Saturday, March 1, 2008

ಒಂದು ಸಾವಿನ ನೆನಪು!

ಇನ್ನೇನು ಮೂರು ತಿಂಗಳು ಕಳೆದರೆ ನಾಲ್ಕು ವರ್ಷಗಳಾಗುತ್ತವೆ. ಆದರೆ ಅಂದು ಎದೆ ನಡುಗಿಸಿದ ಭೀತಿ ಇನ್ನೂ ಮರೆಯಾಗಿಲ್ಲ. ಬೇರೆ ಇನ್ನೇನು ಕಾರಣ ಹೇಳಬಹುದು? ಆ ದಿನ ಬೆಳ್ಳಂಬೆಳಗ್ಗೆ, ವಿಜಯನಗರದ ಸಮೀಪ, ರಸ್ತೆಯಿಂದ ಜಾರಿ ಬದಿಯ ಹಳ್ಳಕ್ಕೆ ಬಿದ್ದ ಕಾರಿನ ಪುಕ್ಕದ ದೀಪ ಹೊಳೆಯುತ್ತಲೇ ಇತ್ತು. ಆದರೆ ನಾನು ಅಲ್ಲಿ ನಿಲ್ಲದೇ ಓಡಿಬಿಟ್ಟೆ. ಕಾರಿನಲ್ಲಿ ಯಾರಾರೂ ಇದ್ದಾರೋ ಇಲ್ಲವೋ ಗಮನಿಸಲೂ ಇಳಿಯಲಿಲ್ಲ. ಅನಾಗರೀಕನಾಗಿಬಿಟ್ಟೆ. ಇನ್ನೊಂದು ದಿನ ಕೆಡಿ ವೃತ್ತದ ಬಳಿ, ಮಟ-ಮಟ ಮಧ್ಯಾಹ್ನ ಎರಡು ಬೈಕ್‌ಗಳ ಢಿಕ್ಕಿಯಾಗಿ, ಒಬ್ಬ ಅಂಗಾತ ಬಾಯಿ ಬಿಟ್ಟು ರಸ್ತೆಯಲ್ಲಿಯೇ ಬಿದ್ದಿದ್ದರೂ, ನಾನು ಕೆಲಸಕ್ಕೆ ತಡವಾದೀತು ಎಂದು ಕಾರಣ ಹೇಳಿಕೊಂಡು ಓಡಿ ಬಿಟ್ಟೆ. ಬೇರೆ ದಿನಗಳಲ್ಲಿ ಕೆಲಸಕ್ಕೆ ತಡವಾದರೆ, ರಜೆ ಹಾಕಿದರಾಯಿತು ಬಿಡು ಎನ್ನುವ ಧಾರ್ಷ್ಟ್ಯ ತೋರುವವ, ಅಂದು ಬಹಳ ಪ್ರಾಮಾಣಿಕನಂತೆ ಓಡಿ ಬಿಟ್ಟೆ.

ಒಂದಲ್ಲ ಎರಡಲ್ಲ, ಕಳೆದ ನಾಲ್ಕು ವರ್ಷಗಳಲ್ಲಿ ಹತ್ತಾರು ಅಪಘಾತಗಳನ್ನು ನೇರವಾಗಿ ನೋಡಿದ್ದೇನೆ. ಎಲ್ಲಿಯೂ ನಾಗರೀಕನಂತೆ ವರ್ತಿಸಲಿಲ್ಲ. ಯಾಕೋ, ಎದೆ ಢವಗುಟ್ಟುತ್ತದೆ. ನಾಲ್ಕು ವರ್ಷಗಳ ಹಿಂದೆ, ಬಾಗಿಲ ಎತ್ತರಕ್ಕೂ ನಿಂತು, "ಅಂಕಲ್‌, ಎರಡೇ ನಿಮಿಷ. ಹೀಗೆ ಹೋಗಿ ಹಾಗೆ ಬಂದು ಬಿಡುತ್ತೀನಿ. ನೀವು ರೆಸ್ಟ್‌ ತೆಗೆದುಕೊಳ್ಳಿ," ಎಂದು ಹೋದವ ಮತ್ತೆ ಬರಲೇ ಇಲ್ಲ. ನಾನು ಕಾದದ್ದೇ ಆಯಿತು. ಬಂದದ್ದು ಪಕ್ಕದ ಮನೆಯಾಕೆ. "ಮೂಲೆಯಲ್ಲಿ ಒಂದು ಆಕ್ಸಿಡೆಂಟ್‌ ಆಗಿದೆ. ಸ್ಪಾಟ್‌. ಹುಡುಗ ಯಾರು ಅಂತ ಹುಡುಕುತ್ತಿದ್ದಾರೆ. ನಿಮಗೇನಾದರೂ ಗುರುತು ಸಿಗುತ್ತದೆಯೋ," ಎಂದು ಕೇಳಲು ಬಂದಿದ್ದರು. ಓಡಿದೆ. ನನ್ನ ಅನುಮಾನ ನಿಜವಾಗಿತ್ತು.ಅಲ್ಲಿ ಇದ್ದದ್ದು ಅವನದ್ದೇ ಬೈಕ್‌. ಅವನಿರಲಿಲ್ಲ."ಓಹ್‌, ದೇವರೇ!" ಅಪ್ಪಟ ನಾಸ್ತಿಕನ ಬಾಯಿ ಅಯಾಚಿತವಾಗಿ ನುಡಿದಿತ್ತು. ಬಳಿಯಲ್ಲೇ ಇದ್ದ ಪೋಲೀಸನ್ನು ವಿಚಾರಿಸಿದ್ದೆ. "ಎಲ್ಲಿ ಹುಡುಗ?" "ಶವಾಗಾರದಲ್ಲಿ," ಎಂದು ನಿರ್ಲಿಪ್ತನಾಗಿ ನುಡಿದಿದ್ದ. ಡಾಕ್ಟರುಗಳು, ಪೋಲೀಸರು ಸಾವನ್ನು ವರದಿ ಮಾಡುವಷ್ಟು ನಿರ್ಭಾವುಕರಾಗಿ ಇನ್ಯಾರೂ ಮಾಡಲು ಸಾಧ್ಯವಿಲ್ಲ. ಅದಕ್ಕೂ ಬಹುಶಃ ತರಬೇತಿ ಬೇಕಾಗಬಹುದು.

ಹೌದು. ತೇಜ ಇನ್ನಿಲ್ಲ ಎನ್ನುವ ವಿಷಯ ಎದೆಗೆ ಒದ್ದಿತು. ತೊಡೆ ಥರ,ಥರ ನಡುಗಿತು. ಮನೆಗೆ ಓಡಿ ಬಂದೆ. ನನ್ನ ಮುಖ ನೋಡಿಯೇ ಮಡದಿಗೆ ವಿಷಯ ತಿಳಿದಿತ್ತು ಎನ್ನಿಸುತ್ತೆ. ಪಕ್ಕದಲ್ಲಿ ಅತೀವ ಜ್ವರದಲ್ಲಿ ಮಲಗಿದ್ದ ಮಗನನ್ನೂ ಮರೆದು ಓ ಎಂದು ಅಳತೊಡಗಿದಳು. ನಿಜ. ಸಾವು ಯಾರಿಗೂ ಹೇಳಿ ಬರುವುದಿಲ್ಲ. ಯಾರನ್ನೂ ಅದು ಅಪಾಯಿಂಟ್‌ಮೆಂಟ್‌ ಕೇಳುವುದಿಲ್ಲ. ಆದರೆ, ಹೀಗೇ ಏಕೆ? ಕೆಲವೇ ನಿಮಿಷಗಳ ಹಿಂದೆ ನಗುವಾಗಿದ್ದವ, ಶವವಾಗಿದ್ದ. ತಲೆಯೊಡೆದು ಬಿದ್ದು ಶವಾಗಾರದ ಒಂದು ಪೆಟ್ಟಿಗೆಯ ನಂಬರ್‌ ಆಗಿದ್ದ. ಬರೇ ಬಾಡಿ. ಯಾರಾದರೂ ನೀರು ಕುಡಿಸಿದರೋ ಇಲ್ಲವೋ? ಸಾಯುವ ಮೊದಲು ಏನು ಹೇಳಿರಬಹುದು? ಅಂಕಲ್‌ ಎಂದನೇ? ಅಥವಾ ನನಗಿಂತಲೂ ಆಪ್ತಳಾಗಿದ್ದ ಮಡದಿಯನ್ನು ನೆನಪಿಸಿಕೊಂಡನೇ? ಇಲ್ಲ, ಮನೆಯಲ್ಲಿ ಜ್ವರದಿಂದ ಮಲಗಿದ್ದ ಮಗನಿಗಾಗಿ ಔಷಧಿ ತರಲು ಹೋಗಿದ್ದನಲ್ಲ? ಅವನನ್ನು ಕರೆದನೇ? ಸಾವನ್ನು ಎದುರಿಸಿದಾಗ ಏನು ಮಾತನಾಡಿರಬಹುದು? ಏನೇನು ಭಾವನೆಗಳು ಬಂದಿರಬಹುದು? ನೋವಾಯಿತೋ? ಅಥವಾ ಏನೂ ಗೊತ್ತೇ ಆಗಲಿಲ್ಲವೋ?

ಅಂದಿನಿಂದ ಇಂದಿನವರೆವಿಗೂ ಅಪಘಾತಗಳನ್ನು ಎದುರಿಸಲು ಭಯವಾಗುತ್ತದೆ. ಪರಿಚಿತ ಮುಖದ ಮೇಲೆ ಘಾಯ, ರಕ್ತದ ಕಲೆಗಳು ಇರುವುದನ್ನು ಸಹಿಸಲಾಗುವುದಿಲ್ಲ. ಸಾವು ನನ್ನನ್ನೂ ಹಿಡಿದು ಬಿಟ್ಟೀತೇನೋ ಎನ್ನುವ ಆತಂಕವಿರುವವನಂತೆ ಅಪಘಾತಗಳಿಂದ ದೂರ ಓಡುತ್ತೇನೆ. ರಸ್ತೆಯಲ್ಲಿ ಚಲಿಸುವಾಗ, ಬದಿಯಿಂದ ಯಾವುದೇ ವಾಹನ ವೇಗದಿಂದ ಚಲಿಸಿದರೂ "ಆ ಕ್ಷಣ" ನೆನಪಾಗುತ್ತದೆ. "ಅಂಕಲ್‌, ಎರಡೇ ನಿಮಿಷ. ಹೀಗೆ ಹೋಗಿ ಹಾಗೆ ಬರುತ್ತೇನೆ," ಎಂದದ್ದು ಧ್ವನಿಸುತ್ತದೆ. ಆ ಕೊನೆಯ ಶಬ್ದಗಳು ಎಲ್ಲಿಯಾದರೂ ಕೇಳಿಸಿಬಿಟ್ಟರೆ ಎನಿಸುತ್ತದೆ. ಸಾಯುವವರ ಸನಿಹದಲ್ಲಿ ಇರುವುದಕ್ಕಿಂತಲೂ ಸತ್ತವರನ್ನು ಮಣ್ಣು ಮಾಡುವುದು ಸುಲಭವೇನೋ ಎನಿಸುತ್ತದೆ. ರೊಯ್ಯನೆ ಬದಿಯಿಂದ ಬೈಕ್‌ ಮುಂದೋಡಿದರೆ, ಈ ಎಲ್ಲ ಭಾವನೆಗಳೂ ಒಂದು ಕ್ಷಣ ಎದುರಾಗಿ, ಸ್ಟೀರಿಂಗ್‌ ನಡುಗುತ್ತದೆ. ನಾನು ಮತ್ತೆಂದು ನಾಗರೀಕನಾಗುವೆನೋ?