Friday, April 6, 2007

ತೇಜಸ್ವಿಯವರಿಗೆ ನಮನಗಳು

ಪೂರ್ಣಚಂದ್ರ ಅಸ್ತಂಗತ. ಇದು ಟೀವಿ ಚಾನಲ್‌ ಒಂದರಲ್ಲಿ ಪೂಚಂತೇರವರ ನಿಧನದ ಬಗ್ಗೆ ಬಂದ ತಲೆಬರೆಹ. ಇದಕ್ಕಿಂತಲೂ ಉತ್ತಮ ತಲೆಬರೆಹ ಬೇಕಿಲ್ಲ. ಮೈಸೂರಿನ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಮಾತನಾಡಿದ ಹಿರಿಯ ಅಂಕಣಕಾರ ಹೆಚ್‌ಎಸ್‌ಕೆ ಹೇಳಿದ್ದು, ಪೂಚಂತೇ "ಕುವೆಂಪು ರವರ ಮಗನಾಗಿ ಗುರುತಿಸಲ್ಷಡುವುದಕ್ಕಿಂತಲೂ, ಕುವೆಂಪು ರವರು ತೇಜಸ್ವಿಯವರ ತಂದೆ ಎಂದು ಗುರುತಿಸಲ್ಪಟ್ಟಿರುವುದೇ ಹೆಚ್ಚು," ಎಂದು ನುಡಿದದ್ದು ಅಪ್ಪಟ ಸತ್ಯ. ಹೀಗೆ ಸುಪ್ರಸಿದ್ಧ ತಂದೆಯ ನೆರಳಿನಲ್ಲಿ ಬೆಳೆದೂ, ಹಲವು ಹೊಸ ಪ್ರತಿಭೆಗಳಿಗೆ ಆಸರೆಯಾಗುವ ದೊಡ್ಡ ಆಲದ ಮರವಾಗಿ ತೇಜಸ್ವಿ ಬೆಳೆದರು.

ತೇಜಸ್ವಿಯವರ ಸಾಹಿತ್ಯದ ಬಗ್ಗೆ ಹೇಳುವ ಸಾಮರ್ಥ್ಯ ನನಗಿಲ್ಲ. ಇಷ್ಟು ಮಾತ್ರ ಸತ್ಯ. ಅವರ ಸಾಹಿತ್ಯ ಕೇವಲ ಬುದ್ಧಿಜೀವಿಗಳಿಗಾಗಿಯಷ್ಟೆ ಇರಲಿಲ್ಲ. ಎಲ್ಲರಿಗೂ ದಕ್ಕುವಂತಹ ಅಪ್ಪಟ ಕನ್ನಡ ಜಾಯಮಾನದ ಸಾಹಿತ್ಯ ಎನ್ನಬಹುದು. ಬೇಂದ್ರೆ, ದೇವನೂರು, ತರಾಸುರವರಂತೆ ತೇಜಸ್ವಿಯವರ ಸಾಹಿತ್ಯವನ್ನು ಇಂಗ್ಲೀಶಿಗೆ ಅನುವಾದಿಸುವುದು ಬಹಳ ಕಷ್ಟಕರವಾದ ಕೆಲಸ. ಕನ್ನಡದ ಹಿರಿಯರೆನ್ನಿಸಿಕೊಂಡ ಇನ್ನೂ ಎಷ್ಟೋ ಕವಿ, ಲೇಖಕರ ಸಾಹಿತ್ಯವನ್ನು ಸುಲಭವಾಗಿ ಇಂಗ್ಲೀಶಿಗೆ ಅನುವಾದಿಸಬಹುದು. ಏಕೆಂದರೆ ಇವುಗಳಲ್ಲಿನ ಚಿಂತನೆಗಳಲ್ಲಿ ಇಂಗ್ಲೀಶಿನ ಜಾಯಮಾನ ಎದ್ದು ತೋರುತ್ತದೆ. ಆದರೆ ತೇಜಸ್ವಿಯವರ ಸಾಹಿತ್ಯದಲ್ಲಿ ತಾಯ್ನೆಲದ, ತಾಯ್ನುಡಿಯ ವಾಸನೆ ಎಷ್ಟು ಗಾಢವಾಗಿತ್ತೆಂದರೆ ಅದರಲ್ಲಿನ ಪದ, ಪದಗಳ ಹಿಂದಿನ ಭಾವಾರ್ಥಗಳಿಗೆ ಸರಿಸಮನಾದ ಇಂಗ್ಲೀಶಿನ ಪದಗಳನ್ನು ಹುಡುಕುವುದು ಬಹಳ ಕಷ್ಟವೆನ್ನಿಸುತ್ತಿತ್ತು.

ಬರವಣಿಗೆಯಲ್ಲಿ ಹೊಸ ಸ್ಫೂರ್ತಿ ನೀಡಿದ ಆ ಚೇತನಕ್ಕೆ ನನ್ನ ನಮನ.

ತೇಜಸ್ವಿಯವರ ಕಾದಂಬರಿಗಳಲ್ಲಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದು ಚಿದಂಬರ ರಹಸ್ಯ. ಪ್ರತಿಯೊಂದು ಅಧ್ಯಾಯವೂ ಪ್ರತ್ಯೇಕ ಕಥೆಯಾಗಿ ನಿಲ್ಲುವಂತೆ ವಿಶಿಷ್ಟ ತಂತ್ರವನ್ನು ಬಳಸಿದ ಕಾದಂಬರಿ ಇದು. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಸ್ವಾರ್ಥ ಇತ್ತಾದರೂ, ಉಳಿದ ಪಾತ್ರಗಳ ಪ್ರಭಾವದಿಂದಾಚೆಗೆ ಯಾವ ಪಾತ್ರವೂ ನಡೆದುಕೊಳ್ಳಲಾಗಲಿಲ್ಲ. ನಮಗೆ ಸಂಬಂಧವೇ ಇಲ್ಲದ ದೂರದ ಘಟನೆಯೊಂದು ನಮ್ಮ ಬದುಕನ್ನು ಎಲ್ಲೋ ಆಳವಾಗಿ ತಾಕುತ್ತದೆ. ಕೇವೋಸ್‌ ಸಿದ್ಧಾಂತದಂತೆ, ಯಾವುದೋ ನಿಕೃಷ್ಟ ಘಟನೆ ಬೃಹತ್ತಾಗಿ ಬೆಳೆದು ತೀವ್ರ ಪರಿಣಾಮ ಬೀರಬಹುದು. ಇಂತಹ ಘಟನೆಗಳಿಗೆ ಯಾವ ನಿಯಮ, ನೀತಿಗಳು ಲಗಾಮು ಹಾಕಲಾಗದು. ಚಿದಂಬರ ರಹಸ್ಯದ ಪ್ರತಿಯೊಂದು ಘಟನೆಗಳೂ ಹೀಗೆಯೇ ಅಲ್ಪ ಘಟನೆಗಳು. ಆದರೆ ಅವುಗಳ ಪರಿಣಾಮ ಮಾತ್ರ ತೀವ್ರ.

ಇಂದಿಗೂ ರಸ್ತೆಯಲ್ಲಿ ಎಲ್ಲಿಯಾದರೂ ಟಾರು ಬಳೆಯುವ ಯಂತ್ರ ಕಾಣಿಸಿದರೆ, ಚಿದಂಬರ ರಹಸ್ಯ ನೆನಪಾಗುತ್ತದೆ. ಹಾಗೆಯೇ, ಪೂಚಂತೇಯವರ ಹೆಸರು ಕೇಳಿದಾಗಲೆಲ್ಲ, ಕರ್ವಾಲೊ ರ ಚಿತ್ರ ಕಣ್ಮುಂದೆ ಸುಳಿಯುತ್ತದೆ. ಪೂಚಂತೇಯವರ ಚಿತ್ರವನ್ನು ನೋಡಿದಾಗಲೂ ಅದು ಅವರು ಅನ್ನಿಸುವುದಿಲ್ಲ. ಕರ್ವಾಲೋರವರ ಚಿತ್ರವಷ್ಟೆ ಸತ್ಯ ಎನ್ನಿಸುತ್ತದೆ.

Wednesday, April 4, 2007

Witness Box 3 ಸಾಕ್ಷಿಕಟ್ಟೆ ೩

"ಈವತ್ತಿಗೆ ನಿಮಗೆ ಮುಕ್ತಿ ಸಾರ್‌," ಎಂದರು ಪಟ್ಟಾಭಿರಾಮನ್‌. ಈತ ಮೈಸೂರಿನ ಒಂದು ಪೋಲೀಸ್‌ ಠಾಣೆಯ ಪೀಸಿ. ಕೋರ್ಟು ವ್ಯವಹಾರಗಳ ನಿರ್ವಹಣೆ ಇವರ ಕರ್ತವ್ಯ. ಪ್ರತಿ ಬಾರಿ ಕೋರ್ಟಿಗೆ ಹೋದಾಗಲೂ ಈತನಿಗೆ ಹಾಜರಿ ಒಪ್ಪಿಸಬೇಕಿತ್ತು. ಹಾಜರಿ ಒಪ್ಪಿಸಿದಾಗಲೆಲ್ಲ, ಅಳುಕಿನಿಂದಲೇ ದಯವಿಟ್ಟು ಒಳಗೆ ಕುಳಿತುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಿದ್ದ. ಪೋಲೀಸರಿಗೂ ಅಳುಕು ಎನ್ನುವುದು ಇರುತ್ತದೆ ಎನ್ನುವುದು ಪಟ್ಟಾಭಿರಾಮನ್‌ರನ್ನು ನೋಡಿ ತಿಳಿಯಿತು.

ಮುಕ್ತಿ ಸಿಕ್ಕಿದ್ದು ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವುದರಿಂದ ಎಂದು ಹೇಳಬೇಕಿಲ್ಲ, ಅಲ್ಲವೇ? ಎಂಟು ಬಾರಿ, ಎರಡೂವರೆ ವರುಷಗಳವರೆಗೆ ನ್ಯಾಯಾಲಯಕ್ಕೆ ತಿರುಗಿದ ಅನಂತರ ನನ್ನ ಸಾಕ್ಷಿ ಎನ್ನುವುದು ಮುಗಿಯಿತು. ಆ ಖಟ್ಲೆಯಲ್ಲಿ ಇದುವರೆವಿಗೂ ಮುಗಿದಿರುವುದು ಎರಡೇ ಸಾಕ್ಷಿಯ ವಿಚಾರಣೆ. ಇನ್ನೂ ಹತ್ತಾರು ಸಾಕ್ಷಿಗಳಿದ್ದಾರೆ. ಇವರೆಲ್ಲರ ಸಾಕ್ಷಿಯೂ ಮುಗಿದು, ಅಪಘಾತ ನಡೆಸಿದ ಚಾಲಕನಿಗೆ ದಂಡ ಸಿಗುವಷ್ಟರಲ್ಲಿ, ಆ ಚಾಲಕನಿಗೆ ಶಿಕ್ಷೆ ದೊರೆತೇ ಹೋಗಿರುತ್ತದೆ.

ನಾಗರೀಕ ಕರ್ತವ್ಯ ಎನ್ನುವ ಮನೋಭಾವದಿಂದ ಈ ರೀತಿಯಲ್ಲಿ ಸಾಕ್ಷಿ ಹೇಳುವವರಿಂದಾಗಿ ಪ್ರತಿದಿನವೂ ಎಷ್ಟು ಸಮಯ ಹಾಳಾಗುತ್ತಿರಬಹುದು ಎನ್ನುವುದಕ್ಕೆ ಒಂದು ಪುಟ್ಟ ಲೆಕ್ಕ ಹಾಕಿದೆ. ಹೇಗೂ, ನ್ಯಾಯಾಲಯದಲ್ಲಿ ನನ್ನನ್ನು ಸಾಕ್ಷಿ ಕಟ್ಟೆಗೆ ಕರೆಯುವವರೆವಿಗೂ ಅಲ್ಲಿನ ಬೆಂಚಿನ ಬಿಸಿ ಏರಿಸಬೇಕಿತ್ತಲ್ಲ! ಸಮಯ ಕಳೆಯಲು ಓ. ಹೆನ್ರಿಯ ಒಂದು ಪುಸ್ತಕವನ್ನು ಕೊಂಡೊಯ್ದಿದ್ದೆನಾದರೂ, ನ್ಯಾಯಾಲಯದೊಳಗೆ ಸಾಹಿತ್ಯ ಓದುವುದು ಅಪರಾಧವಿರಬಹುದೇ ಎನ್ನುವ ಆತಂಕ ಕಾಡಿ ಪುಸ್ತಕವನ್ನು ತೆರೆಯಲೇ ಇಲ್ಲ! ಬೆಳಗ್ಗೆ ಹತ್ತು ಗಂಟೆಗೆ ನ್ಯಾಯಾಲಯದೊಳ ಹೊಕ್ಕವನಿಗೆ ಮುಕ್ತಿ ಸಿಕ್ಕಾಗ ಸಂಜೆ ನಾಲ್ಕು ಗಂಟೆ. ನನ್ನ ಪಾಟೀಸವಾಲಿಗೆ ಸಂದ ಸಮಯ ಹತ್ತು ನಿಮಿಷಗಳು. ೩೬೦ ನಿಮಿಷಗಳಲ್ಲಿ ಪಾಟೀಸವಾಲಿನ ೧೦ ನಿಮಿಷ ಕಳೆದರೆ ಉಳಿದ ೩೫೦ ನಿಮಿಷಗಳು ನಾನು, ಅಪರಾಧಿ, ಹಾಗು ಅಪರಾಧಿಯ ವಕೀಲರಿಗೆ ಮಾಡುವುದು ಏನೂ ಇರಲಿಲ್ಲ.

ಹೀಗಾಗಿ ಒಂದು ಲೆಕ್ಕಾಚಾರ ಮಾಡಿದೆ. ಒಂದು ಅಂದಾಜಿನ ಪ್ರಕಾರ ಇಂದು ದೇಶಾದ್ಯಂತ ೧ ಕೋಟಿಗೂ ಹೆಚ್ಚು ಖಟ್ಲೆಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ. ಇವು ಪ್ರತಿಯೊಂದರಲ್ಲೂ ಒಬ್ಬ ಅಪರಾಧಿ, ಒಬ್ಬ ವಕೀಲ, ಒಬ್ಬ ಸಾಕ್ಷಿ ಇದ್ದಾರೆ ಎಂದಿಟ್ಟುಕೊಳ್ಳೋಣ. ದಿನವೊಂದಕ್ಕೆ ಒಂದೇ ಖಟ್ಲೆಯಲ್ಲಿ ಸಾಕ್ಷಿ ಮತ್ತು ಅಪರಾಧಿ ಹಾಜರಾಗುವುದರಿಂದ ಇವರಿಬ್ಬರ ದಿನವೂ ವ್ಯಯವಾಯಿತು. ಈ ಒಂದುಕೋಟಿ ಕೇಸುಗಳು ತಿಂಗಳಲ್ಲಿ ಒಮ್ಮೆ ಮಾತ್ರ ವಿಚಾರಣೆಗೆ ಬರುತ್ತವೆ ಎನ್ನೋಣ. ಹಾಗಿದ್ದರೆ ಪ್ರತಿ ತಿಂಗಳೂ ಎರಡು ಕೋಟಿ ಜನರು ತಮ್ಮ ಒಂದು ದಿನವನ್ನು ನ್ಯಾಯಾಲಯದಲ್ಲಿಯೇ ಕಳೆಯುತ್ತಾರೆ ಎಂದಾಯಿತು. ಕೆಲವು ಖಟ್ಲೆಗಳಲ್ಲಿ ಹತ್ತಾರು ಸಾಕ್ಷಿಗಳಿರುತ್ತಾರೆ. ಎಲ್ಲರ ವಿಚಾರಣೆಯೂ ಒಂದೇ ದಿನ ಆಗದಿದ್ದರೂ, ಎಲ್ಲರೂ ನ್ಯಾಯಾಲಯಕ್ಕೆ ಹಾಜರಿರಲೇ ಬೇಕು. ಹಾಗಿದ್ದರೆ ಎಷ್ಟು ಕಾಲ ವ್ಯಯವಾಗುತ್ತಿದೆ ಎನ್ನುವುದನ್ನು ಗಮನಿಸಿ. ಇದಕ್ಕೆ ಪರಿಹಾರ ಇಲ್ಲವೇ?

ಇಂದಿನ ಐಟಿ ಯುಗದಲ್ಲಿಯೂ ಮೊದಲು ಹಾಜರಿ ಕರೆದು ಅನಂತರ ವಿಚಾರಣೆಗೆ ತೊಡಗುವುದು ಅವಶ್ಯವೇ? ಹಾಜರಿಯನ್ನು ಮೊದಲೇ ಖಾತರಿ ಪಡಿಸಿಕೊಳ್ಳಲು ಆಗುವುದಿಲ್ಲವೇ? ಇವೆಲ್ಲ ಪ್ರಶ್ನೆಗಳು ಕಾಡಿತು.


ಈ ಲೆಕ್ಕಾಚಾರಗಳ ನಡುವೆ ನ್ಯಾಯಾಲಯದಲ್ಲಿ ನಡೆದ ಸ್ವಾರಸ್ಯಕರವಾದ ಘಟನೆಯೊಂದಕ್ಕೂ ನಾನು ಸಾಕ್ಷಿ ಆದೆ. ಒಂದು ಕಳ್ಳತನದ ಖಟ್ಲೆ. ಫಿರ್ಯಾದುದಾರರು ೭೦ ವರುಷದ ಮುದುಕ. ನಿವೃತ್ತ ಮೇಷ್ಟರು. ಮನೆಯಲ್ಲಿದ್ದ ೪೦ ಗ್ರಾಂ ಆಭರಣವನ್ನು ತಮ್ಮ ಪರಿಚಿತನಾದ ಆಟೋ ಚಾಲಕನೊಬ್ಬ ಸಮಯ ಸಾಧಿಸಿ ಕದ್ದಿದ್ದ ಎಂದು ದೂರು ನೀಡಿದ್ದರು. ಅಪರಾಧಿಯೂ ಅಲ್ಲಿದ್ದ. ಆತ ಅಡವಿಟ್ಟಿದ್ದ ಒಡವೆಗಳೂ ಸಿಕ್ಕಿದ್ದುವು. ಈಗ ನಡೆದಿದ್ದುದು ವಿಚಾರಣೆ. ಮೇಷ್ಟರನ್ನು ವಿಚಾರಣೆಗೆ ಕರೆಸಿ ವಿವರಗಳನ್ನು ಸರಕಾರಿ ಲಾಯರು ಕೇಳಿದರು. ಅನಂತರ ಪಾಟೀ ಸವಾಲು. ಆ ದಿನ ನಡೆದ ಎಲ್ಲ ಪಾಟೀ ಸವಾಲುಗಳಲ್ಲಿಯೂ ಒಂದೆರಡು ಪ್ರಶ್ನೆಗಳು ಸಾಮಾನ್ಯವಾಗಿರುತ್ತಿದ್ದುವು. "ನೀವು ಅಪರಾಧಿಯ ಮೇಲೆ ಯಾವುದೋ ವೈಷಮ್ಯದಿಂದ ದೂರು ನೀಡಿದ್ದೀರಿ." "ಪೋಲೀಸರು ನಿಮಗೆ ಪರಿಚಯ. ಅದರಿಂದಾಗಿ ಅವರೇ ಹೇಳಿ ಈ ಖಟ್ಲೆ ಹೂಡಿದ್ದಾರೆ." "ದೂರು ನೀವು ಕೊಟ್ಟಿಲ್ಲ. ಪೋಲೀಸರೇ ಬರೆದು ನಿಮ್ಮಿಂದ ಸಹಿ ಮಾತ್ರ ಪಡೆದುಕೊಂಡಿದ್ದಾರೆ." "ಪೋಲೀಸರು ಪತ್ತೆ ಮಾಡಿದ ಕೇಸುಗಳ ಸಂಖ್ಯೆ ಹೆಚ್ಚಾಗಲಿ ಎಂದು ಯಾರನ್ನೋ ಹಿಡಿದು ದೂರು ಕೊಟ್ಟಿದ್ದಾರೆ." ಹೀಗೆ.

ಮೇಷ್ಟರಿಗೂ ಇಂತಹುದೇ ಪಾಟೀಸವಾಲು ಎದುರಾಯಿತು. ಪಾಟೀ ಸವಾಲು ನಡೆಸಿದ ಎದುರು ಪಕ್ಷದ ವಕೀಲರು, ಮೇಷ್ಟರನ್ನು "ನೀವು ಹಿಂದಿನ ದಿನ ರಾತ್ರಿ ಆಟೋ ಚಾಲಕ ವಾಡಿಕೆಗಿಂತಲೂ ಹೆಚ್ಚು ಹಣ ಕೇಳಿದ್ದಕ್ಕೆ, ಜಗಳವಾಡಿ ಆ ಸಿಟ್ಟಿನಿಂದ ಸುಳ್ಳು ಕೇಸು ಹಾಕಿದ್ದೀರಾ?" ಎಂದು ಆರೋಪಿಸಿದ. ಮೇಷ್ಟರು ಸಿಟ್ಟಿನಿಂದ ನಾನು ಆಟೋ ಹತ್ತಲೇ ಇಲ್ಲ ಆ ದಿನ ಅಂತ ಹೇಳಿದ ಮೇಲೂ ಈ ಪ್ರಶ್ನೆ ಕೇಳುತ್ತಿದ್ದೀರಲ್ಲ? ಇದೇನು ಸರಿಯಾ?" ಎಂದು ದಬಾಯಿಸಿದಾಗ, ನ್ಯಾಯಾಧೀಶರು ಸಾಕ್ಷಿ ಕೇವಲ ಇಲ್ಲ, ಹೌದು ಎನ್ನುವ ಉತ್ತರವನ್ನಷ್ಟೆ ಹೇಳಬೇಕು ಎಂದರು.

ಇದಾದಮೇಲೆ ಮೇಷ್ಟರ ಅಮ್ಮ (೮೭ ವರುಷದ ಮುದುಕಿ)ನ ಪಾಟೀಸವಾಲು. "ಆರೋಪಿ ಅಲಮಾರಿ ತೆಗೆದಾಗ ನಿಮಗೆ ಸದ್ದು ಕೇಳಿಸಲಿಲ್ಲವೇ?" "ಇಲ್ಲ." "ನಿಮಗೆ ನಾನು ಹೇಳುತ್ತಿರುವುದು ಕೇಳಿಸುತ್ತಿದೆಯೇ?" "ಏನಪ್ಪ ಕೇಳಿದೆ?" ಒಟ್ಟಿನಲ್ಲಿ ಆಕೆಯ ಕಿವಿ ಮಂದ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿತ್ತು. ಆದರೂ, ಎದುರು ಪಕ್ಷದ ವಕೀಲರು ಕೆಲವು ಪ್ರಶ್ನೆಗಳನ್ನು ಕೇಳಿದಾಗ ಆಕೆ ಹೌದು ಎನ್ನುವಂತೆ ತಲೆಯಾಡಿಸುತ್ತಿದ್ದರು. ಇದು ತಮ್ಮ ಸಾಕ್ಷಿಗೆ ವಿರುದ್ಧವಾಗಿದೆ ಎಂದು ತಿಳಿದಾಗ ಮೇಷ್ಟರು ಎದ್ದು ನ್ಯಾಯಾಧೀಶರನ್ನು ಉದ್ದೇಶಿಸಿ ಆಕೆಗೆ ಪ್ರಶ್ನೆ ಸರಿಯಾಗಿ ತಿಳಿಯಲಿಲ್ಲ ಎನ್ನಿಸುತ್ತದೆ ಎಂದಾಗ ಆತನನ್ನು ಹಾಗೆ ಮಧ್ಯೆ ಪ್ರವೇಶಿಸಿ ಮಾತನಾಡುವುದು ಅವಮರ್ಯಾದೆ ಮಾಡಿದಂತೆ ಎಂದು ಕುಳ್ಳಿರಿಸಲಾಯಿತು. ಅಜ್ಜಿಗೆ ಕಿವಿ ಕೇಳುತ್ತಿಲ್ಲ ಎಂದು ತಿಳಿದರೂ, ಪಾಟೀ ಸವಾಲು ಮುಂದುವರೆದು, ಆಕೆ ಎಲ್ಲಕ್ಕೂ ತಲೆ ಆಡಿಸುವುದು ನಡೆಯಿತು. ಇಡೀ ನ್ಯಾಯಾಲಯದಲ್ಲಿ ಮುಸು, ಮುಸು ನಗೆ ಹಬ್ಬಿತ್ತು. ಆದರೆ ಯಾರೂ ಆಕೆಗೆ ಕೇಳುಸುವಂತೆ ಪ್ರಶ್ನೆ ಕೇಳಲಿ ಎಂದು ಹೇಳಲಿಲ್ಲ. ನ್ಯಾಯಾಧೀಶರೂ ಸಹ. ಸಾಕ್ಷಿಗೆ ನಡುವೆ ನ್ಯಾಯಾಧೀಶರು ಹಾಗೆ ಸಹಾಯ ಮಾಡುವುದು ಕಾನೂನಿಗೆ ವಿರುದ್ಧವೇನೋ? ಒಟ್ಟಾರೆ, ತಾನು ಏನು ಸಾಕ್ಷಿ ಹೇಳಿದೆ ಎನ್ನುವುದು ತಿಳಿಯದೆಯೇ ಆ ಅಜ್ಜಿ ಸಾಕ್ಷಿ ಹೇಳಿಯಾಗಿತ್ತು.