ಪೂರ್ಣಚಂದ್ರ ಅಸ್ತಂಗತ. ಇದು ಟೀವಿ ಚಾನಲ್ ಒಂದರಲ್ಲಿ ಪೂಚಂತೇರವರ ನಿಧನದ ಬಗ್ಗೆ ಬಂದ ತಲೆಬರೆಹ. ಇದಕ್ಕಿಂತಲೂ ಉತ್ತಮ ತಲೆಬರೆಹ ಬೇಕಿಲ್ಲ. ಮೈಸೂರಿನ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಮಾತನಾಡಿದ ಹಿರಿಯ ಅಂಕಣಕಾರ ಹೆಚ್‌ಎಸ್‌ಕೆ ಹೇಳಿದ್ದು, ಪೂಚಂತೇ "ಕುವೆಂಪು ರವರ ಮಗನಾಗಿ ಗುರುತಿಸಲ್ಷಡುವುದಕ್ಕಿಂತಲೂ, ಕುವೆಂಪು ರವರು ತೇಜಸ್ವಿಯವರ ತಂದೆ ಎಂದು ಗುರುತಿಸಲ್ಪಟ್ಟಿರುವುದೇ ಹೆಚ್ಚು," ಎಂದು ನುಡಿದದ್ದು ಅಪ್ಪಟ ಸತ್ಯ. ಹೀಗೆ ಸುಪ್ರಸಿದ್ಧ ತಂದೆಯ ನೆರಳಿನಲ್ಲಿ ಬೆಳೆದೂ, ಹಲವು ಹೊಸ ಪ್ರತಿಭೆಗಳಿಗೆ ಆಸರೆಯಾಗುವ ದೊಡ್ಡ ಆಲದ ಮರವಾಗಿ ತೇಜಸ್ವಿ ಬೆಳೆದರು.
ತೇಜಸ್ವಿಯವರ ಸಾಹಿತ್ಯದ ಬಗ್ಗೆ ಹೇಳುವ ಸಾಮರ್ಥ್ಯ ನನಗಿಲ್ಲ. ಇಷ್ಟು ಮಾತ್ರ ಸತ್ಯ. ಅವರ ಸಾಹಿತ್ಯ ಕೇವಲ ಬುದ್ಧಿಜೀವಿಗಳಿಗಾಗಿಯಷ್ಟೆ ಇರಲಿಲ್ಲ. ಎಲ್ಲರಿಗೂ ದಕ್ಕುವಂತಹ ಅಪ್ಪಟ ಕನ್ನಡ ಜಾಯಮಾನದ ಸಾಹಿತ್ಯ ಎನ್ನಬಹುದು. ಬೇಂದ್ರೆ, ದೇವನೂರು, ತರಾಸುರವರಂತೆ ತೇಜಸ್ವಿಯವರ ಸಾಹಿತ್ಯವನ್ನು ಇಂಗ್ಲೀಶಿಗೆ ಅನುವಾದಿಸುವುದು ಬಹಳ ಕಷ್ಟಕರವಾದ ಕೆಲಸ. ಕನ್ನಡದ ಹಿರಿಯರೆನ್ನಿಸಿಕೊಂಡ ಇನ್ನೂ ಎಷ್ಟೋ ಕವಿ, ಲೇಖಕರ ಸಾಹಿತ್ಯವನ್ನು ಸುಲಭವಾಗಿ ಇಂಗ್ಲೀಶಿಗೆ ಅನುವಾದಿಸಬಹುದು. ಏಕೆಂದರೆ ಇವುಗಳಲ್ಲಿನ ಚಿಂತನೆಗಳಲ್ಲಿ ಇಂಗ್ಲೀಶಿನ ಜಾಯಮಾನ ಎದ್ದು ತೋರುತ್ತದೆ. ಆದರೆ ತೇಜಸ್ವಿಯವರ ಸಾಹಿತ್ಯದಲ್ಲಿ ತಾಯ್ನೆಲದ, ತಾಯ್ನುಡಿಯ ವಾಸನೆ ಎಷ್ಟು ಗಾಢವಾಗಿತ್ತೆಂದರೆ ಅದರಲ್ಲಿನ ಪದ, ಪದಗಳ ಹಿಂದಿನ ಭಾವಾರ್ಥಗಳಿಗೆ ಸರಿಸಮನಾದ ಇಂಗ್ಲೀಶಿನ ಪದಗಳನ್ನು ಹುಡುಕುವುದು ಬಹಳ ಕಷ್ಟವೆನ್ನಿಸುತ್ತಿತ್ತು.
ಬರವಣಿಗೆಯಲ್ಲಿ ಹೊಸ ಸ್ಫೂರ್ತಿ ನೀಡಿದ ಆ ಚೇತನಕ್ಕೆ ನನ್ನ ನಮನ.
ತೇಜಸ್ವಿಯವರ ಕಾದಂಬರಿಗಳಲ್ಲಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದು ಚಿದಂಬರ ರಹಸ್ಯ. ಪ್ರತಿಯೊಂದು ಅಧ್ಯಾಯವೂ ಪ್ರತ್ಯೇಕ ಕಥೆಯಾಗಿ ನಿಲ್ಲುವಂತೆ ವಿಶಿಷ್ಟ ತಂತ್ರವನ್ನು ಬಳಸಿದ ಕಾದಂಬರಿ ಇದು. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಸ್ವಾರ್ಥ ಇತ್ತಾದರೂ, ಉಳಿದ ಪಾತ್ರಗಳ ಪ್ರಭಾವದಿಂದಾಚೆಗೆ ಯಾವ ಪಾತ್ರವೂ ನಡೆದುಕೊಳ್ಳಲಾಗಲಿಲ್ಲ. ನಮಗೆ ಸಂಬಂಧವೇ ಇಲ್ಲದ ದೂರದ ಘಟನೆಯೊಂದು ನಮ್ಮ ಬದುಕನ್ನು ಎಲ್ಲೋ ಆಳವಾಗಿ ತಾಕುತ್ತದೆ. ಕೇವೋಸ್ ಸಿದ್ಧಾಂತದಂತೆ, ಯಾವುದೋ ನಿಕೃಷ್ಟ ಘಟನೆ ಬೃಹತ್ತಾಗಿ ಬೆಳೆದು ತೀವ್ರ ಪರಿಣಾಮ ಬೀರಬಹುದು. ಇಂತಹ ಘಟನೆಗಳಿಗೆ ಯಾವ ನಿಯಮ, ನೀತಿಗಳು ಲಗಾಮು ಹಾಕಲಾಗದು. ಚಿದಂಬರ ರಹಸ್ಯದ ಪ್ರತಿಯೊಂದು ಘಟನೆಗಳೂ ಹೀಗೆಯೇ ಅಲ್ಪ ಘಟನೆಗಳು. ಆದರೆ ಅವುಗಳ ಪರಿಣಾಮ ಮಾತ್ರ ತೀವ್ರ.
ಇಂದಿಗೂ ರಸ್ತೆಯಲ್ಲಿ ಎಲ್ಲಿಯಾದರೂ ಟಾರು ಬಳೆಯುವ ಯಂತ್ರ ಕಾಣಿಸಿದರೆ, ಚಿದಂಬರ ರಹಸ್ಯ ನೆನಪಾಗುತ್ತದೆ. ಹಾಗೆಯೇ, ಪೂಚಂತೇಯವರ ಹೆಸರು ಕೇಳಿದಾಗಲೆಲ್ಲ, ಕರ್ವಾಲೊ ರ ಚಿತ್ರ ಕಣ್ಮುಂದೆ ಸುಳಿಯುತ್ತದೆ. ಪೂಚಂತೇಯವರ ಚಿತ್ರವನ್ನು ನೋಡಿದಾಗಲೂ ಅದು ಅವರು ಅನ್ನಿಸುವುದಿಲ್ಲ. ಕರ್ವಾಲೋರವರ ಚಿತ್ರವಷ್ಟೆ ಸತ್ಯ ಎನ್ನಿಸುತ್ತದೆ.
Subscribe to:
Post Comments (Atom)
No comments:
Post a Comment