Monday, March 12, 2007

ನಾಯಿಪಾಡು

ಹೊಸದಾಗಿ ಬ್ಲಾಗ್‌ ಆರಂಭಿಸುವಾಗ ವಿಷಯ ಏನಿರಬೇಕು ಎಂಬ ಚಿಂತೆ ಮೂಡಲೇ ಇಲ್ಲ. ನಾಯಿ ಪಾಡು ಎದುರಲ್ಲೇ ಇತ್ತು. ಮೊನ್ನೆ ಬೆಂಗಳೂರಿನಲ್ಲಿ ನಾಯಿ ಕಚ್ಚಿ ಮಗುವೊಂದು ಸತ್ತಿದ್ದು ಸುದ್ದಿಯಾಯಿತಲ್ಲ. ಅಂದಿನಿಂದ ಪ್ರತಿ ನಿತ್ಯವೂ ಪತ್ರಿಕೆಯಲ್ಲಿ ಒಂದು ಕಲಂ ನಾಯಿ ಹತ್ಯೆಯ ಬಗ್ಗೆಯೇ ಇದೆ. ಬೀಡಾಡಿ ನಾಯಿಗಳ ಹೋಮ ಮಾಡಿ ಎನ್ನುವವರು ಒಂದೆಡೆ. ಇನ್ನೊಂದೆಡೆ, ಪಾಪ ನಾಯಿಗಳು. ಅವುಗಳಿಗೆ ವಾಕ್‌ ಸ್ವಾತಂತ್ರ್ಯ ಇದ್ದಿದ್ದರೆ ಅವುಗಳೂ ಮೆರವಣಿಗೆ ಹೋಗುತ್ತಿದ್ದುವೇನೋ ಎನ್ನುವವರು. ಒಟ್ಟಾರೆ ನಾಯಿಗಳ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ಮ ಮನೆಯಲ್ಲಿಯೂ ನಡೆಯುವ ನಾಯಿ ಚರ್ಚೆ ನೆನಪಿಗೆ ಬಂತು.
ಮನೆಯಲ್ಲಿ ಎಂಟರ ಮಗ ಮತ್ತುಹದಿನೆಂಟರ ಮಗಳು ಇಬ್ಬರದೂ ಹಲವು ವರುಷಗಳಿಂದ ಒಂದೇ ವರಾತ. ಮನೆಯಲ್ಲಿ ಒಂದು ನಾಯಿ ಸಾಕೋಣ. ನಾಯಿ ಸಾಕೋಣ ನಮಗೇನೂ ಹೊಸದಲ್ಲ. ಅವರ ಅಜ್ಜಿಯ ಮನೆಯಲ್ಲಿ ನಾನು ಹುಟ್ಟುವುದಕ್ಕೂ ಮೊದಲಿನಿಂದಲೇ ನಾಯಿ ಸಾಕುವ ಪರಿಪಾಠ ಇದೆ. ನಮಗೆ ಹೊತ್ತು, ಹೊತ್ತಿಗೆ ಕಾಫಿ, ತಿಂಡಿ ಸಿಗುತ್ತಿತ್ತೋ ಇಲ್ಲವೋ, ನಾಯಿಗೆ ಅದು ತಪ್ಪುವುದಿಲ್ಲ. ಇಂದಿಗೂ ಅಲ್ಲಿ ಜಿಪ್ಸಿ ಇದೆ.
ಜಿಪ್ಸಿಗೆ ಮೊದಲು ಜಿಮ್ಮಿ ಇತ್ತು. ಅದಕ್ಕೂ ಮೊದಲು ನಿಶಾ. ಅದಕ್ಕೂ ಮೊದಲು ರಾಣಿ. ರಾಣಿಗೂ ಹಿಂದೆ ಟಾಮಿ. ಇವೆಲ್ಲ ನನಗೆ ನೆನಪಿರುವಂತಹವು. ನೆನಪಿಲ್ಲದಂತಹವು ಇನ್ನೂ ಎಷ್ಟೋ! ನಾವಿರುವ ಊರಿನಲ್ಲಿ ಖಂಡಿತ ನಾಯಿ ಕೃಷಿ (ಬ್ರೀಡರ್ಸ್‌)ಕರು ಇಲ್ಲ. ಇದ್ದಿದ್ದರೆ ಬೀದಿಯ ನಾಯಿಗಳು ನಮ್ಮ ಮನೆಯವುಗಳಾಗುತ್ತಿರಲಿಲ್ಲ.
ಅಪ್ಪಟ ಸಂಪ್ರದಾಯದವರ ಮನೆಗೆ ನಾಯಿ ಬಂದ ಬಗ್ಗೆಯೂ ಅಪ್ಪ ಕತೆ ಹೇಳುತ್ತಿದ್ದರು. ಅವರ ಬಾಸ್‌ ಮನೆಗೆ ಒಂದು ನಾಯಿ ಬಂತಂತೆ. ಆದರೆ ಬಾಸ್‌ನ ಹೆಂಡತಿಗೆ ನಾಯಿಯ ಬಗ್ಗೆ ಬಲು ಭಯ. ಹೀಗಾಗಿ ನಾಯಿಯನ್ನ ಊರಿನಿಂದ ದೂರ ಎಲ್ಲೋ ಹೊರಗೆ ಬಿಟ್ಟು ಬಂದು ಬಿಡಿ ಎಂದರಂತೆ. ನಾಯಿಗೆ ಊರಿನಿಂದ ಬಹಿಷ್ಕಾರ ಹಾಕುವ ಕೆಲಸ ಡ್ರೈವರ್‌ ಆಗಿದ್ದ ಅಪ್ಪನ ಪಾಲಿಗೆ ಬಂತು. ಜೀಪಿನಲ್ಲಿ ಕೊಂಡೊಯ್ದು ಬಲು ದೂರದಲ್ಲಿ ಬಿಟ್ಟು ಬಂದರಂತೆ. ನಾಲಕ್ಕೇ ದಿನ, ನಾಯಿ ಮತ್ತೆ ಹಾಜರ್‌. ಹೀಗೆ ಎರಡು ಮೂರು ಬಾರಿ ಆದ ಮೇಲೆ, ಕರುಣೆ ಬಂದು ಅಪ್ಪ ಅದನ್ನು ಮನೆಗೇ ತಂದಿಟ್ಟುಕೊಂಡರಂತೆ.
ಒಂದು ರೂಮಿನ ಮನೆಯಲ್ಲಿ ಎಂಟು ಮಂದಿ ಇದ್ದ ಕಾಲ ಅದು. ಟಾಮಿ ಒಂಬತ್ತನೆಯದಾಗಿ ಮನೆ ಸೇರಿತ್ತು. ರಾತ್ರಿ ಅಪ್ಪ ಬೀದಿಯ ಮೂಲೆಯಲ್ಲಿ ಬಂದರೆ ಸಾಕು, ಊರಿಗೇ ಸೈರನ್‌ನ ಹೊಡೆಯುತ್ತಿತ್ತು ಟಾಮಿ. ಯಾರನ್ನೂ ಅದು ಕಚ್ಚಿದ ನೆನಪಿಲ್ಲ. ನನಗೆ ಅದರ ನೆನಪು ಇರುವುದು ಇಷ್ಟೆ. ತೆಪ್ಪಗೆ ಮಲಗಿರುತ್ತಿದ್ದ ಅದನ್ನೇ ತಲೆದಿಂಬಾಗಿಟ್ಟುಕೊಂಡು ಎಷ್ಟೋ ಬಾರಿ ಒರಗಿರುತ್ತಿದ್ದೆ. ಎಷ್ಟೇ ನೆನಪಿಸಿಕೊಂಡರೂ ಅದರ ಚಿತ್ರ ನೆನಪಾಗುತ್ತಿಲ್ಲ. ನೆನಪಾಗುತ್ತಿರುವುದು ಕೇವಲ ನನ್ನ ಮಡದಿ ಹೊಲಿದು ಇಟ್ಟಿರುವ ಬೆಳ್ಳಗಿನ ಪಾಲಿಫೈಬರ್‌ನ ಸಾಫ್ಟೀ ನಾಯಿ ಬೊಂಬೆಯಷ್ಟೆ. ಆದರೆ ಒಂದು ದಿನ ಮನೆಯ ಎದುರಿನಲ್ಲೇ ರಭಸದಿಂದ ಬಂದ ಲಾರಿ (ತಿಂಗಳಿಗೊಮ್ಮೆ ಟ್ರಕ್ಕುಗಳು ಕಾಣಿಸಿಕೊಳ್ಳುತ್ತಿದ್ದ ಕಾಲ ಅದು. ಇಂದಿನಂತೆ ಸಾಲು, ಸಾಲಾಗಿ ಮರಳು ಲಾರಿಗಳು ಬರುತ್ತಿರಲಿಲ್ಲ) ಚಕ್ರಕ್ಕೆ ಸಿಲುಕಿ ಕರ್ಕಶವಾಗಿ ಕೂಗಿ ಕೊನೆಯುಸಿರೆಳೆದದ್ದು ನೆನಪಿನಲ್ಲಿದೆ.
ನಾಯಿಯ ಕೂಗು ಕೇಳಿ ಓಡಿ ಬಂದ ಅಮ್ಮ, ನನ್ನನ್ನು ಮನೆಯಿಂದ ಹೊರಗೆ ಬಿಟ್ಟಿರಲಿಲ್ಲ. ಬೀದಿಯವರೆಲ್ಲ ಸೇರಿ ಟ್ರಕ್‌ ಚಾಲಕನಿಗೆ ಧರ್ಮದೇಟು ಕೊಟ್ಟಿದ್ದರಂತೆ. ರಾತ್ರಿ ಅಪ್ಪ ಮರಳುವವರೆಗೂ ಅಮ್ಮ, ಅಕ್ಕಂದಿರು, ಅಕ್ಕಪಕ್ಕದವರು, ಟಾಮಿಯನ್ನ ಜೋಪಾನವಾಗಿ ಬಟ್ಟೆ ಹೊದಿಸಿ ಕಾದಿಟ್ಟಿದ್ದರು. ಅಪ್ಪ ಬಂದ ನಂತರ ಅರ್ಧ ರಾತ್ರಿಯಲ್ಲಿಯೇ ದೂರದ ಕೆರೆಯ ಬಳಿ ಟಾಮಿಯ ಸಂಸ್ಕಾರ ಆಯಿತು. ಮರುದಿನ ಟಾಮಿಯ 'ಗೋರಿ'ಯ ಬಳಿ ಹೋಗಿ ಹಣ್ಣು, ಹೂವು ಇಟ್ಟಿದ್ದಾಯಿತು. ಅಪ್ಪ ಕೂಡ ಬಂದಿದ್ದರು. ನಾಲ್ಕು ಬನ್‌ಗಳ ಜೊತೆಗೆ. ನಿತ್ಯ ರಾತ್ರಿ ಬಂದಾಗ ಜೇಬಿನಲ್ಲಿ ಬನ್‌ ಒಂದು ತರುವ ಅಭ್ಯಾಸ. ಟಾಮಿ ಹಾರಿ ಹೋಗಿ ಜೇಬಿನಿಂದ ಅದನ್ನು ಎಗರಿಸುತ್ತಿತ್ತು. ಟಾಮಿಯ ಮೆಚ್ಚಿನ ತಿಂಡಿ ಎಂದು ಅಪ್ಪ ಗೋರಿಗೆ ಬನ್‌ ಒಪ್ಪಿಸಿದ್ದರು. ನಾನು ಮೂರು, ನಾಲ್ಕು ದಿನ ಟಾಮಿ ಬೇಕು ಎಂದು ಅಳುತ್ತಿದ್ದೆನಂತೆ. ಈಗ ಅಮ್ಮ ನೆನಪಿಸಿಕೊಳ್ಳುತ್ತಿರುತ್ತಾರೆ.
ಕಾಲ ಬದಲಾಗಿದೆ. ಮನೆಯಲ್ಲಿ ಜಿಪ್ಸಿ ಇದೆ. ಊರವರನ್ನೆಲ್ಲ ಬೆದರಿಸುತ್ತದೆ. ಹತ್ತಾರು ತಿಂಗಳು ಕಳೆದು ಹೋದರೂ ನೆನಪಿನಿಂದ ಬಾಲ ಅಲ್ಲಾಡಿಸುತ್ತದೆ. ಆದರೆ ನಾನು ಬನ್ ತೆಗೆದುಕೊಡುವುದಿಲ್ಲ. ಮೈ ಸವರುವುದಿಲ್ಲ.
ನಾಯಿ ೧

2 comments:

Manjunatha Kollegala said...

ಬೀಡಾಡಿ ನಾಯಿಗಳನ್ನು ನಿರ್ನಾಮ ಮಾಡಬೇಕೆಂಬ ಕೂಗು ಎಲ್ಲೆಡೆ ಕೇಳುತ್ತಿರುವಾಗ, ಒಂದು ಸದ್ದಿಲ್ಲದ ಆಪ್ತ ಚಿತ್ರಣ, ಟಾಮಿಯ ಇನ್ನೊಂದು ಮುಖವನ್ನು ನೆನಪಿಗೆ ತರುತ್ತದೆ. ಸಮಸ್ಯೆಗೆ ಪರಿಹಾರವನ್ನು ಇದು ಸೂಚಿಸದಿದ್ದರು, ನಾವು ಮರೆತ ಮಾನವೀಯತೆಯ ಎಳೆಯೊಂದನ್ನು ನೆನಪಿಸುತ್ತದೆ. ಕ್ಷಣ ನಿಲ್ಲುವಂತೆ, ಧೇನಿಸುವಂತೆ ಮಾಡುತ್ತದೆ. Thanks for this touching article. ಇನ್ನು ಶೈಲಿಯಬಗ್ಗೆ ಹೇಳಬೇಕಾದ್ದೇ ಇಲ್ಲ. fantastic.

ಜಯಂತ ಬಾಬು said...

tuMbaa cennagide