Thursday, May 10, 2007

ಗಂಡ-ಹೆಂಡತಿ

ಈ ಬಗ್ಗೆ ನಾನು ಎಂದೂ ಗಂಭೀರವಾಗಿ ಚಿಂತಿಸಿರಲಿಲ್ಲ. ಈಗಲೂ ಅಷ್ಟು ಗಹನವಾಗಿ ಚಿಂತಿಸುತ್ತಿಲ್ಲವೇನೋ? ಆದರೆ ಈ ಬ್ಲಾಗ್‌ ಬರೆಯಲು ಕಾರಣ, ಮೊನ್ನೆ ಮಂಜುವಿನ ಜೊತೆಗೆ ನಡೆದ ಸಂವಾದ ಹಾಗೂ ಸಂಜೆ ರಜೆಗೆಂದು ಊರಿಗೆ ತೆರಳಿರುವ ಮಡದಿ ಫೋನಾಯಿಸಿ, "ಐ ಮಿಸ್‌ ಯು" ಎಂದದ್ದು.

ಹಾಗಂತ ನಮ್ಮ ದಾಂಪತ್ಯವೇನೂ ಇತ್ತೀಚಿನದಲ್ಲ. ೨೩ ವರುಷಗಳ ಹಿಂದೆಯೇ ಒಬ್ಬರಿನ್ನೊಬ್ಬರ ಜೊತೆ ಇಡೀ ಜೀವನ ಸವೆಸೋಣ ಎಂದು ತೀರ್ಮಾನಿಸಿದ್ದೆವು. ಆಗ ಈ ಬಗ್ಗೆ ಏನೋ ಹೊಸ ಖುಷಿ ಇತ್ತು. ಕಛೇರಿ ರಾಜಕೀಯ, ಸೈಟ್‌ ಬೆಲೆ ಅತಿ ಹೆಚ್ಚಾಗಿ ಹೋದ ಚಿಂತೆ, ಮಕ್ಕಳು ಶಾಲೆಯಿಂದ ಬಂದ ಅನಂತರ ಸರಿಯಾಗ ಊಟ ಮಾಡದ ಬಗ್ಗೆ ಆತಂಕ, ಪ್ರತಿದಿನವೂ ನೀರು ಸರಬರಾಜು ಆಗುತ್ತದೆ ಎಂದು ನಿತ್ಯ ಪತ್ರಿಕೆಯಲ್ಲಿ ಓದಿದ ಮೇಲೂ ನಲ್ಲಿಯ ಮುಂದೆ ತಪಸ್ಸು ಮಾಡಬೇಕಾದ ಅನಿವಾರ್ಯತೆ, ಇನ್‌ಕಂಟ್ಯಾಕ್ಸ್ ಹೆಚ್ಚಾದ ಗತಿಯಲ್ಲಿಯೇ ಇಂಕ್ರಿಮೆಂಟೂ ಏಕೆ ಹೆಚ್ಚಾಗುವುದಿಲ್ಲವೋ? ಇಂಕ್ರಿಮೆಂಟು ಹೆಚ್ಚಾದ ಗತಿಗಿಂತ ತರಕಾರಿಯ ಬೆಲೆ ಹೆಚ್ಚುವುದು ಯಾವಾಗಲೂ ತೀವ್ರವೇಕೋ? ಎಂಬ ಉತ್ತರವೇ ಇರದ ಪ್ರಶ್ನೆಗಳು,ಇತ್ಯಾದಿಗಳ ನಡುವೆ ನಾನು-ನೀನು ಎನ್ನುವ ಸಂಬಂಧವನ್ನು ಕುರಿತು ಮಾತನಾಡುವುದೇ ಮರೆತು ಹೋಗಿತ್ತೆನ್ನಿಸಿತು, ಮೊನ್ನೆ ನನ್ನವಳ ಕರೆ ಬರುವವರೆಗೆ.

ಇಪ್ಪತ್ತನಾಲ್ಕು ವರುಷಗಳ ಹಿಂದೆ ಸಾವಿರ ಮೈಲು ದೂರದಲ್ಲಿದ್ದಾಗ ಇದ್ದಷ್ಟು ಆತ್ಮೀಯತೆ ಈಗ ಕಡಿಮೆ ಆಗಿದೆಯೇನೋ? Familiarity breeds contempt ಅಂತಾರಲ್ಲ. ಸಹವಾಸದಿಂದ ಸಂಬಂಧಗಳು ಕೊಳೆಯುತ್ತವೆಯೋ? ಸಣ್ಣ ಪುಟ್ಟ ಸಂಗತಿಗಳ ಬಗ್ಗೆ ಉಂಟಾಗುತ್ತಿದ್ದ ವಿರಸ, ಸರಸವನ್ನು ಮರೆಸುತ್ತಿತ್ತೇನೋ?

ಇಪ್ಪತ್ತು ವರುಷದ ಸಹವಾಸದ ಬಗ್ಗೆಯೇ ಇಷ್ಟು ತೀವ್ರವಾಗಿ ಆಲೋಚಿಸುವವನಿಗೆ ಎಪ್ಪತ್ತು ವರುಷದ ಸಹವಾಸ ಮಾಡಿದವರ ಬಗ್ಗೆ ಆಲೋಚಿಸುವುದು ತಿಳಿದೀತೇ? ನಮ್ಮ ದಾಂಪತ್ಯದ ಬಗ್ಗೆಯೇ ಯೋಚಿಸುತ್ತಿದ್ದವನಿಗೆ ಅಪ್ಪನ ಮರಣ, ಎದ್ದು ಎದೆಗೊದೆದದ್ದು ನಿಜ. ಎಪ್ಪತ್ತು ವರುಷಗಳ ಕಾಲ ತನ್ನ ಜೊತೆಗಿದ್ದ ಒಂದು ಜೀವ ಮರೆಯಾಗಿ, ಮಣ್ಣಾಗಿ ಹೋಗಿದ್ದನ್ನು ತಾಯಿ ತಡೆದುಕೊಳ್ಳಬಹುದೇ? ಇಷ್ಟು ದೀರ್ಘ ಕಾಲ ಜೊತೆಗಿದ್ದ ಆಕೆಯ ಮನಸ್ಸಿನಲ್ಲಿ ಎಂತಹ ಭಾವನೆಗಳು ಇರಬಹುದು ಎನ್ನುವ ಪ್ರಶ್ನೆಗಳು ಅಪ್ಪನ ಚಿತೆಗೆ ಬೆಂಕಿಯಿಡುವಾಗಲೂ ಕಾಡುತ್ತಿತ್ತು.

ಉತ್ತರಕ್ಕೆ ಬಹಳ ದಿನ ಕಾಯಬೇಕಾಗಲಿಲ್ಲ. ನಿತ್ಯವೂ ಊಟ ಮಾಡುವಾಗ, ಅಥವಾ ಮಗ ಆಟವಾಡುವಾಗಲೂ ಅದರಲ್ಲಿ ತಂದೆಯ ಛಾಪನ್ನು ಅಮ್ಮ ಕಾಣುತ್ತಿದ್ದಳು. ನಿಜ. ಮೊಮ್ಮಗನಲ್ಲಿ ತಾತನ ಕಾಲು ಭಾಗ ವಂಶವಾಹಿಗಳು ಇರುತ್ತವೆ ಎನ್ನುವುದು ವಿಜ್ಞಾನ ಕಲಿತ ನನಗೆ ತಿಳಿಯದ್ದಲ್ಲ. ಆದರೆ ಅಪ್ಪ ಇರುವವರೆವಿಗೂ ಅಮ್ಮನಿಗೆ ಕಾಣದ ಈ ಸಾಮ್ಯ ಈಗ ಆ ಒಂಟಿತನದ ಕಾರಣವಾಗಿ ಎದ್ದು ತೋರುತ್ತಿತ್ತು. ನಾವೆಲ್ಲ ಬೆಳೆಯುತ್ತಿದ್ದಂತೆ ಅಪ್ಪ-ಅಮ್ಮನ ನಡುವೆ ತೀವ್ರವಾಗಿ ಕಾಣುತ್ತಿದ್ದ ವಿರಸ ಎಲ್ಲಿ ಹೋಯಿತೋ ತಿಳಿಯಲಿಲ್ಲ. ಇಡ್ಲಿಯ ಹಿಟ್ಟಿನ ಹದದಲ್ಲಿ, ದೇವರ ಪೂಜೆಗೆ ಹತ್ತಿಸಿದ ಗಂಧದ ಕಡ್ಡಿಯ ಪರಿಮಳದಲ್ಲಿ, ಕೊನೆಗೆ ಉಪ್ಪು ಕಟ್ಟಿ ಸೋರುತ್ತಿದ್ದ ನಲ್ಲಿಯಲ್ಲೂ ಅಪ್ಪನ ನೆನಪು ಅಮ್ಮನಿಗೆ ಕಾಡುತ್ತಿತ್ತು. ಅಸಹನೆಯಿಂದ ಮಕ್ಕಳ ಎದುರಿಗೇ ಅಪ್ಪನನ್ನು ಗದರಿಸುತ್ತಿದ್ದ ಅಮ್ಮ ಎಲ್ಲಿ, ಈಗ ಕಾಣಲು ಎದುರಿಗಿಲ್ಲದ ಜೀವದ ಬಗ್ಗೆ ಹಳಹಳಿಸುವವಳೆಲ್ಲಿ? ಇದೆಂತಹ ವಿಚಿತ್ರ ಎನ್ನಿಸಿತು.

ಕೆಲವು ವರುಷಗಳ ಹಿಂದೆ ಅಮೆರಿಕೆಯ ಮನಶ್ಶಾಸ್ತ್ರಜ್ಞರೊಬ್ಬರು ಸುದೀರ್ಘ ದಾಂಪತ್ಯ ನಡೆಸಿದ (ಅಮೆರಿಕೆಯ ಮುಕ್ತ ಸಮಾಜದಲ್ಲಿ ಇದು ಬಲು ಅಪರೂಪದ ವಿಷಯವಷ್ಟೆ!) ದಂಪತಿಗಳನ್ನು ಅಧ್ಯಯನ ಮಾಡಿ, ಇಂತಹ ಗಂಡ-ಹೆಂಡತಿ ಇಬ್ಬರ ಮನೋಭಾವ ಹಾಗೂ ಮುಖಭಾವಗಳಲ್ಲಿ ಕಾಲ ಕಳೆದಂತೆಲ್ಲ ಸಾಮ್ಯ ತೋರಿಬರುತ್ತದೆ ಎಂದು ಗುರುತಿಸಿದ್ದರು. ಮನೋಭಾವದಲ್ಲಿ ಇರಬಹುದು. ಯಾರೊಬ್ಬರ ಜೊತೆಗಿನ ಹೊಂದಾಣಿಕೆಗಾಗಿ ತಮ್ಮ ಅನಿಸಿಕೆಗಳನ್ನು ಬದಲಿಸಿಕೊಂಡೋ, ಹತ್ತಿಕ್ಕಿಕೊಂಡೋ ನಡೆದಾಗ ಇಬ್ಬರ ಮನೋಭಾವವೂ ಒಂದೇ ಆದಂತೆ ಕಾಣಬಹುದು ಎಂದು ಸಮಾಧಾನ ಹೇಳಿಕೊಂಡಿದ್ದೆ. ಮುಖಭಾವ ಒಂದೇ ಆಗಿರುತ್ತದೆ ಎನ್ನುವುದು ತುಸು ಅತಿರೇಕದ ತೀರ್ಮಾನ ಎನ್ನಿಸಿತ್ತು. ನಮ್ಮ ಜೋಡಿಯನ್ನೇ ನೋಡಿದವರು ನನ್ನ ತೀರ್ಮಾನವನ್ನು ಖಂಡಿತ ಒಪ್ಪುತ್ತಾರೆ! ನನ್ನವಳು ಇಪ್ಪತ್ತು ವರುಷಗಳ ಹಿಂದೆ ಹೇಗಿದ್ದಳೋ ಹಾಗೆಯೇ ಕಾಣಿಸುತ್ತಾಳೆ. ಆದರೆ ಕನ್ನಡಿ ನನ್ನ ನರೆತ ಕೂದಲನ್ನು ಬಿಚ್ಚುಮನಸ್ಸಿನಿಂದ ಪ್ರತಿಬಿಂಬಿಸುತ್ತದೆ.

ಮೊನ್ನೆ ಮಡದಿ ಊರಿನಲ್ಲಿರುವಾಗ ಇದ್ದಕ್ಕಿದ್ದ ಹಾಗೆ ಬಂದೆರಗಿದ ಮೈಗ್ರೇನ್‌ ಇಷ್ಟೆಲ್ಲ ಆಲೋಚನೆಗೆ ಕಾರಣ. ಅವಳಿದ್ದಿದ್ದರೆ, ನನ್ನ ಮೌನವನ್ನು ಅಥವಾ ನಾನು ಕುಳಿತ ಭಂಗಿಯನ್ನು ಗಮನಿಸಿಯೇ ತಲೆನೋವೇ ಎಂದು ಕೇಳಿಬಿಡುತ್ತಿದ್ದಳು. ಕೆಲವೊಮ್ಮೆ ಹೀಗಾಗಿ ಇಲ್ಲ ಎಂದು ಮರೆಮಾಚುತ್ತಿದ್ದೆ. ಆದರೂ ನಾನು ಹೇಳುವುದು ಸುಳ್ಳು ಎನ್ನುತ್ತಿದ್ದಳು. ನನ್ನ ತಲನೋವು ಅವಳಿಗೆ ಹೇಗೆ ತಟ್ಟುತ್ತದೆಯೋ ತಿಳಿಯುವುದಿಲ್ಲ! ಹೀಗೇ ಏನಾದರೂ ಬರೆಯುವಾಗ 'ಅಯ್ಯೋ, ಒಂದು ಗುಟುಕು ಚಹಾ ಇದ್ದಿದ್ದರೆ,' ಎನಿಸುವಷ್ಟರಲ್ಲಿ ಚಹಾ ಟೇಬಲಿಗೆ ಬರುತ್ತಿತ್ತು. ನನಗೆ ಚಹಾ ಬೇಕೆನಿಸುವ ಸಮಯದಲ್ಲಿಯೇ ಅದು ದೊರೆಯುತ್ತಿತ್ತು. ರಜೆಯಲ್ಲಿ ಊರಿಗೆ ಹೋದಾಗ, ಇದ್ದಕ್ಕಿದ್ದ ಹಾಗೆ 'ಚಹಾ ಬೇಕೆ?' ಎನ್ನುವ ಪ್ರಶ್ನೆ ಬರುತ್ತಿತ್ತು. ಹಾಗೆ ಬೇಕೆನ್ನಿಸಿದ ಸಮಯದಲ್ಲಿಯೇ ಈ ಪ್ರಶ್ನೆ ಬರುತ್ತಿದ್ದದ್ದು ಸಖತ್‌ ಅಚ್ಚರಿಯ ವಿಷಯ. ಹೇಗೆ ತಿಳಿಯಿತು ಎಂದರೆ ಒಂದು ಮುಗುಳ್ನಗೆಯೇ ಉತ್ತರವಾಗಿರುತ್ತಿತ್ತು.

ಆದರೆ ಈ ಬಗೆಯ ಚಿಂತೆಗಳು ನನಗೇಕೆ ಬರುವುದಿಲ್ಲವೋ, ಗೊತ್ತಿಲ್ಲ. ಜವಳಿ ಅಂಗಡಿಯ ಮುಂದೆ ಹೋದಾಗಲೂ ಸೀರೆ ಬೇಕೆ ಎಂದು ಕೇಳುವುದಿಲ್ಲ. ಅಕ್ಷಯ ತ್ರಿತೀಯದಂದು ಊರಿಗೆ ಊರೇ ಚಿನಿವಾರರ ಅಂಗಡಿಗೆ ದಾಳಿ ಹಾಕಿದ್ದರೂ ಮಡದಿಯನ್ನು ಕರೆದೊಯ್ಯಬೇಕೆನ್ನಿಸಿರಲಿಲ್ಲ! ಹಾಗಿದ್ದರೂ, "ಐ ಮಿಸ್‌ ಯು" ಎಂದಳಲ್ಲ! ಏನು ಉತ್ತರ ಕೊಡಲಿ?

(ಇದನ್ನು ಬರೆದ ಮೇಲೆ, ನನ್ನ ಮೆಚ್ಚಿನ ಬ್ಲಾಗ್‌ (ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ನಲ್ಲಿ ಪ್ರೊಫೆಸರ್‌ ಆಗಿರುವ ಡಾ. ಅಭಿರಾಮನ್‌ರವರ ಬ್ಲಾಗ್‌) ನಾನೊಪಾಲಿಟನ್‌ ನಲ್ಲಿ ಈ ಒಂದು ಸಂವಾದವನ್ನು ಕಂಡೆ: ನ್ಯೂ ಯಾರ್ಕ್‌ ಟೈಂಸ್‌ನ ಸಾರಾ ಡೇವಿಡ್‌ಸನ್‌ ಅಮೆರಿಕೆಯ ನ್ಯಾಶನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಏಜಿಂಗ್‌ನ ಪ್ರೊಫೆಸರ್‌ ರಾಬರ್ಟ್‌ ಬಟ್ಲರ್‌ರವರ ಜೊತೆ ನಡೆಸಿದ ಸಂವಾದ ಇದು.

ಸಾರಾ: What about the institution of marriage? If you’re going to live to 100 and get married at 22 or 25. ... (ಮದುವೆಯ ಬಗ್ಗೆ ಏನು ಹೇಳುವಿರಿ? ನೀವು ನೂರು ವರುಷ ಬದುಕುವವರಾಗಿದ್ದು, ೨೨-೨೫ ವಯಸ್ಸಿನಲ್ಲಿ ಮದುವೆಯಾದರೆ...)

ಬಟ್ಲರ್‌: BUTLER: Oh, you are evil. (ಓಹ್‌.. ನೀನು ಬಲು ಕಿಲಾಡಿ..)

ಸಾರಾ: Are you still going to vow “till death do us part”? (ಆಗಲೂ ಸಾಯುವವರೆವಿಗೂ ಜೊತೆಗಿರೋಣ ಎಂದು ಶಪಥ ಮಾಡುವಿರಾ?)

ಬಟ್ಲರ್‌ BUTLER: There’s a demographer, Peter Uhlenberg, who said that divorce is a substitute for death, because in the old days there was enough death, unfortunately, particularly of women in childbirth, that the men would remarry. Someone even calculated that marriage now lasts about as long as it did then, it was ended by death rather than by divorce. (ಪೀಟರ್‌ ಉಲೆನ್‌ಬರ್ಗ್ ಎನ್ನುವ ಸಮುದಾಯ ವಿಜ್ಞಾನಿ ವಿಚ್ಛೇದನ ಸಾವಿಗೆ ಪರ್ಯಾಯ ಎಂದು ಹೇಳಿದ್ದಾನೆ. ಏಕೆಂದರೆ ಹಿಂದೆ ಸಾವು ಸಾಕಷ್ಟು ಇರುತ್ತಿತ್ತು. ದುರದೃಷ್ಟವಶಾತ್‌, ಮಗುವಿನ ಹುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಸಾವಿಗೀಡಾಗಿ,ಗಂಡಂದಿರು ಮರುಮದುವೆಯಾಗಬಹುದಿತ್ತು. ಈಗಲೂ ಮದುವೆಯ ಬಂಧ ಅಂದಿನಷ್ಟೇ ದೀರ್ಘವಾಗಿದೆ ಎಂದು ಯಾರೋ ಲೆಕ್ಕ ಹಾಕಿದ್ದಾರೆ. ಆಗ ಅದು ವಿಚ್ಛೇದನದ ಬದಲಿಗೆ ಸಾವಿನಿಂದ ಕೊನೆಗೊಳ್ಳುತ್ತಿತ್ತು.)


ಈ ಲೆಕ್ಕಾಚಾರದಲ್ಲಿ ನಮ್ಮಲ್ಲಿ ಈಗ ವಿವಾಹ ಎಂಬ ವ್ಯವಸ್ಥೆ ಇನ್ನಷ್ಟು ದೀರ್ಘವಾಗಿದೆ ಎನ್ನೋಣವೇ?

2 comments:

Manjunatha Kollegala said...

ಈ ಸೊಗಸಾದ ಲೇಖನದ ಸೃಷ್ಟಿಗೆ ಕಾರಣವಾದ ನಮ್ಮ ಸಂವಾದ ಯಾವುದು ಎಂದು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಇಷ್ಟುಹೊತ್ತಿಗೆ ತಮ್ಮ ವಿರಹ ಸಮಾಪ್ತಿಯಾಗಿ ಹೊತ್ತು ಹೊತ್ತಿಗೆ ಎಂದಿನಂತೆ ಟೀ ಸಿಕ್ಕುತ್ತಿರಬಹುದು ಎಂದು ಭಾವಿಸುತ್ತೇನೆ.

ನಿಮ್ಮ ಲೇಖನ ಪ್ರಾತಿನಿಧಿಕವಾಗಿದೆ (ಹಾಗೂ ಆ ಕಾರಣಕ್ಕೇ ಹೆಚ್ಚು ಚೆನ್ನ ಅನ್ನಿಸುತ್ತದೆ). ಹಾಗೂ ಅದು ಪ್ರತಿನಿಧಿಸುವ ಮನಸ್ಸುಗಳಲ್ಲಿ ನನ್ನದೂ ಒಂದು... thanks ;)

Anonymous said...

Awesome!