Tuesday, March 27, 2007

ಬ್ಲಾಗ್‌, ಬ್ಲಾಗ್‌, ಬ್ಲಾಗ್‌

ಅಂತೂ ಒಂದು ದಿನ ಈ ಪ್ರಶ್ನೆಯನ್ನು ಎದುರಿಸಲೇ ಬೇಕಿತ್ತು? ನಾನೇಕೆ ಬ್ಲಾಗಿಸುತ್ತಿದ್ದೇನೆ (ಬ್ಲಾಗಿಸುವುದು ಪದದ ಬಳಕೆಗಾಗಿ ಶ್ರೀ ಪವನಜರಿಗೆ ಕೃತಜ್ಞತೆಗಳು) ಎನ್ನುವ ವಿಷಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದಿದ್ದೆ. ಬ್ಲಾಗು ಆರಂಭಿಸಲು ಸ್ಫೂರ್ತಿ ಗೆಳೆಯ ಮಂಜುನಾಥ ರು ಆರಂಭಿಸಿದ ಬ್ಲಾಗ್‌ ಎಂದರೆ ತಪ್ಪೇನಲ್ಲ. ಆದರೆ ಅದಕ್ಕೂ ಮೊದಲು ಇದನ್ನು ಆರಂಭಿಸಬೇಕು, ವಿಕಿಪೀಡಿಯಾದಲ್ಲಿ ಬರೆಯಬೇಕೆಂಬ ಹಂಬಲವೂ ಇತ್ತು. ಸಮಸ್ಯೆ ಎಂದರೆ ಕನ್ನಡವನ್ನು ವೆಬ್‌ ಪುಟಗಳಲ್ಲಿ ಬಳಸುವ ತಾಂತ್ರಿಕ ಸಮಸ್ಯೆಗಳನ್ನು ಮೀರುವೆನೇ ಎನ್ನುವ ಆತಂಕದಿಂದ ಪ್ರಯತ್ನವನ್ನೇ ಮಾಡಿರಲಿಲ್ಲ. ಅಂದ ಹಾಗೇ, the fear of failure is the reason for many failures ಅಲ್ಲವೇ?

ಕೊನೆಗೂ, ಒಂದು ದಿನ ಆರಂಭ ಮಾಡಿಯೇ ಬಿಟ್ಟೆ. ಇದಕ್ಕೂ ಹಿಂದೆ ಡಾಟ್‌ ಕಾಮ್‌ಗಳ ಭರಾಟೆ ಹೆಚ್ಚಿದ್ದಾಗ ನಾನೂ ಒಂದು ಡಾಟ್‌ ಕಾಮ್‌ ಆರಂಭ ಮಾಡಬಾರದೇಕೆ ಎಂದು ಹಂಬಲಿಸಿದ್ದೆ. ದುರಾದೃಷ್ಟವಶಾತ್‌, (ಅಥವಾ ಕನ್ನಡಿಗರ ಅದೃಷ್ಟ) ನನ್ನ ಗಣಕಯಂತ್ರದ ಸಾಮರ್ಥ್ಯ ಅದಕ್ಕೆ ತಕ್ಕಂತಿರಲಿಲ್ಲ. ಜೊತೆಗೆ, ಬ್ರಾಡ್‌ ಬ್ಯಾಂಡ್‌ ಈಗ ನೀಡುವ ಸೌಕರ್ಯ ಆಗ ಇರಲೂ ಇಲ್ಲ. ಹೀಗಾಗಿ, ನಮ್ಮಕರ್ನಾಟಕ ಡಾಟ್‌ ಕಾಮ್‌ ನಂತಹ ಇತರೇ ವೆಬ್‌ ತಾಣಗಳ ಬೆನ್ನೇರಿ ಸವಾರಿ ಮಾಡಬೇಕಾಗಿತ್ತು.

ಕಾಲ ಬದಲಾಗಿದೆ. ವೆಬ್‌ ಆಧರಿತ ಸೇವೆಗಳು ಸಮೃದ್ಧಿಯಾಗಿವೆ. ಮೊದಲು, ಮೈಸೂರಿನಲ್ಲಿ ಒಂದು ಸೈಟು ಕೊಳ್ಳಲು ಖರ್ಚಾಗುತ್ತಿದ್ದಷ್ಟು ವೆಚ್ಚ ಒಂದು ವೆಬ್‌ ತಾಣ ಸೃಷ್ಟಿಸಲು ಆಗುತ್ತಿತ್ತು. ಈಗ ಗಣಕಯಂತ್ರಗಳ ನೆರವಿನಿಂದ ಬಂದ ಐಟಿ ಕ್ರಾಂತಿಯಿಂದಾಗಿ ಮೈಸೂರಿನಲ್ಲಿ ವೆಬ್‌ ತಾಣಗಳು ಕಾಸು ಖರ್ಚಿಲ್ಲದೆ ದೊರಕುತ್ತಿವೆ. ನೆಲದ ಬೆಲೆ ಮುಗಿಲಿಗೇರಿದೆ. ಹೀಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಒಂದು ಸೈಟು ಕೊಡುವವರೆವಿಗೂ, ನನ್ನದೇ ಒಂದು ಸೈಟು ಇದೆ ಎನ್ನುವುದಕ್ಕಾದರೂ, ಬ್ಲಾಗ್‌ ಆರಂಭಿಸಬೇಕೆಂದು ತೀರ್ಮಾನಿಸಿದೆ.

ಹಂಬಲವೇನೋ ನಿಜವಾಗಿದೆ. ಮೊನ್ನೆ ಮಂಜುನಾಥರವರು ಇ-ಮೈಲಿನಲ್ಲಿ ಶರವೇಗದಲ್ಲಿ ಬ್ಲಾಗ್‌ ಮಾಡುತ್ತಿದ್ದೀರಿ ಎಂದು ಹೇಳಿದ್ದರು. ಪ್ರತಿಬಾರಿ ಬ್ಲಾಗ್‌ ರಚಿಸಿದಾಗಲೂ ಅವರಿಗೆ ಒಂದು ಇ-ಮೈಲ್‌ ಹೋಗುವುದರಿಂದ ಹೀಗೆ ದೂರಿರಬೇಕು ಎಂದು ಕೊಂಡಿದ್ದೀನಿ. ಬ್ಲಾಗ್‌ ಆರಂಭಿಸಿದಾಗ ಈ ಪ್ರಪಂಚದಲ್ಲಿ ಒಂದು ಸುತ್ತು ಹೋಗಿ ಬಂದೆ. (ಎಷ್ಟೆಂದರೂ ಅಲೆಮಾರಿಯಲ್ಲವೆ?) ಎಷ್ಟು ವೈವಿಧ್ಯಮಯ ಪ್ರಪಂಚ ಎನ್ನಿಸಿತು. ನಾನು ಇದುವರೆವಿಗೂ ಕೈ ಹಚ್ಚದ ಒಂದು ಪ್ರಯತ್ನ ಮಾಡಲು ಇದು ಒಳ್ಳೆಯ ಅವಕಾಶ ಎಂದೂ ಅನಿಸಿತು. ಹತ್ತಿಪ್ಪತ್ತು ವರುಷಗಳಿಂದ ಕೇವಲ ವಿಜ್ಞಾನದ ಬೆಳವಣಿಗೆಗಳ ಬಗ್ಗೆಯಷ್ಟೆ ಬರೆಯುತ್ತಿರುವುದರಿಂದ ನಾನು ಅತ್ತ ಬರೆಹಗಾರನೂ ಅಲ್ಲ, ಇತ್ತ ವಿಜ್ಞಾನಿಯೂ ಅಲ್ಲದ ತ್ರಿಶಂಕುವಾಗಿದ್ದೇನೆ. ನನ್ನ ಕನ್ನಡದಲ್ಲಿ ಇಂಗ್ಲೀಷಿನ ಪ್ರಭಾವ ಅಚ್ಚೊತ್ತಿದೆ ಎಂದು ಗೆಳೆಯ ಸೋಮಿ (ಬಿ. ಎಸ್‌. ಸೋಮಶೇಖರ್‌) ಹೇಳುತ್ತಿದ್ದುದೂ ಉಂಟು. ಜೊತೆಗೆ, ಕನ್ನಡದ ಕೆಲವು ಸೂಕ್ಷ್ಮ ವ್ಯಾಕರಣಗಳನ್ನು ನಾನು ನಿರ್ಲಕ್ಷಿಸುತ್ತಿದ್ದೇನೆ ಎಂದೂ ಸೋಮಿ ದೂರಿದ್ದರು. ವಾಸ್ತವವೇ, ವಿಜ್ಞಾನವನ್ನು ಸರಳ ಭಾಷೆಯಲ್ಲಿ ಹೇಳುವಾಗ ಅದು ಆಡು ಭಾಷೆಯಾಗಿದ್ದೂ ಉಂಟು. ಈ ಲೇಖನದಲ್ಲಿಯೂ ವ್ಯಾಕರಣ ದೋಷಗಳಿರಬಹುದು. ಓದುಗರು ತಾಳಿಕೊಂಡು, ತಿಳಿಸಿದರೆ ತಿದ್ದಿಕೊಳ್ಳಲು ಅನುಕೂಲ.

ವಿಜ್ಞಾನವನ್ನು ಮರೆತು ಬೇರೇನು ಬರೆಯಬಹುದು? ಸಾಹಿತ್ಯ ಬರೆಯೋಣವೆಂದರೆ ಭಾಷೆಯ ಲಾಲಿತ್ಯವನ್ನು ಸರಿಯಾಗಿ ತಿಳಿದವನಲ್ಲ. ಜೊತೆಗೆ, ಕವಿಯಾಗಲು ಬಲು ಸಂವೇದನಶೀಲ ಮನಸ್ಸು ಬೇಕು ಎನ್ನುವುದು ನನ್ನ ನಂಬಿಕೆ. ನನ್ನದು ಹೇಳಿಕೇಳಿ,ಯಾವ ವಸ್ತು, ವಿಷಯ ದೊರೆತರೂ ಅದನ್ನು ಕತ್ತರಿಸಿ ಒಳ ರಚನೆ ನೋಡುವ ವೈಜ್ಞಾನಿಕ ಬುದ್ಧಿ. ಇನ್ನು ಉಪಮೆಗಳು, ಅಲಂಕಾರಗಳು, ವಿಮರ್ಶೆಗಳು ನನಗೆ ಒಗ್ಗುವುದಿಲ್ಲ ಎನ್ನುವ ಹಿಂಜರಿಕೆಯೂ ಇದೆ. ಕಥೆ, ಕವನಗಳನ್ನು ಬರೆಯಬೇಕಾದರೆ, ಬದುಕಿನ ಬಲು ಸೂಕ್ಷ್ಮ ನಡವಳಿಕೆಗಳನ್ನೂ ಗಮನಿಸುವ, ಬಳಸಿಕೊಳ್ಳುವ (ಇವನ್ನು ಪ್ರತಿಮೆಗಳು ಎನ್ನುತ್ತಾರಂತೆ!) ಸೆನ್ಸಿಟಿವ್‌ ಮನಸ್ಸು ಇರಬೇಕು. ಅದು ನನಗಿದೆ ಎನ್ನುವ ಬಗ್ಗೆ ಸಂದೇಹವಿರುವುದರಿಂದ ನಾನು ಕಥೆ ಬರೆಯಲಿಲ್ಲ. ಕವನವನ್ನಂತೂ ಬರೆಯುವ ಗೋಜಿಗೆ ಹೋಗುವುದೇ ಇಲ್ಲ. ಹಿಂದೊಮ್ಮೆ ಗೆಳತಿ ಶೈಲಜಾ ನಿನಗೆ ಕವನ ಓದಲೇ ಬರುವುದಿಲ್ಲ ಇನ್ನು ಕವಿತೆ ಏಕೆ ಬರೆಯಬೇಕೆಂದಿದ್ದೀಯ ಎಂದಿದ್ದಳು. ನಿಜವೇ.

ಒಟ್ಟಾರೆ, ನಿತ್ಯ ಮನಸ್ಸಿಗೆ ತೋಚಿದ್ದನ್ನು ಬರೆದರಾಯಿತು ಎಂದು ಕೊಂಡೆ. ಕೆಲವರು ಬ್ಲಾಗ್‌ ಅನ್ನು ತಮ್ಮ ಸೈಬರ್‌ ದಿನಚರಿ ಎಂದು ವರ್ಣಿಸಿದ್ದಾರೆ. ಆ ದಿನದ ಆಗುಹೋಗುಗಳ ಮೇಲೆ ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ಸಾರ್ವಜನಿಕವಾಗಿ ದಾಖಲಿಸುವುದನ್ನೇ ಬ್ಲಾಗ್‌ ಎಂದು ಹೇಳುವವರೂ ಇದ್ದಾರೆ. ಅಡುಗೆಯ ಬಗ್ಗೆ ಬ್ಲಾಗ್‌ ಇದೆ. ವಿಜ್ಞಾನದ ಬಗ್ಗೆಯೂ ಬ್ಲಾಗ್‌ ಇದೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳಲ್ಲಿನ ಅವೈಜ್ಞಾನಿಕತೆಯನ್ನು ಬಯಲಿಗೆಳೆಯುವ ಬ್ಲಾಗ್‌ಗಳೂ ಇವೆ. ತಾನು ಆ ದಿನ ಏನು ಮಾಡಿದೆ ಎಂದು ಅಮೆರಿಕೆಯ ಬೀದಿಬಸವನೊಬ್ಬ (ಹೋಮ್‌ಲೆಸ್‌) ಹತ್ತಾರು ವರುಷಗಳಿಂದ ಬ್ಲಾಗಿಸಿದ ದಾಖಲೆಯೂ ಇದೆ. ನಾನು ಇದನ್ನು ದಿನಚರಿ ಎಂದು ಆರಂಭಿಸಲೇ ಎಂದು ಕೊಂಡೆ. ಆದರೆ ದಿನಚರಿ ಬರೆದು ಅಭ್ಯಾಸವೇ ಇಲ್ಲ.ಪ್ರತಿ ವರುಷವೂ ರೂಢಿಯಂತೆ ಡಿಸೆಂಬರ್‌ ಕೊನೆಯಲ್ಲಿ ದಿನಚರಿ ಪುಸ್ತಕ ಕೊಳ್ಳುವುದಷ್ಟೆ ಸತ್ಯ. ಅದರಲ್ಲಿ ಒಂದೆರಡು ದಿನ ಯಾರದ್ದಾದರೂ ವಿಳಾಸ ದಾಖಲಾಗುತ್ತದೆ. ಅನಂತರ, ಅದು ಹಾಗೇ ಕೊಳೆಯುತ್ತದೆ. ಮಿತ್ರರು ಪ್ರೀತಿಯೊಂದ ಕೊಡುವ ದಿನಚರಿಗಳ ಕಥೆಯೂ ಹೀಗೆಯೇ. ಕಛೇರಿಯಲ್ಲಿಯೂ ದಿನಚರಿ ಬರೆಯುವುದಿಲ್ಲ. ದಿನಚರಿಗಳನ್ನು ಸರ್ಕಾರಿ ವೆಚ್ಚದಲ್ಲಿ ಕೊಂಡು ನೀಡುವುದನ್ನು ಕೇಂದ್ರ ಸರಕಾರ ನಿರ್ಬಂಧಿಸಿರುವುದು ನನ್ನಂತಹ ದಿನಚರಿ-ದ್ವೇಷಿಗಳಿಗೆ ಅನುಕೂಲಿಯಾಗಿದೆ. ಕೋಟ್ಯಂತರ ರೂಪಾಯಿಗಳ ದಗಲ್‌ಬಾಜಿ ಮಾಡಿದವರೆಲ್ಲರ ಬಳಿಯೂ ಡೈರಿಗಳು ಸಿಕ್ಕಿದ್ದಾಗಿ ಪೋಲೀಸರು ಹೇಳಿಕೆ ನೀಡುವುದನ್ನು ನೋಡಿದರೆ ಅಚ್ಚರಿ ಎನ್ನಿಸುತ್ತದೆಯಷ್ಟೆ.

ಹೀಗೆ ದಿನಚರಿಗೆ ಪರ್ಯಾಯವಾಗಿ ಬ್ಲಾಗ್‌ ಆರಂಭಿಸಿದವ, ನಿನ್ನೆಯಷ್ಟೆ ಮಂಜುನಾಥರ ಬಳಿ ಇದು ಇನ್ನು ಎಷ್ಟು ದಿನ ಉಳಿಯುವ ಉತ್ಸಾಹವೋ ಎಂದು ಕಳವಳಿಸಿದ್ದೆ. ನನ್ನ ಕಳವಳವನ್ನೇ ಬೆಂಬಲಿಸುವ ಸುದ್ದಿ ಈವತ್ತು ಟೈಂಸ್‌ ಆಫ್‌ ಇಂಡಿಯಾ ಪ್ರಕಟಿಸಿದೆ. ವಿಶ್ವಾದ್ಯಂತ ಈಗ ಸುಮಾರು ೨೦ ಕೋಟಿ ಬ್ಲಾಗ್‌ಗಳು ಶವವಾಗಿವೆಯಂತೆ. ಯಾರೋ, ಎಂದೋ ಆರಂಭಿಸಿದವರುಗಳು ಈ ಬ್ಲಾಗ್‌ಗಳಲ್ಲಿ ಬರೆಯವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಬ್ಲಾಗ್‌ ಎನ್ನುವ ಗುಳ್ಳೆ ಒಡೆಯಲಿದೆ ಎಂದು ಟೋನಿ ಅಲೆನ್‌ ಮಿಲ್ಸ್‌ ಲೇಖನ ಬರೆದಿದ್ದಾರೆ. ಹೊಸ ಬ್ಲಾಗ್‌ಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆಯಂತೆ. ಇಂತಹ ಬ್ಲಾಗ್‌ ಶವಗಳು (Ghost Blogs) ಕೊಳೆಯುವುದಿಲ್ಲ. ಗೂಗಲ್‌ನಲ್ಲೋ, ಬ್ಲಾಗರ್‌ನಲ್ಲೋ ಹುಡುಕಿದರೆ ಅವುಗಳು ಈಗಲೂ ಕಾಣಿಸಿಕೊಳ್ಳಬಹುದು. ಆದರೆ, ಅವುಗಳಲ್ಲಿ ಜೀವವಿಲ್ಲ. ಹೊಸ ಚಿಂತನೆಗಳಿಲ್ಲ.

ಇದನ್ನು ಓದಿದಾಗ ಈ ಬ್ಲಾಗ್‌ನ ಗತಿಯೂ ಒಂದು ದಿನ ಹೀಗೇ ಆಗಬಹುದೇ ಎನ್ನುವ ಆತಂಕ ಕಾಡಿದೆ. ಮೇಲೇರಿದ್ದು ಕೆಳಗಿಳಿಯಬೇಕಾದದ್ದು ನಿಸರ್ಗ ನಿಯಮ. ಬ್ಲಾಗ್‌ ಕ್ರಾಂತಿಯೂ ಹಾಗೆಯೇ ಇರಬೇಕು. ಈ ಹಿಂದೆ ಡಾಟ್‌ಕಾಮ್‌ಗಳ ಸುಗ್ಗಿ ಬಂದು, ಅನಂತರ ಬರವುಂಟಾಗಿದ್ದು ತಿಳಿದಿದೆಯಲ್ಲವೇ? ಎರಡು ವರುಷಗಳ ಹಿಂದೆ ಪ್ರತಿದಿನವೂ ೧೦೦,೦೦೦ ಹೊಸ ಬ್ಲಾಗುಗಳು ಜನ್ಮತಾಳುತ್ತಿದ್ದುವಂತೆ. ಈಗ ಇದು ಕಡಿಮೆಯಾಗಿದೆ. ಹಾಗೆಂದು ಹೊಸ ಬ್ಲಾಗ್‌ ಬರುವುದೇ ಇಲ್ಲವೆಂತಲ್ಲ. ನನ್ನಂತಹ ನಿಧಾನದ್ರೋಹಿಗಳು ಎಲ್ಲಿಯಾದರೂ ಒಂದು ಹೊಸ ಬ್ಲಾಗ್‌ ಆರಂಭಿಸುತ್ತಾರೆ. ಆದರೆ ಈ ಉತ್ಸಾಹ ಕ್ರಮೇಣ ಕುಗ್ಗುತ್ತ ಹೋಗು‌ತ್ತದೆ ಎನ್ನುವುದು ಅಲೆನ್‌ ಮಿಲ್ಸ್‌ ಅಭಿಪ್ರಾಯ.

ಬ್ಲಾಗ್‌ಗಳ ಈ ಗತಿಗೆ ಕೆಲವರು ಹೇಳುವ ಮಾತು : ಇವುಗಳಲ್ಲಿ ಇರುವುದೆಲ್ಲವೂ ಅನಗತ್ಯ ಮಾಹಿತಿ. ಈ ಬ್ಲಾಗ್‌ಗೂ ಅದೇ ನಾಮ ಪಟ್ಟಿ ದೊರಕೀತೇ?

ಬ್ಲಾಗ್‌ಗಳನ್ನು ನಾವು ಬರೆಯುವುದೇಕೆ? ಈ ಬ್ಲಾಗ್‌ ಬರೆದ ಅನಂತರ ಈ ವಿಷಯದ ಬಗ್ಗೆ ಶ್ರೀ ಪವನಜರು ಸುಧಾ ಪತ್ರಿಕೆಗಾಗಿ ನಡೆಸಿದ ಸಂದರ್ಶನದಲ್ಲಿ ಎಂ. ಎಸ್‌. ಶ್ರೀರಾಮ್‌ ರವರ ವಿವರಣೆ ನೋಡಿದೆ. ಲೋಕಾನುಭವ ಎಲ್ಲರಿಗೂ ಒಂದೇ ಎನ್ನಿಸಿತು.

No comments: