Friday, August 11, 2017

ಹಕ್ಕಿ ಹಾರಿತು

ಎರಡು ತಿಂಗಳು ಪ್ರವಾಸ ಮುಗಿಸಿ ಮನೆಗೆ ಮರಳುವ ಮೊದಲು ಅಕ್ಕನಿಗೆ ಫೋನ್ ಮಾಡಿದೆ. ಬೀಗ ಹಾಕಿದ ಮನೆಯನ್ನು ಆಗಾಗ್ಗೆ ಗಮನಿಸಿಕೊಳ್ಳಲು ತಿಳಿಸಿದ್ದೇನಲ್ಲ! ಜೊತೆಗೆ. ಮನೆಗೆ ಮರಳಿದಾಗ ಕುಡಿಯಲು ನೀರಾದರೂ ಇರಬೇಡವೇ? ಹೀಗಾಗಿ ಮುನ್ಸೂಚನೆ ನೀಡಲು ಕರೆ ಮಾಡಿದೆ.

 'ನಿಮ್ಮ ಮನೆಗೆ ಕಳ್ಳರು ಹೊಕ್ಕಿದ್ದಾರೆ.' ಎಂದಳು. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಇಲ್ಲದಿದ್ದರೂ ತುಸು ಗಾಭರಿ ಆಯಿತು. 'ಪೋಲೀಸ್ ಗೆ ಹೇಳಿದಿರಾ?' ಎಂದೆ. ನಮ್ಮ ಅನುಪಸ್ಥಿತಿಯಲ್ಲಿ ಮನೆ ಕಾವಲಿನ ಜವಾಬುದಾರಿಯನ್ನು ಹೊರಿಸಿದ್ದೆನಲ್ಲ? ಎನ್ನುವ ದೂರು ನನ್ನ ದನಿಯಲ್ಲಿ ಇತ್ತು. ಉತ್ತರವಾಗಿ 'ರೆಕ್ಕೆ-ಪುಕ್ಕದ ಕಳ್ಳರು ಹೊಕ್ಕು ಗೂಡು ಕಟ್ಟಿದ್ದಾರೆ', ಅಂತ ಅಕ್ಕ ಜೋರಾಗಿ ನಕ್ಕಳು.

ನಾನು ನಗಲಿಲ್ಲ. ಹಕ್ಕಿ ಮನೆ ಹೊಕ್ಕು ಗೂಡು ಕಟ್ಟಿದೆ ಎಂದರೆ ಎರಡು ತಿಂಗಳ ದೂಳು, ಕಸದ ಜೊತೆಗೆ ರೆಕ್ಕೆ, ಹಿಕ್ಕೆಗಳನ್ನೂ ಸಾರಿಸುವ ಕೆಲಸ ಬಿತ್ತು ಅಂತ ಗೊಣಗಿಕೊಂಡೆ. ಬೀಗ ಹಾಕುವ ಮುನ್ನ ಎಲ್ಲ ಕಿಟಕಿ, ಬಾಗಿಲುಗಳನ್ನೂ ಸರಿಯಾಗಿ ಹಾಕಿದ್ದೆನೋ, ಇಲ್ಲವೋ ಅಂತ ಮಡದಿ ನಾಲ್ಕು ಬಾರಿ ಪರಿಶೀಲಿಸಿದ್ದಳಲ್ಲ? ಇನ್ನೆಲ್ಲಿಂದ ಹಕ್ಕಿ ಹೊಕ್ಕಿತೋ?

ಮನೆಗೆ ಬಂದು ಬೀಗ ತೆಗೆದವನಿಗೆ ಅಚ್ಚರಿ ಕಾದಿತ್ತು. ಮನೆಯಲ್ಲಿ ದೂಳು, ಕಸ ಇತ್ತು, ಆದರೆ ರೆಕ್ಕೆ, ಹಿಕ್ಕೆ ಇರಲಿಲ್ಲ. ಹಕ್ಕಿಗಳು ಹಾರಿ ಹೋಗಿರಬೇಕು ಎಂದುಕೊಂಡು ಮಲಗುವ ಕೋಣೆಯತ್ತ ನಡೆದೆ.  ಬಾಗಿಲ ಕಡೆಗೆ ಸಾಗಿದೆನಷ್ಟೇ, ರಿಮೋಟ್ ಅಲಾರಂ ಹೊಡೆದ ಹಾಗೆ ಕೀಚ್, ಕೀಚ್ ಎಂದು ತಲೆ ಚಿಟ್ಟಾಗುವಷ್ಟು ಸದ್ದು ಮಾಡುತ್ತಾ ಎರಡು ಹಕ್ಕಿಗಳು ನನ್ನ ಸುತ್ತಲೂ ಹಾರಾಡಲು ಆರಂಭಿಸಿದವು. ಈ ರೆಕ್ಕೆ-ಪುಕ್ಕದ ಜೋಡಿಯೇ ಅಕ್ಕ ಹೇಳಿದ ಕಳ್ಳರು ಅಂತ ಅರ್ಥವಾಯಿತು.

ಮಲಗುವ ಕೋಣೆಯ ಬಾಗಿಲ ಮುಂಗಟ್ಟಿನ ಮೇಲೆ ಪುಟ್ಟ ಗೂಡು ಕಟ್ಟಿದ್ದುವು.  ಮನೆಯ ಎದುರಿನ ವಿದ್ಯುತ್ ತಂತಿಯ ಮೇಲೆ ನಿತ್ಯವೂ ಈ ಹಕ್ಕಿಗಳು ಬಂದು ಕೂರುವುದನ್ನು ಕಂಡಿದ್ದೆ.  ವ್ಯರ್ಥವಾಗಿ ಮನೆ ಖಾಲಿ ಇಡುವ ಮನುಷ್ಯರ ಸ್ವಾರ್ಥ ಅವಕ್ಕೆ ಅರ್ಥವಾಗಲಿಲ್ಲವೋ ಏನೋ?  ಗವಾಕ್ಷಿಯಿಂದ ಬಂದು ಖಾಲಿ ಇದ್ದ ಮನೆ ತುಂಬಿದ್ದುವು. ಏಷ್ಟು ದಿನಗಳ ಹಿಂದೆ 'ಗೃಹ ಪ್ರವೇಶ' ನಡೆದಿತ್ತೋ ಗೊತ್ತಿಲ್ಲ. ಆದರೆ ಎಲ್ಲಿಯೂ ಒಂದಿಷ್ಟೂ ಹಿಕ್ಕೆ ಇರಲಿಲ್ಲ. ಬಾಡಿಗೆದಾರರಿಗಿಂತ ಪ್ರಜ್ಞಾವಂತ ಪಕ್ಷಿಗಳು, ಮನೆಯನ್ನು ಗಲೀಜು ಮಾಡಿರಲಿಲ್ಲ.  ಗೂಡು ಕಟ್ಟಿ ಬಹಳ ದಿನಗಳಾಗಿರಲಿಲ್ಲ. ಕಿತ್ತು ಬಿಸಾಡಿದರೆ, ಬೇರೆಲ್ಲಿಯಾದರೂ ಹೋಗಿ ನೆಲೆಯಾದಾವು ಎಂದು ಗೂಡಿಗೆ ಕೈ ಹಾಕುವವನಿದ್ದೆ. ಅಷ್ಟರಲ್ಲಿ ಗೂಡಿನೊಳಗಿಂದ ಪುಟ್ಟ, ಗುಲಾಬಿ ಬಣ್ಣದ ಕೊಕ್ಕು ಕಾಣಿಸಿತು. ಮೊಟ್ಟೆ ಮರಿಯಾಗಿತ್ತು. ಗೂಡನ್ನು ಹಾಗೇ ಬಿಟ್ಟೆ. ಗೂಡಿನೊಳಗಿನ ಚಟುವಟಿಕೆಯನ್ನು ನೋಡುವುದು ನಿತ್ಯಕರ್ಮಗಳಲ್ಲಿ ಸೇರಿಕೊಂಡಿತು.

ಕೋಣೆಯ ಸಮೀಪ ಬಂದ ಕೂಡಲೇ ಮರಿಗೆ ಕಾವು ಕೊಡುತ್ತಿದ್ದ ಹಕ್ಕಿ ಸೂರು ಬಿದ್ದ ಹಾಗೆ ಬೆದರಿ ಗಲಾಟೆ ಮಾಡುತ್ತಿತ್ತು. ಅದರ ರಂಪಾಟ ನೋಡಲಾರದೆ ಆದಷ್ಟೂ ಆ ಜಾಗೆಯಿಂದ ದೂರ ಇರುವುದನ್ನ ಕಲಿತುಕೊಂಡೆವು. ರಾತಿ ಮಲಗಲು ಅಷ್ಟೇ ಕೋಣೆಗೆ ಪ್ರವೇಶ ಎನ್ನುವುದು ತೀರ್ಮಾನವಾಯಿತು. ಅದು ಯಾವ ಪಕ್ಷಿ ಅಂತಲೂ  ಗೊತ್ತಿಲ್ಲ, ಕಾವು ಕೊಡುತ್ತಿದ್ದದ್ದು ಗಂಡೋ, ಹೆಣ್ಣೋ ತಿಳಿಯಲಿಲ್ಲ. ಅಂತೂ ಒಂದು ದಿನ ಹಕ್ಕಿಗಳ ಸದ್ದು ಕಡಿಮೆ ಆದಂತೆ ಕಂಡಿತು. ನೋಡಿದರೆ, ಪುಟ್ಟ ಮರಿಗಳು ಗೂಡಿಂದ ಹಾರಿ, ಕಿಟಕಿಗೆ ಮತ್ತೆ ಅಲ್ಲಿಂದ ಮರಳಿ ಗೂಡಿಗೆ ಹಾರುತ್ತಿದ್ದವು. ದೂರದಲ್ಲಿ ತಾಯಿ ಕುಳಿತು ಕಾಯುತ್ತಿತ್ತು. ನಾವು ಯಾರಾದರೂ ಬಳಿ ಸಾರಿದರೆ ಕೂಡಲೇ ಕಿರುಚಾಡಿ ಮಕ್ಕಳನ್ನು ಎಚ್ಚರಿಸುತ್ತಿತ್ತು.

ಪಕ್ಷಿ, ಪ್ರಾಣಿಗಳಲ್ಲಿ ಮಾನವ ಭಾವನೆಗಳನ್ನು ಕಾಣುವ ನಮ್ಮ ಪ್ರವೃತ್ತಿ ಸಹಜವಾದುದೇ. ಹೀಗಾಗಿ ಇದು ಇನ್ನು ಮುಂದೇನು ಮಾಡುತ್ತದೆ ಎಂದು ವೀಕ್ಷಿಸುವುದು ನಮ್ಮ ನಿತ್ಯ ಕರ್ಮ ವಾಯಿತು.

 ಒಂದು ದಿನ ಬೆಳಗ್ಗೆ ಸೂರ್ಯೋದಯವಾದರೂ ಚಿಲಿಪಿಲಿ ಸದ್ದಿಲ್ಲ. ಬಂದು ನೋಡಿದರೆ ತಾಯಿಯೂ ಇಲ್ಲ, ಮಕ್ಕಳೂ ಇಲ್ಲ. ಮರುದಿನವೂ ಸುದ್ದಿ ಇಲ್ಲ. ದಿನವೂ ನಾವು ಕಾದದ್ದೇ ಬಂತು. ನಮ್ಮ ಮನೆಯ 'ಕಳ್ಳ ಬಾಡಿಗೆದಾರರು' ಮರಳಲೇ ಇಲ್ಲ.
 ಇದಾಗಿ ಸುಮಾರು ಆರು ತಿಂಗಳು ಕಳೆದಿರಬಹುದು. ಪೋಸ್ಟ್ ಬಂದಿದೆಯಾ ಎಂದು ಅಂಚೆ ಪೆಟ್ಟಿಗೆ ತೆಗೆದರೆ, ಅಲ್ಲೊಂದು ಗೂಡು. ನಾಲ್ಕು ಮೊಟ್ಟೆಗಳು. ಅಂದಿನಿಂದ ಪೋಸ್ಟ್ ಮನ್‍ ಬರುವ ಹಾದಿ ಕಾಯುವುದು ಇನ್ನೊಂದು ಕೆಲಸ  ಆಯಿತು. ನಾವು ತರಿಸುವ ದಪ್ಪ ಪುಸ್ತಕಗಳನ್ನ ಅಂಚೆಯವ  ಜೋರಾಗಿ ಡಬ್ಬದೊಳಗೆ ತುರುಕಿದರೆ? ಮೊಟ್ಟೆಗಳಿಗೆ ಏಟು ಬಿದ್ದರೆ?

ಈಗ ನಮ್ಮ ಮನೆಯ ಪೋಸ್ಟ್ ಬಾಕ್ಸ್ ಖಾಯಂ ಹಕ್ಕಿ ಮನೆ. ಒಂದು ಹಾರಿ ಹೋಗಿ ಕೆಲವು ದಿನ ಕಳೆಯುವುದರೊಳಗೆ ಇನ್ನೊಂದು ಬಂದು ಮೊಟ್ಟೆ ಇಡುತ್ತದೆ. ಅವು ಒಂದೇ ವಂಶಜರೋ? ಬೇರೆ ಬೇರೆ ಕುಟುಂಬದವೋ? ಗೊತ್ತಿಲ್ಲ.  ಒಟ್ಟಾರೆ ನಮ್ಮ ನೆರೆಯವರಿಗಿಂತಲೂ ಆತ್ಮೀಯವಾಗಿ ಇವೆ ಅನ್ನುವುದಷ್ಟೆ ನಮಗೆ ಗೊತ್ತು. ಅಂಚೆಯವನೂ ಈಗೀಗ ಹೊಸ್ತಿಲಿಗೆ ಪುಸ್ತಕ ಬಿಸಾಡಿ ಹೋಗುತ್ತಾನೆ. ನಮ್ಮ ಬಾಡಿಗೆದಾರರ ಭಯ ಇರಬೇಕು.