Wednesday, November 18, 2009

ಸಂಗೀತ

ಮೊನ್ನೆ ಮಗ ಇದ್ದಕ್ಕಿದ್ದ ಹಾಗೆ ಪಿಟೀಲು ಕಲಿಯಬೇಕು ಎಂದಾಗ ಆಶ್ಷರ್ಯವಾಯಿತು. ಏಕೆಂದರೆ ಎಲ್ಲ ಅಪ್ಪ-ಅಮ್ಮಂದಿರ ಹಾಗೇ ನನ್ನ ಮಗನೂ ಸರ್ವಕಲಾಸಂಪನ್ನನಾಗಬೇಕು ಎಂದು ಸಂಗೀತ ಪಾಠಕ್ಕೆ ಕಳಿಸುತ್ತಿದ್ದೆವು. ಒಂದು ವರ್ಷ ಹೋದವ ಮನೆಯಲ್ಲಿಯೂ ಎಂದೂ ’ಸಾಪಾಸಾ’ ಅಭ್ಯಾಸ ಮಾಡಲೇ ಇಲ್ಲ. ಆಮೇಲೆ ಎಂದೋ, ಏನೋ ಕಾರಣದಿಂದ ಪಾಠ ನಿಲ್ಲಿಸಿದವ, ಮತ್ತೆ ಅದರ ನೆನಪನ್ನೂ ಮಾಡಿಕೊಂಡಿರಲಿಲ್ಲ. ಹೀಗಾಗಿ ಪಿಟೀಲು ತರಗತಿಗೆ ಸೇರುತ್ತೇನೆ ಎಂದಾಗ ಅದು ಕ್ಷಣಿಕ ಮೋಹ ಅಂತಲೇ ಭಾವಿಸಿದೆ. ಆದರೆ ಅವ ಮತ್ತೆ ಮತ್ತೆ ಅದೇ ರಾಗ ಹಾಡಿದಾಗ ಪಾಠಕ್ಕೆ ಸೇರಿಸದೆ ವಿಧಿ ಇರಲಿಲ್ಲ. ಆದರೂ ನನ್ನ ಮಗನಲ್ಲವೇ! ನನ್ನ ಹಾಗೆಯೇ ಶ್ರುತಿಗಿವುಡ. ಕೆಲವೇ ದಿನಗಳಲ್ಲಿ ಮತ್ತೆ ಪಿಟೀಲನ್ನೂ ನಿಲ್ಲಿಸುತ್ತಾನೆ ಎಂದುಕೊಂಡೆ.

ಸಂಗೀತ ಅಂದರೆ ನನಗೆ ಅಷ್ಟಕ್ಕಷ್ಟೆ ಎಂದು ನೀವು ಭಾವಿಸಿದರೆ ಆಶ್ಚರ್ಯವೇನಿಲ್ಲ! ಶ್ರುತಿ, ಸ್ವರ, ನಾದ, ತಾಳ ಎಲ್ಲವೂ ಸಮಾನಾರ್ಥಕ ಪದಗಳು ಎಂಬುದು ನನ್ನ ಅನಿಸಿಕೆ. ಏಕತಾನ ಎನ್ನುವುದು ಬಾಟನಿ ಮೇಷ್ಟರ ಪಾಠವನ್ನು ವಿವರಿಸುವ ಪದವಾಗಿತ್ತು. ಪಿಟೀಲು, ಬೇಡದ ವಿಷಯವನ್ನು ಉದ್ದುದ್ದ ಎಳೆಯುವ ಗೆಳೆಯರ ಮಾತಿಗೆ ಇನ್ನೊಂದು ವಿವರಣೆ ಆಗಿತ್ತು. ರಾಗ ಅಳುವಿನ ಅನ್ವರ್ಥ ಎನಿಸಿತ್ತು. ಇನ್ನು ಸಂಗೀತ ಪಾಠ ಹೇಗೆ ಕಲಿತೇನು.

ಹಾಗಂತ ನಾನು ಸಂಗೀತವನ್ನು ಕೇಳಲೇ ಇಲ್ಲ ಅಂತಲ್ಲ. ಅಮ್ಮ ಸಾಕಷ್ಟು ಸಂಗೀತ ಕಲಿತಿದ್ದಳು ಎಂದು ತಿಳಿದಿತ್ತು. ಹೆತ್ತ ಏಳು ಮಕ್ಕಳಿಗೂ ಜೋಗುಳ ಹಾಡಿಯೇ ಕಲಿತಳೋ, ಪಾಠದಿಂದಲೇ ಕಲಿತಳೋ ಗೊತ್ತಿಲ್ಲ. ಆದರೆ ಸುಶ್ರಾವ್ಯವಾಗಿ ಹಾಡುತ್ತಿದ್ದುದಂತೂ ನೆನಪಿದೆ. ಅಪ್ಪನಿಗೂ ಸಂಗೀತದ ಮೋಹವಿತ್ತು. ವಿದ್ವಾನ್‌ ಪಿಟೀಲ್‌ ಚೌಡಯ್ಯನವರ ಡ್ರೈವರ್‌ ಆಗಿದ್ದರಂತೆ! ನನಗೂ ಸಂಗೀತ ಪಾಠ ಕಲಿಸಬೇಕೆಂದು ಅವರು ಎಷ್ಟೋ ಪ್ರಯತ್ನಿಸಿದ್ದು ನೆನಪಿದೆ. ಆದರೆ ಹೊಟ್ಟೆ ತಾಳ ಹಾಕುಾಗ ಗಂಟಲಲ್ಲಿ ಇನ್ಯಾವ ಸ್ವರವೂ ಹುಟ್ಟುವುದಿಲ್ಲವೇನೋ! ಅಂದಿನ ಪರಿಸ್ಥಿತಿಯಲ್ಲಿ ಶಾಲೆಗೆ ಹೋಗುವುದೇ ಕಷ್ಟವಾಗಿದ್ದಾಗ, ಸಂಗೀತ ಪಾಠಕ್ಕೂ ಫೀಸು ಕೊಡುವುದು ಸಾಧ್ಯವೇ ಇರಲಿಲ್ಲ.

ಅತ್ತೆಯ ಮಕ್ಕಳು ಪ್ರಸಿದ್ಧ ಹಾಡುಗಾರ್ತಿಯರು. ಮಗ ವಿಶ್ವಪ್ರಸಿದ್ಧ ಮೃದಂಗವಾದಕ. ಅವರ ಬಳಿಯಾದರೂ ಕಳಿಸಿ ಮೃದಂಗ ಕಲಿಸಬೇಕೆಂಬ ಇಚ್ಛೆ ಅಪ್ಪನಿಗೆ ಇತ್ತು. ಆದರೆ ಆ ಉತ್ಸಾಹ ನನಗೆ ಇರಲಿಲ್ಲ. ಬಹುಶಃ ಸಂಗೀತ ಎನ್ನುವುದಕ್ಕೆ ಬುದ್ಧಿ ಬೇಕಿಲ್ಲ ಅನ್ನುವ ಉಪೇಕ್ಷೆಯೋ, ಅಥವಾ ಇಂದಿನ ಹಾಗೆ ರಿಯಾಲಿಟಿ ಶೋಗಳ ಆಕರ್ಷಣೆ ಇಲ್ಲದಿದ್ದುದರಿಂದಲೋ ಒಟ್ಟಾರೆ ಸಂಗೀತ ಎಂದರೆ ನನಗೆ ಅಷ್ಟಕ್ಕಷ್ಟೆ ಆಗಿತ್ತು. ಕಲಿಯುವ ಉತ್ಸಾಹ ಇರಲಿಲ್ಲ. ಕೇಳುವುದು ಕೇವಲ ರಾಮನವಮಿಯ ಸಂಗೀತೋತ್ಸವಕ್ಕಷ್ಟೆ ಸೀಮಿತವಾಗಿತ್ತು. ಮಂಗಳಾರತಿ ಮುಗಿದ ಅನಂತರ ಕೊಡುತ್ತಿದ್ದ ಹೆಸರುಬೇಳೆ ಉಸಲಿಯ ಆಸೆಗಾಗಿ ಅಪ್ಪನ ಜೊತೆ ಸಂಗೀತೋತ್ಸವಕ್ಕೆ ಹೋಗಿ ಕೇಳುತ್ತಿದ್ದೆ. ಆಲಿಸುತ್ತಿರಲಿಲ್ಲ.

ಬಾತ್‌ರೂಮ್‌ನಲ್ಲೂ ಹಾಡು ಹಾಡಿದವನಲ್ಲ. ಪ್ರೀತಿಸಿದವಳಿಗೆ ಪ್ರೇಮಗೀತೆ ಹಾಡುವುದರ ಬದಲಿಗೆ, ಅಶ್ವತ್ಥ, ಅನಂತಸ್ವಾಮಿಯವರ ಗೀತೆಗಳನ್ನು ಕೇಳಿಸಿ ಮನವೊಲಿಸಿದ್ದೆ! ಇಂತಹ ಶ್ರುತಿಗಿವುಡನ ಮಗ ಸಂಗೀತ ಕಲಿಯುವುದುಂಟೇ?

ಆದರೂ ಮಗ ಹಠ ಹಿಡಿದಾಗ, ಮೇಷ್ಟರು ಹೇಳಿದ ಮೇಲೆ ಪಿಟೀಲು ಕೊಡಿಸಲು ಅಂಗಡಿಗೆ ಹೋದೆ. ಅಷ್ಟೆ. ಸಂಗೀತ ಎಂದರೆ ಏನೆಂಬುದರ ಪರಿಚಯ ಅಲ್ಲಿ ನನಗಾಯಿತು. ಕಂಜಿರಾದಿಂದ ಮೃದಂಗದವರೆಗೆ, ಪಿಟೀಲಿನಿಂದ ಇಲೆಕ್ಟ್ರಾನಿಕ್‌ ಗಿಟಾರ್‌ವರೆಗೆ, ಹಾರ್ಮೋನಿಯಂನಿಂದ ಆರ್ಕೆಸ್ಟ್ರಾದ ಡ್ರಂ, ಸ್ಕೂಲ್‌ ಬ್ಯಾಂಡ್‌ನ ಬ್ಯೂಗಲ್‌, ತರಹೇವಾರಿ ಇಲೆಕ್ಟ್ರಾನಿಕ್‌ ರಾಗಮಾಲ, ತಬಲಾ, ಇಲೆಕ್ಟ್ರಾನಿಕ್‌ ಕೀಬೋರ್ಡ್‌, ಪಿಯಾನೋ... ಒಂದೇ ಎರಡೇ... ಕಣ್ಣೆದುರಿಗೆ ಹೊಸ ಪ್ರಪಂಚವೇ ತೆರೆದುಕೊಂಡಿತು. ಮಗನಂತೂ ಪಿಟೀಲು ಮರೆತು ಅಲ್ಲಿದ್ದ ಎಲ್ಲ ಡ್ರಮ್‌, ತಂತಿವಾದ್ಯಗಳ ಮೇಲೂ ಕೈಯಾಡಿಸುತ್ತಿದ್ದ. ಬರೇ ವಿಜ್ಞಾನವಷ್ಟೆ ಪ್ರಪಂಚವಾಗಿದ್ದ ನನಗೆ ಸಂಗೀತ ಲೋಕದ ಪರಿಚಯ ಆಯಿತು.

ಐವತ್ತರ ಹೊಸ್ತಿಲಲ್ಲಿರುವಾಗ ಸಂಗೀತ ಕಲಿಯೋಣ ಎನ್ನುವ ಉತ್ಸಾಹ ಬಂದಿದೆ ಎಂದರೆ ನೀವು ನಂಬಲೇಬೇಕು. ಆದರೆ ಒಂದು ಪುಟ ಬರೆಯುವುದರೊಳಗೆ ಹಿಡಿದುಕೊಳ್ಳುವ ಟೆನಿಸ್‌ ಎಲ್ಬೋ, ಹತ್ತು ನಿಮಿಷ ಭಾಷಣ ಮಾಡುವುದರೊಳಗೆ ಒಣಗಿ ಹಿಡಿದುಕೊಳ್ಳುವ ಗಂಟಲು, ಹೆಂಡತಿ ಹತ್ತು ಬಾರಿ ಕರೆದರೂ ಗಮನಗೊಡದ ಕಿವಿ... ಇವು ನನ್ನ ಈ ಉತ್ಸಾಹಕ್ಕೆ ’ಸಾಥ್‌’ ಕೊಡುತ್ತವೆಯೇ? ’ಸಾಧನೆ’ ವಯಸ್ಸನ್ನೂ ಮೀರಬಹುದೇ? ಪ್ರಯತ್ನಿಸಿ ನೋಡಬೇಕಷ್ಟೆ!

ಛೀ! ಸೋಮಾರಿ!!!

ಈ ಬ್ಲಾಗ್‌ನಲ್ಲಿ ಹೊಸ ಅಕ್ಷರ ಮೂಡಿ ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಇದಕ್ಕೆ ಸೋಮಾರಿತನವೇ ಕಾರಣ ಅನ್ನೋಣ. ಸೋಮಾರಿ ತನಕ್ಕೆ ಸಮಜಾಯಿಷಿಯೂ ಇಲ್ಲ. ಕ್ಷಮೆಯೂ ಇಲ್ಲ. ಅದಕ್ಕೇ ಈ ಎರಡು ಸಾಲಿನ ಬ್ಲಾಗ್‌!