ನ್ಯಾಯಾಲಯದಲ್ಲಿ ಮೊದಲ ದಿನದ ಅನುಭವ ತುಸು ವಿಚಿತ್ರ ಅನ್ನಿಸಿತ್ತೇನೋ, ನಿಜ. ಆದರೆ ಅದಕ್ಕಾಗಿ ನಮ್ಮ ಕರ್ತವ್ಯವನ್ನು ಬಿಡಬೇಕಿಲ್ಲ ಎಂದು ಡಾ. ಹೆಗ್ಡೆ ಒತ್ತಿ ಹೇಳಿದ್ದರಿಂದ ಮುಂದಿನ ಬುಲಾವಿನಂದು ಮತ್ತೆ ನ್ಯಾಯಾಲಯ ತಲುಪಿದೆವು. ಈ ಬಾರಿ ನೇರವಾಗಿ ಸರ್ಕಾರಿ ವಕೀಲರನ್ನು ನೋಡಲು ಹೋದೆವು. ನಾವು ಇಂತಹ ಕೇಸಿನ ಸಾಕ್ಷಿ ಎಂದು ಹೇಳಿದಾಗ. "ಓಹೋ. ನೀವು CW1, ನೀವು CW2" ಅಲ್ಲವೋ ಎಂದರು. (CW = Chief Witness). ಹೀಗೆಯೇ ಪ್ರತಿಯೊಬ್ಬ ಸಾಕ್ಷಿಗೂ ಒಂದು ಸಂಖ್ಯೆ. ಪ್ರತಿಯೊಬ್ಬ ಅಪರಾಧಿಗೂ ಒಂದು ಸಂಖ್ಯೆ ಇರುತ್ತದೆ. ನ್ಯಾಯಾಧೀಶರು ಅವರನ್ನು ಉಲ್ಲೇಖಿಸುವುದು ಸಂಖ್ಯೆಯಿಂದಲೇ ಅಂತೆ. ಪ್ರತಿಯೊಂದು ದಾಖಲೆಯಲ್ಲಿ ಉದ್ಧರಿಸುವಾಗಲೂ ನಿರ್ಭಾವುಕತೆಯಿಂದ ಬರೆಯಬೇಕು ಎನ್ನುವ ಉದ್ದೇಶಕ್ಕಾಗಿ ವೈಯಕ್ತಿಕ ಸುಳಿವು ಕೊಡದ ಬರೆಹವನ್ನು ಬಳಸಲಾಗುತ್ತದೆ. ಇದೇ ರೀತಿಯಲ್ಲಿಯೇ ನ್ಯಾಯಾಲಯದಲ್ಲಿಯೂ ವ್ಯಕ್ತಿಗಳ ಸಾಮಾಜಿಕ ನೆಲೆ, ನಿಲುವು ಏನೇ ಇದ್ದರೂ, ಆ ವ್ಯಾಜ್ಯದ ಮಟ್ಟಿಗೆ ಅವರು ಒಂದು ಸಂಖ್ಯೆ, ಒಂದು ಸಾಧನ ಆಗಿ ಬಿಡುವ ಕಾರಣಕ್ಕೆ ಹೀಗೆ ಇರಬಹುದೇ? ಜೈಲಿನಲ್ಲಿ, ನ್ಯಾಯಾಲಯದಲ್ಲಿ ಹಾಗೂ ಆಸ್ಪತ್ರೆಯಲ್ಲಿ ನಾವು ಒಂದು ಸಂಖ್ಯೆಯಾಗಿ ಬಿಡುತ್ತೇವೆ. ಇದೇ ಕಾರಣಕ್ಕೇ ಇರಬೇಕು, ಈ ಎಲ್ಲ ಪರಿಸರದಲ್ಲಿಯೂ ಒಂದೇ ಬಗೆಯ ಮನೋಭಾವ, ಖುಷಿಯಿಲ್ಲದ, ಗೂಡಿನೊಳಗೆ ಕಟ್ಟಿಟ್ಟಂತಹ ಅಥವಾ ಅಪರಾಧಿ ಮನೋಭಾವ ತನ್ನಂತಾನೇ ಸೃಷ್ಟಿಯಾಗಿ ಬಿಡುತ್ತದೆ. ನನ್ನ ಮಗ ಹುಟ್ಟುವಾಗ ಹೆರಿಗೆ ಆಸ್ಪತ್ರೆಯಲ್ಲಿಯೂ ನನಗೆ ಇದೇ ಭಾವ ಕಾಡಿತ್ತು. ಇದು ನನಗೊಬ್ಬನಿಗೇ ಆಗುವ ಅನುಭವವೋ, ಅಥವಾ ನಿತ್ಯವೂ ಅಲ್ಲಿಗೆ ಬರುವ ಸಾವಿರಾರು ಮಂದಿಗೂ ಹೀಗೇ ಅನಿಸುತ್ತದೆಯೋ ಕುತೂಹಲವಾಗಿದೆ.
ಲಾಯರು ನಮ್ಮನ್ನು ನೋಡಿದರು. ನಮ್ಮ ಉದ್ಯೋಗಗಳ ಬಗ್ಗೆ ತಿಳಿದುಕೊಂಡರು. ಅಯ್ಯೋ, ಇದಕ್ಕಾಗಿ ನೀವು ರಜೆ ಹಾಕಿ ಏಕೆ ಬಂದಿರಿ ಎಂದು ಪರಿತಾಪ ಪಟ್ಟರು. ಅನಂತರ ಅಂದಿನ ಕೇಸುಗಳ ಪಟ್ಟಿ ನೋಡಿ, 'ಈ ದಿನವೂ ನಿಮ್ಮ ವ್ಯಾಜ್ಯ ಪರೀಕ್ಷೆಗೆ ಬರುವ ಸಾಧ್ಯತೆಗಳು ಕಡಿಮೆ. ಕೆಲವು ಹಿರಿಯ ಪೋಲೀಸು ಅಧಿಕಾರಿಗಳ ಸಾಕ್ಷಿ ಕೇಳುವುದಿದೆ. ಅವರಿಗೆ ಪ್ರಾಮುಖ್ಯತೆಯಾದ್ದರಿಂದ ನಿಮ್ಮ ಕೇಸು ಈ ದಿನವೂ ಮುಂದೂಡಬಹುದು. ಒಂದು ಕೆಲಸ ಮಾಡಿ. ಜರೂರು ಸರ್ಕಾರಿ ಕಾರ್ಯಗಳಿದ್ದುದರಿಂದ ನಾವು ಸಾಕ್ಷಿ ಹೇಳಲು ಬರಲಾಗುತ್ತಿಲ್ಲ ಎಂದು ಒಂದು ಮನವಿ ಪತ್ರ ಬರೆದುಕೊಡಿ. ಕೇಸು ಅಡ್ಜರ್ನ್ ಮಾಡಿಸೋಣ. ಮುಂದಿನ ಸಮನ್ ಬಂದಾಗ ಬನ್ನಿ,' ಎಂದು ಸಲಹೆ ನೀಡಿದರು. ಮನವಿ ಬರೆದುಕೊಟ್ಟು, ಕೋರ್ಟಿನ ಅಂಗಳದಲ್ಲಿದ್ದ ಕೊಳಕು ಕ್ಯಾಂಟೀನಿನಲ್ಲಿ ಕಾಫಿ ಕುಡಿದು ಮನೆಗೆ ಮರಳಿದೆವು.
ಹಿಂದ ಒಂದು ಸಂದರ್ಭದಲ್ಲಿ ಹೈದರಾಬಾದಿನ ಸುಪ್ರಸಿದ್ಧ ಪ್ರಯೋಗಶಾಲೆ, 'ಸೆಂಟರ್ ಫಾರ್ ಸೆಲ್ಲುಲಾರ್ ಅಂಡ್ ಮಾಲೆಕ್ಯುಲಾರ್ ಬಯಾಲಜಿ,'ಯ ನಿರ್ದೇಶಕರಾದ ಡಾ. ಲಾಲ್ಜಿ ಸಿಂಗ್ ಒಂದು ಭಾಷಣದಲ್ಲಿ ತಮ್ಮ ಮೊತ್ತ ಮೊದಲ ನ್ಯಾಯಾಲಯದ ಭೇಟಿಯ ಪ್ರಸ್ತಾವ ಮಾಡಿದ್ದು ನೆನಪಾಯಿತು. ಲಾಲ್ಜಿ ಸಿಂಗ್ ಇಂದು ಅಪರಾಧಿಗಳ ಪತ್ತೆಯಲ್ಲಿ ನಿತ್ಯವೂ ಬಳಸುವ ಡಿಎನ್ಎ ಬೆರಳಚ್ಚು (DNA Fingerprinting) ಪರೀಕ್ಷೆಯನ್ನು ಭಾರತದಲ್ಲಿ ವಿನೂತನವಾಗಿ ಅಳವಡಿಸಿದ ವಿಜ್ಞಾನಿ. ಪ್ರಪ್ರಥಮ ಬಾರಿಗೆ ಮಗುವೊಂದರ ಜನ್ಮದಾತ ಯಾರು ಎನ್ನುವ ಬಗ್ಗೆ ಇಬ್ಬರು ಪೋಷಕರ ನಡುವಿನ ವ್ಯಾಜ್ಯವನ್ನು ಬಗೆ ಹರಿಸಲು ಬಳಸಲಾಗಿತ್ತು. ಆ ಸಂದರ್ಭದಲ್ಲಿ ಡಿಎನ್ಎ ಬೆರಳಚ್ಚಿನ ಪರೀಕ್ಷೆಗೆ ಡಾ. ಸಿಂಗ್ರವರಿಗೆ ತಿಳಿಸಲಾಗಿತ್ತು. ಈ ಪರೀಕ್ಷೆಯ ವಿವರಗಳು ಮತ್ತು ಫಲಿತಾಂಶಗಳನ್ನು ಅವರು ಸಾಕ್ಷಿಯಾಗಿ ನುಡಿಯಬೇಕಿತ್ತು. ಸಮನ್ ಬಂದಾಗ ಅದನ್ನು ನಿರಾಕರಿಸುವುದು ಅಪರಾಧ ಎಂದು ಅವರಿಗೆ ತಿಳಿ ಹೇಳಲಾಗಿತ್ತು. ಕೋರ್ಟಿಗೆ ಹೋದಾಗ ನಮ್ಮಂತೆಯೇ ಹಲವು ಗಂಟೆಗಳ ಕಾಲ ಕಾಯಬೇಕಾಗಿತ್ತಂತೆ. ಅದಾದ ಅನಂತರ ಸಾಕ್ಷಿ ಹೇಳಿ ಎಂದು ಅವರನ್ನು ಕರೆದರಂತೆ. ಹೊಸ ತಂತ್ರವನ್ನು ಬಳಸಿದ್ದರಿಂದ, ಅದರ ಬಗ್ಗೆ ವಿವರ ನೀಡಬೇಕಿತ್ತು. ಅದಕ್ಕಾಗಿ ವಿಜ್ಞಾನ ಸಭೆಗಳಲ್ಲಿ ಮಾಡುವ ಹಾಗೆ ಒಂದು ಸ್ಲೈಡ್ ಚಿತ್ರ ಪ್ರದರ್ಶಿಸಬೇಕು. ಪ್ರೊಜೆಕ್ಟರ್ ಇಡಬೇಕು ಎಂದು ವಿನಂತಿಸಿಕೊಂಡರಂತೆ. ಅನುಮತಿ ದೊರೆಯಿತಂತೆ. ಆದರೆ ಪ್ರೊಜೆಕ್ಟರ್ ಇಡಲು ಜಾಗೆ ಇಲ್ಲ. ಅದಕ್ಕೆ ವಿದ್ಯುತ್ ಸಂಪರ್ಕ ನೀಡುವ ಅವಕಾಶ ಸಾಕ್ಷಿ ಕಟ್ಟೆಯಲ್ಲಿ ಇರಲಿಲ್ಲವಂತೆ. ಸಾಕ್ಷಿಕಟ್ಟೆ ಒಂದು ಮರದ ಕಟ್ಟೆಯಷ್ಟೆ. ಅಲ್ಲಿ ಪ್ರೊಜೆಕ್ಟರ್ ಇರಲಿ, ನಿಮ್ಮ ಕೈ ಇಟ್ಟುಕೊಳ್ಳಲೂ ಕೆಲವೊಮ್ಮೆ ಜಾಗೆ ಇರುವುದಿಲ್ಲ, ಅಷ್ಟು ಕಿರಿದಾದ ಕಟಕಟೆ ಇರುತ್ತದೆ.
ಕೊನೆಗೆ ಹೇಗೋ ದೂರದ ಯಾವುದೋ ವಿದ್ಯುತ್ ಪ್ಲಗ್ನಿಂದ ವಿದ್ಯುತ್ ಪಡೆದುಕೊಂಡರಂತೆ. ಅನಂತರ ಚಿತ್ರವನ್ನು ಎಲ್ಲಿ ಪ್ರೊಜೆಕ್ಟ್ ಮಾಡಬೇಕು ಎನ್ನುವ ಸಂದಿಗ್ಧವುಂಟಾಯಿತಂತೆ. ಹೇಳಿ, ಕೇಳಿ, ಬೆಳಕು ನುಗ್ಗದಿರುವ ಸರ್ಕಾರಿ ಕಟ್ಟಡ. ಸುಣ್ಣ, ಬಣ್ಣ ಕಾಣದ ಗೋಡೆಗಳು. ಅಲ್ಲಿ ಎಲ್ಲಿ ಚಿತ್ರ ಸ್ಪಷ್ಟವಾಗಿ ಮೂಡೀತು. ಕೊನೆಗೆ ಒಂದು ಸ್ಥಳ ಕಾಣಿಸಿತಂತೆ. ಡಾ. ಸಿಂಗ್ ತಮ್ಮ ಚಿತ್ರವನ್ನು ಅಲ್ಲಿ ಪ್ರೊಜೆಕ್ಟ್ ಮಾಡಲು ಸಿದ್ಧರಾಗಿ, ಹೇಳಿದರಂತೆ. "ಮಹಾಸ್ವಾಮಿ, ತಾವು ಸ್ವಲ್ಪ ಅತ್ತ ಜರುಗಿದರೆ, ಚಿತ್ರವನ್ನು ತಮ್ಮ ಬೆನ್ನ ಹಿಂದಿನ ಗೋಡೆಯ ಮೇಲೆ ಪ್ರದರ್ಶಿಸಬಹುದು," ಎಂದು. ಅವರ ಮಾತು ಕೇಳಿ ಇಡೀ ನ್ಯಾಯಾಲಯ ಸ್ತಬ್ಧವಾಯಿತಂತೆ. ಅನಂತರ ಸರ್ಕಾರಿ ವಕೀಲರು ತಿಳಿ ಹೇಳಿದರಂತೆ. "ನ್ಯಾಯಾಧೀಶರು ಖುರ್ಚಿ ಬಿಟ್ಟು ಎದ್ದರೆಂದರೆ ನ್ಯಾಯಾಲಯ ಬರಖಾಸ್ತು ಆದಂತೆ," ಎಂದು. ಅದು ಹೇಗೋ ಕಸರತ್ತು ಮಾಡಿಕೊಂಡು ಚಿತ್ರವನ್ನು ಪ್ರದರ್ಶಿಸಿದೆ ಎಂದು ಲಾಲ್ಜಿ ಸಿಂಗ್ ನೆನಪಿಸಿಕೊಂಡಿದ್ದರು. ಈಗ ನ್ಯಾಯಾಲಯಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮುಖಾಂತರ ಸಾಕ್ಷಿ ವಿಚಾರಣೆ ನಡೆಯುತ್ತದೆ. ಉದಾಹರಣೆಗೆ, ಮೈಸೂರಿನ ನ್ಯಾಯಾಲಯವೇ "ಇಂಡಿಪೆಂಡೆಂಸ್ ಡೇ" ಚಿತ್ರದ ಬಗ್ಗೆ ಕೃತಿಚೌರ್ಯ ಎಂದು ಇಲ್ಲಿನ ಒಬ್ಬ ಲೇಖಕರು ಕೊಟ್ಟ ಫಿರ್ಯಾದಿನ ವಿಚಾರಣೆಯನ್ನು ವೀಡಿಯೋ ಕಾನ್ಫರೆನ್ಸ್ ಮುಖಾಂತರ ಮಾಡಿತ್ತು. ಅದು ಸುದ್ದಿಯಾಗಿತ್ತು.
ಬಹುಶಃ ಅಪರೂಪದ ವಿಷಯವೆಂದೇ ಅದು ಸುದ್ದಿಯಾಗಿತ್ತು ಎನ್ನಿಸುತ್ತದೆ. ನಿತ್ಯ ನ್ಯಾಯಾಲಯಕ್ಕೆ ತಾಕಲಾಡುವ, ಅಡ್ಜರ್ನ್ಮೆಂಟುಗಳನ್ನು ಎದುರಿಸುವ ಪರಿಸ್ಥಿತಿ ಇನ್ನೂ ಬದಲಾಗಿಲ್ಲ ಎನ್ನುವುದು ನನ್ನ ಅನುಭವ.
Saturday, March 24, 2007
Subscribe to:
Post Comments (Atom)
1 comment:
This is great info to know.
Post a Comment