Saturday, February 23, 2008

ಕೃತಿಚೌರ್ಯ

ನಿನ್ನೆ (೨೩.೧.೨೦೦೮) ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯಲ್ಲಿ ತಿರುಪತಿ ವಿಶ್ವವಿದ್ಯಾನಿಲಯ ಅಲ್ಲಿನ ಪ್ರೊಫೆಸರ್‌ ಒಬ್ಬರಿಗೆ ಶಿಕ್ಷೆ ವಿಧಿಸಿದ್ದು ಓದಿದೆ. ಅಪರಾಧ: ಕೃತಿಚೌರ್ಯ. ವಿಜ್ಞಾನ ಮತ್ತು ಶೈಕ್ಷಣಿಕ ಜಗತ್ತಿನಲ್ಲಿ ಕೃತಿಚೌರ್ಯದಷ್ಟು ಹೀನ ಕೃತ್ಯ ಇನ್ನೊಂದಿಲ್ಲ. ಇವೆರಡೂ ಕ್ಷೇತ್ರಗಳೂ ಬೌದ್ಧಿಕ ಚಟುವಟಿಕೆಗೆ ಮೀಸಲು. ಇಲ್ಲಿ ನಿಮ್ಮ ಚಿಂತನೆಗಳು ಮೂರ್ತ ರೂಪ ಪಡೆಯುತ್ತವೆ. ವಿಜ್ಞಾನ ಕ್ಷೇತ್ರದಲ್ಲಂತೂ, ವೈಯಕ್ತಿಕ ಚಿಂತನೆಗಳು ಪ್ರಯೋಗ, ಪರಾಮರ್ಶೆಗಳ ಒರೆಯಲ್ಲಿ ಪುಟವಿಟ್ಟು ಬರುತ್ತವೆ. ಈ ದಿನಗಳಲ್ಲಿ ನಿತ್ಯವೂ ಲಕ್ಷಾಂತರ ಸಂಶೋಧನಾ ಪ್ರಬಂಧಗಳು ಪ್ರಕಟವಾಗುತ್ತಿವೆ. ಇವುಗಳೆಲ್ಲವನ್ನೂ ಕೃತಿಚೌರ್ಯವಲ್ಲ ಎಂದು ವೈಜ್ಞಾನಿಕ ಜಗತ್ತು ನಂಬುತ್ತದೆ. ಏಕೆಂದರೆ, ಪ್ರಕಟಣೆಯಾಗುವ ಮುನ್ನ ಈ ಎಲ್ಲ ಪ್ರಬಂಧಗಳೂ ವಿಜ್ಞಾನ ಜಗತ್ತಿಗೇ ವಿಶಿಷ್ಟವೆನ್ನಿಸಿದ ಪೀರ್‌ ರಿವ್ಯೂ (ಸೋದರ ಪರಾಮರ್ಶೆ)ಯ ಶೋಧಕದಿಂದ ಹೊರ ಬರಬೇಕು. ಪ್ರಬಂಧಗಳನ್ನು ಅವುಗಳಲ್ಲಿನ ವೈಜ್ಞಾನಿಕ ಅಡಕಗಳ ಸತ್ಯಾಸತ್ಯತೆಯ ಪರಿಶೀಲನೆಗೆಂದು ಅದೇ ಕ್ಷೇತ್ರದಲ್ಲಿ ಸಂಶೋಧನೆಗೈಯುತ್ತಿರುವ ಇನ್ನೂ ಹಲವರಿಗೆ ತಲುಪಿಸಲಾಗುತ್ತದೆ. ಲೇಖಕ ಯಾರೆಂಬುದು ಈ ಪರಾಮರ್ಶಕರಿಗೆ ತಿಳಿದಿದ್ದರೂ, ಪರಾಮರ್ಶಕರು ಯಾರೆಂಬುದು ಲೇಖಕರಿಗೆ ತಿಳಿದಿರುವುದಿಲ್ಲ. ಪರಾಮರ್ಶಕರು, ಲೇಖನದಲ್ಲಿರುವ ಪ್ರಯೋಗಗಳು,ಫಲಿತಾಂಶಗಳು ಹಾಗೂ ಅವುಗಳಿಂದ ಪಡೆದ ತೀರ್ಮಾನವೆಲ್ಲವೂ ಸತ್ಯ ಎಂದು ಮನವರಿಕೆ ಮಾಡಿಕೊಂಡು, ಪ್ರಕಟಣೆಗೆ ಯೋಗ್ಯವೆಂದು ತೀರ್ಮಾನಿಸುತ್ತಾರೆ. ಇಲ್ಲಿ ಭಾಷೆ ಮುಖ್ಯವಾಗುವುದಿಲ್ಲ. ಅದಾದ ಅನಂತರ ಕೃತಿ ಪ್ರಕಟವಾಗುತ್ತದೆ. ವೈಜ್ಞಾನಿಕ ಜಗತ್ತಿನಲ್ಲಿ ತನ್ನ ನೆಲೆ ಕಂಡುಕೊಳ್ಳುತ್ತದೆ.

ತಿರುಪತಿಯ ಪ್ರೊಫೆಸರ್‌ರವರು ಇದುವರೆವಿಗೂ ಪ್ರಕಟಿಸಿರುವ ೭೫ ಪ್ರಬಂಧಗಳೂ ಕೃತಿಚೌರ್ಯವಿರಬಹುದು ಎಂದು ಗುಮಾನಿಸಲಾಗಿದೆ. ಗುಮಾನಿಗೆ ಕಾರಣ: ಅವರು ಪ್ರಬಂಧಗಳಲ್ಲಿ ನಮೂದಿಸಿರುವ ಪ್ರಯೋಗಗಳನ್ನು ನಡೆಸುವ ಸವಲತ್ತು ಅವರ ವಿಶ್ವವಿದ್ಯಾನಿಲಯದಲ್ಲಿ ಇರಲೇ ಇಲ್ಲ! ವಿಜ್ಞಾನ ಜಗತ್ತಿನಲ್ಲಿ ಸಂಶೋಧನೆಗಳನ್ನು ಸತ್ಯಾಸತ್ಯತೆಯ ಪರೀಕ್ಷೆ ಎನ್ನಲಾಗುತ್ತದೆ. ಇಲ್ಲಿ ಭಾವುಕತೆಗೆ, ಕಲ್ಪನಾವಿಹಾರಕ್ಕೆ ಎಡೆ ಇಲ್ಲ. ಆದರೂ, ಕೇವಲ ಕಾಲ್ಪನಿಕ ಸಂಶೋಧನೆಗಳನ್ನು ನಡೆಸಿಯೇ ಇಷ್ಟು ವರುಷ ವಿದ್ವತ್‌ ಜಗತ್ತಿನಲ್ಲಿ ಬದುಕುಳಿದ ಈ ಚಾಣಾಕ್ಷ ಮತಿಯನ್ನು ಹೊಗಳಬೇಕೇ, ತೆಗಳಬೇಕೇ?

ಭಾರತದಲ್ಲಿ ಕೃತಿಚೌರ್ಯದ ಸಂಗತಿ ಬಯಲಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರುಷ ಚೆನ್ನೈನಲ್ಲಿರುವ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಫಿಸಿಕ್ಸ್‌ ಸಂಶೋಧಕನೊಬ್ಬ, ಹತ್ತು ತಿಂಗಳ ಹಿಂದೆ ಸುಪ್ರಸಿದ್ಧ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸಂಶೋಧನಾ ಪ್ರಬಂಧವೊಂದನ್ನು ಸಾರಾಸಗಟು (ಪದಕ್ಕೆ ಪದ) ನಕಲು ಮಾಡಿ, ಅದರ ಶೀರ್ಷಿಕೆ ಬದಲಿಸಿ ಪ್ರಕಟಿಸಿದ್ದ. ವಿಷಯ ಬಯಲಾದಾಗ, ಅದು ತನ್ನದೇ ಎಂದು ವಾದಿಸಿಯೂ ಇದ್ದ.

ಹೀಗೆ ವೈಜ್ಞಾನಿಕ ಜಗತ್ತಿನ ಆಧಾರಸ್ತಂಭವೆನ್ನಿಸಿದ ವಿಶ್ವಾಸದ ಬುಡಕ್ಕೇ ಕೊಡಲಿಯೇಟು ನೀಡುವವರಿಗೆ ನೀಡುವ ಶಿಕ್ಷೆಯಾದರೂ ಏನು? ಇನ್ನು ಮುಂದೆ ಅವರು ಸಂಶೋಧನೆ ನಡೆಸಬಾರದು, ಅಷ್ಟೆ. ಎಂದಿನಂತೆ ಪಾಠ ಹೇಳಬಹುದು. ಕಲಿಸುವರೋ, ಕದಿಯಲು ತಿಳಿಸುವರೋ ಯಾರು ಬಲ್ಲರು.

1 comment:

Manjunatha Kollegala said...

"ಇದೇನಿದು ಶರ್ಮರು ಇದ್ದಕ್ಕಿದ್ದಂತೆ ಬ್ಲಾಗಿನಿಂದ ನಾಪತ್ತೆಯಾದಿರಲ್ಲ" ಅಂತ ಒಂದು comment ಹಾಕಬೇಕೆಂದು ಯೋಚಿಸುತ್ತಾ ನಿಮ್ಮ ಬ್ಲಾಗಿಗೆ ಪ್ರವೇಶಿಸಿದೆ, ಆಗ ಗೊತ್ತಾಯಿತು, ನಾಪತ್ತೆಯಾಗಿದ್ದದ್ದು ನೀವಲ್ಲ, ನಾನೇ ಎಂದು.

ನಿಮ್ಮ ಎರಡು ಬರಹಗಳನ್ನು ಕಂಡು ಖುಶಿಯಾಯಿತು.