Monday, November 28, 2016

ಅರೆ ಘಂಟೆಯ ಕುರುಡು

ದಾರಿಯಲ್ಲಿ ಯಾರಾದರೂ ದೃಷ್ಟಿಹೀನರು ಬಂದರೆ ಬಹುಶಃ ಹಾಗೇ ಕನಿಕರದಿಂದ ನೋಡಿ ದಾರಿ ಬಿಟ್ಟು ನಿಲ್ಲುತ್ತಿದ್ದೆ. ಜಗತ್ತನ್ನು ಕಾಣಲಾಗದವರ ಸಹವಾಸ ನನಗೆ ಇಲ್ಲವೆಂದೇನಲ್ಲ. ನನಗೆ ಸಂಗೀತ ಹೇಳಿಕೊಡಲು ಪ್ರಯತ್ನಿಸಿದ ಮಾಸ್ಟರಿಗೆ ಕಣ್ಣು ಕಾಣುತ್ತಿರಲಿಲ್ಲ. ಪಂಚಾಕ್ಷರಿ ಗವಾಯಿಗಳ ಹಾಗೆ ಕಂಠ ಮಾತ್ರ ಮಧುರವಾಗಿತ್ತು. ಹಾಡುವುದಿರಲಿ, ಪಿಟೀಲನ್ನು ಲೀಲಾಜಾಲವಾಗಿ ಶ್ರುತಿ ಹಿಡಿದು ಅವರು ನುಡಿಸುವಾಗ ನಾನು ಕಣ್ಣು, ಬಾಯಿ ಬಿಟ್ಟು ಕೂರುತ್ತಿದ್ದೆ. ಏಕೆಂದರೆ ಕಣ್ಣು ಇದ್ದರೂ ನನಗೆ ಅವರಂತೆ ಕೀ ಬೋರ್ಡಿನಲ್ಲಿ ಸಂಗೀತ ನುಡಿಸಲಾಗುತ್ತಿರಲಿಲ್ಲ. ಕೀ ಗಳನ್ನು ಹುಡುಕಿ, ಹುಡುಕಿ ಒತ್ತುತ್ತಿದ್ದೆ.

ಮೊನ್ನೆ ಕಣ್ಣು ಪರೀಕ್ಷೆಗೆಂದು ಆಸ್ಪತ್ರೆಗೆ ಹೋದಾಗಲೇ ಅದೆಂತಹ ಅದ್ಭುತ ಅನ್ನುವುದು ಗೊತ್ತಾಗಿದ್ದು. ರಾತ್ರಿ ಪ್ರಖರವಾದ ಬೆಳಕಿಗೆದುರಾದಾಗ ಕಣ್ಣು ಸ್ವಲ್ಪ ಹೆಚ್ಚು ಕಾಲವೇ ಕತ್ತಲೆಗಟ್ಟಿಕೊಳ್ಳುತ್ತಿತ್ತು. ವಯೋಸಹಜವಾಗಿ ಪೊರೆ ಕಟ್ಟುತ್ತಿರಬಹುದು ಅಂತ ಪರೀಕ್ಷೆಗೆ ಹೋದೆ. ಅ, ಆ, ಇ. ಈ ಓದಿಸಿದ ಮೇಲೆ ಕಣ್ಣಿಗೆ ಏನೋ ದ್ರವ ಹಾಕಿ ಕಣ್ಣು ಮುಚ್ಚಿಕೊಂಡಿರಿ ಅಂದಳು ನರ್ಸಮ್ಮ. ಎಷ್ಟು ಹೊತ್ತು ಎಂದೆ. ನಲವತ್ತೈದು ನಿಮಿಷವಾದರೂ ಬೇಕಾಗುತ್ತದೆ ಎಂದಳು.

ಕಾಯುವ ಕೆಲಸವೇ ಬೇಜಾರು. ಮದುವೆಯಲ್ಲೋ, ದೇವಸ್ಥಾನದಲ್ಲೋ, ಬಿಲ್ಲು ಕಟ್ಟುವ ಕ್ಯೂನಲ್ಲೋ (ಈಗೀಗ ಎಟಿಎಂ ಮುಂದೆಯೂ)  ಕಾಯಬೇಕಾದ ಸಂದರ್ಭ ಬಂದಾಗ ಸ್ಮಾರ್ಟ್ ಫೋನ್ ಹಿಡಿದು ಗೆಳೆಯರ ಜೊತೆ ಚಾಟಿಸುತ್ತೇನೆ. ಅಥವಾ ಅದರಲ್ಲಿರುವ ಯಾವುದಾದರೂ ಪುಸಗತಕ ಓದುತ್ತಿರುತ್ತೇನೆ. ಇದೆಲ್ಲ ತೋರಿಕೆ ಅಂತಾಳೆ ನನ್ನವಳು. ಆದರೂ ಸ್ಮಾರ್ಟ್ ಫೋನ್ ಇದ್ದರೆ ಟೈಂ ಪಾಸ್ ಸುಲಭ ಅಂತ ನನ್ನ ಅನಿಸಿಕೆ.

ಇದು ಸಾರ್ವಕಾಲಿಕ ಸತ್ಯವಲ್ಲ ಅಂತ ಕಣ್ಣಾಸ್ಪತ್ರೆಯ ಅನುಭವ ಕಣ್ತೆರೆಸಿತು. ಕಣ್ಣಿಗೆ ಹಾಕಿದ ದ್ರವ ಮೂಗಿನಿಂದ ಗಂಟಲಿಗೆ ಇಳಿದು ಕಿರಿಕಿರಿಯಾದಾಗ ಸುಮ್ಮನಿರಲಾಗಲಿಲ್ಲ. ಕಣ್ಣು ಮುಚ್ಚಿದ ಮಾತ್ರಕ್ಕೆ ನಿದ್ರೆ ಬಂತೆಂದೇನಾಗುವುದಿಲ್ಲವಷ್ಟೆ. ಚಡಪಡಿಸಿದೆ. ಹಾಗೇ ಚಾಟಿಸಲು ಪ್ರಯತ್ನಿಸಿದೆ. ಸ್ಮಾರ್ಟ್ ಫೋನ್ ಬದಲಿಗೆ ಹಳೆಯ ಕೀ ಫೋನು ಇದ್ದಿದ್ದರೆ ಯಾವ ಕೀ ಎಲ್ಲಿದೆ ಎಂದು ತಡಕಾಡಬಹುದಿತ್ತು. ಲಲನೆಯ ಕೆನ್ನೆಯಂತೆ ನಯವಾದ ಸ್ಮಾರ್ಟ್ ಫೋನಿನಲ್ಲಿ ಯಾವ ಅಕ್ಷರ ಎಲ್ಲಿದೆ ಎಂದು ತಿಳಿಯುವುದೂ ಕಷ್ಟ.

ಕೀ ಒತ್ತಿದಾಗ ಶಬ್ದ ಮಾಡುತ್ತದೆ ನಿಜ. ಆದರೆ ಎಲ್ಲ ಕೀಗಳ ಶಬ್ದವೂ ನನ್ನ ಸಂಗೀತದಂತೆಯೇ ಒಂದೇ ಶ್ರುತಿ. ಸದ್ದು. ಹೇಗೆ ಉಪಯೋಗಕ್ಕೆ ಬಂದೀತು? ಆಗಲೇ ನನಗೆ ನಮ್ಮ ಮೇಸ್ಟರ ಅದ್ಭುತ ಸಿದ್ಧಿಯ ಅರಿವಾಗಿದ್ದು. ಕೀ ಬೋರ್ಡಿನಲ್ಲಿ ಕೀಗಳಿರುವ ಸ್ಥಾನವನ್ನು ನೆನಪಿಟ್ಟುಕೊಂಡು ಶ್ರುತಿ ತಪ್ಪದಂತೆ ನುಡಿಸುವುದು ಸುಲಭವಲ್ಲ.

ಅರ್ಧ ಗಂಟೆ ಕತ್ತಲಲ್ಲಿ ಬದುಕುವುದೇ ಅಸಹನೀಯವೆನ್ನಿಸಿದಾಗ ಕತ್ತಲೇ ಬದುಕಾದವರ ಕಥೆ ಹೇಗಿದ್ದಿರಬೇಕು? ಕಣ್ಣು ಮುಚ್ಚಿಕೊಂಡು ಹೀಗೆಲ್ಲ ತಲೆ ಕೆಡಿಸಿಕೊಳ್ಳುವಾಗ ಮೇಸ್ಟರು ಒಮ್ಮೆ ಮಾಡಿದ್ದ ವಿನಂತಿ ನೆನಪಿಗೆ ಬಂತು. ಅವರ ಮನೆಯಲ್ಲಿ ಒಂದು ವರ್ಲ್ಡ್ ಸ್ಪೇಸ್ (ರೇಡಿಯೊ) ಇತ್ತು. ಉಪಗ್ರಹಗಳ ಮೂಲಕ ಸಂಗೀತ ಪ್ರಸಾರ ಮಾಡುವ ಚಾನೆಲ್ಗಳನ್ನು ಈ ರೇಡಿಯೋ ಮೂಲಕ ಕೇಳಬಹುದಿತ್ತು. ದಿನದ ಇಪ್ಪತ್ತನಾಲ್ಕು ಗಂಟೆಯೂ ಅದು ಲಭ್ಯವಿತ್ತು.

ಮೇಸ್ಟರಿಗೆ ಬಲು ಅನುಕೂಲವಾಗಿತ್ತು. ರಿಮೋಟಿನ ಎರಡು ಬಟನುಗಳನ್ನು ಬಳಸಿದರೆ ರೇಡಿಯೋ ಕೇಳಬಹುದಿತ್ತು. ಬೇಕೆಂದ ಚಾನೆಲ್ ಹುಡುಕಬಹುದಿತ್ತು. ಆದರೆ ಅದು ತುಸು ದುಬಾರಿಯಾಗಿತ್ತು ಅನ್ನುವುದೂ ನಿಜ. ತಿಂಗಳ ಚಂದಾ ಜೊತೆಗೆ ಉಪಗ್ರಹ ಸಂಪರ್ಕಕ್ಕೆ ದುಬಾರಿ ಆಂಟೆನಾ ಬೇಕಿತ್ತು.

ಮೇಸ್ಟರು ಅದನ್ನು ಕೊಂಡು ಏಳೆಂಟು ತಿಂಗಳಾಗಿರಬಹುದು. ತಂತ್ರಜ್ಞಾನ ಬದಲಾಯಿತು. ಎಫ್ ಎಮ್ ರೇಡಿಯೋ ನಿಲಯಗಳು ಊರಿಗೆ ಹತ್ತರಂತೆ ತಲೆಯೆತ್ತಿದುವು. ಅದಕ್ಕೆ ತಕ್ಕಂತೆ ಪುಟ್ಟ, ಅಗ್ಗದ ರೇಡಿಯೊ ಬಂತು. ಇಂಟರ್ನೆಟ್ ಎಲ್ಲೆಡೆ ತನ್ನ ಜಾಲ ಹರಡಿತು. ವರ್ಲ್ಡ್ ಸ್ಪೇಸ್ ಗೆ ಚಂದಾ ಕೊಡುವವರು ಕಡಿಮೆಯಾದರು. ಕಂಪೆನಿ ಮುಚ್ಚಿತು.

ತೊಂದರೆಯಾಗಿದ್ದು ಮೇಸ್ಟರಿಗೆ. ಎಫ್ ಎಮ್ ನಲ್ಲಿ ಅವರಿಗೆ ಹಿತವಾಗಿದ್ದ ಕರ್ನಾಟಕ ಸಂಗೀತ ಆಗೊಮ್ಮೆ ಈಗೊಮ್ಮೆ ಪ್ರಸಾರವಾಗುತ್ತಿತ್ತೇ ಹೊರತು ವರ್ಲ್ಡ ಸ್ಪೇಸ್ ನಲ್ಲಿ ಆಗುತ್ತಿದ್ದಂತೆ ದಿನಪೂರ್ತಿಯಲ್ಲ. ಟೀವಿ ಅವರಿಗೆ ಒಗ್ಗದ ಮನರಂಜನೆ. ಹೀಗಾಗಿ ನಿಮಗೆ ಗೊತ್ತಿರುವವರು ಯಾರಾದರೂ ಇದ್ದರೆ ಅವರಿಗೆ ಹೇಳಿ ಆ ಕಂಪೆನಿ ಮುಚ್ಚದಂತೆ ನೋಡಿ ಎನ್ನುವುದು ಅವರ ವಿನಂತಿ.

ನಾನೂ ನನ್ನ ಟೆಕ್ ಜ಼್ಾನದ ಸಲಹೆಗಳನ್ನು ಕೊಟ್ಟಿದ್ದೆ. ಇಂಟರ್ನೆಟ್ ರೇಡಿಯೊ ಬಳಸಿ. ಐ-ಪಾಡ್ ತೆಗೆದುಕೊಳ್ಳಿ ಅಂತೆಲ್ಲ. ಅವೆಲ್ಲ ಆಗಲ್ ಬಿಡಿ ಎಂದು ಹೇಳಿಬಿಟ್ಟಿದ್ದರು.

ಯಾಕೆ ಅಂತ ಅರ್ಥವಾಗಿದ್ದು ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದಾಗ. ಸ್ಮಾರ್ಟ್ ಫೋನ್ ಅಸ್ಭುತ ಸಾಧನವೇ ಆಗಿದ್ದರೂ ಅದನ್ನು ಬಳಸಲು ಬೇರೊಬ್ಬರ ನೆರವು ಬೇಕಿತ್ತು. ಬಹುಶಃ ಸ್ವಾವಲಂಬನೆಯಿಂದ ಪರಾವಕಂಬನೆಗೆ ಮರಳಬೇಕಾಗಬಹುದು ಎಂದು ಅವರು ಹೊಸ ತಂತ್ರಜ್ಞಾನವನ್ನು ನಿರಾಕರಿಸಿದರೆ?

ಏನೇ ಇರಲಿ. ಜಾಗತೀಕರಣ ತಂದ ಸವಲತ್ತುಗಳು ಇಂತಹ ಎಷ್ಟು ಜೀವಗಳ ಖುಷಿಗೆ ಅಡ್ಡಿಯಾಗಿವೆಯೋ ಯಾರಿಗೆ ಗೊತ್ತು? ಎಲ್ಲವೂ ಡಿಜಿಟಲೀಕರಣಗೊಳ್ಳಲಿ ಎನ್ನುವಾಗ ನಮ್ಮ ಮೇಸ್ಟರಂತವರನ್ನು ನಾವು ನೆನಪಿಸಿಕೊಳ್ಳುವುದು ಒಳ್ಳೆಯದು.