Thursday, June 26, 2008

ಹಾ! ಕಳ್ಳ!

ಮೊನ್ನೆ ಎಕೆಬಿಯವರ (ಅಡ್ಯನಡ್ಕ ಕೃಷ್ಣಭಟ್ಟರ) ಮನೆಗೆ ಹೋಗಿದ್ದೆ. ಅವರು ಊರಿನಲ್ಲಿ ಇರಲಿಲ್ಲವಾದ್ದರಿಂದ, ಭೇಟಿ ನೀಡಿ ಬಹಳ ದಿನಗಳಾಗಿತ್ತು. ಕರೆಗಂಟೆ ಬಾರಿಸಿದಾಗ ಎಂದಿನಂತೆ "ಬನ್ನಿ, ಶರ್ಮರೆ" ಎನ್ನುವ ಆತ್ಮೀಯ ಕರೆ ಬರುವುದು ತುಸು ತಡವಾಯಿತು. ಸಂಜೆಯ ಇಳಿಹೊತ್ತಿನ ಮಸುಕಿನಲ್ಲಿ ನನ್ನ ಬಣ್ಣವೂ ಬೆರೆತು, ಕಳ್ಳನಂತೆ ಕಂಡೆನೋ ಎನಿಸಿತು. ಮತ್ತೆ ಎಂದಿನ ಪ್ರೀತಿಯ ಕರೆ. ಭಟ್ಟರೊಬ್ಬರೆ ಮನೆಯಲ್ಲಿದ್ದರು. ಸರಸಕ್ಕ ಇರಲಿಲ್ಲ. "ಅಕ್ಕ ಅಂಗಡಿಗೆ ಹೋಗಿದ್ದಾರೆ. ನೀವು ಈಗ ಬಂದದ್ದು ಒಳ್ಳೆಯದೇ ಆಯಿತು." ಎಂದ ಭಟ್ಟರ ಪೀಠಿಕೆ ಯಾವುದೋ ಮುಖ್ಯ ಸಮಾಚಾರ ಇದೆ ಎಂದು ಸೂಚಿಸಿತು. ಸಾಮಾನ್ಯವಾಗಿ ನಮ್ಮಿಬ್ಬರ ಸಂಭಾಷಣೆ ವಿಜ್ಞಾನ ಬರವಣಿಗೆ, ಪದಬಳಕೆಯ ದೋಷಗಳು, ಬರವಣಿಗೆ ತಂತ್ರಗಳು, ಇತಿಹಾಸ ಇತ್ಯಾದಿಯತ್ತಲೇ ಇರುವುದರಿಂದ, ಸರಸಕ್ಕ ನಮ್ಮ ಸಂಭಾಷಣೆಗೆ ಮೂಕ ಶ್ರೋತೃ. ಬಹುಶಃ ಅವರಿಗೆ ಅನಾವಶ್ಯ ಕಿರುಕುಳವಾಗದಿರಲಿ ಎಂದು ಹೀಗೆ ಹೇಳಿದರೇನೋ ಎಂದು ಕೊಂಡೆ. ಆದರೆ ಅನಂತರ ಭಟ್ಟರು ಹೇಳಿದ ಸಂಗತಿಗಿಂತಲೂ ಅವರು ಹೇಳಿದ ರೀತಿ ಮನ ತಟ್ಟಿತು. ವಿಷಯ ಇಷ್ಟೆ. ಅವರು ಊರಿಗೆ ಹೋಗಿದ್ದಾಗ ಅವರ ಮನೆಯ ಕಿಟಕಿಯ ಸರಳುಗಳನ್ನು ಬಾಗಿಸಿ, ಒಳನುಗ್ಗಿದವರು, ಮನೆಯಲ್ಲಿ ಜಾಲಾಡಿದ್ದರು. "ನೋಡಿ, ಈ ಕಬ್ಬಿಣದ ಕಂಬಿ ಎಷ್ಟು ಗಟ್ಟಿ. ಇದನ್ನು ಬಾಗಿಸಿದ್ದಾರೆ ಎಂದರೆ ಎಷ್ಟು ಬಲ ಬಳಸಿರಬೇಕು," ಭಟ್ಟರ ಒಳಗಿನ ಫಿಸಿಕ್ಸ್‌ ಶಿಕ್ಷಕ ಲೆಕ್ಕ ಹಾಕಿತು. "ಇದೇನು ವಿಚಿತ್ರ ಶರ್ಮರೆ, ನಾವು ಯಾವ ಕೋಣೆಯ ಬಾಗಿಲನ್ನೂ ಹಾಕಿರಲಿಲ್ಲ. ಎಲ್ಲವೂ ತೆರೆದಿತ್ತು. ಇದೊಂದು ಕೋಣೆಯ ಬಾಗಿಲನ್ನು ಹಾಕಿದ್ದೆವು. ಅದನ್ನೇ ಮುರಿದಿದ್ದಾರೆ. ಅಲಮಾರಿಯ ಬೀಗಗಳನ್ನೂ ಹಾಕಿರಲಿಲ್ಲ. ಒಟ್ಟು ಒಂದಿನ್ನೂರು ರೂಪಾಯಿಗಳು, ಒಂದು ಹಳೆಯ, ರಿಪೇರಿಗೆ ಇದ್ದ ಕ್ಯಾಮೆರಾ ಇವಷ್ಟೆ ತೆಗೆದುಕೊಂಡು ಹೋಗಿದ್ದಾರೆ." ಸಜ್ಜನಿಕೆಯ ಭಟ್ಟರ ವಿವರಣೆಯಲ್ಲಿ ಎಲ್ಲಿಯೂ ಕಳ್ಳ ಎನ್ನುವ ಪದ ಕಾಣಿಸಲಿಲ್ಲ. ಯಾರೋ ಕುಶಲಕಲೆಗಾರನ ಕಥೆ ಹೇಳುವಂತೆ ಹೇಳಿದರು. ತಮಗೆ ಅನ್ಯಾಯ ಮಾಡಿದವರನ್ನೂ ಹೀಗಳೆಯದ ಸಜ್ಜನಿಕೆ ಅವರಲ್ಲಿ ಕಂಡು ವಿಚಿತ್ರವೆನ್ನಿಸಿತು. ಅವರಲ್ಲಿ ಸಿಟ್ಟಿನ ಲೇಶವೂ ಇರಲಿಲ್ಲ.

"ಹಣ ಹೋದದ್ದಕ್ಕೆ ಬೇಸರವಿಲ್ಲ ಶರ್ಮರೆ. ಆದರೆ ಯಾರೋ ಅಪರಿಚಿತರು ನಮ್ಮ ಸೀಮೆಯೊಳಗೆ, ಅನುಮತಿ ಇಲ್ಲದೆ ಪ್ರವೇಶಿಸಿದರು ಅನ್ನುವ ಅನಿಸಿಕೆಯೇ ಎದೆಯನ್ನು ಭಾರವಾಗಿಸಿದೆ," ಎಂದ ಎಪ್ಪತ್ತರ ವೃದ್ಧರ ಮಾತು ಎದೆ ತಟ್ಟಿತು. ಅಷ್ಟರಲ್ಲಿ ಬಂದ ಸರಸಕ್ಕ, ಮೊಮ್ಮಗಳು ಕಳ್ಳನ ಬಗ್ಗೆ ಕೇಳಿದ ಪ್ರಶ್ನೆಗಳನ್ನು ನೆನಪಿಸಿಕೊಂಡರು. ಕಳ್ಳ ಯಾರು? ಅವನಿಗೆ ಮೀಸೆ ಇದೆಯಾ? ಕಳ್ಳನ ಬಣ್ಣ ಏನು? ನೋಡಿದರೆ ಹೆದರಿಕೆ ಆಗುತ್ತದೆಯಾ? ನಿಜ. ಕಳ್ಳ ಎನ್ನುವವರ ಸ್ವರೂಪ ಹೇಗಿದೆ ಎಂದು ಕಲ್ಪಿಸಿಕೊಳ್ಳುವುದು ಕಷ್ಟವೇ! ಹಳೆಯ ಸಿನಿಮಾದ ಸ್ಟೀರಿಯೊಟೈಪ್‌ ನೆನಪಿಗೆ ಬರುತ್ತದೆ. ಕಣ್ಣಷ್ಟೆ ತೋರುವಂತೆ ಮುಖವಾಡ. ಕೈಯಲ್ಲೊಂದು ಚಾಕು. ಇಂಗ್ಲೀಷ್‌ ಸಿನೆಮಾಗಳಲ್ಲಿಯಾದರೆ ಪಟ್ಟೆ ಅಂಗಿ. ಆದರೆ ನಿಜವಾಗಿ ಕಳ್ಳ ಎಂದರೆ ಏನು?

ಭಟ್ಟರು ಹೇಳಿದಂತೆ ನಮ್ಮ ಸೀಮೆಯೊಳಗೆ ಅನುಮತಿ ಇಲ್ಲದೆ ಪ್ರವೇಶಿಸಿ, ಅಪರಿಚಿತನಾಗಿ ಉಳಿವ, ನಷ್ಟ ಉಂಟು ಮಾಡುವವರನ್ನು ಕಳ್ಳರು ಎನ್ನಬಹುದೇ? ಅದುವೇ ಸರಿ ಎಂದು ಅನಿಸಿತು. ಹೀಗಾದರೆ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಳ್ಳತನ ಮಾಡಿದವರೇ ಆಗಿರಬೇಕಲ್ಲವೇ? ಬಾಗಿಲು ಮುರಿಯದಿರಬಹುದು. ಆದರೆ ಯಾರದ್ದೋ ಮನದಲ್ಲಿನ ನೆನಪುಗಳಲ್ಲಿ, ನಮ್ಮ ಅರಿವಿಗೇ ಬಾರದೆ, ಅಪರಿಚಿತರಾಗಿ ನಡೆಸಿದ ಯಾವುದೋ ಕೃತ್ಯ, ಕಳ್ಳತನವಾಗಬಹುದಲ್ಲವೇ? ರೈಲು ನಿಲ್ದಾಣದಲ್ಲಿ ಟಿಕೇಟು ಕ್ಯೂನಲ್ಲಿ ಮೆಲ್ಲನೆ ಸರದಿ ತಪ್ಪಿಸಿ ಟಿಕೇಟು ಕೊಂಡು ಏನೋ ಗೆದ್ದವರಂತೆ ನಡೆಯುವಾಗಲೂ, ಯಾರ ಮನಸ್ಸಿನಲ್ಲಿಯೋ ನಾವು ಕಳ್ಳರಾಗಿ ಉಳಿಯಬಹುದಲ್ಲ! ಬಸ್ಸಿನಲ್ಲಿ ಕೈಗಳೆರಡರಲ್ಲೂ ಸಾಮಾನು ಇಟ್ಟುಕೊಂಡು ಸುಸ್ತಾಗಿ ನಿಂತವರು ಖಾಲಿಯಾದ ಸೀಟಿಗೆ ತಲುಪುವುದಕ್ಕೆ ಮುನ್ನವೇ ಓಡಿ, ಜಂಭದ ನಗು ನಗುತ್ತ ಕುಳಿತುಕೊಳ್ಳುವಾಗಲೂ ನಾವು ಕಳ್ಳತನ ಮಾಡಿರಬಹುದಲ್ಲವೇ? ಅಥವಾ ಅದು ಸ್ಪರ್ಧೆಯೋ? ಒಟ್ಟಾರೆ ಭಟ್ಟರ ಮೊಮ್ಮಗಳಿಗೆ ಕಳ್ಳನ ವಿವರಣೆ ಕೊಡುವುದು ಹೇಗೆಂದು ಆಲೋಚಿಸುತ್ತ ಮನೆಗೆ ಬಂದೆ.

ಹಾಂ. ಈ ಬ್ಲಾಗ್‌ನಲ್ಲಿ ಭಟ್ಟರ ಬದುಕಿನ ಈ ಖಾಸಗಿ ಘಟನೆಯನ್ನು ಬರೆಯುವುದೂ ಕಳ್ಳತನವೇ! ಸದ್ಯ. ಭಟ್ಟರು ಇದಕ್ಕೆ ಅನುಮತಿ ನೀಡಿದ್ದಾರೆ ಎನ್ನುವ ಸಮಾಧಾನ ಹೇಳಿಕೊಳ್ಳಬೇಕಷ್ಟೆ.

4 comments:

Srinidhi said...

ಕುತೂಹಲಕರ ಲೇಖನ. ನೀವ್ಯಾಕೆ ನಿಮ್ಮ ಬ್ಲಾಗನ್ನು 'ಕನ್ನಡಲೋಕ'ಕ್ಕೆ ಸೇರಿಸಿಲ್ಲ? ಬ್ಲಾಗೋದಲು ಅಲ್ಲಿಗೇ ಓಡುವ ನಮ್ಮಂಥ ಸೋಂಬೇರಿಗಳಿಗೆ ಒಂದಷ್ಟು ಅನುಕೂಲ ಮಾಡಿಕೊಡಿ ಸರ್! :-)

Manjunatha Kollegala said...

ಸರಸಮಯ, ಸ್ವಾರಸ್ಯಕರ ಶೈಲಿ, ಎಂದಿನಂತೆ
ನಿಮ್ಮ ಬರಹಗಳನ್ನು ಓದುವುದೇ ಒಂದು ಖುಷಿ

ಬಾಲು said...

chennagide lekhana, kalla haagu kalla na definition haagu bhatta mommagala prashne... thumba chennagide.

odisi kondu hoguttade.

guruve said...

ಕಳ್ಳನ ವ್ಯಾಖ್ಯಾನ ಚೆನ್ನಾಗಿದೆ..