Monday, August 14, 2017

ಮನೆಯಲ್ಲಿ ಶೆರ್ಲಾಕ್ ಹೋಮ್ಸ

ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಮ್ಮ ಮನೆಯಲ್ಲಿ ಶೆರ್ಲಾಕ್ ಹೋಮ್ಸನ ಪ್ರೇತ ಬಂದು ಸೇರಿಕೊಂಡಿದೆ. ಇಲ್ಲದಿದ್ದರೆ ನಾನು ಎಷ್ಟೇ ಗುಟ್ಟು ಮಾಡಿದರ ವಿಷಯವೂ ನನ್ನವಳಿಗೆ ಗೊತ್ತಾಗುವುದು ಹೇಗೆ? ನೀವೇ ಹೇಳಿ.
ಒಂದು ಉದಾಹರಣೆ. ಮೊನ್ನೆ ಕಾವೇರಿ ನೀರಿನ ಗಲಾಟೆ ಅಂತ ಬಂದ್ ಆಯಿತಲ್ಲ! ಅವತ್ತೂ ರಾಜ್ಯವೂ ಬಂದ್, ನನ್ನ ರಜಾ ನಿದ್ರೆಯೂ ಬಂದ್. ರಜೆಯ ದಿನವಾದರೂ ನಿಧಾನವಾಗಿ ಏಳೋಣ ಅಂತಿದ್ದೆ. ಆದರೆ ಮಡದಿ ಬಿಡಬೇಕಲ್ಲ. ಹೊದ್ದಿಗೆ ಎಳೆದು ಹೋಗಿ ತರಕಾರಿ ತನ್ನಿ ಅಂತ ಆದೇಶಿಸಿಯೇ ಬಿಟ್ಟಳು. ಈವತ್ತು ಬಂದ್ ಏನೂ ಇರೋದಿಲ್ಲ ಅಂದರೂ ಕೇಳಲಿಲ್ಲ. “ಬೆಳಗ್ಗೆ ಐದು ಗಂಟೆಗೆ ಆಟೋ ಸದ್ದು ಕೇಳಿಸ್ತಿತ್ತು. ತರಕಾರಿ ಮಾರೋವರು ಬಂದಿರ್ತಾರೆ ಹೋಗ್ರಿ ಸೋಮಾರಿ,” ಅನ್ನೋದೇ? ಅಲ್ಲ. ಆಟೋ ಸದ್ದಿನಿಂದಲೇ ತರಕಾರಿ ಮಾರ್ಕೆಟ್ಟು ತೆರೆದಿದೆ ಅಂತ ಊಹಿಸೋದೇನು ಸುಮ್ಮನೇನಾ? ಅದಿಕ್ಕೆ ಹೇಳಿದ್ದು ನಮ್ಮ ಮನೇಲಿ ಶೆರ್ಲಾಕ್ ಹೋಮ್ಸನ ಪ್ರೇತ ಇರಬೇಕು ಅಂತ.
ಇದು ಕಾಕತಾಳೀಯ ಇದ್ದಿರಬಹುದು ಅಂದಿರಾ? ಅಯ್ಯೋ ಸ್ವಾಮಿ. ಇದು ಮೊದಲನೆ ಘಟನೆ ಅಲ್ಲ ಸ್ವಾಮಿ. ಅಪರಾಧ ಪತ್ತೆಯಲ್ಲಿ ಆಕ್ಸಿಡೆಂಟ್ ಅನ್ನುವ ಪದ ಇಲ್ಲ ಅನ್ನೋದು ಶೆರ್ಲಾಕ್ ಹೋಮ್ಸ ನಿಯಮ.
ನಿತ್ಯ ಬೆಳಗ್ಗೆ ಎದ್ದು ತರಕಾರಿ ತರೋದು ನನ್ನದೇ ಕೆಲಸ. ಬೆಳಗ್ಗೆ ಎದ್ದು ಚೌಕಾಸಿ ಯಾರು ಮಾಡ್ತಾರೆ ಅಂತ ಕೇಳಿದ ರೇಟಿನ ದುಡ್ಡು ಕೊಟ್ಟು ಬರ್ತೀನಿ. ಮನೆಗೆ ಬಂದ ಮೇಲೆ ಲೆಕ್ಕ ಬೇರೆ ಕೊಡಬೇಕು. ಅದರಲ್ಲೇನು ತಪ್ಪು ಅಂದಿರಾ? ಅಲ್ಲೇ ಇರೋದು ಸ್ವಾಮಿ. “ಅಲ್ರೀ. ಟೊಮ್ಯಾಟೋಗೆ ಹದಿನೈದು ರೂಪಾಯಿ ಕೊಟ್ಟಿದ್ದೀರಲ್ಲ? ಹದಿನೈದಕ್ಕೆ ಎರಡು ಕೇಜಿ ಬರ್ತಿತ್ತಂತೆ,” ಅನ್ನೋ ಮಾತು ಖಂಡಿತ. ರೇಡಿಯೋ ಇಲ್ಲ. ಮಾರ್ಕೆಟ್ ಮುಖ ನೋಡಿಲ್ಲ. ಮಹರಾಯಿತಿಗೆ ಅದು ಹೇಗೆ ಗೊತ್ತಾಗುತ್ತೋ? ಕೇಳಿದ್ರೆ, “ನಾನೇನು ನಿಮ್ಮ ಹಾಗೆ ಪೆದ್ದಲ್ಲ,” ಅನ್ನುವ ಉತ್ತರ ಗ್ಯಾರಂಟಿ. ವಾಟ್ಸನ್ನನಿಗೂ ಶೆರ್ಲಾಕ್ ಹೋಮ್ಸ್ ಹೀಗೇ ಹೇಳುತ್ತಿದ್ದ ಅಂತ ಎಲ್ಲೋ ಓದಿದ್ದ ನೆನಪು. “ಎಲಿಮೆಂಟರಿ ವಾಟ್ಸನ್.”
ಅವತ್ತು ಇನ್ನೊಂದು ವಿಷಯ ಆಯ್ತು. ತರಕಾರಿ ತರುವಾಗಲೇ, ಕೊಟ್ಟ ಬೆಲೆಗಿಂತ ಕಡಿಮೆ ಹೇಳೋದು ಅಂತ ತೀರ್ಮಾನಿಸಿ ಬಂದಿದ್ದೆ. ಅಲ್ಲಿ ಹದಿನೈದು ಕೊಟ್ಟು ಬಂದಿದ್ದರೂ, ಮನೆಯಲ್ಲಿ ಹತ್ತು ರೂಪಾಯಿಯಷ್ಟೆ ಕೊಟ್ಟಿದ್ದು ಅಂತ ಹೇಳಿ ಶಭಾಸ್ ಗಿರಿ ಪಡೆಯೋ ಪ್ಲಾನ್ ಮಾಡಿ ಬಂದೆ. ಏನಾಯ್ತು ಅಂತೀರಿ? ಕಾಲರ್ ತಿರುವಿಕೊಂಡು (ಮೀಸೆ ಬಿಟ್ಟಿಲ್ಲದ್ದರಿಂದ ಅದನ್ನ ತಿರುವಕ್ಕೆ ಆಗಲ್ಲ) “ನೋಡು ಹ್ಯಾಗೆ ಚೌಕಾಶಿ ಮಾಡಿ ಹತ್ತು ರೂಪಾಯಿಗೇ ತಂದಿದ್ದೀನಿ.” ಅಂದೆ. ಬಿಡಿ ನಂಗೆ ಗೊತ್ತಿಲ್ಲವಾ? ಬೆಲೆ ಕಡಿಮೆ ಮಾಡಿ ಹೇಳ್ತಿದ್ದೀರಾ ಅನ್ನೋದೇ! ಅಲ್ಲಾ ಅಷ್ಟೆಲ್ಲಾ ಪ್ಲಾನು ಮಾಡಿಕೊಂಡು ಬಂದರೂ ಅದು ಹೇಗೆ ಇವಳಿಗೆ ಗೊತ್ತಾಯ್ತೋ? ವಿವರಣೆ ಕೇಳಕ್ಕೆ ಹೋಗಲಿಲ್ಲ ಬಿಡಿ. ಯಾಕಂದ್ರೆ ಶೆರ್ಲಾಕ್ ಹೋಮ್ಸನ ಪ್ರೇತ ಬೀಡು ಬಿಟ್ಟಿರೋದು ಖಾತ್ರಿ.
ಪತ್ತೇದಾರರಿಗೆ ನಾಯಿ ಮೂಗು, ಹದ್ದಿನ ಕಣ್ಣು, ಬಾವಲಿಯ ಕಿವಿ ಇರಬೇಕು ಅಂತಾರೆ. ನನ್ನವಳಿಗೆ ಮೈಯೆಲ್ಲಾ ಕಣ್ಣೋ ಏನೋ? ಸಂಜೆ ಆಫೀಸಿನಲ್ಲಿ ಓಸಿ ಹೊಡೆದು ಗೆಳೆಯರ ಜೊತೆ ಎನ್ಟಿಆರ್ ನಲ್ಲಿ ಮಸಾಲೆ ದೋಸೆ ಪಾರ್ಟಿ ಮಾಡಿ ಬಂದಿದ್ದೆ ಅನ್ನಿ. ನಿತ್ಯದ ಸಮಯಕ್ಕೇ ಮನೆಗೆ ಮರಳಿದ್ದರೂ ಅದು ಹೇಗೋ ಇವಳಿಗೆ ಗೊತ್ತಾಗಿಬಿಡುತ್ತೆ. ಅವಳು ಕೊಟ್ಟ ಟೀ ಕುಡಿದು ಮುಗಿಸ್ತಾ ಇದ್ದ ಹಾಗೆ, “ಏನು ಇವತ್ತು ಪಾರ್ಟೀನಾ?” ಅಂತ ಕೇಳೇ ಬಿಡ್ತಾಳೆ. ಹ್ಹೆ. ಹ್ಹೆ. ಅನ್ನಬೇಕಷ್ಟೆ. “ನಿಂಗೆ ಹ್ಯಾಗೆ ಗೊತ್ತಾಯ್ತೇ?” ಅಂದ್ರೆ ನೀವು ಕೊಟ್ಟ ಟೀಯನ್ನ ನೋಡದೆಯೇ ಕುಡಿದ್ರಲ್ಲ. ಆಗಲೇ ಗೊತ್ತಾಯ್ತುಅಂತಾಳೆ. ಇದು ಶೆರ್ಲಾಕ್ ಹೋಮ್ಸನ ತಂತ್ರದ ಥರಾನೇ ಇಲ್ಲವಾ?
ರಾತ್ರಿ ನಿದ್ರೆ ಬರದೇ ಇದ್ದಾಗ, “ಸ್ವಲ್ಪ ಅರ್ಜೆಂಟು ಕೆಲಸ ಇದೆಅಂತ ಸಬೂಬು ಹೇಳಿ ಕಂಪ್ಯೂಟರು ಮುಂದೆ ಕೂತೆ ಅನ್ನಿ. ಅರ್ದ ಗಂಟೆ ಕಳೆದ ಮೇಲೆ ಕಮೆಂಟು ಬರುತ್ತೆ. “ಆಯ್ತೇನ್ರೀ ಕಥೆ ಪುಸ್ತಕ ಓದಿದ್ದು. ಲೈಟ್ ಆರಿಸಿ ಮಲಕ್ಕೊಳ್ಳಿ. ನಾಳೆ ಆಫೀಸು ಇದೆ. ಆಮೇಲೆ ಆಫೀಸಲ್ಲಿ ನಿದ್ರೆ ಮಾಡಬೇಕಾಗುತ್ತೆ.” ಅಲ್ರೀ. ಮೂರು ಕೋಣೆ ಆಚೆ ಇರೋ ಕಂಪ್ಯೂಟರಿನಲ್ಲಿ ನಾನು ಏನು ಮಾಡ್ತಿದ್ದೀನಿ ಅಂತ ಇವಳಿಗೆ ಹೇಗೆ ಗೊತ್ತಾಗುತ್ತೆ ಅಂತ. ಬಾವಲಿ ಕಿವಿಯೋ, ಸಿಕ್ಸ್ತ್ ಸೆನ್ಸೋ ಇರಬೇಕು ಅಲ್ಲವಾ? ಅಥವಾ ಶೆರ್ಲಾಕ್ ಹೋಮ್ಸನ ಪ್ರೇತ
ಇವೆಲ್ಲ ಬಿಡಿ. ಮೊನ್ನೆ ಇನ್ನೊಂದು ವಿಷಯ ಆಯ್ತು ಗೊತ್ತಾ? ರಾಮಣ್ಣನ ಮಗನ ಮದುವೆಗೆ ಹೋಗಬೇಕಿತ್ತು. ವಾರದ ದಿನವೇ ಆದ್ದರಿಂದ ಊಟದ ಸಮಯಕ್ಕೆ ಹೋಗಿ ವಾಪಸ್ ಬರೋದು ಅಂತಿ ತೀರ್ಮಾನಿಸಿ ಹೋಗಿದ್ದೆವು. ಮೈಲುದ್ದದ ಕ್ಯೂನಲ್ಲಿ ನಿಂತು ವಧೂ ವರರನ್ನ ಹರಸುವುದೆಂದರೆ ಮರುದಿನ ಬೆಳಗಾಗುತ್ತದೇನೋ ಅನ್ನಿಸಿ, ನೇರವಾಗಿ ಊಟ ಮುಗಿಸಿಕೊಂಡು ವಾಪಸ್ ಬಂದೆವು. ಮನೆಗೆ ಬಂದ ಮೇಲೆ ಇವಳು ಏನಂದಳು ಗೊತ್ತಾ? “ಅಲ್ಲರೀ. ಹುಡುಗನ ಕಡೆಯವರು ತುಂಬಾ ಜಿಪುಣರು ಕಣ್ರೀಅನ್ನೋದೇ. ಅವರ ಆಸ್ತಿ-ಪಾಸ್ತಿ, ವ್ಯವಹಾರವೆಲ್ಲ ಕ್ಷಣಮಾತ್ರದಲ್ಲಿ ಇವಳಿಗೆ ಹೇಗೆ ಗೊತ್ತಾಯಿತು ಅಂತ ಅಚ್ಚರಿ ಆಗಿದ್ದಂತೂ ನಿಜ. “ನೋಡ್ರೀ. ವರ ಹಾಕ್ಕೊಂಡಿರೋ ವಾಚು ನೋಡಿದ್ರಾ? ಲೆದರ್ ಸ್ಟ್ರಾಪ್. ಆದರೆ ಕಾರು ಮಾತ್ರ ಆಡಿ ಕಾರು,” ಅಂತ ಆಡಿಕೊಂಡಳು. ನಿಜ. ಅದೆಲ್ಲ ನನ್ನ ಕಣ್ಣಿಗೆ ಬಿದ್ದೇ ಇರಲಿಲ್ಲ. ಇವಳಿಗೆ ಮಾತ್ರ ಹೇಗೆ ಕಂಡಿತೋ?
ಒಮ್ಮೆ ಶೆರ್ಲಾಕ್ ಹೋಮ್ಸ ಮನೆಗೆ ಒಬ್ಬ ಮುದುಕ ಬಂದನಂತೆ. ಅವನನ್ನ ನೋಡಿದ ಕೂಡಲೇ ನೀನು ಯುದ್ಧದಲ್ಲಿ ಹೋರಾಡಿದ್ದೆ. ಇಂತಹ ದೇಶದಲ್ಲಿ ಅಂತೆಲ್ಲ ಹೋಮ್ಸ ಹೇಳಿದನಂತೆ. ಆ ಮುದುಕನಿಗೆ ಆಶ್ಚರ್ಯ ಆಗದೇ ಇರುತ್ಯೆ. ಆಮೇಲೆ ವಾಟ್ಸನ್ ಹೇಳಿದನಂತೆ. ಅವನ ಶೂನಲ್ಲಿ ಒಂದು ಹೆಚ್ಚು ಸವೆದಿತ್ತು. ಇನ್ನೊಂದು ಕಡಿಮೆ. ಹೀಗಾಗಿ ಅವನ ಕಾಲು ಕುಂಟಾಗಿರಬೇಕು. ಅದು ಹುಟ್ಟಿನಿಂದ ಬಂದದ್ದಲ್ಲ ಅಂದ ಮೇಲೆ ಗಾಯವಷ್ಟೆ. ಶಿಸ್ತು ನೋಡಿದರೆ ಮಿಲಿಟರಿ ಅನ್ನಿಸ್ತು. ಅಂತ ವಾಟ್ಸನ್ ಗೆ ವಿವರಿಸ್ತಾನೆ. ನಮ್ಮವಳೇನು ಕಮ್ಮಿ ಅಲ್ಲವಾ? ವಾಚ್ ಸ್ಟ್ರಾಪ್ ನೋಡಿಯೇ ಅಂತಸ್ತು ನಿರ್ಧರಿಸೋವ್ರನ್ನ ಶೆರ್ಲಾಕ್ ಹೋಮ್ಸ ಅನ್ನದೆ ಇನ್ನೇನು ಹೇಳಕ್ಕೆ ಆಗತ್ತೆ. ನೀವೇ ಹೇಳಿ.
ಅಷ್ಟೇ ಅಲ್ಲ. ಮದುವೆ ಮನೆಯಲ್ಲಿ ಅವಳ ಪಕ್ಕ ಊಟಕ್ಕೆ ಕುಳಿತಿದ್ದ ಬೆಂಗಳೂರಿನ ಆಂಟಿಯ ಮಗ, ಮಗಳು, ಸೊಸೆ ಎಲ್ಲರ ವೃತ್ತಾಂತವನ್ನೂ ಸವಿಸ್ತಾರವಾಗಿ ತಿಳಿಸಿದಳು. ಮಗನಿಗೆ ಹೆಣ್ಣು ಹುಡುಕುತ್ತಿರುವ ವಿಚಾರ. ಮಗಳ ಜಾತಕ ದೋಷ. ಅದಕ್ಕೆ ಪರಿಹಾರ ಎಲ್ಲವನ್ನೂ ಒಂದು ಊಟ ಮಾಡಿ ಮುಗಿಸುವಷ್ಟರಲ್ಲಿ ಸಂಗ್ರಹಿಸಿಯಾಗಿತ್ತು. ಮದುವೆ ಮನೆಯಲ್ಲಿ ಊಟಕ್ಕೆ ಎಷ್ಟು ಹೊತ್ತು ಬೇಕು ಹೇಳಿ? ಅಷ್ಟು ವೇಳೆಗೇ ಇಷ್ಟೆಲ್ಲ ಮಾಹಿತಿಯನ್ನು ಗಮನಿಸೋದು ಅಂದರೆ ಸುಮ್ಮನೇನಾ? ಖಂಡಿತ ಶೆರ್ಲಾಕ್ ಹೋಮ್ಸನ ಪ್ರೇತವಿರಬೇಕು. ಏನಂತೀರಿ?
ಸಿನಿಮಾದಲ್ಲಿ ನೋಡಿದ್ದೇನೆ. ಶರ್ಟನಲ್ಲಿ ಲಿಪ್ ಸ್ಟಿಕ್. ಕಾಲರ್ ನಲ್ಲಿ ಕೂದಲು ನೋಡಿ ಮನೆಯಲ್ಲಿ ರಾದ್ಧಾಂತ ಆಗುತ್ತೆ. ಸದ್ಯಕ್ಕೆ ನನಗೆ ಅಂತಹ ಸಂದರ್ಭ ಬಂದಿಲ್ಲ. ಆದರೂ ಅದನ್ನೆಲ್ಲ ಗಮನಿಸುವಷ್ಟು ಸೂಕ್ಷ್ಮದೃಷ್ಟಿ ಪತ್ತೇದಾರರಿಗೆ ಇರಲೇ ಬೇಕು. ಅದೂ ಹುಟ್ಟಿನಿಂದ ಬರಲ್ಲ ಅನ್ನಿ. ನಿಜವಾಗಿ ಕಲಿತ ಕೌಶಲ್ಯ. ಅವತ್ತು ಯಾವತ್ತೋ ಹೀಗೇ ಆಯಿತು. ಗೆಳೆಯನೊಬ್ಬ ಫೋನ್ ಮಾಡಿ ಅರ್ಜೆಂಟು ದುಡ್ಡು ಕೇಳಿದ. ಆ ಹಿಂದೆ ಒಮ್ಮೆ ಅವನಿಗೆ ಸಾಲ ಕೊಟ್ಟು ಕೈ ಸುಟ್ಟುಕೊಂಡಿದ್ದೆ. ಆದರೂಎ ಫ್ರೆಂಡ್ ಇನ್ ನೀಡ್ ಈಸ್ ಫ್ರೆಂಡ್ ಇನ್ ನೀಡ್,’ ಅಲ್ಲವೇ. ಆಕಡೆಯಿಂದ ಅವನ ಮಾತನ್ನಷ್ಟೆ ಕೇಳಿಸಂಜೆ ಸಿಗೋಣಅಂದಷ್ಟೆ ಹೇಳಿ ಫೋನಿಟ್ಟೆ. ಸಂಜೆ ಮನೆಗೆ ಬಂದ ಕೂಡಲೆಎಷ್ಟು ಸಾಲ ಕೊಟ್ಟಿರಿ?” ಎನ್ನುವ ಪ್ರಶ್ನೆ ಕೇಳಿ ಅವಾಕ್ಕಾದೆ.
ಫೋನು ಯಾರು ಮಾಡಿದ್ದು? ಏನು ಕಾರಣ? ನಾನು ಏಕೆ ಸಂಜೆ ಸಿಗೋಣ ಎಂದು ಹೇಳಿದೆ? ಇದು ಯಾವುದೂ ಗೊತ್ತಾಗದೆ ಅದು ಹೇಗೆ ಇಂಥವರನ್ನ, ಇದೇ ಕಾರಣಕ್ಕೇ ಭೇಟಿ ಮಾಡಲು ಹೋಗುತ್ತಿದ್ದೇನೆ ಎನ್ನುವುದನ್ನು ಕಂಡುಕೊಂಡಳಲ್ಲ. ಸಾಲ ಕೊಟ್ಟದ್ದನ್ನು ಒಪ್ಪಿಕೊಳ್ಳಲೇ ಬೇಕಾಯಿತು. ಆಗ ಗೊತ್ತಾಯಿತು ನೋಡಿ ನನ್ನವಳ ಶೆರ್ಲಾಕ್ ಹೋಮ್ಸ ಬುದ್ಧಿ. “ಸ್ಕೂಟರ್ ಕೀ ಎಲ್ಲಿದೆ ಅಂತ ದಿನಾನೂ ಕೇಳೋರು, ಚೆಕ್ ಬುಕ್ ಹುಡುಕಿ ಹುಡುಕಿ ಬ್ಯಾಗಿಗೆ ಹಾಕಿಕೊಂಡಾಗಲೇ ಗೊತ್ತು. ಯಾರಿಗೋ ಸಾಲ ಕೊಡಕ್ಕೆ ಹೊರಟಿದ್ದೀರಿ ಅಂತ. ನಿಮ್ಮ ಹತ್ರ ಸಾಲ ಕೇಳೋವ್ರು ಇನ್ಯಾರು ಇದ್ದಾರೆ. ಅವನೇ ತಾನೇ?” ಅಂತ ಪೋಸ್ಟ್ ಮಾರ್ಟಮ್ ವಿವರದ ಹಾಗೆ ವಿವರವಾಗಿ ಹೇಳಿದಳು. ಶೆರ್ಲಾಕ್ ಹೋಮ್ಸ ಹೇಳುತ್ತಿದ್ದನಂತೆ. “ಪ್ರತಿಯೊಬ್ಬ ಅಪರಾಧಿಯೂ ಏನಾದರೂ ಸುಳಿವು ಬಿಟ್ಟು ಕೊಟ್ಟೇ ಇರುತ್ತಾನೆ. ಅದನ್ನ ಗಮನಿಸುವ ದೃಷ್ಟಿ ಇರಬೇಕು ಅಷ್ಟೆ,” ಅಂತ. ನಾನೆಷ್ಟು ಜಾಗರೂಕತೆ ವಹಿಸಿದರೂ, ನನ್ನವಳ ಕಣ್ಣು ತಪ್ಪಿಸೋದಿಕ್ಕೆ ಸಾಧ್ಯವೇ ಆಗಿಲ್ಲ. ಅಂದ ಮೇಲೆ ಶೆರ್ಲಾಕ್ ಹೋಮ್ಸ ಪ್ರೇತ ಮನೆಯಲ್ಲಿದೆ ಅಂತ ತಾನೇ?
ಇನ್ನು ಮನೆಯಲ್ಲಿ ಕಳೆದು ಹೋಗಿರುವ ವಸ್ತುವನ್ನು ಹುಡುಕಿ ತೆಗೆಯುವುದರಲ್ಲಿ ನನ್ನವಳನ್ನು ಮೀರಿಸುವವರಿಲ್ಲ. ಮೊನ್ನೆ ಟೂರಿಗೆ ಹೋಗುವ ಸಂದರ್ಭದಲ್ಲಿ ಯಾವಾಗಲೂ ನನ್ನ ಬ್ಯಾಗಿನಲ್ಲೇ ಇರುತ್ತಿದ್ದ ಲೇಸರ್ ಪಾಯಿಂಟರ್ ಕಾಣಿಸಲಿಲ್ಲ. ಮೂರು ಗಂಟೆ ಕಾಲ ಹುಡುಕಿ ಕೈಚೆಲ್ಲಿ ಕುಳಿತೆ. ಈ ಹಿಂದೆ ಯಾವ ಕಾರ್ಯಕ್ರಮಕ್ಕೆ ಹೋಗಿದ್ದೆ ಎನ್ನುವ ವಿಶ್ಲೇಷಣೆಯನ್ನೂ ಮಾಡಿದ್ದಾಯಿತು. ಮರೆತು ಆಫೀಸಿನಲ್ಲೇ ಬಿಟ್ಟಿರಬಹುದೇ ಎಂದೂ ಚಿಂತಿಸಿದೆ. ಕೊನೆಗೆ ನನ್ನವಳಿಗೆ ಹೇಳಿದೆ. “ಅಯ್ಯೋ ಅದು ಅಲ್ಲೇ ನಿಮ್ಮ ಬ್ಯಾಗಿನಲ್ಲೇ ಇರಬೇಕು ನೋಡಿ,” ಎಂದಳು. ಮತ್ತೆ ಹುಡುಕಿದೆ ಸಿಗಲಿಲ್ಲ. ಅವಳೇ ಬಂದು ಅದೇ ಬ್ಯಾಗಿನಿಂದ ಎರಡೇ ನಿಮಿಷದಲ್ಲಿ ಅದನ್ನು ಹುಡುಕಿ ಕೊಟ್ಟಳಲ್ಲ! ಪತ್ತೇದಾರಿಣಿ ತಾನೇ? ನನಗೆ ಮರೆವು ಇತ್ತೇನೋ ನಿಜ. ಆದರೆ ಆ ಬ್ಯಾಗಿನಲ್ಲಿ ನಾನೂ ಹುಡುಕಿದ್ದೆನಲ್ಲ? “ಬರೇ ಸುಳಿವನ್ನು ಹುಡುಕಿದರೆ ಸಾಕಾಗುವುದಿಲ್ಲ. ಎಂತಹ ಸುಳಿವು ಅನ್ನುವುದನ್ನೂ ಮೊದಲೇ ಊಹಿಸಿರಬೇಕು,” ಅನ್ನೋದು ಶೆರ್ಲಾಕ್ ನಿಯಮ. ಮನೆಯವಳಿಗೆ ಇದು ಗೊತ್ತು ಅನ್ನುವ ಅನುಮಾನ ನನಗೆ.

ಇದು ಬೇರೆ ಪ್ರೇತವೂ ಆಗಿರಬಹುದು ಅಂದಿರಾ? ಖಂಡಿತ ಇಲ್ಲ. ಇದು ಶೆರ್ಲಾಕ್ ಹೋಮ್ಸನದ್ದೇ ಇದು ಅಂತ ನನಗೆ ನಂಬಿಕೆ. ಯಾಕೆ ಅಂದರೆ ಮೊನ್ನೆ ಭಾನುವಾರ ಏನೂ ಕೆಲಸ ಇಲ್ಲದಿದ್ದಾಗಛೇ ಒಂದು ಕಪ್ ಬಿಸಿ ಟೀ ಇದ್ದರೆ ಹೇಗಿರುತ್ತಿತ್ತು,” ಅಂತ ಯೋಚಿಸ್ತಾ ಇದ್ದೆ ಅಷ್ಟೆ. ಬಿಸಿ, ಬಿಸಿ ಚಹಾ ಹಿಡಿದ ಹೆಂಡತಿ ಪ್ರತ್ಯಕ್ಷ. “ಅಲ್ಲ. ಅದು ಹೇಗೆ ನನ್ನ ಮನಸ್ಸಿನಲ್ಲಿದ್ದದ್ದು ನಿಂಗೆ ಗೊತ್ತಾಯಿತು,” ಅಂದೆ ಒಂದು ಹುಸಿ ನಗು ನಕ್ಕಳು. “ಎಲಿಮೆಂಟರಿ ವ್ಯಾಟ್ಸನ್,” ಅನ್ನೋ ಥರ. ಖಂಡಿತ ಇದು ಸಿಕ್ಸ್ತ್ ಸೆನ್ಸ್ ಅಲ್ಲವಾ. ಅದಿಕ್ಕೆ ನನಗೆ ಖಾತ್ರಿ ನಮ್ಮ ಮನೆಯಲ್ಲೊಂದು ಶೆರ್ಲಾಕ್ ಹೋಮ್ಸನ ಪ್ರೇತ ಸೇರಿಕೊಂಡಿರಬೇಕು ಅಂತ.