ಇದೀಗ ತಾನೆ ಮಿತ್ರ ಮಂಜುನಾಥ (ksmanjunatha.blogspot.com)ಮೆಸೇಜ್ ಮಾಡಿದ್ದರು. ಹೊಸ ಬ್ಲಾಗ್ ಯಾವಾಗ ಬರೆಯುತ್ತೀರಿ? ಕೊಡವಿದರೆ ಎಲ್ಲಿ ಬಿದ್ದು ಹೋಗುತ್ತದೆಯೋ ಎನ್ನುವ ಹಾಗೆ ತಲೆಯಲ್ಲಿ ಯಾವಾಗಲೂ ಚಿಂತೆಗಳ ಸೆಮಿನಾರ್ ನಡೆಯುತ್ತಿರುತ್ತದೆ. ಈವತ್ತು ಆರಂಭವಾದ ಸೆಮಿನಾರ್ ಸೈಬರ್ ಸಂವಹನದ ಬಗ್ಗೆ. ಬೆಳಗ್ಗೆ ನಿತ್ಯಕರ್ಮವಾಗಿ ದಿನಪತ್ರಿಕೆ ಓದುವಾಗ, ಮುಂಬಯಿಯ ಐಐಟಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸೌಲಭ್ಯವನ್ನು ನಿಯಂತ್ರಿಸಿದ ಬಗ್ಗೆ ಓದಿದ್ದೆ. ನಮ್ಮ ದೇಶದ ’ಅತಿ ಬುದ್ಧಿವಂತ’ (ಪನ್ ಬಳಸಿದ್ದೇನೆ) ವಿದ್ಯಾರ್ಥಿಗಳು ಹಗಲೂ ರಾತ್ರಿ ಇಂಟರ್‌ನೆಟ್‌ನಲ್ಲೇ ಈಜಾಡುತ್ತ (ಸರ್ಫ್ ಮಾಡುತ್ತ) ಮಾನವ ಸಂಬಂಧಗಳ ಬಗ್ಗೆ ಮರೆತೇ ಬಿಟ್ಟಿದ್ದಾರೆ ಎನ್ನುವುದು ಅವರ ಶಿಕ್ಷಕರ ದೂರು. ಹೀಗಾಗಿ ಈಗ ಕಂಪ್ಯೂಟರ್ ಬಳಕೆಗೆ ಕೆಲವು ಕಾಲ ಕರ್ಫ್ಯೂ ವಿಧಿಸಲಾಗಿದೆಯಂತೆ.
ಹೌದೇ. ಯಂತ್ರ ಬಂದ ಕೂಡಲೆ ಮಾನವ ಸಂಬಂಧಗಳು ಕಳಚಿಕೊಳ್ಳುತ್ತವೆಯೇ? ಒಂದು ವಿಧದಲ್ಲಿ ಐಐಟಿಯ ಶಿಕ್ಷಕರ ವಾದದಲ್ಲಿ ಹುರುಳಿದೆ ಎನ್ನಬೇಕು. ಎಷ್ಟಿದ್ದರೂ ಅವರು ರಾಷ್ಟ್ರದ ಅತಿ ಮೇಧಾವಿ ವಿದ್ಯಾರ್ಥಿಗಳನ್ನು ತಿದ್ದುವವರು. ಇಂಟರ್‌ನೆಟ್ ಚಟವಾಗಿ ಬೆಳೆದಿದೆ ಎಂದು ನಾನು ಈ ಬ್ಲಾಗ್‌ನಲ್ಲಿ ಬರೆಯುವುದು ವಿಪರ್ಯಾಸವಷ್ಟೆ ಅಲ್ಲ, ವಿಡಂಬನೆಯ ವಿಷಯವೂ ಹೌದು. ಆದರೆ ಇದರಿಂದ ಸಂಬಂಧಗಳು ಮುರಿದಿವೆಯೇ? ಬೆಳೆದಿವೆಯೇ? ಬಹುಶಃ ಇದಮಿತ್ಥಂ ಎಂದು ಹೇಳುವ ಸಂಶೋಧನೆ ಇನ್ನು ಆಗಬೇಕಷ್ಟೆ.
ನನ್ನ ವಿಷಯವನ್ನೇ ತೆಗೆದುಕೊಳ್ಳಿ. ಕಂಪ್ಯೂಟರ್ ಬಳಸಲು ಆರಂಭಿಸಿ ಕೆಲವು ವರುಷಗಳಷ್ಟೆ ಆಗಿವೆ. ಈ ವಯಸ್ಸಿನಲ್ಲಿ (ನನ್ನ ತಲೆಗೂದಲು ನರೆಯುತ್ತಿದೆ ಎಂದು ಮಡದಿಯ ದೂರು ಕೇಳಿ ಈ ಮಾತು ಹೇಳುತ್ತಿದ್ದೇನೆ. ಇಲ್ಲದಿದ್ದರೆ ನಾನೂ ಹಸಿ ಯುವಕನೇ! :)) ಕಂಪ್ಯೂಟರ್ ಬಳಕೆ, ಅದರ ಸಾಮರ್ಥ್ಯ ಹಾಗೂ ಅನುಕೂಲತೆಗಳ ಸದುಪಯೋಗ ಪಡೆಯುವುದೆನ್ನುವುದು ಸುಲಭದ ಮಾತಲ್ಲ. ನಮ್ಮ ಮನೆಗೆ ಕಂಪ್ಯೂಟರ್ ಬಂದಾಗ ಇಂಟರ್‌ನೆಟ್ ಕೈಗೆಟುಕುವಷ್ಟು ಅಗ್ಗವಾಗಿರಲಿಲ್ಲ. ಆದರೂ, ಐಐಟಿಯ ಶಿಕ್ಷಕರು ಈಗ ಹೇಳುತ್ತಿರುವ ದೂರನ್ನು ಮಡದಿಯೂ ಹೇಳುತ್ತಿದ್ದಳು.’ಕಂಪ್ಯೂಟರು ಮುಂದೆ ಕುಳಿತರೆ ನಿಮಗೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಮನೆಯಲ್ಲಿ ಬೇರೆ ಮನುಷ್ಯರೂ ಇದ್ದಾರೆ ಎನ್ನುವುದೂ ಮರೆತಂತೆ ಕಾಣುತ್ತದೆ’ ಎನ್ನುತ್ತಿದ್ದಳು. ಟೀವಿ ಹೋಯಿತು, ಕಂಪ್ಯೂಟರ್ ಬಂತು, ಡುಂ.ಡುಂ.ಡುಂ. ಎನ್ನುತ್ತಿದ್ದೆ.
ಗಂಡಸರ ಬುದ್ಧಿ ಸುಲಭವಾಗಿ ತಿದ್ದಲಾಗುವುದಿಲ್ಲವಂತೆ. ಇದೂ ನನ್ನವಳ ಹೇಳಿಕೆ. ಬಹುಶಃ ನಿಜವಿರಬಹುದು. ನಾನು ಇನ್ನೂ ಕಂಪ್ಯೂಟರ್, ಇಂಟರ್‌ನೆಟ್ ಸಹವಾಸ ಬಿಟ್ಟಿಲ್ಲ. ಮಂಜುನಾಥ್‌ರವರ ಬಗ್ಗೆ ಹೇಳಿದೆನಲ್ಲವೇ? ಈ ಸನ್ಮಿತ್ರರನ್ನು ನಾನು ಭೇಟಿಯಾಗಿಯೇ ಇಲ್ಲ. ಆದರೆ ಹಳೆಯ ಮಿತ್ರರಂತೆ ಚಾಟ್‌ನಲ್ಲಿ ಜೋಕ್ ಮಾಡುತ್ತೇವೆ. ಬೆದರಿಸುತ್ತೇವೆ. ನಾವು ಎದಿರು ಬದಿರಾದಾಗ ಇದೇ ಸಲುಗೆಯಿಂದ ಸಂವಾದ ನಡೆಸುವೆವೇ? ಗೊತ್ತಿಲ್ಲ. ನನ್ನ ಮತ್ತು ಮಂಜುನಾಥ್‌ರವರ ನಡುವಿನ ಸಂಬಂಧದ ಕೊಂಡಿಗಳಲ್ಲಿ, ತವರೂರು ಒಂದು ಮತ್ತೊಂದು ಈ ಕಂಪ್ಯೂಟರ್ (ಅರ್ಥಾತ್ ಇಂಟರ್‌ನೆಟ್). ಬಹುಶಃ, ಆರ್ಕುಟ್ ಇಲ್ಲದಿದ್ದಲ್ಲಿ ನನ್ನದೆ ತವರೂರಿನ ಮತ್ತೊಂದು ಪೀಳಿಗೆಯ ಸಂವೇದನಶೀಲ ವ್ಯಕ್ತಿ ಮಂಜುನಾಥ್ ಜೊತೆ ಭೇಟಿಯಾಗುತ್ತಿರಲಿಲ್ಲ.
ಇಂಟರ್‌ನೆಟ್ ನ ಸಂಬಂಧಗಳೇ ಹೀಗೆ. ನೇರ ಸಂಬಂಧಗಳ ಹಾಗೆ ಇವುಗಳಲ್ಲಿನ ವೈರುಧ್ಯ ಅಥವಾ ನಾಟಕೀಯತೆ ಎದ್ದು ಕಾಣುವುದಿಲ್ಲ. ಬಹುಶಃ ಅದೇ ಕಾರಣಕ್ಕೇ ನಾವು ಇಂಟರ್‌ನೆಟ್ ಸಂಬಂಧಗಳಿಗೆ ಹೆಚ್ಚು ಮಹತ್ವ ಕೊಡುತ್ತೇವೇನೋ ಎನ್ನಿಸಿಬಿಟ್ಟಿದೆ. ಉದಾಹರಣೆಗೆ, ನನ್ನ ಮಗಳ ಜೊತೆಗೆ ನಾನು ನಡೆಸುವ ಚಾಟ್. ಚಾಟ್‌ನಲ್ಲಿ ಹಾಸ್ಯ, ಕೋಪ, ಇವೆಲ್ಲ ಇರುತ್ತದೆ. ಮುಕ್ತವಾಗಿ ವಿವಿಧ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಇದೇ ಸಲುಗೆ ಬಹುಶಃ ನಾವು ಎದುರಾದಾಗ ಇರುವುದಿಲ್ಲವೇನೋ? ಕೆಲವು ವಿಷಯಗಳನ್ನು ಮಗಳು ಎನ್ನುವ ಕಾರಣಕ್ಕಾಗಿಯೇ ಮುಚ್ಚಿಡಬೇಕಾಗುತ್ತದೆ. ಆಕೆಯೂ ತಂದೆ ಎನ್ನುವ ಗೌರವದಿಂದ ಬಹುಶಃ ನೇರವಾಗಿ ಹೇಳುವುದಿಲ್ಲ. ವ್ಯಕ್ತಿ ಎದುರಿಗಿದ್ದಾರಲ್ಲಾ? ಚಾಟ್‌ನಲ್ಲಿಯಾದರೆ ಅದೊಂದು ಯಂತ್ರ. ಏನು ಹೇಳಿದರೂ ನಡೆಯುತ್ತದೆ. ಅದು ಮುಖ ಸಿಂಡರಿಸುವುದಿಲ್ಲ. ಸ್ವರ ಬದಲಿಸುವುದಿಲ್ಲ. ಸಂಭಾಷಣೆಯ ಜೊತೆಗೆ ತಳುಕಿಸುವ ಸ್ಮೈಲಿಗಳೂ ಆಷಾಢಭೂತಿಗಳೇ. ಕಪಟ ಚಿಹ್ನೆಗಳೇ ಎನ್ನಿಸುತ್ತದೆ.
ಐಐಟಿಯ ಪ್ರಭೃತಿಗಳು ಕಂಪ್ಯೂಟರ್ ಮುಂದೆ ಕುಳಿತು ಇಡೀ ಜಗತ್ತನ್ನು, ಅದರಲ್ಲಿನ ಸಂಸ್ಕೃತಿ, ಮಾನವತೆ, ಕಲೆ, ಸಾಹಿತ್ಯ ಎಲ್ಲವನ್ನೂ ಮರೆತಿದ್ದಾರೆ ಎನ್ನುತ್ತಾರೆ ಅವರ ಶಿಕ್ಷಕರು. ಆದರೆ ಇದುವೇ ಒಂದು ಸಂಸ್ಕೃತಿ ಅಲ್ಲವೇ? ಇಲ್ಲಿ ಮಂಜುನಾಥರ ಕವನ ಓದಲು ಸಿಗುತ್ತದೆ. ಎಲ್ಲೋ, ಯಾರೋ ಬರೆದ ಸಂಗೀತ ಕೇಳಲು ದೊರೆಯುತ್ತದೆ. ಎಲ್ಲ ಚಾಟ್‌ಗಳೂ ಸಲುಗೆಯವೇ? ಪುಟ್ಟ ಮಗುವಾಗಿದ್ದಾಗ ನೋಡಿದ್ದ ಪಲ್ಲವಿ ಧುತ್ತೆಂದು ಆರ್ಕುಟ್‌ನಲ್ಲಿ ಅಂಕಲ್ ಎನ್ನುತ್ತಾಳೆ. ನೆನಪಿನ ಮೂಲೆಯಲ್ಲಿ ಎಲ್ಲೋ ಕೊಳೆತುಹೋಗಿದ್ದ ಯಾವುದೋ ಒಂದು ಸಂಬಂಧ ಇದ್ದಕ್ಕಿದ್ದ ಹಾಗೆ ಅಮೆರಿಕೆಯ ನ್ಯೂಯಾರ್ಕ್‌ನ ಒಂದು ವೆಬ್ ತಾಣದಲ್ಲಿ ಎದುರಾಗುತ್ತದೆ. ವಿಶ್ವ ಎಷ್ಟುಕಿರಿದು ಎನ್ನಿಸುತ್ತದೆ.
ಈಗ ನೀವೇ ಹೇಳಿ. ಈ ಸೈಬರ್ ಸಮಸ್ಯೆಗೆ ಬೇರೆ ದಾರಿ ಇದೆಯೇ?
Subscribe to:
Post Comments (Atom)
2 comments:
ಪ್ರಿಯ ಶರ್ಮರವರೇ,
ನಿಮ್ಮ ಲೇಖನ, as usual, ಸೊಗಸಾಗಿದೆ ಎಂದು ಬೇರೆ ಹೇಳಬೇಕಿಲ್ಲ. ಇದರಲ್ಲಿ ನನ್ನನ್ನೂ ನೆನೆದಿದ್ದೀರಿ, ನೋಡೇ ಇರದ ನನ್ನನ್ನು ಸನ್ಮಿತ್ರ ಎಂದಿದ್ದೀರಿ (ಇದೂ ಅಂತರ್ಜಾಲದ ಮಾಯಾಜಾಲವಿರಬಹುದೇ ;) - ತಮಾಷೆಗೆ ಹಾಗಂದೆ) Thanks for the same. ನಿಮ್ಮ ವಿಜ್ಞಾನದ ಅಂಕಣಗಳನ್ನು ಬಹಳ ಹಿಂದೆ ಅಲ್ಲಿಲ್ಲಿ, ಆಗೀಗ ಓದಿದ್ದೆ, ಆದರೆ ನಿಮ್ಮಲ್ಲಿನ ನುರಿತ ಅಂಕಣಕಾರನನ್ನು ಗುರ್ತಿಸಿರಲಿಲ್ಲವೆಂದೇ ಹೇಳಬೇಕು (ಹುಡುಗುಬುದ್ಧಿ!)
ಇಂಟರ್ ನೆಟ್ ಮಾನವ ಸಂಬಂಧಗಳನ್ನು ಮರೆಸುತ್ತದೆಯೇ? ಅಥವಾ ಕಾರಣಾಂತರಗಳಿಂದ ಸಡಿಲವಾಗುತ್ತಿರುವ ಮಾನವ ಸಂಬಂಧಗಳಿಗೆ ಇದು next best available ಪರ್ಯಾಯವೇ? ನನ್ನದೇ ಆದ ಗೊಂದಲಗಳಿವೆ. ನನ್ನ ಇನ್ನೊಬ್ಬ ಮಿತ್ರರು (of course, ಅಂತರ್ಜಾಲದ ಮಿತ್ರರು) ಹೇಳುತ್ತಿದ್ದರು, "ಈ ಕಾಗದದ ಹೂವಿನ ಜೀವನದಿಂದ ದೂರವಿರಬೇಕು". ಹ್ಮ್ಮ್... ನಿಜವಾದ ಹೂವುಗಳು ತಮ್ಮ ಕಂಪನ್ನು ಕಳೆದುಕೊಂಡಾಗ, ಅಥವ ತೀರ ದುಬಾರಿಯಾದಾಗ, ಕಾಗದ ಹೂವು ಇದ್ದುದರಲ್ಲೇ ಉತ್ತಮ ಪರ್ಯಾಯವಲ್ಲವೇ (ಕೊನೆಯ ಪಕ್ಷ ಹೂವು ಸಿಗುವವರೆಗೂ). ಏನೇ ಆಗಲಿ ಬರೀ ಕಾಗದವಂತೂ ಅಲ್ಲವಲ್ಲ :)
ಏನೇ ಆಗಲಿ, ನಿಜದ ಹೂವನ್ನೂ ತಿರಸ್ಕರಿಸುವಷ್ಟು ಕಾಗದ ಹೂವಿನ ಮೇಲೆ ವ್ಯಾಮೋಹ ಬೆಳೆದರೆ ಮಾತ್ರ ನಿಜಕ್ಕೂ ಕಷ್ಟ, and internet is definitely capable of getting us into that ;)
ವಿಚಾರಪೂರ್ಣ ಲೇಖನ.
ಪ್ರಿಯ ಮಂಜು
ಅಂಕಣಕಾರರಿಗೆ ಒಂದು ದೌರ್ಬಲ್ಯವಿದೆ. ತಮಗನಿಸಿದ್ದನ್ನೆಲ್ಲ ಅವರು ಬರೆಯುವುದಿಲ್ಲ. ಬರೆಯಲಾಗುವುದೂ ಇಲ್ಲ. ಕಲಮಿರುವ ಉದ್ದಕ್ಕಷ್ಟೆ ಲೇಖನಿ ಓಡಿಸುವ ಅನಿವಾರ್ಯತೆ ಅವರಿಗಿರುತ್ತದೆ. ನನ್ನ ಈ ದೌರ್ಬಲ್ಯದಿಂದ ಕ್ಷೀಣವಾಗಿದ್ದ ಬ್ಲಾಗ್ ಗೆ ನಿಮ್ಮ ಚಿಂತನೆ ಬಲ ಕೊಟ್ಟಿದೆ ಎನ್ನಲೇ? ಆದರೂ, ಊಟಕ್ಕೆ ಇ-ಮೈಲ್‌ನಲ್ಲಿಯೇ ಆಹ್ವಾನಿಸಿ, ಅಲ್ಲಿಯೇ ಚಿತ್ರ ತೋರಿಸುವಷ್ಟು ನಾವು ಕಾಗದದ ಹೂವಿಗೆ ಮರುಳಾಗುವೆವೇ? (;))
Post a Comment