Wednesday, May 23, 2018

ಅವನು, ಅವಳು ಮತ್ತು ಅವರು

ಮೊನ್ನೆ ಯಾವುದೋ ಲೇಖನವನ್ನು ಬರೆದು ಗೆಳೆಯ ಅನಂತುವಿಗೆ ಓದಲು ಕೊಟ್ಟೆ. ಪ್ರಕಟಣೆಗೆ ಮುನ್ನವೇ ಒಮ್ಮೆ ಲೇಖನದ ಪರೀಕ್ಷೆ ಮಾಡುವುದು ನನ್ನ ಚಾಳಿ. ಸಾಮಾನ್ಯವಾಗಿ ಲೇಖನವನ್ನು ಮೆಚ್ಚುವವರಿಗೆ, ಅಂದರೆ ಹೆಂಡತಿಯನ್ನು ಬಿಟ್ಟು ಉಳಿದವರಿಗೆ, ಕೊಡುವುದು ಪರಿಪಾಠ. ಹಾಗೆಯೇ ಅನಂತುವಿಗೆ ಲೇಖನವನ್ನು ಕೊಟ್ಟೆ. "ಚೆನ್ನಾಗಿದೆ ಸರ್" ಎಂದು ನಾನು ಬಯಸಿದ್ದನ್ನೇ ಹೇಳಿದ. ಜೊತೆಗೇ " ಆದರೂ ಸರ್, 'ಡಾರ್ವಿನ್ ಹೀಗೆ ಹೇಳಿದ' ಅಂತ ಬರೆದಿದ್ದೀರಲ್ಲ? ಡಾರ್ವಿನ್ ಹೀಗೆ ಹೇಳಿದರು,' ಅಂತ ಬರೆಯಬೇಕಲ್ಲವಾ? ಅವರು ಹೇಗಿದ್ದರೂ ಹಿರಿಯರಲ್ಲವಾ? ಏಕವಚನ ಬಳಸುವುದು ಸರಿಯೋ?" ಎಂದು ಪ್ರಶ್ನೆ ಹಾಕಿದ. ಏನೋ ಸಮಝಾಯಿಷಿ ಕೊಟ್ಟು ಸುಮ್ಮನಾಗಿಸಿದೆನಾದರೂ, ಪ್ರತಿ ಲೇಖನ ಬರೆವಾಗಲೂ ಅವನ ಮಾತು ಮನಸ್ಸನ್ನು ಕೊರೆಯುತ್ತಲೇ ಇತ್ತು. ಹೌದು. ಅವನು, ಅವಳು ಮತ್ತು ಅವರು ಎನ್ನುವ ಪದಗಳನ್ನು ಯಾವಾಗ, ಹೇಗೆ ಬಳಸುತ್ತೇವೆ? ಏಕೆ ಬಳಸುತ್ತೇವೆ ಎಂದು ಯೋಚಿಸುತ್ತಲೇ ಹೋದೆ.
ಕನ್ನಡ ತರಗತಿಯಲ್ಲಿ ನನಗೆ ಪಾಠ ಹೇಳಿಕೊಟ್ಟವರು ಹೇಳಿದ್ದು ಇಷ್ಟೆ. ಅವನು - ಏಕವಚನ ಪುಲ್ಲಿಂಗ, ಅವಳು - ಏಕವಚನ ಸ್ತ್ರೀಲಿಂಗ, ಅವರು - ಬಹುವಚನ ಪುಲ್ಲಿಂಗ ಹಾಗೂ ಸ್ತ್ರೀಲಿಂಗ. ಆದರೂ ರೂಢಿಯಲ್ಲಿ ಅಮ್ಮ - ಅಪ್ಪ ಹಾಕಿಕೊಟ್ಟ  ಇನ್ನೂ ಕೆಲವು ನಿಯಮಗಳನ್ನು ಬಳಸುತ್ತಿದ್ದೆ. ಯಾರನ್ನಾದರೂ ಸಂಬೋಧಿಸಬೇಕಾದರೆ,  ಹಿರಿಯರಾದವರಿಗೆ ಬಹುವಚನ, ಕಿರಿಯರಾದವರಿಗೆ, ಆಪ್ತರಿಗೆ ಏಕವಚನ ಬಳಸಬೇಕು. ಇಲ್ಲಿಯೂ ಅಪವಾದಗಳೇ, ಅಪವಾದಗಳು.  ನನಗೆ ಆರೇಳು ವರ್ಷವಷ್ಟೆ ಹಿರಿಯರಾದ ಅತ್ತೆಯ ಮಕ್ಕಳನ್ನು ಬಹುವಚನದಲ್ಲಿಯೂ, ಹತ್ತು ವರ್ಷ ಹಿರಿಯಳಾದ ಅಕ್ಕನನ್ನು ಏಕವಚನದಲ್ಲಿಯೂ ಸಂಬೋಧಿಸುತ್ತಿದ್ದೆ. ಇವೆಲ್ಲವೂ ಯಾವುದೇ ವಿಚಾರ, ವಿಮರ್ಶೆಗಳನ್ನೂ ಮಾಡದೆಯೇ ನಡೆಯುತ್ತಿದ್ದ ರೂಢಿಗತ ಸಂಗತಿಗಳು. ಅನಂತನ ಮಾತು ಇವೆಲ್ಲವನ್ನು ಮನದಾಳದಿಂದ, ಮುಂದಕ್ಕೆ ತಂದು ಧುತ್ತೆಂದು ನಿಲ್ಲಿಸಿಬಿಟ್ಟಿತು.

ಹೇಗೆ ಕರೆದರೇನಂತೆ? ವ್ಯಕ್ತಿ ಗೌರವ ಮುಖ್ಯವಾದದ್ದು ಎಂದು ಸಮಾಧಾನ ಹೇಳಿಕೊಂಡು ಆರಾಮವಾಗಿದ್ದೆ. ಆದರೆ ಮೊನ್ನೆ ಯಾವುದೋ ಸಮಾರಂಭಕ್ಕೆ ಹೋಗಿದ್ದೆ. ಆಗ ಒಂದು ಪುಟ್ಟ ಮಗು ಟಾಟಾ ಬಂತು ಎಂದು ಹೇಳಿತು. ನಮ್ಮಲ್ಲಿ ಮಗುವಿಗೆ ನಪುಂಸಕ ಲಿಂಗ ಹಾಗೂ ಏಕವಚನ ಬಳಸುವುದು ವಾಡಿಕೆ. ಆದರೆ ನರೆತ ಕೂದಲಿನವರಿಗೆ? ಸ್ವಲ್ಪ ಕಸಿವಿಸಿ ಆಯಿತಾದರೂ, ಇದು ಕೆಲವರ ಮನೆಯಲ್ಲಿನ ಅಭ್ಯಾಸ ಎಂದು ಗೊತ್ತಾಯಿತು. ಏಕವಚನ ಎಂದರೆ ಆತ್ಮೀಯತೆ ಇರಬಹುದು. ಅದಕ್ಕೆ ಮಕ್ಕಳು ಅಪ್ಪ ಬಂತು. ಅಮ್ಮ ಬಂತು ಎಂದು ಮೊದಲಿಗೆ ಆರಂಭಿಸುತ್ತವೆ. ಕ್ರಮೇಣ ವ್ಯಾಕರಣ ಕಲಿತದ್ದಾಗಿಯೂ, ಬೆಳೆಯುತ್ತಿದ್ದಂತೆ ಆತ್ಮೀಯತೆ ಕಡಿಮೆ ಆಗಿದ್ದಕ್ಕೆಯೋ ಏಕವಚನಕ್ಕೆ ಇಳಿದು ಬಿಡುತ್ತವೆ. ನಮಗಿಂತ ಕಿರಿಯರನ್ನು ಏಕವಚನದಲ್ಲಿ ಸಂಭೋದಿಸುವುದು ಅದಕ್ಕೆ ಏನೋ.

ಕೃಷ್ಣನನ್ನು ಬಾ ಎನ್ನುತ್ತೇವೆ. ಶಿವ ಕಾಯುತ್ತಾನೆ ಎನ್ನುತ್ತೇವೆ. ಕಾಯುತ್ತಾರೆ ಅಂತಲ್ಲ. ಅಕ್ಕನಂತವರು ಚನ್ನಮಲ್ಲಿಕಾರ್ಜುನನನ್ನ ಏಕವಚನದಿಂದಲೇ ಹಾದಿ ಹೊಗಳಿದ್ದರಲ್ಲವೇ ? ಹಾಗಿದ್ದರೆ ದೊಡ್ಡವರೊ ಚಿಕ್ಕವರೊ ಆತ್ಮೀಯತೆ, ಭಕ್ತಿ  ಇದ್ದರೇ  ಏಕವಚನ ಬಳಸಬಹುದು.  ಇವೆರಡೂ ಇಲ್ಲದೆ ಬರಿಯ ಅಧಿಕಾರದ ಸಂಬಂಧವಷ್ಟೇ ಎಂದರೆ ರಾಜರ ಆಸ್ಥಾನದಲ್ಲಿ ಹೇಳುವ ಹಾಗೆ, ಸರ್ವಂ ಬಹುವಚನಮಯಂ ಎಂದಾಯಿತು ಎಂದುಕೊಂಡೆ. ಮದುವೆಗೂ ಮುನ್ನ ಬಾರೋ ಹೋಗೋ ಎನ್ನುತ್ತಿದ್ದ ಪ್ರೇಯಸಿ, ತಾಳಿ ಕೊರಳಿಗೆ ಬಿದ್ದ ಮೇಲೆ ಬನ್ನಿ ಹೋಗಿ ಎನ್ನುವುದು ಇದಕ್ಕೆ ಇರಬಹುದು ಅಲ್ಲವೇ?  ಆದರೆ ಇತ್ತೀಚಿಗೆ ಈ ನಿಯಮವೂ ಸರಿಯಿಲ್ಲ ಎನ್ನಿಸುತ್ತದೆ.


ಇತ್ತೀಚಿಗೆ ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ಪುಗಳಲ್ಲಿ ಬರುವ ಸಂದೇಶಗಳನ್ನು ಗಮನಿಸಿದಾಗ ಈ ಸಂದೇಹ ಇನ್ನೂ  ಹೆಚ್ಚಾಯಿತು.  ಗಮನಿಸಿ. ನಿಮ್ಮ ಪಕ್ಷಕ್ಕೆ ಸೇರದ ಹಿರಿಯರಿಗೆ ಬಹುವಚನ ಬೇಕಿಲ್ಲ. ಬೇರೆ ಪಕ್ಷದ ಹಾಗೂ ನಿಮ್ಮ ಧರ್ಮದವರಿಗೆ ಬಹುವಚನ ಬಳಸಬಹುದು. ಆದರೆ ಬೇರೆ ಧರ್ಮದವರಾದರೆ ಈ ವಿನಾಯಿತಿಯೂ ಬೇಕಿಲ್ಲ. ಇನ್ನು ಅವರು ನಿಮಗೆ ಬೇಡದವರೋ, ಪ್ರಧಾನ ಮಂತ್ರಿ ಆದರೂ, ಮುಖ್ಯ ಮಂತ್ರಿ ಆದರೂ ಚಿಂತೆ ಇಲ್ಲ. ಏಕವಚನ ಸಾಕು.

ಕನ್ನಡ ವ್ಯಾಕರಣದಲ್ಲಿ ನಿಯಮಗಳಿಗಿಂತಲೂ ಅಪವಾದಾಗಲೇ ಹೆಚ್ಚು ಎಂದು ನನಗೆ ಅನ್ನಿಸಿದಂತೆ ನಿಮಗೂ ಅನ್ನಿಸಿದರೆ ಅದು ನನ್ನ ತಪ್ಪಲ್ಲ. ಈಗ ಜಾಣತನದಿಂದ ಬರೆಯೋದು ಕಲಿತಿದ್ದೀನಿ. ಅವರು ಅಂತಲೋ, ಅವನು-ಅವಳು ಅಂತಲೋ ಬರೆಯುವುದೇ ಇಲ್ಲ.  ಆತ ಎನ್ನುತ್ತೇನೆ. ಆತ ಬಂದ ಎನ್ನುತ್ತೇನೆ. ಆತ ಯಾವ ವಚನವೋ. ಬಂದ ಎನ್ನುವ ಏಕವಚನವನ್ನು ಸರಿದೂಗಿಸಿ ಬಿಡುತ್ತದೆ.

ಏನನ್ನುತ್ತೀ ...ರಿ ?