Saturday, June 17, 2017

ಹೊದಿಕೆಯನ್ನೂ ತೆರೆಯದ ಪತ್ರಿಕೆ ಮೇಜಿನ ಮೇಲೆ ಇರುವುದು ಓದುವುದು ನಿಂತಿದೆ ಅಂತಲ್ಲ. ಇ-ಓದು ಪತ್ರಿಕೆಗಳಿಗೆ ಈ ಗತಿ ತಂದಿದೆ. ಪತ್ರಿಕೆ ಕೈ ಸೇರುವ ಮುನ್ನವೇ ಸೈಬರ್ಲೋಕದಲ್ಲಿ ಅದನ್ನೋದಿ, ಚರ್ಚಿಸಿ, ಜೀರ್ಣಿಸಿಯೂ ಆಗಿರುವುದರಿಂದ ನಮ್ಮ ಮನೆಯಲ್ಲಿ ಇವೆಲ್ಲವೂ ಹಾಗೇ ಇರುತ್ತವೆ. ಇವನ್ನು ಕಂಡಾಗೆಲ್ಲ ಸಾಯಿಬ್ ಸಿಂಗ್ ನೆನಪಾಗುತ್ತಾನೆ.

ಅವನ ಹೆಸರು ಅದೇ ಇರಬೇಕು. ನೆನಪಾಗುತ್ತಿಲ್ಲ. ನೆನಪಿನಲ್ಲಿ ಉಳಿದಿರುವುದು ಕೆಂಪು ಅಥವಾ ನೀಲಿ ಮಫ್ಲರ್ ಸುತ್ತಿದ ಮುಖ, ಕುಂಟ ನಡೆ, 'ತ' ವೆಲ್ಲ ದವನ್ನಾಗಿಸಿದ ತೊದಲು ನುಡಿ. ನಾವೆಲ್ಲ ಅವನನ್ನು ಮ್ಯಾಗಜೀನ್ ಮ್ಯಾನ್ ಎನ್ನುತ್ತಿದ್ದೆವು.

ಎಲ್ಲ ಪತ್ರಿಕೆಗಳನ್ನೂ ಓದುವ ಹಂಬಲ, ಅವನ್ನು ಕೊಳ್ಳಲಾಗದ ಹತಾಶೆಯೇ ಜೇಬು ತುಂಬಿರುತ್ತಿದ್ದ ಕಾಲ ಅದು. ಕಛೇರಿಯಲ್ಲಿ ನಾವು ಕೆಲವರು ಒಟ್ಟಾಗಿ ಮ್ಯಾಗಜೀನ್ ಕ್ಲಬ್ ನಡೆಸುತ್ತಿದ್ದೆವು. ಎಲ್ಲರ ಚಂದಾವೂ ಒಟ್ಟಾಗಿ ಹತ್ತಾರು ದುಬಾರಿ ಬೆಲೆಯ ಪತ್ರಿಕೆಗಳನ್ನು ಕೊಳ್ಳುತ್ತಿದ್ದೆವು. ದಿನಕ್ಕೆ ಎರಡು ಮ್ಯಾಗಜೀನ್ ಕೊಂಡೊಯ್ದು ಓದಿ ವಾಪಸು ತರಬೇಕೆನ್ನುವುದು ನಿಯಮ. ನಾಲ್ಕು ಕಾಫಿಗೆ ಕೊಡುವ ಕಾಸಿನಲ್ಲಿ ಇಷ್ಟೊಂದು ಓದು ಸಿಗುವದು ಎಲ್ಲರಿಗೂ ಬೇಕಿತ್ತು. ಕೆಲಸಕ್ಕೆ ಆಗ ತಾನೇ ಸೇರಿದ್ದ ನಾನು ಕ್ಲಬ್ಬಿನ ಕಿರಿಯ ಸದಸ್ಯ.
ಕ್ಲಬ್ಬುನ ನಿರ್ವಾಹಕ ಸಾಯಿಬ್ ಸಿಂಗ್.

ಬಹುಶಃ ಅಷ್ಟಾವಕ್ರನ ರೂಪವನ್ನು ಸಾಯಿಬ್ ಸಿಂಗನನ್ನೇ ನೋಡಿ ವರ್ಣಿಸಿದ್ದಿರಬೇಕು. ಅಚ್ಚಗಪ್ಪು ಬಣ್ಣ, ಜೋಲು ತುಟಿಗಳು, ಅಡ್ಡಾದಿಡ್ಡಿ ಬೆಳೆದ ಹಲ್ಲುಗಳು, ಅಸ್ಪಷ್ಟ ಮಾತುಗಳು, ನಕ್ಕರೂ ಕ್ರೂರವಾಗಿ ಕಾಣುತ್ತಿದ್ದ ಚಹರೆ. ಜಾಠರ ಕುಲದವನಾಗಿದ್ದರೂ ಬಲು ಕುಳ್ಳು. ಕುಂಟು ನಡೆ ಬೇರೆ. ಮಕ್ಕಳನ್ನು ಬೆದರಿಸಿಡಲು ಅವನನ್ನು ತೋರಿಸಿದರೆ ಸಾಕಿತ್ತು.

ನಮ್ಮಲ್ಲಿ ಕೆಲವರು ಅವನನ್ನು ಡೈನೋಸಾರು ಎಂದೂ ಎನ್ನುತ್ತಿದ್ದೆವು. ಏಕೆಂದರೆ ನಾನೂರು ಜನರಿದ್ದ ಸಂಸ್ಥೆ ಯಲ್ಲಿ ಅತಿ ವಯಸ್ಸಾದವನೆಂದರೆ ಅವನೇ! ಅವನ ವಯಸ್ಸೆಷ್ಟು ಅಂತ ಸ್ವತಃ ಅವನಿಗೇ ತಿಳಿದಿರಲಿಲ್ಲ. ಸಂಸ್ಥೆಯಲ್ಲು ದಾಖಲೆಗಳಿರಲಿಲ್ಲ. ಸಂಸ್ಥೆ ಸ್ಥಾಪನೆಯಾದ ಅಲ್ಪ ಕಾಲದಲ್ಲೇ ಯಾರೋ ಕರುಣೆಯಿಂದ ಕೆಲಸ ನೀಡಿದ್ದರು. ಸೇರಿದ ಉದ್ಯೋಗದಲ್ಲೇ ಮೇಲೂ ಏರದೆ, ಕೆಳಗೂ ಇಳಿಯದೆ ಇದ್ದ.

ಸ್ವತಃ ಎರಡಕ್ಷರ ಓದಲು ಬಾರದ ಈ ಜೀವ ನಮ್ಮೆಲ್ಲರಿಗೂ ಓದಲು ಸಾಮಗ್ರಿಯನ್ನು ಬಡಿಸುತ್ತಿತ್ತೆಂದರೆ ಎಂತಹ ವಿಪರ್ಯಾಸ. ವಯಸ್ಸಾಗಿದ್ದರಿಂದಲೂ, ಓದು-ಬರೆಹ ಬಾರದ್ದರಿಂದಲೂ ಅವನಿಗೆ ತಿಂಡಿ ತಿನಿಸು ತರುವ, ಮ್ಯಾಗಜೀನ್ ಕ್ಲಬ್ಬಿನ ಪುಸ್ತಕಗಳನ್ನು ಹಂಚುವ ಕೆಲಸವಷ್ಟೆ ಹಚ್ಚಿದ್ದರು.  ಕಾರ್ಪೊರೇಟು ಜಗತ್ತಿನಲ್ಲಿ ಇಂತಹ ವಿಚಿತ್ರಗಳು ಸಿಗಲಿಕ್ಕಿಲ್ಲ.

ಈ ಡೈನೊಸಾರು ಜೀವಿ ತನಗೊಪ್ಪಿಸಿದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದ ನೀಯತ್ತು ಕಂಡರೆ ಅಚ್ಚರಿಯಾಗುತ್ತಿತ್ತು. ಒಬ್ಬರಿಗೆ ಒಮ್ಮೆಗೆ ಎರಡೇ ಮ್ಯಾಗಜೀನು. ಜಪ್ಪಯ್ಯ ಎಂದರೂ ಇನ್ನೊಂದು ಹೆಚ್ಚಿಗೆ ಕೊಡುತ್ತಿರಲಿಲ್ಲ. ಎರಡು ದಿನ ಕಳೆದ ಕೂಡಲೆ ತಪ್ಪದೆ ಹಾಜರು. 'ಸಾಬ್ ಕಿತಾಬ್' ಎನ್ನುತ್ತಿದ್ದ. ಅಯ್ಯೋ ತರಲು ಮರೆತೆ ಎಂದರೆ ತಲೆ ಕೊಡವಿ ಹೊರಟು ಬಿಡುತ್ತಿದ್ದ. ಮರು ದಿನ ಮತ್ತೆ ಹಾಜರು. ತಂದು ಕೊಡುವವರೆಗೂ ಮತ್ತೊಂದು ಪತ್ರಿಕೆ ಕೊಡುತ್ತಿರಲಿಲ್ಲ. ಮುಂಜಾನೆ ಬಂದು ಎದುರು ನಿಲ್ಲುವುದನ್ನು ತಪ್ಪಿಸುತ್ತಿರಲಿಲ್ಲ.

ಯಾರ್ಯಾರಿಗೆ ಯಾವ್ಯಾವ ಮ್ಯಾಗಜೀನು ಇಷ್ಟ ಎನ್ನುವುದರ ಡಾಟಾದಲ್ಕು ಮಾತ್ರ ಪಕ್ಕ. ಮ್ಯಾಗಜೀನು ಹಿಂದಿರುಗಿಲ್ಲವಾದರೆ ಆ ಮೆಚ್ಚಿನ ಪತ್ರಿಕೆಯ ಹೊಸ ಸಂಚಿಕೆ ತಂದು ತೋರಿಸಿ ಪುಸಲಾಯಿಸುತ್ತಿದ್ದ. ಅತಿ ಕಿರಿಯವನು ಅಂತಲೋ, ಡೆಬೊನೇರ್, ಕಾಸ್ಮೊಪಾಲಿಟನ್ ನಂತಹ ಬೇಡಿಕೆ ಹೆಚ್ಚಿದ್ದ ಪತ್ರಿಕೆಗಳ ಬದಲಿಗೆ ಮಿರರ್, ಕ್ಯಾರಾವಾನ್, ಔಟ್ಲುಕ್ ಗಳನ್ನು ಓದುತ್ತಿದ್ದುದಕ್ಕೋ, ಅತಿ ಕಿರಿಯವನು ಎನ್ನುವ ಪ್ರೀತಿಗೋ ನನಗಿಷ್ಟವಾದ ಪತ್ರಿಕೆ ಬಂದ ಕೂಡಲೆ ಸೂಚನೆ ಕೊಟ್ಟು ಹೋಗುತ್ತಿದ್ದ. ಮೊದಲು ಓದಲು ನನಗೇ ಸಿಗುವಂತೆ ನೋಡಿಕೊಳ್ಳುತ್ತಿದ್ದ.

ಅವನ ಮಕ್ಕಳು ಬೆಳೆದು ಮೊಮ್ಮಕ್ಕಳೂ ಆಗಿದ್ದರೂ ಇವನ ಕಾಯಕಕ್ಕೆ ಕೊನೆ ಬಂದಿರಲಿಲ್ಲ. ಮನೆ ರಾಜಕೀಯದಲ್ಲಿ ಒಬ್ಬಂಟಿಯಾಗಿದ್ದ ಕಛೇರಿಯಲ್ಲಿಯೂ ಅವನ ಹುಟ್ಟಿದ ದಿನದ ದಾಖಲೆಗಳು ಇಲ್ಲದ ಕಾರಣ ನಿವೃತ್ತಿ ಮಾಡುವುದು ಹೇಗೆಂದು ಜಿಜ್ಞಾಸೆ ನಡೆದಿತ್ತು. ಏಳು ವರ್ಷ ನಮ್ಮ ಒಡನಾಟ. ಕೊನೆಗೆ ನಾನು ಕರ್ನಾಟಕಕ್ಕೆ ಮರಳುವ ದಿನಗಳು ಸನಿಹವಾದಾಗ "ಅಬ್ ಯೇ ಕೌನ್ ಪಡೇಗಾ ಸಾಬ್" ಎಂದು ನಿರಾಸೆಯಲ್ಲಿ ತೊದಲಿದ್ದ. ಅವನ ಹೊಣೆಯನ್ನು ಪೂರ್ಣವಾಗಿ ನಿರ್ವಹಿಸಲಾಗದ್ದರಿಂದಲೋ, ನನ್ನ ಮೇಲಿನ ಪ್ರೀತಿಯಿಂದಲೋ ಗೊತ್ತಿಲ್ಲ.

ಅಷ್ಟು ದೀರ್ಘ ಕಾಲದಲ್ಲಿ ನಮ್ಮ ನಡುವೆ ನಡೆದ ಸಂಭಾಷಣೆ ಬಹುಶಃ ಈ ಪೋಸ್ಟಿಗಿಂತಲೂ ಪುಟ್ಟದಾದೀತು. ಆದರೆ ಈ ಪ್ಲಾಸ್ಟಿಕ್ ಕವರಿನ ಹಾಗೆಯೇ ಸ್ವತಃ ಅನಕ್ಷರಸ್ಥ ನಾದರೂಬ ಅವರವರಿಗಿಷ್ಟವಾದ ಜ್ಞಾನವನ್ನು ಕೊಂಡೊಯ್ಯುತ್ತಿದ್ದ ಸಾಯಿಬ್ ಸಿಂಗ್.

ನಾನು ಬಂದ ಹತ್ತು ವರ್ಷಗಳ ನಂತರ ಅವನಿಗೆ ಕೊನೆಗೂ ನಲವತ್ತೊಂಬತ್ತು ವರ್ಷಗಳ ಸೇವೆಯಾಯಿತಾದ್ದರಿಂದ ವಯಸ್ಸಾಯಿತೆಂದು ಲೆಕ್ಕ ಹಾಕಿ ನಿವೃತ್ತಿ ಮಾಡಿದರಂತೆ!

No comments: