲ್ಲ.
ಅಂತಹ ದಿನಗಳಲ್ಲೂ ಅಪ್ಪ ಒಮ್ಮೊಮ್ಮೆ ಮನೆಗೆ ಬರುವಾಗ ಜೇಬಿನಲ್ಲಿ ನಮ್ಮ ಮನೆಯಲ್ಲಿದ್ದ ಟಾಮಿಗೆಂದು ಬೇಕರಿಯ ಬನ್ನು ತರುತ್ತಿದ್ದದ್ದು ಇಂದಿಗೆ ವಿಚಿತ್ರ ಎನ್ನಿಸುತ್ತದೆ. ಹಾಗೆಯೇ ಬೆಂಗಳೂರಿಗೋ, ಮೈಸೂರಿಗೋ ಕಾರ್ಯನಿಮಿತ್ತ ಹೋದರೆ ಬರಿಗೈಯಲ್ಲಿ ಬರುತ್ತಲೇ ಇರುತ್ತಿರಲಿಲ್ಲ. ಅಲ್ಲಿಂದ ರಸ್ಕು ಮತ್ತು ಆಟದ ಸಾಮಾನುಗಳನ್ನೋ ಗೊಂಬೆಗಳನ್ನೋ ಹೊತ್ತು ತರುತ್ತಿದ್ದರು.

ಹೌದು. ಅಂದಿನ ಕಾಲದಲ್ಲಿಯೂ 50 ಪೈಸೆ ದುಬಾರಿ ಬೆಲೆ ಕೊಟ್ಟು ಮನೆಗೆ ಸುಧಾ ತರಿಸುತ್ತಿದ್ದೆವು. ಪ್ರಜಾಮತ ಬರುತ್ತಿತ್ತು. ಇವೆರಡೂ ಪತ್ರಿಕೆಗಳೂ ಅರ್ಧ ಕಿಲೋಮಿಟರು ದೂರವಿದ್ದ ಆ ರಸ್ತೆಯಲ್ಲಿ ಓದಿದ್ದ ಎಲ್ಲ ಹೆಣ್ಣುಮಕ್ಕಳ ಬಳಿಯೂ ಸುತ್ತಾಡುತ್ತಿತ್ತು. ಕನ್ನಡದವಳಲ್ಲದ ಅಮ್ಮನೂ ಕನ್ನಡ ಕಲಿತು ಪತ್ರಿಕೆಗಳನ್ನು ಓದಿ ನಮಗೆ ಕಲಿಸುತ್ತಿದ್ದರು. ಅಪ್ಪ-ಅಮ್ಮರಿಬ್ಬರೂ ಅಕ್ಷರವಂತರಷ್ಟೆ ಹೊರತು ಪದವೀಧರರಲ್ಲ. ಆದರೂ ಎಲ್ಲ ಬ್ರಾಹ್ಮಣ ಮನೆತನದವರಂತೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಸಂಪಾದಿಸಬೇಕು ಎನ್ನುವ ಹಂಬಲ ಇಬ್ಬರಲ್ಲೂ ಇತ್ತು. ಅಮ್ಮ ಕಲಿತದ್ದು ಮಲೆಯಾಳಂ ಆದರೂ ನಮಗಾಗಿ ಕನ್ನಡವನ್ನೂ, ಇಂಗ್ಲೀಷನ್ನೂ ಕಲಿತು ಪಾಠ ಹೇಳುತ್ತಿದ್ದರು. ನಮಗಷ್ಟೆ ಅಲ್ಲ. ಬೀದಿಯಲ್ಲಿದ್ದ ಹತ್ತಾರು ಹೆಣ್ಣು ಮಕ್ಕಳಿಗೆ ಅಕ್ಕಂದಿರ ಜೊತೆಗೆ ಉಚಿತ ಮನೆಪಾಠವೂ ನಡೆಯುತ್ತಿತ್ತು. ನಾನೂ ಮಧ್ಯೆ ಸೇರಿ ಕೇಳಿ, ಕೇಳಿಯೇ ಇಂಗ್ಲೀಷು ಕಲಿತೆ. 

ಈಗ ಕನ್ನಡ, ಇಂಗ್ಲೀಷು ಮಾಧ್ಯಮಗಳ ಬಗ್ಗೆ ಚರ್ಚೆ ನಡೆಯುವಾಗೆಲ್ಲ ಈ ಎರಡು ಚೇತನಗಳ ಸಾಧನೆ ಕಡಿಮೆಯೇನಲ್ಲ ಎನ್ನಿಸುತ್ತದೆ. ಹಾಗೆಯೇ ಮಡದಿಯ ಶಾಲೆಯಲ್ಲಿ ಪೋಷಕರು "ಶಾಲೆ ಇರುವುದು ಏತಕ್ಕೆ? ನಾವು ಏಕೆ ಮಕ್ಕಳಿಗೆ ಕಲಿಸಬೇಕು?" ಎಂಬ ದೂರಿದರು ಎಂದು ತಿಳಿದಾಗಲೆಲ್ಲ ಪೋಷಕರೂ ಹೀಗೂ ಇರಬಹುದೇ ಎನ್ನಿಸದಿರದು.
1976ರಲ್ಲಿ ನಾನು ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ದೆ. ಪೀಯೂಸಿಗೆ ಸೇರಿದ ಹೊಸತು. ಅಪ್ಪ ಒಮ್ಮೆ ಬೆಂಗಳೂರಿಗೆ ಹೋಗಿದ್ದವರು ಮನೆಗೆ ಮರಳುವಾಗ ರೂಬಿಕ್ ಕ್ಯೂಬ್ ತಂದಿದ್ದರು. ರೂಬಿಕ್ ಕ್ಯೂಬ್ ಪ್ರಪಂಚಕ್ಕೆ ಪರಿಚಿತವಾದ ಹೊಸ ಆಟಿಕೆ. ಅದನ್ನು ಕಲಿತವರೂ ಕಡಿಮೆ. ಅದರ ಬಗ್ಗೆ ಆಸಕ್ತಿ ಇದ್ದವರೂ ಕಡಿಮೆ. ಅಂತಹ ದಿನಗಳು ಅವು. ಎಪ್ಪತ್ತೈದು ರೂಪಾಯಿ ಕೊಟ್ಟು ತಂದಿದ್ದರೆಂದು ನೆನಪು. ಅದು ಅವರ ತಿಂಗಳ ವರಮಾನದ ಕಾಲು ಭಾಗದಷ್ಟು. ಈ ಲೆಕ್ಕಾಚಾರವೆಲ್ಲ ನನಗೆ ಆಗ ಬರುತ್ತಿರಲಿಲ್ಲವೆನ್ನಿ. ಅದನ್ನು ತಿಳಿಯುವ ವಯಸ್ಸೂ ಆಗಿರಲಿಲ್ಲ. ನೆನಪಿರುವುದಿಷ್ಟೆ. ರೂಬಿಕ್ ಕ್ಯೂಬನ್ನು ಅದರ ಮೊದಲ ವಿನ್ಯಾಸಕ್ಕೆ ಮರಳಿಸುವ ವಿಫಲ ಪ್ರಯತ್ನದಲ್ಲಿ ನನಗೆ ಅಪ್ಪನೂ ಜೊತೆಯಾಗಿರುತ್ತಿದ್ದರು. ಎಷ್ಟೋ ಬಾರಿ ಗಂಟೆಗಟ್ಟಲೆ ಅದನ್ನು ಮಾಡಲಾಗದೇ ಕೊನೆಗೆ ಸ್ಕ್ರೂ ಡ್ರೈವರಿನಿಂದ ಎಲ್ಲವನ್ನೂ ಬಿಚ್ಚಿ ಮತ್ತೆ ಜೋಡಿಸಿ ಬಿಡುತ್ತಿದ್ದೆವು.

ಚೆಸ್, ವಿವಿಧ ವಿನ್ಯಾಸಗಳನ್ನು ಜೋಡಿಸಬಹುದಾದ ಮೆಕ್ಯಾನೋ ಸೆಟ್ಟುಗಳು (ಇಂದಿನ ಲೀಗೋ ಸೆಟ್ಟುಗಳ ಹಾಗೆ) ಸದ್ದು ಮಾಡುವ ಗೊಂಬೆ, ಮಲಗಿಸಿದರೆ ಕಣ್ಣು ಮುಚ್ಚಿಕೊಳ್ಳುವ ಗೊಂಬೆ ಹೀಗೆ ಎಲ್ಲರಿಗೂ ಆಟದ ಸಾಮಾನುಗಳನ್ನು ಕೊಡಿಸುವುದರಲ್ಲಿ ಅಪ್ಪ ಎಂದಿಗೂ ಹಿಂದೆ ಬಿದ್ದಿರಲಿಲ್ಲ. ವೃತ್ತಿಯಿಂದ ಮೆಕ್ಯಾನಿಕ್ ಆಗಿದ್ದ ಅವರಿಗೆ ಮನೆಯಲ್ಲಿ ಇದ್ದ ಗಡಿಯಾರ, ರೇಡಿಯೊ, ಸೈಕಲ್ಲು ಇತ್ಯಾದಿಗಳನ್ನೆಲ್ಲ ತಾವೇ ಬಿಚ್ಚಿ ಮತ್ತೆ ಜೋಡಿಸುವುದೆಂದರೆ ಬಲು ಇಷ್ಟ. ರಜೆಯ ದಿನಗಳನ್ನೆಲ್ಲ ಹೀಗೇ ಕಳೆಯುತ್ತಿದ್ದರು. ನಾನೂ ಅವರ ಜೊತೆಗೆ ಸ್ಕ್ರೂಡ್ರೈವರ್ರು ಕೊಡುವುದೋ, ವಿದ್ಯುತ್ ತಂತಿಗೆ ಇನ್ಸುಲೇಟರು ಹಚ್ಚುವುದೋ ಮಾಡುತ್ತಿದ್ದೆ. ಈಗಲೂ ಮನೆಯಲ್ಲಿ ವಿದ್ಯುತ್ ಏನಾದರೂ ಹೆಚ್ಚು ಕಡಿಮೆಯಾದರೆ ನಮ್ಮ ಅಕ್ಕಂದಿರು ತಾವೇ ಅದನ್ನು ಸರಿ ಪಡಿಸಲು ಹೋಗುವುದು ಬಹುಶಃ ಅಪ್ಪನ ತರಬೇತಿಯಿಂದಲೇ ಇರಬೇಕು. ಇವನ್ನೆಲ್ಲ ಶಿಕ್ಷಣವೆನ್ನಲೋ, ಕೌಶಲ್ಯವೆನ್ನಲೋ ಗೊತ್ತಿಲ್ಲ.

ಇತ್ತೀಚೆಗೆ ಮಗ ರೂಬಿಕ್ ಕ್ಯೂಬನ್ನು ಇಷ್ಟ ಪಟ್ಟಾಗಲೇ ಗೊತ್ತಾಗಿದ್ದು ಅಪ್ಪನ ಅಂದಿನ ತ್ಯಾಗ. ದೇಶದಲ್ಲಿ ತಯಾರಾಗದೇ ಇರುವ ಆಮದು ಮಾಡಿಕೊಳ್ಳಬೇಕಾದಂತಹ ಆಟಿಕೆಗಳನ್ನು ಅವು ದುಬಾರಿಯಾದರೂ ಹಿಂಜರಿಯದೆ ನಮಗೆ ತಂದು ಕೊಟ್ಟಿದ್ದರೆನ್ನುವುದು ನಂಬಲಾಗದ ಸಂಗತಿ. ಇಂದು ಮಗನ ಬಳಿ ಕನಿಷ್ಟ ನಲವತ್ತು ಬಗೆಯದಾದರೂ ರೂಬಿಕ್ ಕ್ಯೂಬುಗಳಿವೆ. ನನಗೆ ಅವುಗಳನ್ನು ಮರುಜೋಡಿಸುವುದು ಆಗುವುದಿಲ್ಲ ಎನ್ನುವುದು ಅವನಿಗೆ ತಮಾಷೆ ಎನ್ನಿಸುತ್ತದೆ. ಕೆಲವೇ ಸೆಕೆಂಡುಗಳಲ್ಲಿ ತಾನು ಸಾಧಿಸುವ ಕೆಲಸವನ್ನು ಅಪ್ಪನಿಗೆ ಯಾಕೆ ಸಾಧಿಸಲಾಗುತ್ತಿಲ್ಲ ಎಂದು ಅವನು ಯೋಚಿಸುತ್ತಿರಲೂ ಬಹುದು.

ಅದೇನೇ ಇರಲಿ. ಇಂದು ಮೊಮ್ಮಗ ರೂಬಿಕ್ ಕ್ಯೂಬನ್ನು ಹಿಡಿದು ಕುಳಿತಾಗಲೆಲ್ಲ ತೊಂಭತ್ತರ ಅಮ್ಮ ಅಪ್ಪನನ್ನು ನೆನಪಿಸಿಕೊಳ್ಳುತ್ತಾಳೆ. ಅರ್ಧ ಶತಮಾನದ ಮೊದಲು ಅವನ ಅಜ್ಜ ತನ್ನ ಸಂಬಳದ ಬಹುಪಾಲು ವೆಚ್ಚ ಮಾಡಿ ತಂದಿದ್ದಾಗ ಅವರಿಬ್ಬರ ನಡುವೆಯೂ ವಾಗ್ವಾದವಾಗಿರಬಹುದೇ? ಖಂಡಿತವಾಗಿ ಆಗಿರುತ್ತದೆ. ನಮ್ಮ ಆದಾಯದ ಒಂದು ಪರ್ಸೆಂಟಿನಷ್ಟನ್ನು ನಾವು ಬಹಳ ಜತನದಿಂದ ಲೆಕ್ಕ ಹಾಕುವಾಗ ಕಾಲು ಭಾಗದ ಆದಾಯವನ್ನು ಆಹಾರಕ್ಕಲ್ಲದೆ ಆಟಕ್ಕೆ ವೆಚ್ಚ ಮಾಡಿದ ಗಂಡನನ್ನು ತರಾಟೆಗೆ ತೆಗೆದುಕೊಳ್ಳದೇ ಇದ್ದಳೇ? ಆಕೆಯ ದೂರುಗಳಿಗೆ ಬೆದರಿ ಅಪ್ಪ ಇವನ್ನೆಲ್ಲ ನಮಗೆ ಕೊಡಿಸದೇ ಇದ್ದಿದ್ದರೆ ನಾನು ಹೇಗಿರುತ್ತಿದ್ದೆ ಎಂದು ಆಲೋಚಿಸಲೂ ಭಯವಾಗುತ್ತದೆ.


ಅಪ್ಪ ಅಪ್ಪನೇ! ಅಮ್ಮ ಅಮ್ಮನೇ!