Friday, March 23, 2007

Witness Box ಸಾಕ್ಷಿಕಟ್ಟೆ

ಭಾರತದ ಎಲ್ಲ ನ್ಯಾಯಾಲಯಗಳ, ನ್ಯಾಯಾಧೀಶರುಗಳ ಕ್ಷಮೆ ಕೋರಿ!!

ಮುಕ್ತಾ ಧಾರಾವಾಹಿ ನೋಡಿದವರಿಗೆಲ್ಲ, ನ್ಯಾಯಾಲಯದಲ್ಲಿನ ನಡವಳಿಕೆಗಳು ಬಲು ರೋಚಕ ಎನ್ನಿಸಿರಬಹುದು. ಮೊತ್ತ ಮೊದಲು ನ್ಯಾಯಾಲಯದಿಂದ ವಾರಂಟ್‌ ಬಂದಾಗ ನನಗೂ ಹಾಗೇ ಅನ್ನಿಸಿತ್ತು. ಟೀವಿ ಹಾಗೂ ವಾಸ್ತವಗಳ ನಡುವೆ ಬಹಳ ಅಂತರ (ಟೀವಿ ಸುದ್ದಿಯನ್ನೂ ಸೇರಿಸಿ ಹೇಳುತ್ತಿದ್ದೇನೆ) ಇರುತ್ತದೆ ಎನ್ನುವ ಅರಿವಿದ್ದರೂ, ನನಗೆ ತುಸು ಕಳವಳ ಹಾಗೂ ಭಯ ಎನ್ನಿಸಿತ್ತು. ಮುಕ್ತಾದಲ್ಲಿ ಟಿಎನ್‌ಎಸ್‌ ಮಾಡಿದ ಹಾಗೆ ನನ್ನನ್ನೂ ಅಡ್ಡಸವಾಲಿನಲ್ಲಿ ಎದುರು ಪಕ್ಷದ ಲಾಯರು ತುಂಡರಿಸಿಬಿಡುವರೇನೋ ಎನ್ನುವ ಅನಿಸಿಕೆ ಇತ್ತು. ಕೆಲವೊಮ್ಮೆ ಚ್ಯೂಯಿಂಗ್‌ ಗಮ್‌ ಎನ್ನಿಸಿದ್ದರೂ, ಮುಕ್ತಾದ ಎಪಿಸೋಡುಗಳು, ಅದರಲ್ಲೂ ಸಾಕ್ಷಿಯ ವಿಚಾರಣೆ, ಅಡ್ಡಸವಾಲುಗಳು ೨೦ ನಿಮಿಷಗಳಲ್ಲೇ ಮುಗಿದು ಬಿಡುತ್ತಿದ್ದುವಷ್ಟೆ. ಇದನ್ನೆಲ್ಲ ನೋಡಿದ್ದವನಿಗೆ ಮೊದಲ ವಾರಂಟ್‌ ಬಂದಾಗ, ನ್ಯಾಯಾಲಯದಿಂದ ಒಂದು ಗಂಟೆಯೊಳಗೆ ಹಿಂದುರುಗಬಹುದು ಎನ್ನಿಸದ್ದರಲ್ಲಿ ತಪ್ಪೇನಿಲ್ಲ. ಅದರಲ್ಲೂ, ಮೊದಲ ಬಾರಿಗೆ ನ್ಯಾಯಾಲಯದ ಕಟ್ಟೆ ಹತ್ತುವವನಿದ್ದೆ.

ನ್ಯಾಯಾಲಯದ ಕಟ್ಟೆ ಹತ್ತಲು ಏನು ಅಪರಾಧ ಮಾಡಿದ್ದೆ ಎಂದಿರಾ? ನಾನು ನ್ಯಾಯಾಲಯಕ್ಕೆ ಹೋಗಿದ್ದು ಸಾಕ್ಷಿ ಹೇಳಲು. ನಾಲ್ಕು ವರುಷಗಳ ಹಿಂದೆ ಒಂದು ಮೋಟರುಬೈಕು ಅಪಘಾತ ನಡೆದಾಗ ಮೊದಲ ಫಿರ್ಯಾದು ನೀಡಿದ್ದೆ. ಇನ್ನೆರಡು ತಿಂಗಳುಗಳಲ್ಲಿ ವೈದ್ಯನಾಗಿ ನೂರಾರು ಜನರ ಜೀವ ಉಳಿಸುವವನಾಗುತ್ತಿದ್ದ ಅಂತಿಮ ವೈದ್ಯಕೀಯ ವಿದ್ಯಾರ್ಥಿ, ಕುಡುಕ ಚಾಲಕನೊಬ್ಬನ ಬೇಜವಾಬುದಾರಿ ಚಾಲನೆಯಿಂದ ಸ್ವತಃ ಶವವಾಗಿದ್ದ. ಅದರ ಬಗ್ಗೆ ಮೊದಲ ದೂರು ನಾನು ದಾಖಲಿಸಿದ್ದೆ. ಆ ಅಪಘಾತದ ಭೀಕರ ಸ್ವಪ್ನ ಮನಸ್ಸಿನಿಂದ ಮಾಸಿಯೇ ಹೋಗಿತ್ತು. ಆಗ ಬಂದಿತು ನ್ಯಾಯಾಲಯದ ಬುಲಾವು. ಇನ್ನೆರಡು ದಿನದಲ್ಲಿ ವಿಚಾರಣೆ ಇದೆ, ಬರತಕ್ಕದ್ದು. ಇದು ನಡೆದು ಒಂದೂವರೆ ವರುಷವಾಗಿದೆ. ಇನ್ನೂ ನನ್ನ ವಿಚಾರಣೆ ಮುಗಿದೇ ಇಲ್ಲ.

ಮೊದಲ ದಿನ ನ್ಯಾಯಾಲಯಕ್ಕೆ ಹೋಗಿದ್ದಾಗ ನನ್ನ ಜೊತೆಗೆ ನನಗೆ ನಾಗರೀಕ ಪ್ರಜ್ಞೆ ಮತ್ತು ಜವಾಬುದಾರಿಗಳ ಬಗ್ಗೆ ಯಾವಾಗಲೂ ತಿಳಿ ಹೇಳುವ ಗುರುಗಳಾದ ಡಾ. ಹೆಗ್ಡೆ ಯವರಿದ್ದರು. ಅವರೂ ಒಂದು ಸಾಕ್ಷಿ. ಇಬ್ಬರಿಗೂ ಇದು ಮೊದಲ ಅನುಭವ. ನ್ಯಾಯಾಲಯಕ್ಕೆ ಹೋದ ತಕ್ಷಣ ಮಾಡಿದ ಮೊದಲ ಕೆಲಸ, ನಮಗೆ ವಾರಂಟು ತಲುಪಿಸಿದ್ದ ಪೋಲೀಸು ಠಾಣೆಯ ಅಧಿಕಾರಿಯನ್ನು ಹುಡುಕುವುದು. ಎಲ್ಲೋ, ಯಾರ ಜೊತೆಗೋ ಚೌಕಾಶಿ ಮಾಡುತ್ತಿದ್ದ ಆತ ಸಿಕ್ಕಾಗ, "ಓ, ನೀವೇನೋ ಸಾಕ್ಷಿ" ಎಂದ. ಮುಕ್ತಾದಲ್ಲಿನ ಹಾಗೆ ಸರಕಾರಿ ವಕೀಲರು ಎಲ್ಲಿಯೂ ಕಾಣಲಿಲ್ಲ. ಇದುವರೆವಿಗೂ ನಾನು ಆತನನ್ನು ಭೇಟಿಯೇ ಆಗಿಲ್ಲ ಎನ್ನಬಹುದು.

ಅನಂತರ ನಡೆದದ್ದೇ ಸ್ವಾರಸ್ಯಕರ. ನೀವು ಇಲ್ಲಿ ನಿಲ್ಲಿ ಎನ್ನುವ ಆದೇಶದ ಮೇಲೆ ನ್ಯಾಯಾಲಯದ ಮುಂಬಾಗಿಲ ಬಳಿ ನಿಂತೆವು. ಸ್ವಲ್ಪ ಸಮಯ ಕಳೆದ ನಂತರ ನಾವು ಎಲ್ಲೋ ಜರುಗಿ ಹೋಗಿದ್ದೆವು. ಕಾರಣ, ನಮ್ಮಂತೆಯೇ ಸಾಕ್ಷಿ ಹೇಳುವವರ, ಅಪರಾಧಿಗಳ ಗುಂಪು ನಮ್ಮನ್ನು ದೂರಕ್ಕೆ ತಳ್ಳಿ ಬಿಟ್ಟಿತ್ತು. ನ್ಯಾಯಾಲಯಕ್ಕೆ ಬಂದು ಒಂದೂವರೆ ಗಂಟೆ ಆಗಿರಬಹುದು, ಬಾಗಿಲ ಬಳಿ ಇದ್ದ ಪ್ರತೀಹಾರಿ ಪ್ರತಿ ಬಾರಿ ಹೆಸರು ಕರೆದಾಗಲೂ ನನ್ನ ಹೆಸರೇ ಕರೆದಂತೆ ಕೇಳಿಸುತ್ತಿತ್ತು.

ನ್ಯಾಯಾಲಯದ ಪ್ರಾಂಗಣದಲ್ಲಿ ಇದ್ದವರೆಲ್ಲರ ಮುಖದಲ್ಲಿಯೂ ಸೂತಕದ ಕಳೆ. ಆತಂಕದ ಭಾವ. ಬಹುಶಃ ಕನ್ನಡಿಯಲ್ಲಿ ನೋಡಿಕೊಂಡಿದ್ದರೆ ನನ್ನ ಮುಖವೂ ಒಬ್ಬ ಅಪರಾಧಿಯಂತೆ ತೋರುತ್ತಿತ್ತೋ ಏನೋ? ಯಾರು ಅಪರಾಧಿ, ಯಾರು ಸಾಕ್ಷಿ ಹೇಳುವವರು ಎನ್ನುವುದೇ ತಿಳಿಯುತ್ತಿರಲಿಲ್ಲ. ಪೋಲೀಸರ ಕಸ್ಟಡಿಯಲ್ಲಿ ಇದ್ದ ಕೆಲವು ಕೋಳ ತೊಟ್ಟ ವ್ಯಕ್ತಿಗಳಷ್ಟೆ ತುಸು ಖುಷಿಯಾಗಿದ್ದಂತೆ ಅನಿಸಿತು. ನ್ಯಾಯಾಲಯದ ಒಳಗಿದ್ದ ವಕೀಲರುಗಳೂ, ಸಾಕ್ಷಿಗಳೂ, ಅಪರಾಧಿಗಳೂ ಒಂದೇ ರೀತಿ ತೋರುತ್ತಿದ್ದರು. ವಕೀಲರಿಗೆ ಅವರ ದಿರಿಸು ವಿಶಿಷ್ಟವಾಗಿತ್ತು ಅಷ್ಟೆ.

ಅಂತೂ ನನ್ನ ಹೆಸರು ಕರೆದಾಗ ಒಳಗೆ ಹೋದೆ. "ಅಲ್ಲಿ ಅಪರಾಧಿ ನಿಲ್ಲುವುದು, ಸಾಕ್ಷಿ ಇಲ್ಲಿ ಬನ್ನಿ" ಎಂದರು. ಅದು ನನಗೆ ಹೊಸತು. ಹೋದೆ. ಇನ್ನೇನು ಸಾಕ್ಷಿ ಹೇಳಿ ಮನೆಗೆ ಹೋಗಬಹುದು ಎಂದುಕೊಂಡಿದ್ದು ತಪ್ಪಾಯಿತು. ಮೊದಲ ಕರೆ ಹಾಜರಿ ಹಾಕಲು. ಪೋಲೀಸು ಪೇದೆ, ಸ್ವಲ್ಪ ಹೊರಗೆ ಇರಿ ಮತ್ತೆ ಕರೆಸುತ್ತಾರೆ ಎಂದ. ಮತ್ತೆ ಕಾರಿಡಾರಿನಲ್ಲಿನ ಗುಂಪಿನಲ್ಲಿ ಬೆವರು ವಾಸನೆ ಕುಡಿಯುತ್ತ ನಿಂತೆವು. ನಮ್ಮ ಸ್ಥಿತಿ ನೋಡಿ ಪಾಪ ಅನ್ನಿಸಿತೋ ಏನೋ. ಪೇದೆ ಮತ್ತೆ ಬಂದು 'ಒಳಗೆ ಬೆಂಚಿನ ಮೇಲೆ ಕುಳಿತುಕೊಳ್ಳಿ' ಎಂದ. ಒಳಗೆ ಹೋದೆವು. ಕುಳಿತ ಕೂಡಲೇ ಅಲ್ಲಿದ್ದ ವಕೀಲರೊಬ್ಬರು ಗದರಿದರು. "’ಕಾಲು ಕೆಳಗೆ ಬಿಡ್ರೀ!’ ಕಾಲ ಮೇಲೆ ಕಾಲು ಹಾಕಿ ಕೂರುವುದು ನ್ಯಾಯಲಯಕ್ಕೆ ಅಪಮಾನ ಮಾಡಿದಂತೆ," ಎಂದು ತಿಳುವಳಿಕೆ ನೀಡಿದರು. ನ್ಯಾಯಾಲಯದಲ್ಲಿ ನಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಿದರೆಂದು ಪೇಪರಿನಲ್ಲಿ ಒಮ್ಮೆ ಓದಿದ್ದು ನೆನಪಾಯಿತು. ಅದನ್ನು ಮರೆಯಲು ಸುತ್ತ ಕಣ್ಣಾಡಿಸಿದೆ. ಎಷ್ಟು ವ್ಯಾಜ್ಯಗಳಿಗೆ ಸಾಕ್ಷಿಯಾಗಿದ್ದುವೋ, ನ್ಯಾಯಾಲಯದ ಖುರ್ಚಿಗಳು ಎಲ್ಲವೂ ಓರೆಯಾಗಿದ್ದುವು. ನ್ಯಾಯಾಧೀಶರ ಆಸನದ ಬೆನ್ನಿನಲ್ಲಿ ಒಂದು ಮೂಲೆ ಕಿತ್ತು ಹೋಗಿತ್ತು. ಅಪರಾಧಿಗಳ ನಿಲ್ಲುವ ಕಟಕಟೆಯ ಮೇಲೆ ಎಷ್ಟೋ ವರುಷಗಳ ದೂಳು ನೆಲೆಯಾಗಿತ್ತು, ಭಾರತೀಯ ನ್ಯಾಯಾಲಯಗಳಲ್ಲಿ ಕೊನೆಗಾಣದೆ ಇರುವ ವ್ಯಾಜ್ಯಗಳ ಪ್ರತಿರೂಪದಂತೆ. ನಾನು ಕುಳಿತಿದ್ದ ಖುರ್ಚಿಯ ಒಂದು ಕಾಲು ಸವೆದು, ಓಲಾಡುತ್ತಿತ್ತು. ಎಲ್ಲಿ ನ್ಯಾಯಾಲಯಕ್ಕೆ ಅವಮರ್ಯಾದೆಯಾಗುತ್ತದೋ ಎಂದು ಸಾಹಸದಿಂದ ಖುರ್ಚಿಯ ಮೇಲೆ ಕೂರುವ ಕಸರತ್ತು ಮಾಡಿದೆ. ಊಟದ ವೇಳೆ ಆಗುತ್ತಿದ್ದಂತೆ ಹೊಟ್ಟೆ ಚುರುಕ್‌ ಎನ್ನತೊಡಗಿತು. ಆದರೆ ಹೊರಗೆ ನಡೆಯಬಹುದೋ ಇಲ್ಲವೋ ತಿಳಿಯಲಿಲ್ಲ.

ಅಷ್ಟರಲ್ಲಿ ಪೇದೆ ಬಂದು ಕೇಸಿನ ಫೈಲು ಕೈಗಿತ್ತ. ಇದರಲ್ಲಿ ನೀವು ಏನು ಹೇಳಬೇಕು ಎಂದು ಬರೆದಿದೆ. ಚೆನ್ನಾಗಿ ಓದಿಕೊಳ್ಳಿ ಎಂದ. ನಾನೇ ಬರೆದುಕೊಟ್ಟ ಫಿರ್ಯಾದು ಮರೆತೇ ಹೋಗಿತ್ತು. ಓದಿಕೊಂಡೆ. ಫಿರ್ಯಾದಿನಲ್ಲಿ ನಮೂದಿಸಿದ್ದ ಮೃತ ಹುಡುಗನನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ನನಗೆ ಅತ್ಯಂತ ಆಪ್ತ ಪರಿಚಿತ ಆತ. ಆದರೆ ಈಗ ಅವನ ಶವವಷ್ಟೆ ಎದುರು ಕಾಣುತ್ತಿತ್ತು. ಶವಪರೀಕ್ಷೆಯ ವಿವರಗಳಷ್ಟೆ ಎದುರು ಕಾಣುತ್ತಿದ್ದುವು. ಆತ ಓಡಿಸುತ್ತಿದ್ದ ಬೈಕಿನ ಸಂಖ್ಯೆಯನ್ನು ಉರು ಹೊಡೆದೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ಎಂದೂ, ಯಾವ ಪರೀಕ್ಷೆಗೂ ಉರು ಹೊಡೆದವನಲ್ಲ. ಇಂದು ಉರು ಹೊಡೆದೆ. ತಪ್ಪು ಹೇಳಬಾರದಲ್ಲವೆ? ಸಾಕ್ಷಿಯಲ್ಲವೇ? ತಪ್ಪು ಸಾಕ್ಷಿ ಹೇಳಬಾರದು. ಅದಕ್ಕೂ ಮಿಗಿಲಾಗಿ ಅಪರಾಧಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಾದುದು ನಾಗರೀಕ ಕರ್ತವ್ಯ. ಅದಕ್ಕೆ ಚ್ಯುತಿ ಬರಬಾರದು. ಹೀಗೆಲ್ಲ ಯೋಚಿಸಿ, ಉರು ಹೊಡೆದೆ. ಊಟದ ಸಮಯಕ್ಕೆ ಸರಿಯಾಗಿ ಬಂದ ಪೇದೆ,”ಈಗ ನಿಮ್ಮ ವಿಚಾರಣೆ ಆಗುವುದಿಲ್ಲ. ಬಹುಶಃ ಮೂರೂವರೆಗೆ ಆಗಬಹುದು. ಆಗ ಬನ್ನಿ" ಎಂದ.

ಮತ್ತೆ ಮಧ್ಯಾಹ್ನ ಉರಿಬಿಸಿಲಲ್ಲಿ ಬಂದೆವು. ಯಥಾ ಪ್ರಕಾರ ದೂಳು ಮುಸುಕಿದ ಬೆಂಚಿನ ಮೇಲೆ ಸಪ್ಪೆ ಮೋರೆ ಹಾಕಿಕೊಂಡು ಕುಳಿತದ್ದಾಯಿತು. ಕೈಯಲ್ಲಿ ಪತ್ರಿಕೆ ಇದ್ದರೂ, ಓದಬಹುದೋ, ಇಲ್ಲವೋ ಅನುಮಾನ. ಸುತ್ತ ನಡೆಯುತ್ತಿದ್ದ ವಿದ್ಯಮಾನಗಳೆಲ್ಲವನ್ನೂ ನೋಡುತ್ತ ಇದ್ದೆವು. ಮುಕ್ತ ದಂತೆ ಯಾವುದಾದರೂ ಸಾಕ್ಷಿಪರೀಕ್ಷೆ ನಡೆಯಬಹುದೇ ಎಂದು ಕಾತರ ಪಟ್ಟೆ. ಅಂದು ಇದ್ದ ಎಲ್ಲ ಕೇಸುಗಳೂ ಅಡ್ಜರ್ನ ಆಗುತ್ತಿದ್ದವು. ಒಂದೋ ಅಪರಾಧಿ ಗೈರು ಹಾಜರಿ. ಇಲ್ಲವೇ ಸಾಕ್ಷಿ. ಇಬ್ಬರೂ ಇದ್ದಾಗ ಯಾರೋ ಒಬ್ಬ ವಕೀಲ. ಎಲ್ಲರೂ ಇದ್ದಾಗ ಇನ್ಯಾವುದೋ ಕೇಸಿನ ತುರ್ತು. ಐದೂಕಾಲು ಆಗುತ್ತಿದ್ದಂತೆ ನನ್ನ ಹೆಸರು ಕರೆದರು. ಪ್ರಧಾನ ಸಾಕ್ಷಿ ನಾನೇ ತಾನೇ! ಹೆಮ್ಮೆಯಿಂದ ಸಾಕ್ಷಿ ಕಟ್ಟೆಯ ಬಳಿ ಹೋದೆ. ಸಾಕ್ಷಿ ಕಟ್ಟೆಯನ್ನು ಇನ್ನೇನು ಹತ್ತುವವನಿದ್ದೆ. ಅಷ್ಟರಲ್ಲಿ ನ್ಯಾಯಾಧೀಶರು ಇದು ಹೊಸ ಕೇಸೇ ಎಂದರು. ಹೌದು ಎಂದಾಗ. ಉಳಿದ ಸಾಕ್ಷಿಗಳು ಎಲ್ಲರೂ ಬಂದಿದಾರಾ ಎಂದರು. ಇಲ್ಲ ಎಂದ ಕೂಡಲೇ ಹಾಗಿದ್ದರೆ ಮುಂದಿನ ತಿಂಗಳು ಕರೆಸಿ, ಎಂದು ಅಪ್ಪಣೆಯಾಯಿತು. ನನ್ನ ಮೊದಲ ಸಾಕ್ಷಿ ಅಲ್ಲಿಗೆ ಮುಗಿದಿತ್ತು. ಒಂದೇ ಒಂದು ಮಾತೂ ಹೇಳದೆ ಸಾಕ್ಷಿ ಕಟ್ಟೆ ಹತ್ತದೆ ಹಿಂದುರುಗಿದ್ದೆ.

1 comment:

Manjunatha Kollegala said...

Oh, shit... ಅನ್ನಿಸಿದರೆ (ಕೊನೆಗಾದರೂ) ಅದು ಕ್ಷಮೆ ಕೇಳಬೇಕಾದ ತಪ್ಪಲ್ಲ ಬಿಡಿ. ಎಲ್ಲಿಯೂ ನ್ಯಾಯಾಂಗ ನಿಂದನೆಗೆ ಎಡೆಗೊಡದೆ ನ್ಯಾಯ ವ್ಯವಸ್ಥೆ (?)ಯ ಶವಪರೀಕ್ಷೆ ಮಾಡಿದ್ದೀರಿ.

Individual ಒಬ್ಬನ ಬಗ್ಗೆ, ಆತನ ಸಮಯ, ಸಂದರ್ಭಗಳ ಬಗ್ಗೆ ನಮ್ಮ ವ್ಯವಸ್ಥೆಗೆ ಇರುವ ಕಾಳಜಿ ಎಷ್ಟೆಂಬುದನ್ನು ಬಹು ಸೊಗಸಾಗಿ ತೋರಿಸುತ್ತದೆ ಈ ಲೇಖನ. Literary analysis ಮಾಡಲು ಮನಸು ಬರುತ್ತಿಲ್ಲ, ಆದರೂ, ಪ್ರತಿಮೆಗಳ ಬಳಕೆ powerful ಆಗಿದೆ.