Friday, November 11, 2016

ಅಪಮೌಲ್ಯದ ದಿನ

ಮೊನ್ನೆ ಸಂಜೆ ಚಹಾ ಕುಡಿಯುತ್ತ ಸುದ್ದಿ ಸವಿಯುತ್ತಿದ್ದಾಗ ದಿಢೀರನೆ 500 ಹಾಗೂ 1000 ರೂಪಾಯಿ ನೋಟುಗಳ ಅಪಮೌಲ್ಯದ ಸುದ್ದಿ ಚಹಾಗಿಂತಲೂ ಚುರುಕಾಗಿ ನಿದ್ರೆಯನ್ನೋಡಿಸಿತು. ಇನ್ನು ಮುಂದಿನ ಎರಡು ದಿನಗಳ ವ್ಯವಹಾರಗಳು ಹೇಗೆ ನಡೆಸುವುದು ಎನ್ನುವ ಚಿಂತೆ ಮೊದಲು ಬಂತು.
ತಕ್ಷಣ ಮಡದಿಗೆ ಕೇಳಿದೆ. "ನಿನ್ನ ಪರ್ಸಿನಲ್ಲಿ ಇರೋ ದುಡ್ಡೆಲ್ಲ ತೆಗೆದಿಡು."

ಈ ಪ್ರಶ್ನೆ ಕೇಳುವುದಕ್ಕೆ ಕಾರಣವಿದೆ.  ವ್ಯಾಪಾರಕ್ಕೆ ಇಬ್ಬರೂ ಒಟ್ಟಿಗೆ ಹೋಗುವುದು ಸಾಮಾನ್ಯ. ಆಗೆಲ್ಲ ಬಿಲ್ ಪಾವತಿಯ ಹೊಣೆ ನನ್ನದೇ ಆಗಿರುತ್ತೆ. ಆದರೂ ಕೆಲವೊಮ್ಮೆ ಅವಳು ತವರಿಗೆ ಹೋದಾಗಲೋ, ನಾನು ಪ್ರವಾಸ ಹೋದಾಗಲೋ, ಅಥವಾ ಅವಳೇ ಗೆಳತಿ/ನಾದಿನಿಯರ ಜೊತೆ ಷಾಪಿಂಗ್ ಹೋದಾಗಲೋ ಒಂದಿಷ್ಟು ಹಣ ತೆಗೆದುಕೊಂಡು ಹೋಗುವುದು ವಾಡಿಕೆ. ವ್ಯಾಪಾರ ಮುಗಿಸಿ ಬಂದ ಮೇಲೆ ಖರ್ಚೆಷ್ಟಾಯಿತು ಎಂದು ನಾನು ಕೇಳುವುದಾಗಲಿ, ಅವಳು ಒಪ್ಪಿಸುವುದಾಗಲಿ ವಾಡಿಕೆಯಲ್ಲ. ಹಾಗೆ ಏನಾದರೂ ಉಳಿದಿದ್ದರೆ ಅದು ಅವಳ ಪರ್ಸಿನಲ್ಲಿಯೇ ಇರುತ್ತದೆ. ಹೀಗೆ ಎಷ್ಟೋ ಬಾರಿ ಮನೆಯಲ್ಲಿ ಯಾವ್ಯಾವುದೋ ಪರ್ಸಿನಲ್ಲಿ ಅಷ್ಟಿಷ್ಟು ದುಡ್ಡು ಸಿಗುವುದುಂಟು. ಇದೊಂದು ರೀತಿಯಲ್ಲಿ ನಮ್ಮ ಮನೆಯಲ್ಲಿನ ಕಾಳಧನ. ಆದರೆ ಬಲು ಉಪಯುಕ್ತ ಧನ. ಆಪತ್ಕಾಲಕ್ಕೆ ಒದಗುವಂಥದ್ದು.

"ಒಂದೆರಡು ಸಾವಿರ  ಇರಬಹುದು", ಎಂದಳು. ಹಾಗಿದ್ದರೆ ಪರವಾಗಿಲ್ಲ. ಒಂದು ವಾರ ಚಿಂತೆಯಿಲ್ಲದೆ ಕಳೆಯಬಹುದು ಎಂದು ಕೊಂಡೆ. ತಿಂಗಳ ಮೊದಲ ವಾರದಲ್ಲಿಯೇ ಪೇಪರು, ವಿದ್ಯುತ್ ಬಿಲ್ಲು ಮುಂತಾದ ನಗದು ವ್ಯವಹಾರಗಳಿಗೆ ಅಂತ ಹತ್ತಿಪ್ಪತ್ತು ಸಾವಿರ ತಂದಿಡುವುದುಂಟು. ಈ ತಿಂಗಳು ದೂರದೂರಿನಿಂದ ಬರುವ ಮಗನ ಟಿಕೆಟ್ಟು ಖರ್ಚು, ಮದುವೆ ಸೀಸನ್ನಿನ ಖರ್ಚು ಅಂತ ಸ್ವಲ್ಪ ಜಾಸ್ತಿಯೇ ತಂದಿದ್ದೆ. ಎಲ್ಲವನ್ನೂ ಲೆಕ್ಕ ಹಾಕಿದಾಗ, ಮಡದಿಯ ಪರ್ಸಿನಲ್ಲಿ ಒಂದು ನೂರು ನೋಟು, ನನ್ನ ಬಳಿ ಎರಡು ನೂರು ನೋಟುಗಳ ಹೊರತಾಗಿ ಉಳಿದವೆಲ್ಲವೂ 500, 1000ದ ನೋಟುಗಳೇ ಉಳಿದಿದ್ದವು. ಒಟ್ಟು ಹದಿನಾರು ಸಾವಿರ ಇತ್ತು. ಹೇಗೋ ಮೂರು ದಿನ ಕಳೆದ ಮೇಲೆ ಬ್ಯಾಂಕಿನಲ್ಲಿ ಕಟ್ಟಿ ಬಿಡಬಹುದು. ನಾಳೆ, ನಾಳಿದ್ದಿಗೆ ಹಾಲು, ತರಕಾರಿ ಖರ್ಚಾದರೆ ಸಾಕಲ್ಲ ಎಂದು ಲೆಕ್ಕ ಹಾಕಿದೆ.

ಬೆಳಗ್ಗೆ ಕೈಯಲ್ಲಿದ್ದ ನೂರು ರೂಪಾಯಿ ಹಿಡಿದು ಹಾಲು ತರಲು ಹೊರಟೆ. ಒಂದು ಲೀಟರು ಹಾಲು, ಅರ್ಧ ಕಿಲೋ ಬೀನ್ಸು, ಅರ್ಧ ಕ್ಯಾರಟ್ ಗೆ ಅದು ಸಾಕಾಯಿತು. ಕೊತ್ತಂಬರಿ ಸೊಪ್ಪಿಗೆ ಚಿಲ್ಲರೆ ಇಲ್ಲ ಅಂತ ವಾಪಸು ಬಂದೆ. ಟೀ ಕುಡಿಯುವಾಗ ಹೆಂಡತಿಯ "ರೀ" ಕೇಳಿಸಿತು. ಅಂದರೆ ಮರಳಿ ಅಂಗಡಿಗೆ ಹೋಗಿ ಅಂತಲೇ. ಏನು ಎಂದೆ. ತೊಗರಿ ಬೇಳೆ ಮುಗಿದಿದೆ. ಮಂಗಳ್ ಸ್ಟೋರಿಗೆ ಹೋಗಿ  ಎರಡು ಕೇಜಿ ತೊಗೊಂಡು ಬನ್ನಿ ಅಂದಳು.

ಕೇಜಿ ಬೇಳೆಗೆ 140 ರೂಪಾಯಿ. ನನ್ನ ಬಳಿ ಇರುವುದು ಕೇವಲ ಎರಡು ನೂರು. "ಆಗಲ್ಲ. ಈವತ್ತಿಗೆ ಅರ್ಧ ಕೇಜಿ ತರುತ್ತೀನಿ. ನಾಳೆ, ನಾಡಿದ್ದು ಎಟಿಎಮ್ಮೋ, ಬ್ಯಾಂಕೋ ದುಡ್ಡು ಕೊಟ್ಟಾಗ ಬೇರೆ ತರೋಣ," ಅಂತ ಅಂಗಡಿಗೆ ಹೋದೆ. ಅಲ್ಲಿ ರಾಜಕುಮಾರನನ್ನ (ಮಂಗಳ ಸ್ಟೋರಿನ ರಾಜಾಸ್ತಾನಿ ಮಾಲೀಕ) ಹತ್ತಿರ ಐಷಾರಾಮ ಮಾತನಾಡುತ್ತ ಅರ್ಧ ಕಿಲೊ ಬೇಳೆ ಕೊಡು. ನಾಳೆ ಇನ್ನೆರಡು ಕಿಲೊ ತೊಗೊಳ್ತೀನಿ ಎಂದೆ. "ಅಯ್ಯೋ ಅಂಕಲ್. ದುಡ್ಡಿಗೆ ಯಾಕೆ ಯೋಚನೆ ಮಾಡ್ತೀರಾ? ತೊಗೊಳ್ಳಿ. ಲೆಕ್ಕ ಬರೆದುಕೊಳ್ಳುತ್ತೇನೆ. ಆಮೇಲೆ ಕೊಡಿ." ಎಂದ. ಐದು ದಶಕಗಳ ಹಿಂದೆ ಬೇಡ ಎಂದು ಮರೆತು ಬಿಟ್ಟಿದ್ದ ಅಭ್ಯಾಸವನ್ನು ಈ ಮಾತು ನೆನಪಿಸಿತು.

ಐದು ದಶಕಗಳ ಹಿಂದೆ ನಾನು ಶಾಲೆಯಲ್ಲಿ ಓದುತ್ತಿದ್ದೆ. ಆಗ ರೇಶನ್ ಯುಗ. ದಿನಸಿಯನ್ನು ಕಾಗದದಲ್ಲಿ ಪೊಟ್ಟಣ ಕಟ್ಟಿ ತರುತ್ತಿದ್ದ ಕಾಲ. ಊರಿನಲ್ಲಿ ನಮ್ಮ ಮನೆಯ ಸಾಲಿನ ಕೊನೆಯಲ್ಲಿದ್ದ ಮೂಲೆ ಅಂಗಡಿ ರಾಜಪ್ಪನ ಬಳಿ ಅಮ್ಮ ತಿಂಗಳ ಲೆಕ್ಕ ಇಟ್ಟಿದ್ದಳು. ಕಾಸು ಕೊಡದೆಯೇ ಸಾಮಾನು ತರುತ್ತಿದ್ದೆವು. ತಿಂಗಳ ಮೊದಲ ವಾರದಲ್ಲಿ ಅಪ್ಪನಿಗೆ ಸಂಬಳ ಬಂದಾಗ ಅದನ್ನು ಹಿಂತಿರುಗಿಸುವುದು ಪರಿಪಾಠ. ಆ ಕಾಲದಲ್ಲಿ ಸಾಲ ಪಡೆದದ್ದನ್ನು ಕಾಲಕ್ಕೆ ಸರಿಯಾಗಿ ಮರೆಯದೆ ವಾಪಸು ಹಿಂತಿರುಗಿಸು ಅಂತ ಅಮ್ಮ ಆಗಾಗ ಪಾಠ ಹೇಳುತ್ತಿದ್ದಳು.( ಬಹುಶಃ ಮಲ್ಯನಿಗೆ ಈ ಪರಿಸ್ಥಿತಿ ಇರಲಿಲ್ಲವೇನೋ? )

ನಾನು ದೊಡ್ಡವನಾಗಿ ಸಂಪಾದನೆಗೆ ತೊಡಗಿದಾಗ, ಏನೇ ಕಷ್ಟವಿದ್ದರೂ ಅಂಗಡಿಯಲ್ಲಿ ಸಾಲ ಕೊಳ್ಳಬಾರದು ಎಂದು ತೀರ್ಮಾನಿಸಿ ಬಿಟ್ಟಿದ್ದೆ. ನನ್ನ ಹೆಂಡತಿಯೂ ಇದಕ್ಕೆ ಸಾಥ್ ಕೊಡುತ್ತಿದ್ದಳು. ಬಾಡಿಗೆ, ವಿದ್ಯುತ್ ಬಿಲ್ಲು, ನೀರಿನ ಬಿಲ್ಲು, ಹಾಲು, ತರಕಾರಿ, ಪೇಪರು ಹೀಗೆ ತಿಂಗಳ ಬಾಕಿಯನ್ನು ಸಂಬಳ ಬಂದ ಮರುದಿನವೇ ಚುಕ್ತಾ ಮಾಡಿಬಿಡುವುದು ಅಭ್ಯಾಸ.  ಕ್ರಮೇಣ ಇವನ್ನೂ ನಗದು ಕೊಟ್ಟೇ ತರುವ ಅಭ್ಯಾಸ ಬೆಳೆಯಿತು. ಸಾಲದ ಪುಸ್ತಕ ಎನ್ನುವುದು ಚರಿತ್ರೆಯಾಗಿತ್ತು.

"ಅಂಕಲ್. ಪೇಜ್ 94 ನೆನಪಿಟ್ಟುಕೊಳ್ಳಿ," ಎಂದ ರಾಜಕುಮಾರ. ಅಂತೂ ಸಾಲ ಬೇಡವೆಂದಿದ್ದವನ ಮೌಲ್ಯ ಹೀಗೆ ದಿಢೀರನೆ ಕುಸಿಯಿತು.

ಮನೆಗೆ ಬಂದು ತಿಂಡಿ ತಿನ್ನುವಷ್ಟರಲ್ಲಿ ಊರಿನಿಂದ ಅಕ್ಕನ ಫೋನು. ಮನೆಯಲ್ಲಿ ದುಡ್ಡು ಇದ್ದರೆ ಬ್ಯಾಂಕಿಗೆ ಕಟ್ಟಿಬಿಡು ಅಂತ ಉಪದೇಶ. ಏಕೆ ಎಂದೆ. ಪುಟ್ಟಮ್ಮನ ಕಥೆ ಹೇಳಿದಳು. ಪುಟ್ಟಮ್ಮ ನಮ್ಮ ಮನೆಯಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಬಟ್ಟೆ ಒಗೆಯಲು ಮನೆ ಗುಡಿಸಿ ಸಾರಿಸಲು ಬರುತ್ತಿದ್ದಾಳೆ. ರೇಶನ್ ಯುಗ ಕಳೆದು ನಾವೆಲ್ಲ ಉದ್ಯೋಗವಂತರಾದಾಗ ಅಮ್ಮನಿಗೆ ನೆರವಾಗಲಿ ಎಂತ ನೇಮಿಸಿದ್ದೆವು. ಅವಳೂ ನಮ್ಮ ಮನೆಯವಳೇ ಆಗಿಬಿಟ್ಟಿದ್ದಳು. ಅವಳ ಮಗಳಿಗೆ ಈಗ ಮದುವೆ. ಮದುವೆಗೆ ಬೇಕಾಗುತ್ತದೆ ಎಂದು ಪ್ರತಿ ತಿಂಗಳೂ ಒಂದಿಷ್ಟು ಹಣವನ್ನು ಕೂಡಿಸಿ ಅಕ್ಕನ ಬಳಿ ಕೊಡುತ್ತಿದ್ದಳಂತೆ. ಅಕ್ಕ ಅದನ್ನು ಹಾಗೆಯೇ  ಪ್ರತ್ಯೇಕವಾಗಿ ಒಂದು ಬ್ಯಾಂಕ್ ಅಕೌಂಟಿನಲ್ಲಿ ಹಾಕಿಡುತ್ತಿದ್ದಳು. ಮೂರು ದಶಕದ ಉಳಿತಾಯ ಸುಮಾರು 60000 ಆಗಿತ್ತಂತೆ. ಮದುವೆ ನಿಶ್ಚಯವಾಗಿದೆ ಬೇಕು ಅಂತ ಹೇಳಿದ್ದಳು ಅಂತ ಮೊನ್ನೆ ಅಕ್ಕ ಅದನ್ನು ಬ್ಯಾಂಕಿನಿಂದ ತಂದಿದ್ದಳಂತೆ. ಈಗ ಅದನ್ನು ಏನು ಮಾಡುವುದು? ಅಷ್ಟು ಹಣವನ್ನು ತಕ್ಷಣಕ್ಕೆ ಬದಲಾಯಿಸಲು ಬರುವುದಿಲ್ಲವಲ್ಲ ಎಂದು ಸಲಹೆ ಕೇಳಲು ಫೋನ್ ಮಾಡಿದ್ದಳು.

ನಮ್ಮ ಪುಣ್ಯ. ಆ ಕಾಲದಲ್ಲಿ ನಮ್ಮ ಬೀದಿಯಲ್ಲಿದ್ದವರೆಲ್ಲರದ್ದೂ ದೊಡ್ಡ ಕುಟುಂಬಗಳು. ಒಬ್ಬೊಬ್ಬರಿಗೂ ಐದಾರು ಸಹೋದರ, ಸಹೋದರಿಯರು. ನನಗೂ ಅಷ್ಟೆ. ಆರು ಅಕ್ಕ ತಂಗಿಯರು. ಎಲ್ಲರೂ ಊರಲ್ಲೇ ಇರುವುದರಿಂದ, ಎಲ್ಲರೂ ಒಟ್ಟಿಗೆ ಬ್ಯಾಂಕಿಗೆ ಹೋಗಿ  ನಿಮ್ಮ, ನಿಮ್ಮ ಅಕೌಂಟಿನಿಂದ ತಂದು ಕೊಡಿ ಎಂದು ಸಲಹೆ ನೀಡಿದೆ. ಕಳ್ಳತನ ಮಾಡುತ್ತದ್ದೇವೆಯೋ ಎನ್ನಿಸಿತು.

ಸಂಜೆ ಆಫೀಸಿನಿಂದ ಬಂದಾಗ ಮಡದಿ ನೆನಪು ಮಾಡಿದಳು. ನಾಳೆ ಗಿರೀಶನ ಮಗಳ ಮದುವೆ. ಮುಂದಿನ ವಾರ ಶಶಿಯ ಮದುವೆ. ಇಬ್ಬರಿಗೂ ಗಿಫ್ಟ್ ಏನಾದರೂ ತರಬೇಕಲ್ಲವಾ? ಅದು ನನಗೂ ನೆನಪಿತ್ತು. ಅದಕ್ಕೇ ಬರುವಾಗ ಅಂಗಡಿಗಳು ತೆಗೆದಿವೆಯೋ ಎಂದು ನೋಡಿಕೊಂಡೇ ಬಂದಿದ್ದೆ  ಒಡವೆಯ ಅಂಗಡಿಯಿಂದ ಬೆಳ್ಳಿಯ ಪದಾರ್ಥವನ್ನು ತರುವ ಮನಸ್ಸಿತ್ತು. ಕಾರ್ಡು ಕೊಟ್ಟು ತರಬಹುದು ಎಂದು ತೀರ್ಮಾನಿಸಿದ್ದೆ. ಆದರೆ ಆಭರಣದ ಅಂಗಡಿಯವ ಕಾರ್ಡು ಕೊಟ್ಟರೆ ಅದಕ್ಕೆ ಮೂರು ಪರ್ಸೆಂಟ್ ಹೆಚ್ಚು ಸೇರಿಸುತ್ತಾನೆ ಎಂದಾಗ ಯೋಚನೆ ಬದಲಾಯಿತು.

ಅಲ್ಲೇ ಪಕ್ಕದಲ್ಲಿದ್ದ ಗಿಫ್ಟ ಅಂಗಡಿಗೆ ಹೋಗಿ ಮಿಕ್ಸಿ, ಗ್ರೈಂಡರ್ ಗಳನ್ನು ಹುಡುಕಿದೆವು. ಬೆಲೆಯೆಲ್ಲವನ್ನೂ ನೋಡಿದ ಮೇಲೆ ಅಂಗಡಿಯವನನ್ನು ಹಾಗೇ ಸುಮ್ಮನೆ ಕೇಳಿದೆ. ನಗದು ಕೊಡಲೋ? ಕಾರ್ಡು ಕೊಡಲೋ? "ಸಾರ್. ಕಾರ್ಡು ಕೆಲಸ ಮಾಡುತ್ತೋ ಇಲ್ಲವೋ ಗೊತ್ತಿಲ್ಲ. ನಗದಿದ್ದರೆ ಕೊಡಿ. ಆದರೆ ಸದ್ಯಕ್ಕೆ ನಾನು ಬಿಲ್ಲು ಕೊಡುವುದಿಲ್ಲ," ಎಂದ. ಬಿಲ್ಲು ಇಲ್ಲದಿದ್ದರೆ ಅದು ಭ್ರಷ್ಟ ವ್ಯಾಪಾರ ಅಲ್ಲವೇ ಎನ್ನಿಸಿತು. ಆದರೆ ನಿರ್ವಾಹವಿಲ್ಲ. ಕೈಯಲ್ಲಿರುವ ನಗದನ್ನು ಬ್ಯಾಂಕಿಗೆ ಹೋಗದೆಯೇ ಬದಲಾಯಿಸಿಕೊಳ್ಳುವ ಅವಕಾಶ  ಇದು ಎಂದುಕೊಂಡೆ. ನನ್ನ ಹಿಂಜರಿತ ಕಂಡ ಅವನೇ ಸಮಜಾಯಿಷಿಯನ್ನೂ ಹೇಳಿದ. "ಹೇಗೂ ಗಿಫ್ಟ ಕೊಡೋದಲ್ಲವಾ ಸರ್. ಬಿಲ್ಲು ಯಾಕೆ?"  ಇದುವೂ ತರ್ಕ ಸರಿಯೇ ಎಂದು ಕೊಂಡೆ. ನಿನಗೆ ತೊಂದರೆ ಆಗುವುದಿಲ್ಲವೇ ಎಂದೆ. "ನಾವೆಲ್ಲ ವ್ಯವಸ್ಥೆ ಮಾಡಿಕೊಳ್ತೇವೆ ಬಿಡಿ ಸಾರ. ಬಿಸಿನೆಸ್ ಅಂದ ಮೇಲೆ ಇವೆಲ್ಲವನ್ನು ನಿಭಾಯಿಸದಿದ್ದರೆ ಹೇಗೆ?" ಎಂದ. ಹೇಗೆ? ಅಂತ ಮಾತ್ರ ಹೇಳಲಿಲ್ಲ. ಅಂತೂ ಗಿರೀಶನ ಮಗಳ ಮದುವೆಗೆ ಗಿಫ್ಟ್ ಸಿದ್ಧವಾಯಿತು.

ನಾಳೆ ಬ್ಯಾಂಕು ತೆಗೆದ ಕೂಡಲೇ ಇರುವ ಹನ್ನೆರಡು ಸಾವಿರವನ್ನಾದರೂ ಅಕೌಂಟಿಗೆ ಹಾಕಿ ನಗದು ಬದಲಾಯಿಸಿಕೊಂಡು ಬಿಡಬೇಕು ಎಂದು ತೀರ್ಮಾನಿಸಿದೆ. ಕಪ್ಪುಧನ  ಇದ್ದವರಿಗೆ ನಿದ್ರೆ ಬಂದಿತ್ತೋ, ಇಲ್ಲವೋ ನನಗಂತೂ ನಿದ್ರೆ ಸರಿಯಾಗಿ ಬರಲಿಲ್ಲ ಅನ್ನುವುದು ನಿಜ.

ಮರುದಿನ ಕಛೇರಿಯ ಆವರಣದಲ್ಲೇ ಇರುವ ಬ್ಯಾಂಕಿಗೆ ಹೋದೆ. ಸಾಧಾರಣವಾಬಿ ಭಣಗುಡುತ್ತಿದ್ದ ಬ್ಯಾಂಕು ಸಿಬ್ಬಂದಿ ಬಂದು ಬಾಗಿಲು ತೆಗೆಯುವ ಮುನ್ನವೇ ಭರ್ತಿಯಾದಂತಿತ್ತು. ಕ್ಯೂ ನಲ್ಲಿ ನಿಂತೆ. ಚಲನ್ ಬರೆದಾಗ ನಿತ್ಯವೂ ನಮಸ್ಕಾರ ಎನ್ನುತ್ತಿದ್ದ ಬ್ಯಾಂಕಿನ ಸಿಬ್ಬಂದಿ, ಸರ್, ಹಿಂದೆ ಬನ್ನಿ. ನಿಮ್ಮ ಖಾತೆ ಚೆಕ್ ಮಾಡಿದ ಮೇಲೆ ಡೆಪಾಸಿಟ್ ಮಾಡುವಿರಂತೆ ಎಂದರು. ಪ್ರತಿ ಚಲನ್ನಿನಲ್ಲಿಯೂ ಅವರು ದಾಖಲಿಸಬೇಕಂತೆ. ಅತಿ ಪರಿಚಿತವಾದ ಸಿಬ್ಬಂದಿಗೂ ಮತ್ತೆ ಪರಿಚಯ ಹೇಳಿಕೊಳ್ಳುವಂತಿತ್ತು. ಕ್ಯೂನಲ್ಲಿ ನಿಂತು ಚಲನ್ನಿಗೆ ಸಹಿ ಹಾಕಿಸಿಕೊಂಡು ಮತ್ತೊಂದು ಕ್ಯೂ ಸೇರಿದೆ.

ಸಾಮಾನ್ಯವಾಗಿ ಬ್ಯಾಂಕಿಗೆ ಕಾಲಿಡದ ವ್ಯಕ್ತಿಗಳೆಲ್ಲಿ ಹಲವರು ಕಣ್ಣಿಗೆ ಕಂಡರು. ಓಹೋ. ಸಮಾನತೆ ಎಂದರೆ ಇದೇ ಎಂದು ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ಬಗ್ಗೆ ಗರ್ವಿಸುತ್ತ ಕ್ಯೂನಲ್ಲಿ ನಿಂತೆ. ನನ್ನ ಮುಂದೆ ಆಫೀಸಿನ ಗ್ರೂಪ್ 1ರ ಸಿಬ್ಬಂದಿಯೊಬ್ಬನಿದ್ದ. ಕ್ಯೂ ಸ್ವಲ್ಪ ಮುಂದುವರೆಯುತ್ತಿದ್ದಂತೆಯೇ, ಅವನ ಪಕ್ಕದಲ್ಲಿ ಅವನ ಹೆಂಡತಿಯೂ, ಮಗ ಮತ್ತು ಮಗಳೂ ಬಂದು ನಿಂತರು. ಹುಳಿ ನಗೆ ನಗುತ್ತಾ, "ಸಾರ್ ಇವರದ್ದೂ ಕಟ್ಟಿ ಬಿಡುತ್ತೇನೆ" ಎಂದ. ಆಫೀಸರರ ಮರ್ಯಾದೆಯಲ್ಲವೇ? ಔದಾರ್ಯ ತೋರಿ ಸರಿ ಎಂದು ಸರಿದೆ.

ಹಾಗೆಯೇ ಮುಂದಿರುವವರು ಕೊಟ್ಟ ಹಣವನ್ನು ಕ್ಯಾಶಿಯರ್ ಲೆಕ್ಕ ಹಾಕುವುದನ್ನು ನೋಡುತ್ತ ನಿಂತೆ. ಕಾಲ ಕಳೆಯಬೇಕಲ್ಲ. ಒಂದೆರಡು ಜನರ ಡೆಪಾಸಿಟ್ಟು ನೋಡಿದ ಮೇಲೆ, ನನ್ನ ಪರ್ಸು ಮುಟ್ಟಿಕೊಂಡೆ. ಪರ್ಸಿನಿಂದ ಕೈಗೆ ತೆಗೆದಿಟ್ಟುಕೊಂಡಿದ್ದ ಹಣವನ್ನು, ಹಿಡಿಯಾಗಿ ಮುಚ್ಚಿಟ್ಟುಕೊಂಡೆ. ಬೇರೆ ಯಾರೂ ನೋಡಬಾರದಲ್ಲ. ಅಲ್ಲಿ ಬಹುಶಃ ಹನ್ನೆರಡೇ ಸಾವಿರವನ್ನು ಡೆಪಾಸಿಟ್ಟು ಮಾಡಲು ಬಂದಿದ್ದವ ನಾನೊಬ್ಬನೇ ಇರಬೇಕು. ನನ್ನ ಮುಂದಿದ್ದ ಇಡೀ ಕುಟುಂಬ ಒಟ್ಟು ಒಂದೂಕಾಲು ಲಕ್ಷ ನಗದನ್ನು ಅಕೌಂಟಿಗೆ (ನಾಲಕ್ಕು ಅಕೌಂಟಿಗೆ ಎನ್ನಿ) ವರ್ಗಾಯಿಸಿತು. ಇದೆಲ್ಲದರ ಮುಂದೆ ನಾನು ಜಮಾಯಿಸಬೇಕಿದ್ದ ಮೊತ್ತ ತೃಣವೆನ್ನಿಸಿತು. ನನ್ನ ಬಗ್ಗೆಯೇ ಅಳುಕುಂಟಾಯಿತು. ಆಫೀಸರನೆಂಬ ಗರ್ವವನ್ನು ಹೀಗೆ ಕಳೆದುಕೊಂಡೆ.

ಅದಾದ ಮೇಲೆ ನೇರವಾಗಿ ರಜೆ ಹಾಕಿ ಮನೆಗೆ ಬಂದೆ. ಮಡದಿಗೆ ಒಂದು ಕಾಫಿ ಕೊಡು ಎಂದೆ. ನಗದು ಅಪಮೌಲ್ಯದ ನಡುವೆ ನನ್ನ ಬೆಲೆಯೆಷ್ಟು ಎಂಬುದರ ಅರಿವಾಗಿತ್ತು. "ಕಾಫಿ ಪುಡಿ ತರಬೇಕು," ಎಂದಳು. ಸರಿ ನೀರು ಕೊಡು ಎಂದು ಅದನ್ನೇ ಕುಡಿದು ನಿರಾಳ ನಿದ್ರೆ ಮಾಡಿದೆ. 

No comments: