ಬಹುಶಃ ಇದೇ ಪ್ರಶ್ನೆ ಪ್ರಜಾವಾಣಿಯ ಮಾರಾಟ ನಿರ್ವಾಹಕರಿಗೂ ಹಗಲೂ, ರಾತ್ರಿ ಕಾಡುತ್ತಿರಬಹುದು. ಉತ್ತರ ಸರಳವಾಗಿಲ್ಲ. ಏಕೆಂದರೆ, ಪತ್ರಿಕೆ, ಪ್ರಕಾಶನ, ಪತ್ರಿಕೋದ್ಯಮ, ಮುದ್ರಣ ತಂತ್ರಜ್ಞಾನ ಎಲ್ಲದರಲ್ಲೂ ಅಭೂತಪೂರ್ವ ಪರಿವರ್ತನೆಗಳು ಬಂದಿವೆ. ಉದಾಹರಣೆಗೆ, ವಿಜಯ ಕರ್ನಾಟಕ ಎಲ್ಲೆಡೆ ನೆಲೆಯಾಗಲು ಕಾರಣ ಅದರ ಪ್ರಾದೇಶಿಕ ಸಂಚಿಕೆಗಳು. ಮೈಸೂರಿನ ಜನತೆಗೆ ಮೈಸೂರಿನ ಸುದ್ದಿ. ಮಂಗಳೂರಿನವರಿಗೆ ಮಂಗಳೂರಿನ ಸುದ್ದಿ.
ಪತ್ರಿಕೋದ್ಯಮದಲ್ಲಿ ವಿಜಯ ಕರ್ನಾಟಕ ತಂದ ಮತ್ತೊಂದು ಬದಲಾವಣೆಯೂ ಇದೆ. ಅದುವರೆವಿಗೂ ಪ್ರತಿಯೊಂದು ಪತ್ರಿಕೆಗೂ ಅದರದ್ದೇ ಆದ ಕ್ಷೇತ್ರವಿತ್ತು. ಉದಾಹರಣೆಗೆ, ಉದಯವಾಣಿ ಕರಾವಳಿಯ ಜನಪ್ರಿಯ ಪತ್ರಿಕೆ ಆಗಿತ್ತು. ಬೆಂಗಳೂರು, ಮುಂಬಯಿಯ ಕರಾವಳಿ ಕನ್ನಡಿಗರು ಆ ಊರುಗಳಲ್ಲೂ ಅವುಗಳ ಗ್ರಾಹಕರಾಗಿರುತ್ತಿದ್ದರು. ಪ್ರಜಾವಾಣಿಗೆ ಉತ್ತರ ಕರ್ನಾಟಕದಲ್ಲಿ ಮಾರುಕಟ್ಟೆ ಇರಲಿಲ್ಲ. ಅಲ್ಲೇನಿದ್ದರೂ ಸಂಯುಕ್ತ ಕರ್ನಾಟಕದ ರಾಜ್ಯವಿತ್ತು. ಈಗ ಕಾಲ ಬದಲಾಗಿದೆ. ಜಾಗತೀಕರಣದ ಹಾಗೆ ಕರ್ನಾಟಕೀಕರಣವೂ ಆಗುತ್ತಿದೆ. ಈ ಪತ್ರಿಕೆಗಳ ಭಾಷೆಯಲ್ಲಿಯೂ ಬದಲಾವಣೆ ಆಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಿದ ಕಾರಣ ವಿಜಯ ಕರ್ನಾಟಕ ಹೆಚ್ಚು ಸುದ್ದಿ ಮಾಡಿದೆ ಎಂದು ಹೇಳಬಹುದು. ಎಷ್ಟಿದ್ದರೂ, ಪಕ್ಕದ ಮನೆಯ ಸುದ್ದಿ ಕೇಳುವುದರಲ್ಲಿ ಇರುವಷ್ಟು ಆಸಕ್ತಿ ಯಾವುದೋ ದೂರದ ಊರಿನ ಸುದ್ದಿಯಲ್ಲಿ ಇರುವುದಿಲ್ಲ. ಹೀಗೆ ಸುದ್ದಿಯ ಕ್ಷುದ್ರೀಕರಣ (ಅತಿ ಕ್ಷುದ್ರವಾದ ವಿಷಯವನ್ನೂ ದೊಡ್ಡ ಸುದ್ದಿಯನ್ನಾಗಿ ಪ್ರಚಾರ ಮಾಡುವ ಪ್ರವೃತ್ತಿ) ದಿಂದ ವಿಜಯಕರ್ನಾಟಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಂಡಿದೆ ಎನ್ನಬಹುದು.
ಟೈಮ್ಸ್ ಆಫ್ ಇಂಡಿಯಾದವರ ನಿರ್ವಹಣೆಗೆ ಒಳಪಟ್ಟ ದಿ ವಿಜಯ ಟೈಂಸ್‌ನ ಮುಖಪುಟದಲ್ಲಿನ ಬದಲಾವಣೆಗಳನ್ನು ಗಮನಿಸಿದರೆ ನಿಮಗೆ ನನ್ನ ಮಾತು ಅರ್ಥವಾದೀತು. ಒಟ್ಟಾರೆ ಈ ದಿನಗಳಲ್ಲಿ ಪತ್ರಿಕೋದ್ಯಮದ ಧ್ಯೇಯ ಓದುಗನಿಗೆ ಬೇಕಾದ್ದನ್ನು ನೀಡು ಎಂದಿದೆಯೇ ಹೊರತು “ತಿಳಿಸು (inform), ಅರಿವು ನೀಡು (educate) ಮತ್ತು ಸುಧಾರಿಸು (reform)” ಎನ್ನುವುದಲ್ಲ!!
Tuesday, March 20, 2007
ಪ್ರಜಾವಾಣಿ v/s ವಿಜಯಕರ್ನಾಟಕ
ವಿನಯ ಆರ್ ತಮ್ಮ ಬ್ಲಾಗ್ ಒಂದರಲ್ಲಿ ಪ್ರಜಾವಾಣಿಗಿಂತಲೂ ವಿಜಯಕರ್ನಾಟಕ ಏಕೆ ಜನಪ್ರಿಯ ಎಂದು ಪ್ರಶ್ನಿಸಿದ್ದಾರೆ? ಅದಕ್ಕೆ ಅವರ ಬ್ಲಾಗ್‌ನಲ್ಲಿ ನಾನು ಪ್ರತಿಕ್ರಯಿಸಿದ್ದು:
Subscribe to:
Post Comments (Atom)
No comments:
Post a Comment