Thursday, April 21, 2011

ದೇವರ ವ್ಯಾಪಾರ 2

ತಿರುಪತಿಯ ವ್ಯಾಪಾರದ ಬಗ್ಗೆ ಇನ್ನೊಂದು ಮಾತು. ಮೊನ್ನೆ ಇಸ್ರೋದ ಹೊಸ ಉಪಗ್ರಹ ಆಕಾಶವೆರಿದ್ದು ಗೊತ್ತಲ್ಲ! ಅದರ ಫಲ ಇಸ್ರೋಗೆ ಸಲ್ಲಬೇಕೋ, ತಿರುಪತಿಯ ತಿಮ್ಮಪ್ಪನಿಗೆ ಸಲ್ಲಬೇಕೋ ಗೊಂದಲವಾಗಿದೆ. ಏಕೆಂದರೆ ಈಟಿವಿ ವರದಿ ಮಾಡಿದಂತೆ ಇಸ್ರೋದ ಮುಖ್ಯಸ್ತರು ಉಪಗ್ರಹದ ಉಡಾವಣೆಗೆ ಮೊದಲು ತಿರುಪತಿಯ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದರು. ಉಪಗ್ರಹ ಉಡಾವಣೆ ಸುಗಮವಾಗಿ ಸಾಗಲಿ ಅಂತ. ಇತ್ತೀಚಿಗೆ ದೇಶದ ಪ್ರತಿಷ್ಟಿತ ಸಂಸ್ಥೆಯಾದ ಇಸ್ರೋಗೂ ಗರ ಬಡಿದಿದೆ. ಅಂತರಿಕ್ಸ್ ಹಾಗೂ ದೇವಾಸ್ ಸಂಸ್ಥೆಗಳ ಗುತ್ತಿಗೆ ವ್ಯವಹಾರ ಹಾಗೂ ಕಳೆದ ಎರಡು ಉಡಾವಣೆಗಳ ವಿಫಲತೆ ಮುಂದೆ ಈ ಸಂಸ್ಥೆಯ ಹಣಕಾಸು ಬೇಡಿಕೆಗಳಿಗೆ ಅಡ್ಡಿಯಾಗಬಹುದು. ಮತ್ತೊಂದು ಉಡಾವಣೆಯು ಸೋತಿದ್ದಾರೆ ಕಷ್ಟವೇ ಆಗುತ್ತಿತ್ತು. ತಿರುಪತಿಯ ತಿಮ್ಮಪ್ಪ ಸಂಕಟ ಹರನಲ್ಲವೇ? ಅದಕ್ಕೆ ಬಹುಷಃ ಇಸ್ರೋದ ಅಧಿಕಾರಿಗಳು ತಿಮ್ಮಪ್ಪನ ಮೊರೆ ಹೋಗಿದ್ದಾರೆ ಎನಿಸುತ್ತದೆ. ವಿಜ್ಞಾನ ಹಾಗೂ ವಿಶ್ವಾಸಗಳ ಗೊಂದಲಕ್ಕೆ ಇದೂ ಒಂದು ಉದಾಹರಣೆ. ಆದರೂ, ಇಸ್ರೋ ಗಾಬರಿಯಾಗಬೇಕಿರಲಿಲ್ಲ. ಸರಕಾರ ಹಣ ಕೊಡದಿದ್ದರೂ, ಹತ್ತು ಉಪಗ್ರಹಗಳ ಉಡಾವಣೆಗೆ ಅವಶ್ಯಕವಾದ ಹಣವನ್ನು ತಿರುಪತಿಯ ಯು ಎಸ್ ಪಿ ಆಗಿತ್ತುಕೊಂಡು ಲಾಭ ಪಡೆಯುವುದರಲ್ಲಿ ಧಾರ್ಮಿಕ ಸಂಸ್ಥೆಗಳು ಸಿದ್ಧ ಹಸ್ತ ಅಲ್ಲವೇ? ಇಸ್ರೋ ಸರಕಾರವನ್ನು ಬೇಡುವುದಕ್ಕಿಂತ ದೇವರಲ್ಲಿ ಬೇಡಿದ್ದೆ ಸರಿಯೇನೋ ಅಲ್ಲವೇ? :)

Monday, April 18, 2011

ದೇವರ ವ್ಯಾಪಾರ!

ಮೊನ್ನೆ ಮಡದಿಯ ವರಾತ ತಾಳಲಾರದೆ ತಿಮ್ಮಪ್ಪನ ತಿರುಪತಿಗೆ ಪ್ರವಾಸ ಹೋಗಿದ್ದೆ. ನನ್ನ ಹೆಸರಿನಲ್ಲೇ ತಿಮ್ಮಪ್ಪನ ಹೆಸರಿದ್ದರೂ ಅರ್ಧ ಶತಮಾನದಿಂದಲೂ ತಿರುಪತಿಗೆ ಹೋಗಿರಲಿಲ್ಲ ಎನ್ನುವುದು ವಾಸ್ತವ. ಹೊಟ್ಟೆ ತಾಳ ಹಾಕುತ್ತಿದ್ದರೂ, ಫ್ಯಾಶನ್‌ಗೆ ಟೇಬಲ್‌ ಕುಟ್ಟಿಕೊಂಡು ಊಟಕ್ಕೆ ಕಾಯುತ್ತ ಕುಳಿತುಕೊಳ್ಳುವುದು ಹಾಗೂ ಭಕ್ತಿ ಎನ್ನುವ ಹೆಸರಿನಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುವುದು ನನಗೆ ಒಗ್ಗಿಬಾರದ ಸಂಗತಿ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹತ್ತಾರು ಗಂಟೆಗಳ ಕಾಲ ಕಾಯಬೇಕು ಎನ್ನುವ ಅರಿವಿದ್ದರೂ ಈ ಬಾರಿ ಅದೇನಾಗುತ್ತದೋ ನೋಡಿಯೇ ಬಿಡೋಣ ಅಂತ ಹೋದೆ. ಜೊತೆಗೆ ಅಲ್ಲಿಗೆ ಪ್ರವಾಸ ಹೋಗಿ ಬಂದವರೆಲ್ಲರೂ ’ಮಾನವನಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ತಿರುಪತಿ ನೋಡಲೇ ಬೇಕು,’ ಎನ್ನುವಂತೆ ವಿವರಿಸುತ್ತಿದ್ದದ್ದೂ ಪ್ರೇರಣೆಯಾಗಿರಬೇಕು. ತಿಂಗಳಿಗೊಮ್ಮೆಯಾದರೂ ತಿರುಪತಿಗೆ ಹೋಗುವ ಗೆಳೆಯರಿದ್ದಾರೆ. ನನಗೆ ತಿರುಪತಿಯಿಂದ ಏನೂ ಆಗಬೇಕಿರಲಿಲ್ಲವಾದ್ದರಿಂದ ಅಲ್ಲಿಗೆ ಹೋಗುತ್ತಿಲ್ಲ ಎಂದು ಅವರಿಗೆ ಸಮಜಾಯಿಷಿ ಕೊಡುತ್ತಿದ್ದೆ. ಆದರೆ ಮೊನ್ನೆಯ ನನ್ನ ಅನುಭವ - ಅನುಭವ ಅನ್ನುವುದಕ್ಕಿಂತಲೂ ಅವಲೋಕನ ಎನ್ನುವುದೇ ಸರಿ - ಈ ಬರೆಹಕ್ಕೆ ಹೂರಣ. ೧. ಪ್ರತಿ ದಿನವೂ ಲಕ್ಷಾಂತರ ಮಂದಿ ಪ್ರವಾಸಿಗರು ಬರುವ ಸ್ಥಳವಾದರೂ ಸ್ವಚ್ಛತೆಯನ್ನು ಕಾಯ್ದುಕೊಂಡಿರುವ ಪರಿ ನಿಜಕ್ಕೂ ಮಾದರಿಯೇ ಸರಿ. ಈ ವಿಷಯದಲ್ಲಿಯಾದರೂ ತಿರುಪತಿ ತಿರುಮಲ ದೇವಸ್ವಂನಿಂದ ಕಲಿಯುವುದು ಬಹಳ ಇದೆ. ರಾತ್ರಿ ಹನ್ನೆರಡು ಗಂಟೆಯಾಗುತ್ತಿದ್ದರೂ ಕಸಬರಲು ಹಿಡಿದು ರಸ್ತೆ ಗುಡಿಸುತ್ತಾ ಇರುವ ಮಹಿಳೆಯರನ್ನು ನೋಡಬಹುದು! ೨. ಭಾರತೀಯ ಬ್ಯುಸಿನೆಸ್‌ ಶಾಲೆಗಳಿಗೆ ವಿದೇಶೀಯರು ಮುಗಿ ಬೀಳುತ್ತಾರಂತೆ! ಬಹುಶಃ ತಿರುಪತಿಗಿಂತಲೂ ದೊಡ್ಡ ಬ್ಯುಸಿನೆಸ್‌ ಶಾಲೆ ಇನ್ನೊಂದು ಇರಲಾರದು. ನನಗೆ ಮಾರ್ಗದರ್ಶಿಯಾಗಿ ಬಂದಿದ್ದ ಮಿತ್ರರೊಬ್ಬರ ಮಾತುಗಳನ್ನು ಕೇಳಿ ನನಗೆ ಹೀಗನ್ನಿಸಿತು. ದೇವಸ್ತಾನಗಳ ನಿರ್ವಹಣೆಗೆ ತಿರುಪತಿಯ ತಿಮ್ಮಪ್ಪನ ಕೊಡುಗೆ ಅಷ್ಟಿಷ್ಟಲ್ಲ ಎನ್ನಿಸಿದೆ. ನಾನು ಚಿಕ್ಕವನಾಗಿದ್ದಾಗ ಊರಿನಲ್ಲಿದ್ದ ಶಿವ ಮಂದಿರಕ್ಕೆ ಹೋಗುತ್ತಿದ್ದುದಕ್ಕೂ, ತಿರುಪತಿಯ ತಿಮ್ಮಪ್ಪನ ದರ್ಶನಕ್ಕೂ ಅಜಗಜಾಂತರವಲ್ಲ, ಅಜ-ಡೈನೋಸಾರ್‌ ವ್ಯತ್ಯಾಸವಿದೆ. ಶಿವಮಂದಿರದ ದೀಕ್ಷಿತರು ನಿಧಾನವಾಗಿ ಮಂತ್ರ ಹೇಳುತ್ತಾ, ಮನೆವಾರ್ತೆಯನ್ನೂ ವಿಚಾರಿಸಿಕೊಂಡು ತೀರ್ಥ ಕೊಡುತ್ತಿದ್ದದ್ದು ಮನದಿಂದ ಮರೆಯಾಗಿಲ್ಲ. ಅಲ್ಲಿ ಕುಂಕುಮಾರ್ಚನೆಗೂ, ಸಹಸ್ರನಾಮಾರ್ಚನೆಗೂ ಯಾವುದೇ ನಿಗದಿತ ಶುಲ್ಕ ಇರಲಿಲ್ಲ. ಯಥಾಶಕ್ತಿ ಭಕ್ತರು ತಟ್ಟೆಗೆ ಹಾಕಿದ ದಕ್ಷಿಣೆಯೇ ದೀಕ್ಷಿತರಿಗೆ ಸಂಪಾದನೆ! ತಿರುಪತಿ ತಿಮ್ಮಪ್ಪನನ್ನೇ ನೋಡಿ!. ವ್ಯಾಲ್ಯೂ ಆಡೆಡ್‌ (ಮೌಲ್ಯವರ್ಧಿತ) ಭಕ್ತಿ ಎಂದರೆ ಇದೇ! ಕಲ್ಯಾಣೋತ್ಸವದಿಂದ ಆರಂಭಿಸಿ ಹಲವು ವಿಶೇಷ ಪೂಜೆಗಳಿವೆ. ಒಂದೊಂದಕ್ಕೂ ಅದಕ್ಕೆ ತಕ್ಕಂತೆ ಶುಲ್ಕ. ಭಕ್ತಿಯ ಈ ಮೌಲ್ಯವರ್ಧನೆ (ಮೌಢ್ಯವರ್ಧನೆ ಎಂದಿದ್ದಾರೆ) ಉಳಿದೆಲ್ಲ ದೇವಾಲಯಗಳಿಗಿಂತಲೂ ಮೊದಲು ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲೇ ಹುಟ್ಟಿರಬೇಕು ಎನ್ನುವುದು ನನ್ನ ವಾದ. ಚರಿತ್ರೆಯಲ್ಲಿ ನಾನು ತುಸು ಹಿಂದೆ ಆದ್ದರಿಂದ ಈ ಬಗ್ಗೆ ನಿಖರವಾಗಿ ಹೇಳಲಾರೆ. ಆದರೆ ಬ್ಯುಸಿನೆಸ್‌ ಮಾಡೆಲ್‌ ಆಗಿ ತಿಮ್ಮಪ್ಪನ ಸನ್ನಿಧಾನ ಅತ್ಯುತ್ತಮ ಎನ್ನುವುದು ನನ್ನ ವಾದ. ತಿರುಪತಿ ತಿಮ್ಮಪ್ಪ ಎನ್ನುವ ಬ್ರಾಂಡ್‌ ಯಾರಿಗೆ ಗೊತ್ತಿಲ್ಲ! ಬ್ರಾಂಡ್‌ ಕ್ರಿಯೇಷನ್‌ನಲ್ಲೂ ತಿಮ್ಮಪ್ಪ ಪಯನಿಯರ್‌ (ಮೊದಲಿಗ) ಇರಬೇಕು. ವಿವಿಧ ಮೌಲ್ಯಗಳ ದರ್ಶನವೂ ಇದೆ. ಮುಫತ್ತು ದರ್ಶನ ಎಲ್ಲರಿಗೂ ಲಭ್ಯ. ದುಡ್ಡಿದ್ದವರಿಗೆ ವಿಶೇಷ ದರ್ಶನ. ಅದಕ್ಕೂ ಹೆಚ್ಚಿನ ದುಡ್ಡು, ಪ್ರಭಾವ ಇದ್ದವರಿಗೆ ವಿಐಪಿ ದರ್ಶನ. ಒಂದೇ ಉತ್ಪನ್ನದಲ್ಲಿ ಡೈವರ್ಸಿಫಿಕೇಶನ್‌ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾನೆ ತಿಮ್ಮಪ್ಪ. ೩. ಅಮೆರಿಕೆಯಲ್ಲಿರುವ ತಿಮ್ಮಪ್ಪ ಭಕ್ತರಿಗೆ ಆನ್‌ಲೈನ್‌ ದರ್ಶನವೂ ಲಭ್ಯವಂತೆ. ತಿಮ್ಮಪ್ಪನ ದರ್ಶನಕ್ಕೆಂದು ಕ್ಯೂನಲ್ಲಿ ನಿಂತಿದ್ದಾಗ ಅಮೆರಿಕೆಯಲ್ಲಿ ತಿಮ್ಮಪ್ಪನ ದೇವಸ್ಥಾನ ಇದ್ದಿದ್ದರೆ ಹೇಗಿರುತ್ತಿತ್ತು ಎನಿಸಿತು. ನಮ್ಮ ದೇಶದ ಜನದಟ್ಟಣೆಯ ಹತ್ತರಲ್ಲೊಂದಂಶದಷ್ಟು ವಿರಳ ಜನ ದಟ್ಟಣೆ ಇರುವ ಅಮೆರಿಕೆಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಇಷ್ಟೊಂದು ದೊಡ್ಡ ಕ್ಯೂ ಬಹುಶಃ ಇರುತ್ತಿರಲಿಲ್ಲ. ಹಾಗೆಯೇ, ಹತ್ತಾರು ಗಂಟೆಗಳ ಕಾಲ ಕ್ಯೂನಲ್ಲಿ "ಗೋವಿಂದ, ಗೋವಿಂದ’ ಎನ್ನುತ್ತಾ ನಡೆದು ಬಂದವರು, ಗರ್ಭಗುಡಿಯ ಸಮೀಪ ಬರುತ್ತಿದ್ದ ಹಾಗೆಯೇ ಆ ಎಲ್ಲ ಶಿಸ್ತನ್ನೂ ಮರೆತು ಮತ್ತೆ ಗುಂಪುಗೋವಿಂದರಾಗುವುದು ಏಕೋ ಅರ್ಥವಾಗಲಿಲ್ಲ. ೪. ಧರ್ಮ ಹಾಗೂ ವಿಜ್ಞಾನ ಒಂದಕ್ಕೊಂದು ವಿರೋಧ ಎನ್ನುತ್ತಾರಷ್ಟೆ! ವಿಜ್ಞಾನದ ಬಳುವಳಿಯಾದ ತಂತ್ರಜ್ಞಾನ ಮಾತ್ರ ಯಾಕೋ ಧರ್ಮಭೀರುಗಳಾದ ದೇವರಿಗೆ ಪ್ರಿಯ. ತಿರುಪತಿಯ ಪ್ರತಿಯೊಂದು ಚಟುವಟಿಕೆಯಲ್ಲಿಯೂ ವಿಜ್ಞಾನ ಹಾಗೂ ತಂತ್ರಜ್ಞಾನದ ಬಳಕೆಯನ್ನು ಕಂಡೆ. ಯಾವುದೇ ವಹಿವಾಟನ್ನು ನಡೆಸುವಾಗಲೂ ಅದಕ್ಕೆ ಅನುಕೂಲವಾಗುವಂತಹ, ಲಾಭ ಹೆಚ್ಚಿಸುವಂತಹ ತಂತ್ರಜ್ಞಾನ, ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸಹಜವೇ! ಅಪ್ಪಟ ವಾಣಿಜ್ಯಮೂರ್ತಿ ತಿಮ್ಮಪ್ಪನ ತಿರುಪತಿ ಇದಕ್ಕೆ ಅಪವಾದ ಹೇಗಾದೀತು? ಲಕ್ಷಾಂತರ ಜನರ ಭಕ್ತಿಗೆ ಪ್ರಸಾದ ಒದಗಿಸುವ ಲಡ್ಡುವನ್ನು ಹೊತ್ತು ತರಲು ಕನ್ವೆಯರ್‌ ಬೆಲ್ಟ್‌ ವ್ಯವಸ್ಥೆ, ಬಯೋಡಿಗ್ರೇಡಬಲ್‌ (ಜೈವಿಕ ಶಿಥಿಲತೆಯ) ಪ್ಲಾಸ್ಟಿಕ್‌ ಚೀಲಗಳು, ಸದಾ ಜನತೆಯ ಕಣ್ಗಾವಲಾಗಿರುವ ದೇವರ ದೇವಾಲಯವನ್ನು ಕಾಯುವುದಕ್ಕೆ ಕ್ಲೋಸ್ಡ್‌ ಸರ್ಕೀಟ್‌ ಕಣ್ಗಾವಲು ವ್ಯವಸ್ಥೆ, ಮಂತ್ರ ಪಠಣಕ್ಕೆ, ಸಂಗೀತಕ್ಕೆ ಧ್ವನಿವರ್ಧಕ, ಭಕ್ತರ ಸಾಗಾಟಕ್ಕೆ ವಾಹನಗಳು ಇವೆಲ್ಲವೂ ವಿಜ್ಞಾನ ತಂತ್ರಜ್ಞಾನದ ಕೊಡುಗೆಗಳೇ! ಅದಷ್ಟೆ ಅಲ್ಲ. ಭಕ್ತರ ಜಂಗುಳಿಯನ್ನು ನಿಯಂತ್ರಿಸಲು ಪ್ರವಾಹ ನಿಯಂತ್ರಣ ವ್ಯವಸ್ಥೆಯಂತೆ ಅಲ್ಲಲ್ಲಿ ಅಡ್ಡಿಕೋಣೆ (ಇದನ್ನು ಕಂಪಾರ್ಟ್‌‌ಮೆಂಟ್‌ ಎನ್ನುತ್ತಾರೆ)ಗಳಿವೆ - ನೀರ ಹರಿವನ್ನು ನಿಯಂತ್ರಿಸುವ ಚೆಕ್‌ ಡ್ಯಾಮ್‌ಗಳಂತೆ. ವಿವಿಧ ಮೌಲ್ಯದ ದರ್ಶಕರ ಪ್ರವಾಹವನ್ನು ಬೇರೆ, ಬೇರೆ ದಿಕ್ಕಿನಿಂದ ಹರಿಯ ಬಿಟ್ಟು, ಒಂದೆಡೆಗೇ ಕೂಡಿಸುವ ಸೂಯರ್‌ ವ್ಯವಸ್ಥೆಯಂತಹ ಚಾಲಾಕಿತನವನ್ನೂ ಇಲ್ಲಿ ನೋಡಬಹುದು. ೫. ತಿರುಪತಿಯಲ್ಲಿ ನಾನು ಕಂಡ ಹೆಚ್ಚಿನವರು ಆಂಧ್ರ, ತಮಿಳುನಾಡು ಹಾಗೂ ಮಹಾರಾಷ್ಟ್ರದವರು. ಕೇರಳ ಹಾಗೂ ಇತರೆ ರಾಜ್ಯಗಳಿಂದ ಬಂದವರ ಸಂಖ್ಯೆ ಕಡಿಮೆ. ಭೌಗೋಳಿಕವಾಗಿ ಸಮೀಪವಿರುವುದರಿಂದ ಹೀಗೋ ಅಥವಾ ತಿಮ್ಮಪ್ಪನ ಜ್ಯೂರಿಸ್‌ಡಿಕ್ಷನ್‌ (ಮಾರ್ಕೆಟಿಂಗ್‌ ಏರಿಯಾ) ಹಾಗಿರಬಹುದೋ? ಏಕೆಂದರೆ ಧರ್ಮಸ್ಥಳಕ್ಕೆ ಭೇಟಿನೀಡುವವರಲ್ಲಿ ಹೆಚ್ಚಿನವರು ಉತ್ತರಕರ್ನಾಟಕದವರು, ಕೊಲ್ಲೂರಿಗೆ ಬರುವವರಲ್ಲಿ ಮಲ್ಲು ನಾಡಿನವರೇ ಹೆಚ್ಚು! ತಮಿಳುನಾಡಿನಲ್ಲಿ ಕೆಲವು ದೇವಸ್ಥಾನಗಳಿಗೆ ಹೋದರೆ ತಮಿಳರಿಗಿಂತಲೂ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ (ಕೆಲವೊಮ್ಮೆ ನಮ್ಮ ಮುಖ್ಯಮಂತ್ರಿಗಳೂ ಅಲ್ಲೇ ನಿಮ್ಮನ್ನು ಭೇಟಿಯಾಗಬಹುದು). ಭಕ್ತಿಗೂ ಒಂದು ನಿರ್ದಿಷ್ಟ ಪ್ರಭಾವವಲಯ ಇರಬಹುದೇ? ೬. ಯಾವುದೇ ಮೌಲ್ಯದ ದರ್ಶನವಾದರೂ ಕನಿಷ್ಠ ಎಂಟು ಗಂಟೆ ಕಾಯಲೇಬೇಕು ಎನ್ನುವುದು ಅರಿವಾದಾಗ ನನ್ನ ಮಿತ್ರರು ಅಪ್ಪಟ ಭಾರತೀಯ ಕೆಲಸ ಮಾಡಲು ಹೊರಟರು. ಅಲ್ಲೇ ಕಾವಲು ನಿಂತಿದ್ದ ಸೆಕ್ಯೂರಿಟಿಯವನಿಗೆ ಅಣ್ಣಾ-ತಮ್ಮಾ ಎಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು, ಹೇಗಾದರೂ ಕ್ಯೂವಿನ ಒಳಗೆ ಬಿಡಲಾದೀತೇ ಎಂದು ಪುಸಲಾಯಿಸಿದರು. ವಿಶೇಷ ದರ್ಶನಕ್ಕೂ ವಿಶೇಷವಾದ ದರ್ಶನ ವ್ಯವಸ್ಥೆ ಇರಬಹುದು ಎನ್ನಿಸಿದ್ದು ಆಗಲೇ! ’ಏಮಾನಾ ಇಚ್ಚೇಸ್ತಾನು, ಚೂಡು ನಾಯನಾ,’ ಅಂತ ಅವರು ಪುಸಲಾಯಿಸಿದಾಗ ಅಣ್ಣಾ ಹಜಾರೆ ಯಾಕೆ ಗೆಲ್ಲುವುದಿಲ್ಲ ಅಂತ ಅರ್ಥವಾಯಿತು. ಆದರೆ ಆ ಸೆಕ್ಯೂರಿಟಿಯವ ಬಗ್ಗಲಿಲ್ಲ. ಅಪ್ಪಟ ತೆಲುಗುವಿನಲ್ಲಿ ಅವ ಹೇಳಿದ್ದು, "ಆಗಲ್ಲಣ್ಣ. ಮೊದಲಾಗಿದ್ರೆ ಏನಾದ್ರೂ ಮಾಡಬಹುದಿತ್ತು. ಆದ್ರೆ ಈಗ ಸಿಸಿಟೀವಿ ಹಾಕಿಬಿಟ್ಟಿದಾರೆ. ಯಾರನ್ನಾದರೂ ಬಿಟ್ರೆ ತಕ್ಷಣ ಅಲ್ಲಿ ಗೊತ್ತಾಗಿ ಬಿಡುತ್ತೆ." ತಿಮ್ಮಪ್ಪನೂ ತರಲಾಗದ ನೈತಿಕ ಭಯವನ್ನು ತಂತ್ರಜ್ಞಾನ ತಂದಿತೇ?