Sunday, November 22, 2009

ಜಾಗತೀಕರಣ

ಮೊನ್ನೆ ಅಮೆರಿಕೆಯಲ್ಲಿ ಓದುತ್ತಿರುವ ಮಗಳ ಫೋನ್‌. ಅಪ್ಪಾ... "ಮುಂದಿನ ತಿಂಗಳು ಕ್ರಿಸ್‌ಮಸ್‌ಗಾಗಿ ಇಲ್ಲಿ ರಿಯಾಯಿತಿ ಮಾರಾಟ ಇರುತ್ತದೆ. ನಿನಗೆ ಏನಾದರೂ ಬೇಕಾದರೆ ಹೇಳು. ರಜೆಗೆ ಬರುವಾಗ ಕೊಂಡು ತರುತ್ತೇನೆ," ಅಂದಳು. ಹೇಳಿ, ಕೇಳಿ ಅಮೆರಿಕೆ. ಅಲ್ಲಿ ಪ್ರತಿ ಡಾಲರನ್ನೂ ರೂಪಾಯಿಗೆ ಪರಿವರ್ತಿಸಿಕೊಂಡು ಲೆಕ್ಕ ಹಾಕುವ ಮಗಳು ಹೀಗೆ ಹೇಳಿದಾಗ ಆಶ್ಚರ್ಯವೆನಿಸಿತು. "ಏನೂ ಬೇಡಮ್ಮ," ಎಂದೆ. ಆದರೆ ಅವಳು ಬಿಡಬೇಕಲ್ಲ. "ಏನು ಬೇಕು ಹೇಳು ತರ್ತೀನಿ" ಅಂತ ಹಠ ಹಿಡಿದಳು. ಎಲ್ಲ ಅಪ್ಪಂದಿರ ಹಾಗೇ ವಿನಾಕಾರಣ ಖರ್ಚು ಮಾಡಿ ತೊಂದರೆಗೆ ಮಗಳು ಸಿಕ್ಕಿಕೊಳ್ಳಬಹುದು ಎನ್ನಿಸಿ, ಮತ್ತೊಮ್ಮೆ ಏನೂ ಬೇಡ ಅಂದೆ. ಆದರೂ ಅವಳ ವರಾತ ಹೆಚ್ಚಾದಾಗ, "ಇಲ್ಲಿ ಸಿಗದ್ದು ಅಲ್ಲಿದ್ದರೆ ತೊಗೊಂಡು ಬಾ." ಎಂದೆ.

ನಾನು ಅಮೆರಿಕೆಗೆ ಹೋಗಿಲ್ಲ. ಹೋಗುವ ಹುಮ್ಮಸ್ಸೂ ಇಲ್ಲ. ಇಡೀ ಕರ್ನಾಟಕವನ್ನೇ ಸುತ್ತಿ ಬಂದರೂ ಎರಡು ಜನ್ಮ ಸಾಲದಷ್ಟು ನೋಡುವುದಿದೆ. ನೂರು ಜನ್ಮ ಕಳೆದರೂ ಭಾರತವನ್ನು ಪೂರ್ತಿ ಸುತ್ತಿ ನೋಡಲಾಗುವುದಿಲ್ಲ. ಇನ್ನು ಅಮೆರಿಕೆಗೋ, ಯುರೋಪಿಗೋ ಹೋಗಿ ಬಂದರೆ ಸಾಕೇ ಅನ್ನುವುದು ನನ್ನ ಅನಿಸಿಕೆ. ಅಮೆರಿಕೆಗೋ, ಯುರೋಪಿಗೋ ಹೋಗಿ ಬಂದವರನ್ನು ಕೈಲಾಸಕ್ಕೇ ಹೋಗಿ ಬಂದಂತೆ ಗೌರವಿಸುತ್ತಿದ್ದ ಕಾಲವಿತ್ತು. ಈಗ ಕಾಲ ಬದಲಾಗಿದೆ.

ಕಾಲ ಇನ್ನೊಂದು ಬದಲಾವಣೆಯನ್ನೂ ತಂದಿದೆ. ಹಿಂದೆ ಕಾಶಿಗೆ ಹೋಗಿ ಬಂದವರನ್ನು "ಕಾಶಿಯಲ್ಲಿ ಏನನ್ನು ಬಿಟ್ಟು ಬಂದೆ" ಅಂತ ಕೇಳ್ತಾ ಇದ್ದರಂತೆ. ಹಾಗೆಯೇ ಕಛೇರಿ ನಿಮಿತ್ತವಾಗಿಯೋ, ವಿರಾಮಕ್ಕೋ ಎಲ್ಲಿಗಾದರೂ ಪ್ರವಾಸ ಹೋದವರು ಮರಳಿದಾಗ ಅಲ್ಲಿಂದ ಏನು ತಂದೆ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ರಾಮೇಶ್ವರ, ಕನ್ಯಾಕುಮಾರಿಯ ಪ್ರವಾಸಿಗಳು ಕಪ್ಪೆಚಿಪ್ಪುಗಳ ಸಾಮಾನುಗಳನ್ನು ಹೊತ್ತು ತರುತ್ತಿದ್ದರು. ದೆಹಲಿಗೆ ಹೋದವರು "ಡೆಲ್ಲಿ ಸೆಟ್‌" ರೇಡಿಯೋಗಳನ್ನೋ, ಟೇಪ್‌ರೆಕಾರ್ಡರ್‌ಗಳನ್ನೋ ತರುತ್ತಿದ್ದರು. ಮುಂಬಯಿಯಿಂದ ಬರುವವರ ಜೊತೆಗೆ ಉಡುಪಿನ ಉಡುಗೊರೆಯ ಕಂತೆ ಇರುತ್ತಿತ್ತು. ಚೆನ್ನೈನಿಂದ ಚರ್ಮದ ಸಾಮಾನುಗಳು, ಗೌಹಾತಿಯಿಂದ ಗುಡ್ಡಗಾಡು ಜನರ ದಿರಿಸುಗಳು, ಜಬಲ್‌ಪುರದಿಂದ ಅಮೃತಶಿಲೆಯ ಸಾಮಾನುಗಳು, ಲಕ್ನೋ-ಕಲ್ಕತ್ತಾದಿಂದ ಚಪ್ಪಲಿ, ಮೈಸೂರಿನಿಂದ ಗಂಧದ ಕೆತ್ತನೆ, ಜಯಪುರದ ರಜಾಯಿ... ಹೀಗೇ ಆಯಾ ಪ್ರದೇಶದ ಪ್ರಾದೇಶಿಕ ಸಿರಿಯನ್ನು ನೆನಪಿನ ಕಾಣಿಕೆಯಾಗಿ ತರುತ್ತಿದ್ದುದುಂಟು. ಕಳೆದ ವರ್ಷ ಶಿರಸಿಗೆ ಪ್ರವಾಸ ಹೋಗಿದ್ದಾಗ ಉತ್ತರಕರ್ನಾಟಕದ ವಿಶಿಷ್ಟತೆಯ ಪ್ರತಿನಿಧಿಗಾಗಿ ಹುಡುಕಿದೆ. ಏನೂ ಸಿಗಲಿಲ್ಲ. ಎಲ್ಲ ಅಂಗಡಿಗಳಲ್ಲೂ ಅದೇ ಪ್ಲಾಸ್ಟಿಕ್‌ ಬಿಂದಿಗೆ, ಪ್ಲಾಸ್ಟಿಕ್‌ ವಸ್ತುಗಳು, ಚೀನಾದ ಬೊಂಬೆಗಳು... ಕೊನೆಗೆ ಶಿರಸಿಯ ವಿಶಿಷ್ಟ ಕಷಾಯವನ್ನೇ ಎರಡು ಪ್ಯಾಕೆಟ್‌ ತಂದೆ. "ಅಯ್ಯೋ... ಇದನ್ನು ತರಕ್ಕೆ ಶಿರಸಿಗೆ ಹೋಗಬೇಕಿತ್ತಾ.. ಮನೆಯಲ್ಲೇ ಮಾಡಬಹುದಿತ್ತು," ಅನ್ನುವ ಟೀಕೆಯೂ ಸಿಕ್ಕಿತು ಅನ್ನಿ.

ಮಗಳು ಪ್ರಶ್ನೆ ಕೇಳಿದಾಗ ಇವೆಲ್ಲವೂ ನೆನಪಾಯಿತು. ನಾನು ಕಾಲೇಜು ಓದುತ್ತಿದ್ದಾಗ ಕ್ರಿಕೆಟ್‌ ವೀಕ್ಷಕ ವಿವರಣೆ ಕೇಳಲೆಂದು ಕಾಸು-ಕಾಸು ಕೂಡಿ ಹಾಕಿ ನ್ಯಾಶನಲ್‌ ಪ್ಯಾನಸೋನಿಕ್‌ನ ಒಂದು ಪಾಕೆಟ್‌ ರೇಡಿಯೋ ಕೊಂಡುಕೊಂಡಿದ್ದೆ. ಅದನ್ನು ಕೊಳ್ಳಲು ಬೆಂಗಳೂರಿಗೆ ಹೋಗಬೇಕಿತ್ತು. ಈಗ ನ್ಯಾಶನಲ್‌ ಪ್ಯಾನಸೋನಿಕ್‌ ಇರಲಿ, ಯುರೋಪು, ಅಮೆರಿಕ, ಜಪಾನ್‌ ಮತ್ತು ಚೀನಾದ ವಸ್ತುಗಳು ತಾಲೂಕು, ಹೋಬಳಿ ಕೇಂದ್ರಗಳಲ್ಲಿಯೂ "ಸೇಲ್‌"ನಲ್ಲಿ ಕಾಣಿಸುತ್ತವೆ. ಮೊಬೈಲ್‌ ಫೋನ್‌ಗಳನ್ನೇ ಗಮನಿಸಿ. ಪಾಕಿಸ್ತಾನದ ತೊಗರಿಬೇಳೆ, ಮಲೇಶಿಯಾದ ಪಾಮೆಣ್ಣೆ, ಇಟಲಿಯ ಕಾಪುಚಿನೊ ಕಾಫಿ ಎಲ್ಲವೂ ಭಾರತದಲ್ಲಿ ಲಭ್ಯ. ಕೊಳ್ಳಲು ಕಾಸಿರಬೇಕಷ್ಟೆ!

ದೇಶದ ವಿವಿಧ ಸ್ಥಳಗಳಲ್ಲಿ ದೊರಕುವ ವಸ್ತುಗಳಲ್ಲಿ ವಿಶೇಷತೆ ಕಾಣೆಯಾಗಿರುವುದನ್ನೆ ಜಾಗತೀಕರಣದ ಉದಾಹರಣೆ ಅನ್ನುವುದಾದರೆ ನಮ್ಮ ಮದುವೆ ಊಟದಲ್ಲಿ ಆಗಿರುವ ಬದಲಾವಣೆಗೆ ಏನು ಹೇಳೋಣ! ಸಭೆ, ಸಮ್ಮೇಳನಗಳಲ್ಲಿ ಮತ್ತು ಹೋಟೆಲುಗಳಲ್ಲಿ ದೊರೆಯುವ ಊಟವನ್ನ ನನ್ನ ಗೆಳೆಯರೊಬ್ಬರು’ಪ್ಯಾನ್‌ ಇಂಡಿಯನ್‌’ ಎನ್ನುತ್ತಿದ್ದರು. ಕಾರಣ ಇಷ್ಟೆ: ಎಲ್ಲಿ ಹೋದರೂ ಊಟದಲ್ಲಿ ಚಪಾತಿ, ರೊಟ್ಟಿ ಜೊತೆಗೆ ಒಂದಿಷ್ಟು ಅನ್ನ, ಮೊಸರನ್ನ, ಪಲ್ಯೆ, ಸಾಂಬಾರ್‌, ರಸಂ ದೊರೆತೇ ಇರುತ್ತಿತ್ತು. ದಕ್ಷಿಣಭಾರತದವ ಅನ್ನ, ಸಾಂಬಾರ್‌ ತಿಂದು ಕೈತೊಳೆದರೆ, ಉತ್ತರಭಾರತೀಯರು ರೊಟ್ಟಿ,ಪ ಲ್ಯೆ ತಿಂದು ನಡೆಯಬಹುದಿತ್ತು. ಎರಡನ್ನೂ ತಿಂದು ಹೊಟ್ಟೆ ಬೆಳೆಸಿಕೊಳ್ಳುವುದೂ ಸಾಧ್ಯವಿತ್ತು. ಜೊತೆಗೆ ಐಸ್‌ಕ್ರೀಂ ಖಂಡಿತ. ಈಗ ಮದುವೆಯ ಮನೆಗೆ ಹೋದರೆ ಇಂತಹುದೇ ಊಟ! ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಥಾಲಿ ಎಂದರೆ ಇದೇ!

ಜಾಗತೀಕರಣ ಊಟದ ಎಲೆಯನ್ನೂ ತಾಕದೆ ಬಿಟ್ಟಿಲ್ಲ. ಇದೀಗ ಕರ್ನಾಟಕದ ಮದುವೆಗಳಲ್ಲೂ ಒಂದು ಅಭ್ಯಾಸ ಆರಂಭವಾಗಿದೆ. ಮೊದಲು ಅಯ್ಯಂಗಾರರ ಮದುವೆ ಎಂದರೆ ಪುಳಿಯೋಗರೆ, ಅಯ್ಯರ್‌ರವರ ಮದುವೆಗಳಲ್ಲಿ ವಿಶೇಷ ಪಾಯಸ, ವೀರಶೈವರ ಮದುವೆಗಳಲ್ಲಿ ವಿಶೇಷ ಕಾಳಿನ ಸಾಂಬಾರ್‌, ಕೊಡಗಿನವರ ಮದುವೆಯ ಊಟದ ಮಜವೇ ಬೇರೆ... ಹೀಗೆ ಮದುವೆಯ ಊಟ ವೈವಿಧ್ಯಮಯವಾಗಿರುತ್ತಿತ್ತು. ಇಂದು ಹಾಗಿಲ್ಲ. ಊಟ ನೋಡಿ ಆತಿಥೇಯರು ಎಲ್ಲಿಯವರು ಎಂದು ಊಹಿಸುವುದು ಈಗ ಆಗದ ಮಾತು! ಕೋಸಂಬರಿಯ ಜಾಗದಲ್ಲಿ ಮೆಕ್ಕೆಜೋಳ, ದಾಳಿಂಬೆಯ ಸಲಾಡ್. ಚಿರೋಟಿ-ಫೇಣಿಯ ಜಾಗದಲ್ಲಿ ಬರ್ಫಿ, ಐಸ್‌ಕ್ರೀಂ. ರಾತ್ರಿ ಊಟವಾದರೋ ಪಾನಿಪುರಿ, ಗೋಬಿ ಮಂಚೂರಿ! ಪಿಜ್ಜಾ ಇನ್ನೂ ಮದುವೆಯ ಔತಣಕ್ಕೆ ಸೇರಿಕೊಂಡಿಲ್ಲ ಎನ್ನುವುದೊಂದೇ ಸಮಾಧಾನ. ಎಲೆಯ ತುಂಬಾ ವೈವಿಧ್ಯಮಯವಾದ ತಿನಿಸುಗಳಿದ್ದರೂ, ಅವೆಲ್ಲವೂ ಆಯಾ ಪ್ರದೇಶದ ವಿಶಿಷ್ಟ ಅನ್ನಿಸುವುದೇ ಇಲ್ಲ.

ಜಾಗತೀಕರಣದ ತೌರೂರಾದ ಅಮೆರಿಕೆಯಲ್ಲಿ ಇನ್ನು ಅಲ್ಲಿಗೇ ವಿಶಿಷ್ಟವಾದಂಥದ್ದು ಏನಾದರೂ ಉಳಿದಿರಬಹುದೇ! ಅದಕ್ಕೆ ಮಗಳಿಗೆ ಹೇಳಿದೆ. "ಭಾರತದಲ್ಲಿ ಸಿಗದಂಥದ್ದು ಅಮೆರಿಕೆಯಲ್ಲಿ ಏನಿದೆ ಮಗಳೇ! ಹಾಗೆ ಇರುವುದಾದರೆ ಒಂದೇ... ಅದು ಕುಟುಂಬ... ಅಮ್ಮ, ಅಪ್ಪ... ಅದನ್ನಂತೂ ಅಲ್ಲಿಂದ ಕೊಂಡು ತರಲು ಸಾಧ್ಯವಿಲ್ಲ... ಹಾಗೇ ಬರಿಗೈ ಬೀಸಿಕೊಂಡು ಹಾಯಾಗಿ ಬಾ.." ಎಂದೆ. ಅವಳಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಜನರೇಶನ್‌ ಗ್ಯಾಪ್‌ ಇರಲೇ ಬೇಕಲ್ಲ!

Wednesday, November 18, 2009

ಸಂಗೀತ

ಮೊನ್ನೆ ಮಗ ಇದ್ದಕ್ಕಿದ್ದ ಹಾಗೆ ಪಿಟೀಲು ಕಲಿಯಬೇಕು ಎಂದಾಗ ಆಶ್ಷರ್ಯವಾಯಿತು. ಏಕೆಂದರೆ ಎಲ್ಲ ಅಪ್ಪ-ಅಮ್ಮಂದಿರ ಹಾಗೇ ನನ್ನ ಮಗನೂ ಸರ್ವಕಲಾಸಂಪನ್ನನಾಗಬೇಕು ಎಂದು ಸಂಗೀತ ಪಾಠಕ್ಕೆ ಕಳಿಸುತ್ತಿದ್ದೆವು. ಒಂದು ವರ್ಷ ಹೋದವ ಮನೆಯಲ್ಲಿಯೂ ಎಂದೂ ’ಸಾಪಾಸಾ’ ಅಭ್ಯಾಸ ಮಾಡಲೇ ಇಲ್ಲ. ಆಮೇಲೆ ಎಂದೋ, ಏನೋ ಕಾರಣದಿಂದ ಪಾಠ ನಿಲ್ಲಿಸಿದವ, ಮತ್ತೆ ಅದರ ನೆನಪನ್ನೂ ಮಾಡಿಕೊಂಡಿರಲಿಲ್ಲ. ಹೀಗಾಗಿ ಪಿಟೀಲು ತರಗತಿಗೆ ಸೇರುತ್ತೇನೆ ಎಂದಾಗ ಅದು ಕ್ಷಣಿಕ ಮೋಹ ಅಂತಲೇ ಭಾವಿಸಿದೆ. ಆದರೆ ಅವ ಮತ್ತೆ ಮತ್ತೆ ಅದೇ ರಾಗ ಹಾಡಿದಾಗ ಪಾಠಕ್ಕೆ ಸೇರಿಸದೆ ವಿಧಿ ಇರಲಿಲ್ಲ. ಆದರೂ ನನ್ನ ಮಗನಲ್ಲವೇ! ನನ್ನ ಹಾಗೆಯೇ ಶ್ರುತಿಗಿವುಡ. ಕೆಲವೇ ದಿನಗಳಲ್ಲಿ ಮತ್ತೆ ಪಿಟೀಲನ್ನೂ ನಿಲ್ಲಿಸುತ್ತಾನೆ ಎಂದುಕೊಂಡೆ.

ಸಂಗೀತ ಅಂದರೆ ನನಗೆ ಅಷ್ಟಕ್ಕಷ್ಟೆ ಎಂದು ನೀವು ಭಾವಿಸಿದರೆ ಆಶ್ಚರ್ಯವೇನಿಲ್ಲ! ಶ್ರುತಿ, ಸ್ವರ, ನಾದ, ತಾಳ ಎಲ್ಲವೂ ಸಮಾನಾರ್ಥಕ ಪದಗಳು ಎಂಬುದು ನನ್ನ ಅನಿಸಿಕೆ. ಏಕತಾನ ಎನ್ನುವುದು ಬಾಟನಿ ಮೇಷ್ಟರ ಪಾಠವನ್ನು ವಿವರಿಸುವ ಪದವಾಗಿತ್ತು. ಪಿಟೀಲು, ಬೇಡದ ವಿಷಯವನ್ನು ಉದ್ದುದ್ದ ಎಳೆಯುವ ಗೆಳೆಯರ ಮಾತಿಗೆ ಇನ್ನೊಂದು ವಿವರಣೆ ಆಗಿತ್ತು. ರಾಗ ಅಳುವಿನ ಅನ್ವರ್ಥ ಎನಿಸಿತ್ತು. ಇನ್ನು ಸಂಗೀತ ಪಾಠ ಹೇಗೆ ಕಲಿತೇನು.

ಹಾಗಂತ ನಾನು ಸಂಗೀತವನ್ನು ಕೇಳಲೇ ಇಲ್ಲ ಅಂತಲ್ಲ. ಅಮ್ಮ ಸಾಕಷ್ಟು ಸಂಗೀತ ಕಲಿತಿದ್ದಳು ಎಂದು ತಿಳಿದಿತ್ತು. ಹೆತ್ತ ಏಳು ಮಕ್ಕಳಿಗೂ ಜೋಗುಳ ಹಾಡಿಯೇ ಕಲಿತಳೋ, ಪಾಠದಿಂದಲೇ ಕಲಿತಳೋ ಗೊತ್ತಿಲ್ಲ. ಆದರೆ ಸುಶ್ರಾವ್ಯವಾಗಿ ಹಾಡುತ್ತಿದ್ದುದಂತೂ ನೆನಪಿದೆ. ಅಪ್ಪನಿಗೂ ಸಂಗೀತದ ಮೋಹವಿತ್ತು. ವಿದ್ವಾನ್‌ ಪಿಟೀಲ್‌ ಚೌಡಯ್ಯನವರ ಡ್ರೈವರ್‌ ಆಗಿದ್ದರಂತೆ! ನನಗೂ ಸಂಗೀತ ಪಾಠ ಕಲಿಸಬೇಕೆಂದು ಅವರು ಎಷ್ಟೋ ಪ್ರಯತ್ನಿಸಿದ್ದು ನೆನಪಿದೆ. ಆದರೆ ಹೊಟ್ಟೆ ತಾಳ ಹಾಕುಾಗ ಗಂಟಲಲ್ಲಿ ಇನ್ಯಾವ ಸ್ವರವೂ ಹುಟ್ಟುವುದಿಲ್ಲವೇನೋ! ಅಂದಿನ ಪರಿಸ್ಥಿತಿಯಲ್ಲಿ ಶಾಲೆಗೆ ಹೋಗುವುದೇ ಕಷ್ಟವಾಗಿದ್ದಾಗ, ಸಂಗೀತ ಪಾಠಕ್ಕೂ ಫೀಸು ಕೊಡುವುದು ಸಾಧ್ಯವೇ ಇರಲಿಲ್ಲ.

ಅತ್ತೆಯ ಮಕ್ಕಳು ಪ್ರಸಿದ್ಧ ಹಾಡುಗಾರ್ತಿಯರು. ಮಗ ವಿಶ್ವಪ್ರಸಿದ್ಧ ಮೃದಂಗವಾದಕ. ಅವರ ಬಳಿಯಾದರೂ ಕಳಿಸಿ ಮೃದಂಗ ಕಲಿಸಬೇಕೆಂಬ ಇಚ್ಛೆ ಅಪ್ಪನಿಗೆ ಇತ್ತು. ಆದರೆ ಆ ಉತ್ಸಾಹ ನನಗೆ ಇರಲಿಲ್ಲ. ಬಹುಶಃ ಸಂಗೀತ ಎನ್ನುವುದಕ್ಕೆ ಬುದ್ಧಿ ಬೇಕಿಲ್ಲ ಅನ್ನುವ ಉಪೇಕ್ಷೆಯೋ, ಅಥವಾ ಇಂದಿನ ಹಾಗೆ ರಿಯಾಲಿಟಿ ಶೋಗಳ ಆಕರ್ಷಣೆ ಇಲ್ಲದಿದ್ದುದರಿಂದಲೋ ಒಟ್ಟಾರೆ ಸಂಗೀತ ಎಂದರೆ ನನಗೆ ಅಷ್ಟಕ್ಕಷ್ಟೆ ಆಗಿತ್ತು. ಕಲಿಯುವ ಉತ್ಸಾಹ ಇರಲಿಲ್ಲ. ಕೇಳುವುದು ಕೇವಲ ರಾಮನವಮಿಯ ಸಂಗೀತೋತ್ಸವಕ್ಕಷ್ಟೆ ಸೀಮಿತವಾಗಿತ್ತು. ಮಂಗಳಾರತಿ ಮುಗಿದ ಅನಂತರ ಕೊಡುತ್ತಿದ್ದ ಹೆಸರುಬೇಳೆ ಉಸಲಿಯ ಆಸೆಗಾಗಿ ಅಪ್ಪನ ಜೊತೆ ಸಂಗೀತೋತ್ಸವಕ್ಕೆ ಹೋಗಿ ಕೇಳುತ್ತಿದ್ದೆ. ಆಲಿಸುತ್ತಿರಲಿಲ್ಲ.

ಬಾತ್‌ರೂಮ್‌ನಲ್ಲೂ ಹಾಡು ಹಾಡಿದವನಲ್ಲ. ಪ್ರೀತಿಸಿದವಳಿಗೆ ಪ್ರೇಮಗೀತೆ ಹಾಡುವುದರ ಬದಲಿಗೆ, ಅಶ್ವತ್ಥ, ಅನಂತಸ್ವಾಮಿಯವರ ಗೀತೆಗಳನ್ನು ಕೇಳಿಸಿ ಮನವೊಲಿಸಿದ್ದೆ! ಇಂತಹ ಶ್ರುತಿಗಿವುಡನ ಮಗ ಸಂಗೀತ ಕಲಿಯುವುದುಂಟೇ?

ಆದರೂ ಮಗ ಹಠ ಹಿಡಿದಾಗ, ಮೇಷ್ಟರು ಹೇಳಿದ ಮೇಲೆ ಪಿಟೀಲು ಕೊಡಿಸಲು ಅಂಗಡಿಗೆ ಹೋದೆ. ಅಷ್ಟೆ. ಸಂಗೀತ ಎಂದರೆ ಏನೆಂಬುದರ ಪರಿಚಯ ಅಲ್ಲಿ ನನಗಾಯಿತು. ಕಂಜಿರಾದಿಂದ ಮೃದಂಗದವರೆಗೆ, ಪಿಟೀಲಿನಿಂದ ಇಲೆಕ್ಟ್ರಾನಿಕ್‌ ಗಿಟಾರ್‌ವರೆಗೆ, ಹಾರ್ಮೋನಿಯಂನಿಂದ ಆರ್ಕೆಸ್ಟ್ರಾದ ಡ್ರಂ, ಸ್ಕೂಲ್‌ ಬ್ಯಾಂಡ್‌ನ ಬ್ಯೂಗಲ್‌, ತರಹೇವಾರಿ ಇಲೆಕ್ಟ್ರಾನಿಕ್‌ ರಾಗಮಾಲ, ತಬಲಾ, ಇಲೆಕ್ಟ್ರಾನಿಕ್‌ ಕೀಬೋರ್ಡ್‌, ಪಿಯಾನೋ... ಒಂದೇ ಎರಡೇ... ಕಣ್ಣೆದುರಿಗೆ ಹೊಸ ಪ್ರಪಂಚವೇ ತೆರೆದುಕೊಂಡಿತು. ಮಗನಂತೂ ಪಿಟೀಲು ಮರೆತು ಅಲ್ಲಿದ್ದ ಎಲ್ಲ ಡ್ರಮ್‌, ತಂತಿವಾದ್ಯಗಳ ಮೇಲೂ ಕೈಯಾಡಿಸುತ್ತಿದ್ದ. ಬರೇ ವಿಜ್ಞಾನವಷ್ಟೆ ಪ್ರಪಂಚವಾಗಿದ್ದ ನನಗೆ ಸಂಗೀತ ಲೋಕದ ಪರಿಚಯ ಆಯಿತು.

ಐವತ್ತರ ಹೊಸ್ತಿಲಲ್ಲಿರುವಾಗ ಸಂಗೀತ ಕಲಿಯೋಣ ಎನ್ನುವ ಉತ್ಸಾಹ ಬಂದಿದೆ ಎಂದರೆ ನೀವು ನಂಬಲೇಬೇಕು. ಆದರೆ ಒಂದು ಪುಟ ಬರೆಯುವುದರೊಳಗೆ ಹಿಡಿದುಕೊಳ್ಳುವ ಟೆನಿಸ್‌ ಎಲ್ಬೋ, ಹತ್ತು ನಿಮಿಷ ಭಾಷಣ ಮಾಡುವುದರೊಳಗೆ ಒಣಗಿ ಹಿಡಿದುಕೊಳ್ಳುವ ಗಂಟಲು, ಹೆಂಡತಿ ಹತ್ತು ಬಾರಿ ಕರೆದರೂ ಗಮನಗೊಡದ ಕಿವಿ... ಇವು ನನ್ನ ಈ ಉತ್ಸಾಹಕ್ಕೆ ’ಸಾಥ್‌’ ಕೊಡುತ್ತವೆಯೇ? ’ಸಾಧನೆ’ ವಯಸ್ಸನ್ನೂ ಮೀರಬಹುದೇ? ಪ್ರಯತ್ನಿಸಿ ನೋಡಬೇಕಷ್ಟೆ!

ಛೀ! ಸೋಮಾರಿ!!!

ಈ ಬ್ಲಾಗ್‌ನಲ್ಲಿ ಹೊಸ ಅಕ್ಷರ ಮೂಡಿ ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಇದಕ್ಕೆ ಸೋಮಾರಿತನವೇ ಕಾರಣ ಅನ್ನೋಣ. ಸೋಮಾರಿ ತನಕ್ಕೆ ಸಮಜಾಯಿಷಿಯೂ ಇಲ್ಲ. ಕ್ಷಮೆಯೂ ಇಲ್ಲ. ಅದಕ್ಕೇ ಈ ಎರಡು ಸಾಲಿನ ಬ್ಲಾಗ್‌!