ನ್ಯಾಯಾಲಯದಲ್ಲಿ ಮೊದಲ ದಿನದ ಅನುಭವ ತುಸು ವಿಚಿತ್ರ ಅನ್ನಿಸಿತ್ತೇನೋ, ನಿಜ. ಆದರೆ ಅದಕ್ಕಾಗಿ ನಮ್ಮ ಕರ್ತವ್ಯವನ್ನು ಬಿಡಬೇಕಿಲ್ಲ ಎಂದು ಡಾ. ಹೆಗ್ಡೆ ಒತ್ತಿ ಹೇಳಿದ್ದರಿಂದ ಮುಂದಿನ ಬುಲಾವಿನಂದು ಮತ್ತೆ ನ್ಯಾಯಾಲಯ ತಲುಪಿದೆವು. ಈ ಬಾರಿ ನೇರವಾಗಿ ಸರ್ಕಾರಿ ವಕೀಲರನ್ನು ನೋಡಲು ಹೋದೆವು. ನಾವು ಇಂತಹ ಕೇಸಿನ ಸಾಕ್ಷಿ ಎಂದು ಹೇಳಿದಾಗ. "ಓಹೋ. ನೀವು CW1, ನೀವು CW2" ಅಲ್ಲವೋ ಎಂದರು. (CW = Chief Witness). ಹೀಗೆಯೇ ಪ್ರತಿಯೊಬ್ಬ ಸಾಕ್ಷಿಗೂ ಒಂದು ಸಂಖ್ಯೆ. ಪ್ರತಿಯೊಬ್ಬ ಅಪರಾಧಿಗೂ ಒಂದು ಸಂಖ್ಯೆ ಇರುತ್ತದೆ. ನ್ಯಾಯಾಧೀಶರು ಅವರನ್ನು ಉಲ್ಲೇಖಿಸುವುದು ಸಂಖ್ಯೆಯಿಂದಲೇ ಅಂತೆ. ಪ್ರತಿಯೊಂದು ದಾಖಲೆಯಲ್ಲಿ ಉದ್ಧರಿಸುವಾಗಲೂ ನಿರ್ಭಾವುಕತೆಯಿಂದ ಬರೆಯಬೇಕು ಎನ್ನುವ ಉದ್ದೇಶಕ್ಕಾಗಿ ವೈಯಕ್ತಿಕ ಸುಳಿವು ಕೊಡದ ಬರೆಹವನ್ನು ಬಳಸಲಾಗುತ್ತದೆ. ಇದೇ ರೀತಿಯಲ್ಲಿಯೇ ನ್ಯಾಯಾಲಯದಲ್ಲಿಯೂ ವ್ಯಕ್ತಿಗಳ ಸಾಮಾಜಿಕ ನೆಲೆ, ನಿಲುವು ಏನೇ ಇದ್ದರೂ, ಆ ವ್ಯಾಜ್ಯದ ಮಟ್ಟಿಗೆ ಅವರು ಒಂದು ಸಂಖ್ಯೆ, ಒಂದು ಸಾಧನ ಆಗಿ ಬಿಡುವ ಕಾರಣಕ್ಕೆ ಹೀಗೆ ಇರಬಹುದೇ? ಜೈಲಿನಲ್ಲಿ, ನ್ಯಾಯಾಲಯದಲ್ಲಿ ಹಾಗೂ ಆಸ್ಪತ್ರೆಯಲ್ಲಿ ನಾವು ಒಂದು ಸಂಖ್ಯೆಯಾಗಿ ಬಿಡುತ್ತೇವೆ. ಇದೇ ಕಾರಣಕ್ಕೇ ಇರಬೇಕು, ಈ ಎಲ್ಲ ಪರಿಸರದಲ್ಲಿಯೂ ಒಂದೇ ಬಗೆಯ ಮನೋಭಾವ, ಖುಷಿಯಿಲ್ಲದ, ಗೂಡಿನೊಳಗೆ ಕಟ್ಟಿಟ್ಟಂತಹ ಅಥವಾ ಅಪರಾಧಿ ಮನೋಭಾವ ತನ್ನಂತಾನೇ ಸೃಷ್ಟಿಯಾಗಿ ಬಿಡುತ್ತದೆ. ನನ್ನ ಮಗ ಹುಟ್ಟುವಾಗ ಹೆರಿಗೆ ಆಸ್ಪತ್ರೆಯಲ್ಲಿಯೂ ನನಗೆ ಇದೇ ಭಾವ ಕಾಡಿತ್ತು. ಇದು ನನಗೊಬ್ಬನಿಗೇ ಆಗುವ ಅನುಭವವೋ, ಅಥವಾ ನಿತ್ಯವೂ ಅಲ್ಲಿಗೆ ಬರುವ ಸಾವಿರಾರು ಮಂದಿಗೂ ಹೀಗೇ ಅನಿಸುತ್ತದೆಯೋ ಕುತೂಹಲವಾಗಿದೆ.
ಲಾಯರು ನಮ್ಮನ್ನು ನೋಡಿದರು. ನಮ್ಮ ಉದ್ಯೋಗಗಳ ಬಗ್ಗೆ ತಿಳಿದುಕೊಂಡರು. ಅಯ್ಯೋ, ಇದಕ್ಕಾಗಿ ನೀವು ರಜೆ ಹಾಕಿ ಏಕೆ ಬಂದಿರಿ ಎಂದು ಪರಿತಾಪ ಪಟ್ಟರು. ಅನಂತರ ಅಂದಿನ ಕೇಸುಗಳ ಪಟ್ಟಿ ನೋಡಿ, 'ಈ ದಿನವೂ ನಿಮ್ಮ ವ್ಯಾಜ್ಯ ಪರೀಕ್ಷೆಗೆ ಬರುವ ಸಾಧ್ಯತೆಗಳು ಕಡಿಮೆ. ಕೆಲವು ಹಿರಿಯ ಪೋಲೀಸು ಅಧಿಕಾರಿಗಳ ಸಾಕ್ಷಿ ಕೇಳುವುದಿದೆ. ಅವರಿಗೆ ಪ್ರಾಮುಖ್ಯತೆಯಾದ್ದರಿಂದ ನಿಮ್ಮ ಕೇಸು ಈ ದಿನವೂ ಮುಂದೂಡಬಹುದು. ಒಂದು ಕೆಲಸ ಮಾಡಿ. ಜರೂರು ಸರ್ಕಾರಿ ಕಾರ್ಯಗಳಿದ್ದುದರಿಂದ ನಾವು ಸಾಕ್ಷಿ ಹೇಳಲು ಬರಲಾಗುತ್ತಿಲ್ಲ ಎಂದು ಒಂದು ಮನವಿ ಪತ್ರ ಬರೆದುಕೊಡಿ. ಕೇಸು ಅಡ್ಜರ್ನ್ ಮಾಡಿಸೋಣ. ಮುಂದಿನ ಸಮನ್ ಬಂದಾಗ ಬನ್ನಿ,' ಎಂದು ಸಲಹೆ ನೀಡಿದರು. ಮನವಿ ಬರೆದುಕೊಟ್ಟು, ಕೋರ್ಟಿನ ಅಂಗಳದಲ್ಲಿದ್ದ ಕೊಳಕು ಕ್ಯಾಂಟೀನಿನಲ್ಲಿ ಕಾಫಿ ಕುಡಿದು ಮನೆಗೆ ಮರಳಿದೆವು.
ಹಿಂದ ಒಂದು ಸಂದರ್ಭದಲ್ಲಿ ಹೈದರಾಬಾದಿನ ಸುಪ್ರಸಿದ್ಧ ಪ್ರಯೋಗಶಾಲೆ, 'ಸೆಂಟರ್ ಫಾರ್ ಸೆಲ್ಲುಲಾರ್ ಅಂಡ್ ಮಾಲೆಕ್ಯುಲಾರ್ ಬಯಾಲಜಿ,'ಯ ನಿರ್ದೇಶಕರಾದ ಡಾ. ಲಾಲ್ಜಿ ಸಿಂಗ್ ಒಂದು ಭಾಷಣದಲ್ಲಿ ತಮ್ಮ ಮೊತ್ತ ಮೊದಲ ನ್ಯಾಯಾಲಯದ ಭೇಟಿಯ ಪ್ರಸ್ತಾವ ಮಾಡಿದ್ದು ನೆನಪಾಯಿತು. ಲಾಲ್ಜಿ ಸಿಂಗ್ ಇಂದು ಅಪರಾಧಿಗಳ ಪತ್ತೆಯಲ್ಲಿ ನಿತ್ಯವೂ ಬಳಸುವ ಡಿಎನ್‌ಎ ಬೆರಳಚ್ಚು (DNA Fingerprinting) ಪರೀಕ್ಷೆಯನ್ನು ಭಾರತದಲ್ಲಿ ವಿನೂತನವಾಗಿ ಅಳವಡಿಸಿದ ವಿಜ್ಞಾನಿ. ಪ್ರಪ್ರಥಮ ಬಾರಿಗೆ ಮಗುವೊಂದರ ಜನ್ಮದಾತ ಯಾರು ಎನ್ನುವ ಬಗ್ಗೆ ಇಬ್ಬರು ಪೋಷಕರ ನಡುವಿನ ವ್ಯಾಜ್ಯವನ್ನು ಬಗೆ ಹರಿಸಲು ಬಳಸಲಾಗಿತ್ತು. ಆ ಸಂದರ್ಭದಲ್ಲಿ ಡಿಎನ್‌ಎ ಬೆರಳಚ್ಚಿನ ಪರೀಕ್ಷೆಗೆ ಡಾ. ಸಿಂಗ್‌ರವರಿಗೆ ತಿಳಿಸಲಾಗಿತ್ತು. ಈ ಪರೀಕ್ಷೆಯ ವಿವರಗಳು ಮತ್ತು ಫಲಿತಾಂಶಗಳನ್ನು ಅವರು ಸಾಕ್ಷಿಯಾಗಿ ನುಡಿಯಬೇಕಿತ್ತು. ಸಮನ್ ಬಂದಾಗ ಅದನ್ನು ನಿರಾಕರಿಸುವುದು ಅಪರಾಧ ಎಂದು ಅವರಿಗೆ ತಿಳಿ ಹೇಳಲಾಗಿತ್ತು. ಕೋರ್ಟಿಗೆ ಹೋದಾಗ ನಮ್ಮಂತೆಯೇ ಹಲವು ಗಂಟೆಗಳ ಕಾಲ ಕಾಯಬೇಕಾಗಿತ್ತಂತೆ. ಅದಾದ ಅನಂತರ ಸಾಕ್ಷಿ ಹೇಳಿ ಎಂದು ಅವರನ್ನು ಕರೆದರಂತೆ. ಹೊಸ ತಂತ್ರವನ್ನು ಬಳಸಿದ್ದರಿಂದ, ಅದರ ಬಗ್ಗೆ ವಿವರ ನೀಡಬೇಕಿತ್ತು. ಅದಕ್ಕಾಗಿ ವಿಜ್ಞಾನ ಸಭೆಗಳಲ್ಲಿ ಮಾಡುವ ಹಾಗೆ ಒಂದು ಸ್ಲೈಡ್ ಚಿತ್ರ ಪ್ರದರ್ಶಿಸಬೇಕು. ಪ್ರೊಜೆಕ್ಟರ್ ಇಡಬೇಕು ಎಂದು ವಿನಂತಿಸಿಕೊಂಡರಂತೆ. ಅನುಮತಿ ದೊರೆಯಿತಂತೆ. ಆದರೆ ಪ್ರೊಜೆಕ್ಟರ್ ಇಡಲು ಜಾಗೆ ಇಲ್ಲ. ಅದಕ್ಕೆ ವಿದ್ಯುತ್ ಸಂಪರ್ಕ ನೀಡುವ ಅವಕಾಶ ಸಾಕ್ಷಿ ಕಟ್ಟೆಯಲ್ಲಿ ಇರಲಿಲ್ಲವಂತೆ. ಸಾಕ್ಷಿಕಟ್ಟೆ ಒಂದು ಮರದ ಕಟ್ಟೆಯಷ್ಟೆ. ಅಲ್ಲಿ ಪ್ರೊಜೆಕ್ಟರ್ ಇರಲಿ, ನಿಮ್ಮ ಕೈ ಇಟ್ಟುಕೊಳ್ಳಲೂ ಕೆಲವೊಮ್ಮೆ ಜಾಗೆ ಇರುವುದಿಲ್ಲ, ಅಷ್ಟು ಕಿರಿದಾದ ಕಟಕಟೆ ಇರುತ್ತದೆ.
ಕೊನೆಗೆ ಹೇಗೋ ದೂರದ ಯಾವುದೋ ವಿದ್ಯುತ್ ಪ್ಲಗ್‌ನಿಂದ ವಿದ್ಯುತ್ ಪಡೆದುಕೊಂಡರಂತೆ. ಅನಂತರ ಚಿತ್ರವನ್ನು ಎಲ್ಲಿ ಪ್ರೊಜೆಕ್ಟ್ ಮಾಡಬೇಕು ಎನ್ನುವ ಸಂದಿಗ್ಧವುಂಟಾಯಿತಂತೆ. ಹೇಳಿ, ಕೇಳಿ, ಬೆಳಕು ನುಗ್ಗದಿರುವ ಸರ್ಕಾರಿ ಕಟ್ಟಡ. ಸುಣ್ಣ, ಬಣ್ಣ ಕಾಣದ ಗೋಡೆಗಳು. ಅಲ್ಲಿ ಎಲ್ಲಿ ಚಿತ್ರ ಸ್ಪಷ್ಟವಾಗಿ ಮೂಡೀತು. ಕೊನೆಗೆ ಒಂದು ಸ್ಥಳ ಕಾಣಿಸಿತಂತೆ. ಡಾ. ಸಿಂಗ್ ತಮ್ಮ ಚಿತ್ರವನ್ನು ಅಲ್ಲಿ ಪ್ರೊಜೆಕ್ಟ್ ಮಾಡಲು ಸಿದ್ಧರಾಗಿ, ಹೇಳಿದರಂತೆ. "ಮಹಾಸ್ವಾಮಿ, ತಾವು ಸ್ವಲ್ಪ ಅತ್ತ ಜರುಗಿದರೆ, ಚಿತ್ರವನ್ನು ತಮ್ಮ ಬೆನ್ನ ಹಿಂದಿನ ಗೋಡೆಯ ಮೇಲೆ ಪ್ರದರ್ಶಿಸಬಹುದು," ಎಂದು. ಅವರ ಮಾತು ಕೇಳಿ ಇಡೀ ನ್ಯಾಯಾಲಯ ಸ್ತಬ್ಧವಾಯಿತಂತೆ. ಅನಂತರ ಸರ್ಕಾರಿ ವಕೀಲರು ತಿಳಿ ಹೇಳಿದರಂತೆ. "ನ್ಯಾಯಾಧೀಶರು ಖುರ್ಚಿ ಬಿಟ್ಟು ಎದ್ದರೆಂದರೆ ನ್ಯಾಯಾಲಯ ಬರಖಾಸ್ತು ಆದಂತೆ," ಎಂದು. ಅದು ಹೇಗೋ ಕಸರತ್ತು ಮಾಡಿಕೊಂಡು ಚಿತ್ರವನ್ನು ಪ್ರದರ್ಶಿಸಿದೆ ಎಂದು ಲಾಲ್ಜಿ ಸಿಂಗ್ ನೆನಪಿಸಿಕೊಂಡಿದ್ದರು. ಈಗ ನ್ಯಾಯಾಲಯಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮುಖಾಂತರ ಸಾಕ್ಷಿ ವಿಚಾರಣೆ ನಡೆಯುತ್ತದೆ. ಉದಾಹರಣೆಗೆ, ಮೈಸೂರಿನ ನ್ಯಾಯಾಲಯವೇ "ಇಂಡಿಪೆಂಡೆಂಸ್ ಡೇ" ಚಿತ್ರದ ಬಗ್ಗೆ ಕೃತಿಚೌರ್ಯ ಎಂದು ಇಲ್ಲಿನ ಒಬ್ಬ ಲೇಖಕರು ಕೊಟ್ಟ ಫಿರ್ಯಾದಿನ ವಿಚಾರಣೆಯನ್ನು ವೀಡಿಯೋ ಕಾನ್ಫರೆನ್ಸ್ ಮುಖಾಂತರ ಮಾಡಿತ್ತು. ಅದು ಸುದ್ದಿಯಾಗಿತ್ತು.
ಬಹುಶಃ ಅಪರೂಪದ ವಿಷಯವೆಂದೇ ಅದು ಸುದ್ದಿಯಾಗಿತ್ತು ಎನ್ನಿಸುತ್ತದೆ. ನಿತ್ಯ ನ್ಯಾಯಾಲಯಕ್ಕೆ ತಾಕಲಾಡುವ, ಅಡ್ಜರ್ನ್‌ಮೆಂಟುಗಳನ್ನು ಎದುರಿಸುವ ಪರಿಸ್ಥಿತಿ ಇನ್ನೂ ಬದಲಾಗಿಲ್ಲ ಎನ್ನುವುದು ನನ್ನ ಅನುಭವ.
Saturday, March 24, 2007
Friday, March 23, 2007
Witness Box ಸಾಕ್ಷಿಕಟ್ಟೆ
ಭಾರತದ ಎಲ್ಲ ನ್ಯಾಯಾಲಯಗಳ, ನ್ಯಾಯಾಧೀಶರುಗಳ ಕ್ಷಮೆ ಕೋರಿ!!
ಮುಕ್ತಾ ಧಾರಾವಾಹಿ ನೋಡಿದವರಿಗೆಲ್ಲ, ನ್ಯಾಯಾಲಯದಲ್ಲಿನ ನಡವಳಿಕೆಗಳು ಬಲು ರೋಚಕ ಎನ್ನಿಸಿರಬಹುದು. ಮೊತ್ತ ಮೊದಲು ನ್ಯಾಯಾಲಯದಿಂದ ವಾರಂಟ್ ಬಂದಾಗ ನನಗೂ ಹಾಗೇ ಅನ್ನಿಸಿತ್ತು. ಟೀವಿ ಹಾಗೂ ವಾಸ್ತವಗಳ ನಡುವೆ ಬಹಳ ಅಂತರ (ಟೀವಿ ಸುದ್ದಿಯನ್ನೂ ಸೇರಿಸಿ ಹೇಳುತ್ತಿದ್ದೇನೆ) ಇರುತ್ತದೆ ಎನ್ನುವ ಅರಿವಿದ್ದರೂ, ನನಗೆ ತುಸು ಕಳವಳ ಹಾಗೂ ಭಯ ಎನ್ನಿಸಿತ್ತು. ಮುಕ್ತಾದಲ್ಲಿ ಟಿಎನ್‌ಎಸ್ ಮಾಡಿದ ಹಾಗೆ ನನ್ನನ್ನೂ ಅಡ್ಡಸವಾಲಿನಲ್ಲಿ ಎದುರು ಪಕ್ಷದ ಲಾಯರು ತುಂಡರಿಸಿಬಿಡುವರೇನೋ ಎನ್ನುವ ಅನಿಸಿಕೆ ಇತ್ತು. ಕೆಲವೊಮ್ಮೆ ಚ್ಯೂಯಿಂಗ್ ಗಮ್ ಎನ್ನಿಸಿದ್ದರೂ, ಮುಕ್ತಾದ ಎಪಿಸೋಡುಗಳು, ಅದರಲ್ಲೂ ಸಾಕ್ಷಿಯ ವಿಚಾರಣೆ, ಅಡ್ಡಸವಾಲುಗಳು ೨೦ ನಿಮಿಷಗಳಲ್ಲೇ ಮುಗಿದು ಬಿಡುತ್ತಿದ್ದುವಷ್ಟೆ. ಇದನ್ನೆಲ್ಲ ನೋಡಿದ್ದವನಿಗೆ ಮೊದಲ ವಾರಂಟ್ ಬಂದಾಗ, ನ್ಯಾಯಾಲಯದಿಂದ ಒಂದು ಗಂಟೆಯೊಳಗೆ ಹಿಂದುರುಗಬಹುದು ಎನ್ನಿಸದ್ದರಲ್ಲಿ ತಪ್ಪೇನಿಲ್ಲ. ಅದರಲ್ಲೂ, ಮೊದಲ ಬಾರಿಗೆ ನ್ಯಾಯಾಲಯದ ಕಟ್ಟೆ ಹತ್ತುವವನಿದ್ದೆ.
ನ್ಯಾಯಾಲಯದ ಕಟ್ಟೆ ಹತ್ತಲು ಏನು ಅಪರಾಧ ಮಾಡಿದ್ದೆ ಎಂದಿರಾ? ನಾನು ನ್ಯಾಯಾಲಯಕ್ಕೆ ಹೋಗಿದ್ದು ಸಾಕ್ಷಿ ಹೇಳಲು. ನಾಲ್ಕು ವರುಷಗಳ ಹಿಂದೆ ಒಂದು ಮೋಟರುಬೈಕು ಅಪಘಾತ ನಡೆದಾಗ ಮೊದಲ ಫಿರ್ಯಾದು ನೀಡಿದ್ದೆ. ಇನ್ನೆರಡು ತಿಂಗಳುಗಳಲ್ಲಿ ವೈದ್ಯನಾಗಿ ನೂರಾರು ಜನರ ಜೀವ ಉಳಿಸುವವನಾಗುತ್ತಿದ್ದ ಅಂತಿಮ ವೈದ್ಯಕೀಯ ವಿದ್ಯಾರ್ಥಿ, ಕುಡುಕ ಚಾಲಕನೊಬ್ಬನ ಬೇಜವಾಬುದಾರಿ ಚಾಲನೆಯಿಂದ ಸ್ವತಃ ಶವವಾಗಿದ್ದ. ಅದರ ಬಗ್ಗೆ ಮೊದಲ ದೂರು ನಾನು ದಾಖಲಿಸಿದ್ದೆ. ಆ ಅಪಘಾತದ ಭೀಕರ ಸ್ವಪ್ನ ಮನಸ್ಸಿನಿಂದ ಮಾಸಿಯೇ ಹೋಗಿತ್ತು. ಆಗ ಬಂದಿತು ನ್ಯಾಯಾಲಯದ ಬುಲಾವು. ಇನ್ನೆರಡು ದಿನದಲ್ಲಿ ವಿಚಾರಣೆ ಇದೆ, ಬರತಕ್ಕದ್ದು. ಇದು ನಡೆದು ಒಂದೂವರೆ ವರುಷವಾಗಿದೆ. ಇನ್ನೂ ನನ್ನ ವಿಚಾರಣೆ ಮುಗಿದೇ ಇಲ್ಲ.
ಮೊದಲ ದಿನ ನ್ಯಾಯಾಲಯಕ್ಕೆ ಹೋಗಿದ್ದಾಗ ನನ್ನ ಜೊತೆಗೆ ನನಗೆ ನಾಗರೀಕ ಪ್ರಜ್ಞೆ ಮತ್ತು ಜವಾಬುದಾರಿಗಳ ಬಗ್ಗೆ ಯಾವಾಗಲೂ ತಿಳಿ ಹೇಳುವ ಗುರುಗಳಾದ ಡಾ. ಹೆಗ್ಡೆ ಯವರಿದ್ದರು. ಅವರೂ ಒಂದು ಸಾಕ್ಷಿ. ಇಬ್ಬರಿಗೂ ಇದು ಮೊದಲ ಅನುಭವ. ನ್ಯಾಯಾಲಯಕ್ಕೆ ಹೋದ ತಕ್ಷಣ ಮಾಡಿದ ಮೊದಲ ಕೆಲಸ, ನಮಗೆ ವಾರಂಟು ತಲುಪಿಸಿದ್ದ ಪೋಲೀಸು ಠಾಣೆಯ ಅಧಿಕಾರಿಯನ್ನು ಹುಡುಕುವುದು. ಎಲ್ಲೋ, ಯಾರ ಜೊತೆಗೋ ಚೌಕಾಶಿ ಮಾಡುತ್ತಿದ್ದ ಆತ ಸಿಕ್ಕಾಗ, "ಓ, ನೀವೇನೋ ಸಾಕ್ಷಿ" ಎಂದ. ಮುಕ್ತಾದಲ್ಲಿನ ಹಾಗೆ ಸರಕಾರಿ ವಕೀಲರು ಎಲ್ಲಿಯೂ ಕಾಣಲಿಲ್ಲ. ಇದುವರೆವಿಗೂ ನಾನು ಆತನನ್ನು ಭೇಟಿಯೇ ಆಗಿಲ್ಲ ಎನ್ನಬಹುದು.
ಅನಂತರ ನಡೆದದ್ದೇ ಸ್ವಾರಸ್ಯಕರ. ನೀವು ಇಲ್ಲಿ ನಿಲ್ಲಿ ಎನ್ನುವ ಆದೇಶದ ಮೇಲೆ ನ್ಯಾಯಾಲಯದ ಮುಂಬಾಗಿಲ ಬಳಿ ನಿಂತೆವು. ಸ್ವಲ್ಪ ಸಮಯ ಕಳೆದ ನಂತರ ನಾವು ಎಲ್ಲೋ ಜರುಗಿ ಹೋಗಿದ್ದೆವು. ಕಾರಣ, ನಮ್ಮಂತೆಯೇ ಸಾಕ್ಷಿ ಹೇಳುವವರ, ಅಪರಾಧಿಗಳ ಗುಂಪು ನಮ್ಮನ್ನು ದೂರಕ್ಕೆ ತಳ್ಳಿ ಬಿಟ್ಟಿತ್ತು. ನ್ಯಾಯಾಲಯಕ್ಕೆ ಬಂದು ಒಂದೂವರೆ ಗಂಟೆ ಆಗಿರಬಹುದು, ಬಾಗಿಲ ಬಳಿ ಇದ್ದ ಪ್ರತೀಹಾರಿ ಪ್ರತಿ ಬಾರಿ ಹೆಸರು ಕರೆದಾಗಲೂ ನನ್ನ ಹೆಸರೇ ಕರೆದಂತೆ ಕೇಳಿಸುತ್ತಿತ್ತು.
ನ್ಯಾಯಾಲಯದ ಪ್ರಾಂಗಣದಲ್ಲಿ ಇದ್ದವರೆಲ್ಲರ ಮುಖದಲ್ಲಿಯೂ ಸೂತಕದ ಕಳೆ. ಆತಂಕದ ಭಾವ. ಬಹುಶಃ ಕನ್ನಡಿಯಲ್ಲಿ ನೋಡಿಕೊಂಡಿದ್ದರೆ ನನ್ನ ಮುಖವೂ ಒಬ್ಬ ಅಪರಾಧಿಯಂತೆ ತೋರುತ್ತಿತ್ತೋ ಏನೋ? ಯಾರು ಅಪರಾಧಿ, ಯಾರು ಸಾಕ್ಷಿ ಹೇಳುವವರು ಎನ್ನುವುದೇ ತಿಳಿಯುತ್ತಿರಲಿಲ್ಲ. ಪೋಲೀಸರ ಕಸ್ಟಡಿಯಲ್ಲಿ ಇದ್ದ ಕೆಲವು ಕೋಳ ತೊಟ್ಟ ವ್ಯಕ್ತಿಗಳಷ್ಟೆ ತುಸು ಖುಷಿಯಾಗಿದ್ದಂತೆ ಅನಿಸಿತು. ನ್ಯಾಯಾಲಯದ ಒಳಗಿದ್ದ ವಕೀಲರುಗಳೂ, ಸಾಕ್ಷಿಗಳೂ, ಅಪರಾಧಿಗಳೂ ಒಂದೇ ರೀತಿ ತೋರುತ್ತಿದ್ದರು. ವಕೀಲರಿಗೆ ಅವರ ದಿರಿಸು ವಿಶಿಷ್ಟವಾಗಿತ್ತು ಅಷ್ಟೆ.
ಅಂತೂ ನನ್ನ ಹೆಸರು ಕರೆದಾಗ ಒಳಗೆ ಹೋದೆ. "ಅಲ್ಲಿ ಅಪರಾಧಿ ನಿಲ್ಲುವುದು, ಸಾಕ್ಷಿ ಇಲ್ಲಿ ಬನ್ನಿ" ಎಂದರು. ಅದು ನನಗೆ ಹೊಸತು. ಹೋದೆ. ಇನ್ನೇನು ಸಾಕ್ಷಿ ಹೇಳಿ ಮನೆಗೆ ಹೋಗಬಹುದು ಎಂದುಕೊಂಡಿದ್ದು ತಪ್ಪಾಯಿತು. ಮೊದಲ ಕರೆ ಹಾಜರಿ ಹಾಕಲು. ಪೋಲೀಸು ಪೇದೆ, ಸ್ವಲ್ಪ ಹೊರಗೆ ಇರಿ ಮತ್ತೆ ಕರೆಸುತ್ತಾರೆ ಎಂದ. ಮತ್ತೆ ಕಾರಿಡಾರಿನಲ್ಲಿನ ಗುಂಪಿನಲ್ಲಿ ಬೆವರು ವಾಸನೆ ಕುಡಿಯುತ್ತ ನಿಂತೆವು. ನಮ್ಮ ಸ್ಥಿತಿ ನೋಡಿ ಪಾಪ ಅನ್ನಿಸಿತೋ ಏನೋ. ಪೇದೆ ಮತ್ತೆ ಬಂದು 'ಒಳಗೆ ಬೆಂಚಿನ ಮೇಲೆ ಕುಳಿತುಕೊಳ್ಳಿ' ಎಂದ. ಒಳಗೆ ಹೋದೆವು. ಕುಳಿತ ಕೂಡಲೇ ಅಲ್ಲಿದ್ದ ವಕೀಲರೊಬ್ಬರು ಗದರಿದರು. "’ಕಾಲು ಕೆಳಗೆ ಬಿಡ್ರೀ!’ ಕಾಲ ಮೇಲೆ ಕಾಲು ಹಾಕಿ ಕೂರುವುದು ನ್ಯಾಯಲಯಕ್ಕೆ ಅಪಮಾನ ಮಾಡಿದಂತೆ," ಎಂದು ತಿಳುವಳಿಕೆ ನೀಡಿದರು. ನ್ಯಾಯಾಲಯದಲ್ಲಿ ನಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಿದರೆಂದು ಪೇಪರಿನಲ್ಲಿ ಒಮ್ಮೆ ಓದಿದ್ದು ನೆನಪಾಯಿತು. ಅದನ್ನು ಮರೆಯಲು ಸುತ್ತ ಕಣ್ಣಾಡಿಸಿದೆ. ಎಷ್ಟು ವ್ಯಾಜ್ಯಗಳಿಗೆ ಸಾಕ್ಷಿಯಾಗಿದ್ದುವೋ, ನ್ಯಾಯಾಲಯದ ಖುರ್ಚಿಗಳು ಎಲ್ಲವೂ ಓರೆಯಾಗಿದ್ದುವು. ನ್ಯಾಯಾಧೀಶರ ಆಸನದ ಬೆನ್ನಿನಲ್ಲಿ ಒಂದು ಮೂಲೆ ಕಿತ್ತು ಹೋಗಿತ್ತು. ಅಪರಾಧಿಗಳ ನಿಲ್ಲುವ ಕಟಕಟೆಯ ಮೇಲೆ ಎಷ್ಟೋ ವರುಷಗಳ ದೂಳು ನೆಲೆಯಾಗಿತ್ತು, ಭಾರತೀಯ ನ್ಯಾಯಾಲಯಗಳಲ್ಲಿ ಕೊನೆಗಾಣದೆ ಇರುವ ವ್ಯಾಜ್ಯಗಳ ಪ್ರತಿರೂಪದಂತೆ. ನಾನು ಕುಳಿತಿದ್ದ ಖುರ್ಚಿಯ ಒಂದು ಕಾಲು ಸವೆದು, ಓಲಾಡುತ್ತಿತ್ತು. ಎಲ್ಲಿ ನ್ಯಾಯಾಲಯಕ್ಕೆ ಅವಮರ್ಯಾದೆಯಾಗುತ್ತದೋ ಎಂದು ಸಾಹಸದಿಂದ ಖುರ್ಚಿಯ ಮೇಲೆ ಕೂರುವ ಕಸರತ್ತು ಮಾಡಿದೆ. ಊಟದ ವೇಳೆ ಆಗುತ್ತಿದ್ದಂತೆ ಹೊಟ್ಟೆ ಚುರುಕ್ ಎನ್ನತೊಡಗಿತು. ಆದರೆ ಹೊರಗೆ ನಡೆಯಬಹುದೋ ಇಲ್ಲವೋ ತಿಳಿಯಲಿಲ್ಲ.
ಅಷ್ಟರಲ್ಲಿ ಪೇದೆ ಬಂದು ಕೇಸಿನ ಫೈಲು ಕೈಗಿತ್ತ. ಇದರಲ್ಲಿ ನೀವು ಏನು ಹೇಳಬೇಕು ಎಂದು ಬರೆದಿದೆ. ಚೆನ್ನಾಗಿ ಓದಿಕೊಳ್ಳಿ ಎಂದ. ನಾನೇ ಬರೆದುಕೊಟ್ಟ ಫಿರ್ಯಾದು ಮರೆತೇ ಹೋಗಿತ್ತು. ಓದಿಕೊಂಡೆ. ಫಿರ್ಯಾದಿನಲ್ಲಿ ನಮೂದಿಸಿದ್ದ ಮೃತ ಹುಡುಗನನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ನನಗೆ ಅತ್ಯಂತ ಆಪ್ತ ಪರಿಚಿತ ಆತ. ಆದರೆ ಈಗ ಅವನ ಶವವಷ್ಟೆ ಎದುರು ಕಾಣುತ್ತಿತ್ತು. ಶವಪರೀಕ್ಷೆಯ ವಿವರಗಳಷ್ಟೆ ಎದುರು ಕಾಣುತ್ತಿದ್ದುವು. ಆತ ಓಡಿಸುತ್ತಿದ್ದ ಬೈಕಿನ ಸಂಖ್ಯೆಯನ್ನು ಉರು ಹೊಡೆದೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ಎಂದೂ, ಯಾವ ಪರೀಕ್ಷೆಗೂ ಉರು ಹೊಡೆದವನಲ್ಲ. ಇಂದು ಉರು ಹೊಡೆದೆ. ತಪ್ಪು ಹೇಳಬಾರದಲ್ಲವೆ? ಸಾಕ್ಷಿಯಲ್ಲವೇ? ತಪ್ಪು ಸಾಕ್ಷಿ ಹೇಳಬಾರದು. ಅದಕ್ಕೂ ಮಿಗಿಲಾಗಿ ಅಪರಾಧಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಾದುದು ನಾಗರೀಕ ಕರ್ತವ್ಯ. ಅದಕ್ಕೆ ಚ್ಯುತಿ ಬರಬಾರದು. ಹೀಗೆಲ್ಲ ಯೋಚಿಸಿ, ಉರು ಹೊಡೆದೆ. ಊಟದ ಸಮಯಕ್ಕೆ ಸರಿಯಾಗಿ ಬಂದ ಪೇದೆ,”ಈಗ ನಿಮ್ಮ ವಿಚಾರಣೆ ಆಗುವುದಿಲ್ಲ. ಬಹುಶಃ ಮೂರೂವರೆಗೆ ಆಗಬಹುದು. ಆಗ ಬನ್ನಿ" ಎಂದ.
ಮತ್ತೆ ಮಧ್ಯಾಹ್ನ ಉರಿಬಿಸಿಲಲ್ಲಿ ಬಂದೆವು. ಯಥಾ ಪ್ರಕಾರ ದೂಳು ಮುಸುಕಿದ ಬೆಂಚಿನ ಮೇಲೆ ಸಪ್ಪೆ ಮೋರೆ ಹಾಕಿಕೊಂಡು ಕುಳಿತದ್ದಾಯಿತು. ಕೈಯಲ್ಲಿ ಪತ್ರಿಕೆ ಇದ್ದರೂ, ಓದಬಹುದೋ, ಇಲ್ಲವೋ ಅನುಮಾನ. ಸುತ್ತ ನಡೆಯುತ್ತಿದ್ದ ವಿದ್ಯಮಾನಗಳೆಲ್ಲವನ್ನೂ ನೋಡುತ್ತ ಇದ್ದೆವು. ಮುಕ್ತ ದಂತೆ ಯಾವುದಾದರೂ ಸಾಕ್ಷಿಪರೀಕ್ಷೆ ನಡೆಯಬಹುದೇ ಎಂದು ಕಾತರ ಪಟ್ಟೆ. ಅಂದು ಇದ್ದ ಎಲ್ಲ ಕೇಸುಗಳೂ ಅಡ್ಜರ್ನ ಆಗುತ್ತಿದ್ದವು. ಒಂದೋ ಅಪರಾಧಿ ಗೈರು ಹಾಜರಿ. ಇಲ್ಲವೇ ಸಾಕ್ಷಿ. ಇಬ್ಬರೂ ಇದ್ದಾಗ ಯಾರೋ ಒಬ್ಬ ವಕೀಲ. ಎಲ್ಲರೂ ಇದ್ದಾಗ ಇನ್ಯಾವುದೋ ಕೇಸಿನ ತುರ್ತು. ಐದೂಕಾಲು ಆಗುತ್ತಿದ್ದಂತೆ ನನ್ನ ಹೆಸರು ಕರೆದರು. ಪ್ರಧಾನ ಸಾಕ್ಷಿ ನಾನೇ ತಾನೇ! ಹೆಮ್ಮೆಯಿಂದ ಸಾಕ್ಷಿ ಕಟ್ಟೆಯ ಬಳಿ ಹೋದೆ. ಸಾಕ್ಷಿ ಕಟ್ಟೆಯನ್ನು ಇನ್ನೇನು ಹತ್ತುವವನಿದ್ದೆ. ಅಷ್ಟರಲ್ಲಿ ನ್ಯಾಯಾಧೀಶರು ಇದು ಹೊಸ ಕೇಸೇ ಎಂದರು. ಹೌದು ಎಂದಾಗ. ಉಳಿದ ಸಾಕ್ಷಿಗಳು ಎಲ್ಲರೂ ಬಂದಿದಾರಾ ಎಂದರು. ಇಲ್ಲ ಎಂದ ಕೂಡಲೇ ಹಾಗಿದ್ದರೆ ಮುಂದಿನ ತಿಂಗಳು ಕರೆಸಿ, ಎಂದು ಅಪ್ಪಣೆಯಾಯಿತು. ನನ್ನ ಮೊದಲ ಸಾಕ್ಷಿ ಅಲ್ಲಿಗೆ ಮುಗಿದಿತ್ತು. ಒಂದೇ ಒಂದು ಮಾತೂ ಹೇಳದೆ ಸಾಕ್ಷಿ ಕಟ್ಟೆ ಹತ್ತದೆ ಹಿಂದುರುಗಿದ್ದೆ.

Tuesday, March 20, 2007
Retirement (ನಿವೃತ್ತಿ)
ಮೊನ್ನೆ ನಮ್ಮ ಘನ ಭಾರತ ಸರಕಾರ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಐದು ವರುಷ ಹೆಚ್ಚಿಸಿತು. Now, government employees in the higher education, especially in the top posts, retire at 65 instead of 60. They can continue to be reemployed till 70 years of age. ಇದು ವರವೇ, ಶಾಪವೇ ಎನ್ನುವ ಬಗ್ಗೆ ಚರ್ಚೆ ಆರಂಭವಾಗಲಿದೆ. ಈ ತೀರ್ಮಾನದಿಂದ ಲಾಭ ಪಡೆಯುವವರು ಖಂಡಿತವಾಗಿಯೂ ಇದು ಒಂದು ಒಳ್ಳೆಯ ತೀರ್ಮಾನ ಎನ್ನುತ್ತಾರೆ. ಇಂತಹ ಉದ್ಯೋಗಗಳಿಗಾಗಿ ಹತ್ತಾರು ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿ ನಿರಾಶೆಗೊಂಡಿರುವವರು, ಇದು ತಮಗೆ ಶಾಪ ಎಂದು ತೀರ್ಮಾನಿಸುವುದು ಖಂಡಿತ. ಏಕೆಂದರೆ, ಇಂದಿನ ಜಾಗತೀಕರಣದ ಪರಿಸರದಲ್ಲಿಯೂ ಸರ್ಕಾರಿ ಉದ್ಯೋಗವನ್ನೇ ಉದ್ಯೋಗ ಎಂದು ನಂಬಿಕೊಂಡವರು ಕೋಟಿಗಟ್ಟಲೆ ಇದ್ದಾರೆ.
ನಿವೃತ್ತಿ ಎನ್ನುವ ಮಾತು ಕೇಳಿದಾಗ ನಮ್ಮ ಸಂಸ್ಥೆಯಲ್ಲಿ ಪ್ರತಿ ತಿಂಗಳೂ ನಡೆಯುವ ನಿವೃತ್ತರಿಗೆ ಬೀಳ್ಕೊಡುಗೆ ಎನ್ನುವ ಆಚರಣೆಯ ನೆನಪಾಯಿತು. ನಮ್ಮದು ನೂರಾರು ಉದ್ಯೋಗಿಗಳಿರುವ ಸರ್ಕಾರಿ ಸಂಸ್ಥೆ. ಸಂಸ್ಥೆ ಹಳೆಯದಾದಷ್ಟೂ ನಿವೃತ್ತರಾಗುವವರ ಸಂಖ್ಯೆಯೂ ಹೆಚ್ಚು. ಪ್ರತಿ ತಿಂಗಳೂ ಕನಿಷ್ಠ ಐದು ಮಂದಿಯಾದರೂ ನಿವೃತ್ತರಾಗುತ್ತಾರೆ. ತಿಂಗಳ ಕೊನೆಯ ದಿನದಂದು ಇಂತಹವರಿಗೆ ಬೀಳ್ಕೊಡುಗೆ ನೀಡಲಾಗುತ್ತದೆ. ಈ ಸಮಾರಂಭದ ಖರ್ಚಿಗಾಗಿ ಒಂದು ನಿಧಿಯನ್ನೂ ಸ್ಥಾಪಿಸಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ತಿಂಗಳ ವೇತನದಿಂದ ಒಂದೈದು ರೂಪಾಯಿಗಳನ್ನು ಈ ನಿಧಿಗೆ ನೀಡುತ್ತಾರೆ.
ಸಮಾರಂಭ ಪ್ರತಿ ತಿಂಗಳ ಕಡೆಯ ದಿನ (working day) ಸಂಜೆ ನಿವೃತ್ತರಾಗಲಿರುವವರು ಹಾಗೂ ಅವರ ಪತಿ ಯಾ ಪತ್ನಿಯವರನ್ನು ವೇದಿಕೆಯಲ್ಲಿ ಕುಳ್ಳಿರಿಸಿ, ಸಂಸ್ಥೆಯ ಮುಖ್ಯಸ್ಥರಿಂದ ಸನ್ಮಾನ ಮಾಡಲಾಗುತ್ತದೆ. ಒಂದು ಹೂ ಗುಚ್ಛ, ಪುಟ್ಟದೊಂದು ಸ್ಮರಣಿಕೆ ಹಾಗೂ ಫಲ, ತಾಂಬೂಲ ನೀಡಿ ಸತ್ಕರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ನಿವೃತ್ತರ ವಿಭಾಗದ ಮುಖ್ಯಸ್ಥರು ನಿವೃತ್ತರ ಸೇವೆಯ ಬಗ್ಗೆ ಒಂದೆರಡು ಮಾತುಗಳನ್ನೂ ಹೇಳುವುದುಂಟು. ನಿವೃತ್ತರೂ ತಮ್ಮ ಒಂದೆರಡು ಮಾತುಗಳನ್ನು ಹೇಳುವುದುಂಟು. ವಿಶೇಷವೇನೆಂದರೆ ಇದುವರೆಗಿನ ನನ್ನ ಸೇವಾ ಅವಧಿಯಲ್ಲಿ ನಿವೃತ್ತಿಯಾದ ಯಾರೂ ಸಂಸ್ಥೆಯ ಬಗ್ಗೆ ಕೆಟ್ಟ ನುಡಿಗಳನ್ನು ನುಡಿದಿಲ್ಲ. ಸಿಬ್ಬಂದಿ ಹಾಗೂ ಅವರ ಮುಖ್ಯಸ್ಥರು ಹಾಗೂ ಇತರೆ ಸಹೋದ್ಯೋಗಿಗಳ ಜೊತೆಗೆ ಒಳ್ಳೆಯ ಸಂಬಂಧ ಇಲ್ಲದಿದ್ದ ಸಮಯದಲ್ಲಿಯೂ ಸಂಸ್ಥೆಯ ಬಗ್ಗೆ ಕೆಟ್ಟ ನುಡಿ ಬಂದದ್ದು ನಾನು ಕೇಳಿಲ್ಲ. ಸಾರ್ವಜನಿಕ ಸಭೆಯ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಎಲ್ಲರೂ ಹೀಗೆ ಒಳ್ಳೆಯದನ್ನೇ ನುಡಿದಿರುತ್ತಾರೆ ಎನ್ನುವುದನ್ನು ಒಪ್ಪಲು ಸ್ವಲ್ಪ ಕಷ್ಟವಾಗುತ್ತದೆ. ಏಕೆಂದರೆ ಈ ಸಮಾರಂಭದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವವರಲ್ಲಿ ವಿವಿಧ ವರ್ಗದ ನೌಕರರಿರುತ್ತಾರೆ. ಎಲ್ಲರಿಗೂ ಸಾರ್ವಜನಿಕ ಸಭೆಯ ಮರ್ಯಾದೆಗಳು ತಿಳಿದಿರುತ್ತದೆ ಎನ್ನುವುದು ಹೇಗೆ? ಹಾಗಿದ್ದರೆ ಸಂಸ್ಥೆಯ ವ್ಯಕ್ತಿತ್ವ, ಅದರೊಳಗಿನ ವ್ಯಕ್ತಿಗಳ ಅಂತರ ಸಂಬಂಧಗಳಿಂದ ಮುಕ್ತವಾದದ್ದೇ? ಸಂಸ್ಥೆಯ ವ್ಯಕ್ತಿತ್ವಕ್ಕೆ, ಪ್ರತಿಷ್ಠೆಗೆ ಸಿಬ್ಬಂದಿಗಳ ನಡುವಣ ಸಂಬಂಧ ಕಾರಣವಾಗಲಿಕ್ಕಿಲ್ಲವೇ? ಇಂದಿನ ಮ್ಯಾನೇಜ್‌ಮೆಂಟ್ ನಿಯಮಗಳು ಹೇಳುವಂತೆ ಟೀಮ್ ಸ್ಪಿರಿಟ್ ಎನ್ನುವುದು ವ್ಯಕ್ತಿಗಳ ನಡುವಣ ಸಂಬಂಧವನ್ನು ಮೀರಿದ ಒಂದು ಸಂಬಂಧವೇ? ಇದು ನನ್ನನ್ನು ಕಾಡಿದ ಪ್ರಶ್ನೆ.
ಪ್ರತಿ ತಿಂಗಳೂ ಈ ಸಮಾರಂಭದಲ್ಲಿ ಭಾಗವಹಿಸುವ ನನಗೆ ಸಮಾರಂಭದಲ್ಲಿ ಮದುವೆಯ ಕಳೆ ನನಗೆ ಎಂದೂ ತೋರಿಲ್ಲ ಎನ್ನುವುದು ವಾಸ್ತವ. ಸಾವಿನ ಮನೆಯಲ್ಲಿ ಮರಣಿಸಿದ ವ್ಯಕ್ತಿಯ ನಡೆ, ನುಡಿಗಳ ಬಗ್ಗೆ ಹೇಗೆ ಗೌರವದಿಂದ ನಡೆದುಕೊಳ್ಳುತ್ತೇವೆಯೋ ಹಾಗೆಯೇ ಇಲ್ಲಿಯೂ ನಾವು ವರ್ತಿಸುತ್ತಿರಬಹುದು ಎನ್ನುವ ಅನುಮಾನ ನನಗಿದೆ. ನಿವೃತ್ತರಾದವರ ಬದುಕು (ಪ್ರೊಫೆಶನಲ್ ಬದುಕು) ಇಲ್ಲಿಗೆ ಕೊನೆಯಾಯಿತು ಎನ್ನುವ ರೀತಿಯಲ್ಲಿ ಇದು ಇರುತ್ತದೆ.
ನಮ್ಮ ಸಂಸ್ಥೆಗೇ ವಿಶಿಷ್ಟವಾದ ಆಚರಣೆಯೊಂದು ಸಮಾರಂಭದ ಕೊನೆಗೆ ನಡೆಯುತ್ತದೆ. ಅಂದು ನಿವೃತ್ತರಾದವರು ಮತ್ತು ಅವರ ಕುಟುಂಬದವರನ್ನು ಸಂಸ್ಥೆಯ ವಾಹನದಲ್ಲಿ ಮನೆಗೆ ಕಳಿಸಿಕೊಡಲಾಗುತ್ತದೆ. ಇದು ಒಂದು ಶಿಷ್ಟಾಚಾರ. ಹೀಗಾಗಿ ಇದರಲ್ಲಿ ನನಗೆ ಅಷ್ಟೇನೂ ವಿಶೇಷ ತೋರಿರಲಿಲ್ಲ. ಗುರುಮಲ್ಲಯ್ಯ (ನಿಜ ನಾಮವಲ್ಲ) ಎನ್ನುವವರು ನಿವೃತ್ತಿಯಾಗುವವರೆಗೆ. ಈತ ನಮ್ಮ ಸಂಸ್ಥೆಯ ತೋಟಗಾರಿಕೆ ವಿಭಾಗದಲ್ಲಿದ್ದವ. ಗುರುಮಲ್ಲಯ್ಯ ಎನ್ನುವುದೇ ಈತನ ಹೆಸರು ಎನ್ನುವುದು ನನಗೆ ತಿಳಿದದ್ದೂ ಆತನ ನಿವೃತ್ತಿ ದಿನದಂದೇ ಎನ್ನುವುದು ಒಂದು ಐರನಿ. ಈ ಸಮಾರಂಭದಂತೆಯೇ ಸಂಸ್ಥೆಯಲ್ಲಿ ಜರುಗುವ ಹಲವಾರು ಸಮಾರಂಭಗಳ ಸಂದರ್ಭದಲ್ಲಿ ಸಭಾಲಂಕಾರಕ್ಕಾಗಿ ಈತ ಹೂಗಿಡಗಳನ್ನು ತಂದು ಒಪ್ಪವಿಡುತ್ತಿದ್ದುದನ್ನು ನೋಡಿದ್ದೆ. ಕೆಲವೊಮ್ಮೆ ಇಂತಹ ಗಿಡವೇ ಬೇಕು ಎಂದು ಆದೇಶ ನೀಡಿದ್ದೂ ಉಂಟು. ಆದರೆ ಆತನ ಹೆಸರು ತಿಳಿದುಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ನಿವೃತ್ತಿಯ ದಿನದಂದು ಆತ ಹೆಚ್ಚು ಮಾತನಾಡಲಿಲ್ಲ. ಹೇಳಿದ್ದೇ ಎರಡು ವಾಕ್ಯ. "ನಾನು ಈ ಸಂಸ್ಥೆಗೆ ಆಭಾರಿ. ಇಂದು ನನ್ನನ್ನು ಮನೆಗೆ ಕಳಿಸಲು ವಾಹನದ ವ್ಯವಸ್ಥೆಯನ್ನೂ ಮಾಡಿರುವವರಿಗೆ ಧನ್ಯವಾದಗಳು.”
ಸರ್ಕಾರಿ ವಾಹನವನ್ನು ಯಾವ್ಯಾವುದೋ ಕೆಲಸಗಳಿಗೆ ಬಳಸಿಕೊಳ್ಳುವವರಿಗೆ ಈ ವಾಕ್ಯದ ಅರ್ಥವಾಗಿರಲಿಕ್ಕಿಲ್ಲ. ಸುಮಾರು ೩೭ ವರುಷ ಸಂಸ್ಥೆಯ ಆವರಣ ಹಸಿರಾಗಿರಲು ಶ್ರಮಿಸಿದ ವ್ಯಕ್ತಿ ಸಂಸ್ಥೆಗೆ ಸಂಬಂಧಿಸಿದ ವಾಹನದಲ್ಲಿ ಸಂಚರಿಸಿದ್ದು ಅದೇ ಪ್ರಥಮ. ಗುರುಮಲ್ಲಯ್ಯನ ಮಾತು ನೇರವಾಗಿ ಎದೆ ತಟ್ಟಿತು. ಸಾವಿನ ಅನಂತರವಷ್ಟೆ ನಾವು ಶವವಾಹನ ಏರುತ್ಥೇವೆ ಅಲ್ಲವೆ? ಪ್ರಥಮ ಹಾಗೂ ಕೊನೆಯ ಬಾರಿಗೆ! (ಎಲ್ಲ ನಿವೃತ್ತರ ಬದುಕೂ ನಿವೃತ್ತಿಯ ಜೊತೆಗೇ ಕೊನೆಗಾಣುವುದಿಲ್ಲ ಎನ್ನುವ ಅರಿವು ಇದೆ. ಆದರೆ ಇಂತಹವರ ಸಂಖ್ಯೆ ಎಷ್ಟು?)
ಇಂದಿನ ಪಿಂಕ್ ಸ್ಲಿಪ್ ಪ್ರಪಂಚದಲ್ಲಿ ಒಂದೇ ಸಂಸ್ಥೆಯಲ್ಲಿ ಇಷ್ಟು ದೀರ್ಘಾವಧಿಯ ಸೇವೆ ಮಾಡುವುದು inefficiency ಎಂದು ಅನ್ನಿಸಬಹುದು. ಆದರೆ ಅನ್ನ ಕೊಟ್ಟ ಸಂಸ್ಥೆ ಎನ್ನುವ ಅವಿರ್ಭಾವ ಇಷ್ಟು ದೀರ್ಘ ಸೇವೆಯ ಅನಂತರವಷ್ಟೆ ಸಾಧ್ಯ. ಅದರಲ್ಲೂ ಗುರುಮಲ್ಲಯ್ಯನಂತಹವರಿಗೆ. ಬಡ್ತಿ, ಅಧಿಕಾರದ ಬೆನ್ನು ಹತ್ತಿದವರಿಗೆ ಬಹುಶಃ ಹೀಗನ್ನಿಸಲಿಕ್ಕಿಲ್ಲ!
ಕೆಲವರಿಗಂತೂ ನಿವೃತ್ತಿಯ ದಿನವೇ ಅವರ ಬದುಕಿನ ಕೊನೆಯ ದಿನ ಎಂದು ಅನ್ನಿಸುವುದೂ ಸಹಜ. ವೃತ್ತಿಜೀವನ ನಮ್ಮನ್ನು ಅಷ್ಟು ತಾಕುತ್ತದೆ. ನನಗೆ ತಿಳಿದವರೊಬ್ಬರು ತಮ್ಮ ಹಲವಾರು ದೈಹಿಕ ವಿಕಲಾಂಗತೆಯ ನಡುವೆಯೂ ತೃಪ್ತಿಯಿಂದ ಕಛೇರಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ನಿವೃತ್ತಿಯಾದ ಒಂದೇ ತಿಂಗಳು, ಕಾಲ ಅವರನ್ನು ಕರೆದೊಯ್ದಿತು.

ಪ್ರಜಾವಾಣಿ v/s ವಿಜಯಕರ್ನಾಟಕ
ವಿನಯ ಆರ್ ತಮ್ಮ ಬ್ಲಾಗ್ ಒಂದರಲ್ಲಿ ಪ್ರಜಾವಾಣಿಗಿಂತಲೂ ವಿಜಯಕರ್ನಾಟಕ ಏಕೆ ಜನಪ್ರಿಯ ಎಂದು ಪ್ರಶ್ನಿಸಿದ್ದಾರೆ? ಅದಕ್ಕೆ ಅವರ ಬ್ಲಾಗ್‌ನಲ್ಲಿ ನಾನು ಪ್ರತಿಕ್ರಯಿಸಿದ್ದು:
ಬಹುಶಃ ಇದೇ ಪ್ರಶ್ನೆ ಪ್ರಜಾವಾಣಿಯ ಮಾರಾಟ ನಿರ್ವಾಹಕರಿಗೂ ಹಗಲೂ, ರಾತ್ರಿ ಕಾಡುತ್ತಿರಬಹುದು. ಉತ್ತರ ಸರಳವಾಗಿಲ್ಲ. ಏಕೆಂದರೆ, ಪತ್ರಿಕೆ, ಪ್ರಕಾಶನ, ಪತ್ರಿಕೋದ್ಯಮ, ಮುದ್ರಣ ತಂತ್ರಜ್ಞಾನ ಎಲ್ಲದರಲ್ಲೂ ಅಭೂತಪೂರ್ವ ಪರಿವರ್ತನೆಗಳು ಬಂದಿವೆ. ಉದಾಹರಣೆಗೆ, ವಿಜಯ ಕರ್ನಾಟಕ ಎಲ್ಲೆಡೆ ನೆಲೆಯಾಗಲು ಕಾರಣ ಅದರ ಪ್ರಾದೇಶಿಕ ಸಂಚಿಕೆಗಳು. ಮೈಸೂರಿನ ಜನತೆಗೆ ಮೈಸೂರಿನ ಸುದ್ದಿ. ಮಂಗಳೂರಿನವರಿಗೆ ಮಂಗಳೂರಿನ ಸುದ್ದಿ.
ಪತ್ರಿಕೋದ್ಯಮದಲ್ಲಿ ವಿಜಯ ಕರ್ನಾಟಕ ತಂದ ಮತ್ತೊಂದು ಬದಲಾವಣೆಯೂ ಇದೆ. ಅದುವರೆವಿಗೂ ಪ್ರತಿಯೊಂದು ಪತ್ರಿಕೆಗೂ ಅದರದ್ದೇ ಆದ ಕ್ಷೇತ್ರವಿತ್ತು. ಉದಾಹರಣೆಗೆ, ಉದಯವಾಣಿ ಕರಾವಳಿಯ ಜನಪ್ರಿಯ ಪತ್ರಿಕೆ ಆಗಿತ್ತು. ಬೆಂಗಳೂರು, ಮುಂಬಯಿಯ ಕರಾವಳಿ ಕನ್ನಡಿಗರು ಆ ಊರುಗಳಲ್ಲೂ ಅವುಗಳ ಗ್ರಾಹಕರಾಗಿರುತ್ತಿದ್ದರು. ಪ್ರಜಾವಾಣಿಗೆ ಉತ್ತರ ಕರ್ನಾಟಕದಲ್ಲಿ ಮಾರುಕಟ್ಟೆ ಇರಲಿಲ್ಲ. ಅಲ್ಲೇನಿದ್ದರೂ ಸಂಯುಕ್ತ ಕರ್ನಾಟಕದ ರಾಜ್ಯವಿತ್ತು. ಈಗ ಕಾಲ ಬದಲಾಗಿದೆ. ಜಾಗತೀಕರಣದ ಹಾಗೆ ಕರ್ನಾಟಕೀಕರಣವೂ ಆಗುತ್ತಿದೆ. ಈ ಪತ್ರಿಕೆಗಳ ಭಾಷೆಯಲ್ಲಿಯೂ ಬದಲಾವಣೆ ಆಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಿದ ಕಾರಣ ವಿಜಯ ಕರ್ನಾಟಕ ಹೆಚ್ಚು ಸುದ್ದಿ ಮಾಡಿದೆ ಎಂದು ಹೇಳಬಹುದು. ಎಷ್ಟಿದ್ದರೂ, ಪಕ್ಕದ ಮನೆಯ ಸುದ್ದಿ ಕೇಳುವುದರಲ್ಲಿ ಇರುವಷ್ಟು ಆಸಕ್ತಿ ಯಾವುದೋ ದೂರದ ಊರಿನ ಸುದ್ದಿಯಲ್ಲಿ ಇರುವುದಿಲ್ಲ. ಹೀಗೆ ಸುದ್ದಿಯ ಕ್ಷುದ್ರೀಕರಣ (ಅತಿ ಕ್ಷುದ್ರವಾದ ವಿಷಯವನ್ನೂ ದೊಡ್ಡ ಸುದ್ದಿಯನ್ನಾಗಿ ಪ್ರಚಾರ ಮಾಡುವ ಪ್ರವೃತ್ತಿ) ದಿಂದ ವಿಜಯಕರ್ನಾಟಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಂಡಿದೆ ಎನ್ನಬಹುದು.
ಟೈಮ್ಸ್ ಆಫ್ ಇಂಡಿಯಾದವರ ನಿರ್ವಹಣೆಗೆ ಒಳಪಟ್ಟ ದಿ ವಿಜಯ ಟೈಂಸ್‌ನ ಮುಖಪುಟದಲ್ಲಿನ ಬದಲಾವಣೆಗಳನ್ನು ಗಮನಿಸಿದರೆ ನಿಮಗೆ ನನ್ನ ಮಾತು ಅರ್ಥವಾದೀತು. ಒಟ್ಟಾರೆ ಈ ದಿನಗಳಲ್ಲಿ ಪತ್ರಿಕೋದ್ಯಮದ ಧ್ಯೇಯ ಓದುಗನಿಗೆ ಬೇಕಾದ್ದನ್ನು ನೀಡು ಎಂದಿದೆಯೇ ಹೊರತು “ತಿಳಿಸು (inform), ಅರಿವು ನೀಡು (educate) ಮತ್ತು ಸುಧಾರಿಸು (reform)” ಎನ್ನುವುದಲ್ಲ!!
Subscribe to:
Posts (Atom)